
ಪುಟಾಣಿ ಹಿತಾ ಎಂದರೆ ಸಾಕು, ಸೀರಿಯಲ್ ಪ್ರೇಮಿಗಳ ಗಮನ ಹೋಗುವುದು ನಾನಿನ್ನ ಬಿಡಲಾರೆ ಸೀರಿಯಲ್ಗೆ. ಇದರಲ್ಲಿ ಸದ್ಯ ಮೂಕಿಯಾಗಿ ಆ್ಯಕ್ಟ್ ಮಾಡುತ್ತಿರುವ ಹಿತಾಳ ಆ್ಯಕ್ಟಿಂಗ್ಗೆ ಮನ ಸೋಲದವರೇ ಇಲ್ಲ. ಶರತ್ ಮತ್ತು ಅಂಬಿಕಾ ದಂಪತಿಗೆ ಮಗಳು ಹಿತಾಳೇ ಸರ್ವಸ್ವ. ಆದರೆ, ಈ ಮುದ್ದಾದ ಸಂಸಾರಕ್ಕೆ ಕೊಳ್ಳಿ ಇಟ್ಟವಳು ಮಾಯಾ. ಶರತ್‌ನನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಆಸೆಯಿಂದ ಆಕೆ ಅಂಬಿಕಾಳನ್ನು ಮಾಯಾ ಸಾಯಿಸುತ್ತಾಳೆ. ಅಮ್ಮನ ಸಾವನ್ನು ಕಂಡ ಹಿತಾ, ಅದೇ ಶಾಕ್ನಲ್ಲಿ ಮೂಕಿಯಾಗುತ್ತಾಳೆ. ಅಮ್ಮನ ಪ್ರೀತಿಯಿಲ್ಲದೇ ಬೆಳೆಯುವ ಹಿತಾ, ತನ್ನ ಅಮ್ಮನ ಸಾವಿಗೆ ತಂದೆಯೇ ಕಾರಣ ಎಂದುಕೊಂಡು ಮಾತು ಬಿಡುತ್ತಾಳೆ. ಇತ್ತ ಮಾಯಾ ತನ್ನ ದಾರಿಗೆ ಹಿತಾ ಅಡ್ಡವಾಗಿದ್ದಾಳೆ ಎಂದು ಅವಳನ್ನು ಕೊಲ್ಲುವುದಕ್ಕೆ ಸಂಚು ರೂಪಿಸುತ್ತಾಳೆ. ಯಾವಾಗ ಹಿತಾಳಿಗೆ ತೊಂದರೆಯಾಗುತ್ತದೆ ಅಂತ ಗೊತ್ತಾಗುತ್ತದೋ, ಆಗ ಸತ್ತುಹೋದ ತಾಯಿ ಅಂಬಿಕಾ ಆಕೆಯ ರಕ್ಷಣೆಗೆ ನಿಲ್ಲಿತ್ತಾಳೆ. ಆತ್ಮವಾಗಿ ಮಗಳ ರಕ್ಷಣೆಯಲ್ಲಿ ತೊಡಗುತ್ತಾಳೆ. ಪತಿಯ ಕಚೇರಿಯಲ್ಲಿ ಕೆಲಸ ಮಾಡುವ ದುರ್ಗಾಳ ಗುಣ ಇಷ್ಟವಾಗಿ ಹಿತಾಳಿಗೆ ಅಮ್ಮನ ಪ್ರೀತಿ ಅವಳು ಕೊಡಲು ಸಾಧ್ಯ ಎಂದು ಅವಳಿಗೆ ಮಾತ್ರ ಕಾಣಿಸಿಕೊಳ್ಳುತ್ತಾಳೆ ಅಂಬಿಕಾ. ಆದರೆ ಇದರ ಅರಿವು ದುರ್ಗಾಗೆ ಇರುವುದೇ ಇಲ್ಲ. ಆದರೆ ಆಕೆ ಹಿತಾಳಿಗೆ ಅಮ್ಮನ ಪ್ರೀತಿ ಕೊಡುತ್ತಾಳೆ. ಇದೀಗ ಹಿತಾಳನ್ನು ಅಪಘಾತದಿಂದ ತಪ್ಪಿಸಲು ಹೋಗಿ ತಾನೇ ಅಪಘಾತದಲ್ಲಿ ಸಿಲುಕಿಕೊಳ್ಳುತ್ತಾಳೆ. ಸದ್ಯ ಆಕೆ ಸೇಫ್ ಆಗಿದ್ದಾಳೆ.
ಅಂದಹಾಗೆ ಮಗಳು ಹಿತಾ ಆಗಿ ನಟನೆ ಮಾಡ್ತಿರೋ ಬಾಲಕಿ ಹೆಸರು ಮಹಿತಾ. ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್ ಕೂಡ. ಈಕೆ ಇನ್ಸ್ಟಾಗ್ರಾಮ್ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್‌ನ ಟೈಟಲ್ ಸಾಂಗ್ ಅನ್ನು ಅದ್ಭುತವಾಗಿ ಹಾಡಿರುವುದನ್ನು ನೋಡಬಹುದು.
