ಅಕ್ರಮ ಸಂಬಂಧದ ಕಥೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್: IMDbಯಲ್ಲಿ 8.3 ರೇಟಿಂಗ್ ಪಡೆದ ಹಾರರ್ ಸಿನಿಮಾ!

Published : Nov 06, 2026, 10:27 PM IST
Dark Night Movie

ಸಾರಾಂಶ

ಕ್ರೈಂ ಥ್ರಿಲ್ಲರ್ ಸಿನಿಮಾ ‘ಡಾರ್ಕ್ ನೈಟ್’ ಇದೀಗ ಆಹಾ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಈ ಸಿನಿಮಾ IMDbಯಲ್ಲಿ 8.3 ರೇಟಿಂಗ್ ಪಡೆದುಕೊಂಡಿದೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದ ಕೆಲವು ಸಿನಿಮಾಗಳು ಒಟಿಟಿಗೆ ಬಂದ ಬಳಿಕ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಇದೀಗ ಇಂತಹದ್ದೇ ಒಂದು ತೆಲುಗು ಕ್ರೈಂ ಥ್ರಿಲ್ಲರ್ ಸಿನಿಮಾ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ಅದುವೇ ‘ಡಾರ್ಕ್ ನೈಟ್’.

ವಿವಾಹೇತರ ಸಂಬಂಧ, ದಾಂಪತ್ಯ ಜೀವನದ ಬಿರುಕು, ವಂಚನೆ ಮತ್ತು ಅನಿರೀಕ್ಷಿತ ಘಟನೆಗಳ ಸುತ್ತ ಸಾಗುವ ಈ ಸಿನಿಮಾ ಸದ್ಯ ಆಹಾ ಒಟಿಟಿ ವೇದಿಕೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಷ್ಟೇ ಅಲ್ಲ, IMDbಯಲ್ಲಿ 8.3 ರೇಟಿಂಗ್ ಕೂಡ ಪಡೆದುಕೊಂಡಿದೆ. ಹಾಗಾದರೆ ಈ ಚಿತ್ರದ ಕಥೆಯೇನು? ಪ್ರೇಕ್ಷಕರನ್ನು ಸೆಳೆಯುತ್ತಿರುವ ವಿಶೇಷತೆ ಏನು? ಇಲ್ಲಿದೆ ಮಾಹಿತಿ.

ಥಿಯೇಟರ್‌ನಲ್ಲಿ ಸದ್ದು ಮಾಡದ ಸಿನಿಮಾ, ಒಟಿಟಿಯಲ್ಲಿ ಭರ್ಜರಿ ಟ್ರೆಂಡಿಂಗ್!

ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ನಿರೀಕ್ಷೆಗಳಿಲ್ಲದೆ, ಹೆಚ್ಚಿನ ಪ್ರಚಾರವಿಲ್