ಈಚೆಗಷ್ಟೇ ಮಹಿತಾ, ಈ ಸೀರಿಯಲ್ನಲ್ಲಿ ಮಾತನಾಡಲು ಪ್ರಯತ್ನ ಪಡುವ ರೀತಿ, ಕೊನೆಗೆ ಅಮ್ಮಾ ಎಂದು ಕೂಗುವ ರೀತಿ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಅಂದಹಾಗೆ ಮಹಿತಾ, ಸ್ಕೂಲ್ ಮತ್ತು ಸೀರಿಯಲ್ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ. ಈ ಕುರಿತು ಹಿಂದೊಮ್ಮೆ ಈಕೆಯ ಅಮ್ಮ ತನುಜಾ ಮಾಧ್ಯಮದ ಜೊತೆ ಮಾತನಾಡಿದ್ದರು. 'ಚಿಕ್ಕ ವಯಸ್ಸಿನಲ್ಲಿ ಮಹಿತಾಗೆ ಹಾಡಿನಲ್ಲಿ ತುಂಬಾ ಆಸಕ್ತಿ ಇತ್ತು. ಕೋವಿಡ್ ಸಮಯದಲ್ಲಿ ನಾನು ಜನರಿಗೆ ಅರಿವು ಮೂಡಿಸುವ ವಿಡಿಯೋ ಮಾಡುತ್ತಿದ್ದ ವೇಳೆ ಅವಳಲ್ಲಿ ಇದ್ದ ನಟನೆಯ ಕಲೆಯನ್ನು ಗುರುತಿಸಿದೆ. ಮಗಳು ಬರೀ ಓದಬೇಕು ಎಂದು ನಾನು ಯಾವತ್ತೂ ಒತ್ತಡ ಹಾಕುವುದಿಲ್ಲ. ಆಕೆಗೆ ಯಾವುದೇ ಟ್ಯಾಲೆಂಟ್ ಇದ್ದರೂ ಸಪೋರ್ಟ್ ಮಾಡಬೇಕು ಅನ್ನೋ ಆಸೆ ನನಗೆ ಇತ್ತು. ಅದರಂತೆಯೇ ಅವಳ ಆಸಕ್ತಿಗೆ ನೀರೆರೆದೆ. ಅವರಿಗೆ ಒಳ್ಳೆಯ ವೇದಿಕೆಯೂ ಸಿಗುತ್ತಾ ಹೋಯಿತು ಎಂದಿದ್ದರು. ಅವಳ ಹಣೆಯಲ್ಲಿ ನಟಿಯಾಗುವುದೇ ಬರೆದಿದ್ದರೆ ಅದೇ ಆಗುತ್ತಾಳೆ. ಅವಳಿಗೆ ಏನೇ ಆಸಕ್ತಿ ಇದ್ದರೂ ಆ ಕ್ಷೇತ್ರದಲ್ಲಿ ನಾವು ಮುಂದುವರೆಯಲು ಬಿಡುತ್ತೇವೆ ಎಂದಿದ್ದರು.
ಇನ್ನು ನಾನಿನ್ನ ಬಿಡಲಾರೆ ಸೀರಿಯಲ್ ವಿಷ್ಯಕ್ಕೆ ಬರುವುದಾದರೆ, ಪಾರು ಸೀರಿಯಲ್ ಮೂಲಕ ಮನೆಮಾತಾಗಿದ್ದ ಶರತ್ ಪದ್ಮನಾಭ್ ಶರತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ನೀತಾ ಅಶೋಕ್, ಹಿತಾ ಅಮ್ಮ ಅಂಬಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ದುರ್ಗಾಗಳಾಗಿ ರಿಷಿಕಾ ಕಾಣಿಸಿಕೊಂಡಿದ್ದಾರೆ. ರುಹಾನಿ ಶೆಟ್ಟಿ ಈ ಸೀರಿಯಲ್‌ನ ಖಳನಾಯಕಿ. ಉಳಿದಂತೆ ಕುಟುಂಬದ ಯಜಮಾನಿಯ ಪಾತ್ರದಲ್ಲಿ ವೀಣಾ ಸುಂದರ್ ಕಾಣಿಸಿಕೊಂಡಿದ್ದು, ಅವರದ್ದು ಕೂಡ ನೆಗೆಟಿವ್ ರೋಲ್. ರಂಗಭೂಮಿ ಕಲಾವಿದ ಹಾಗೂ ನಟ ಬಾಬು ಹಿರಣ್ಯ ಕೂಡ ಪ್ರಮುಖ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.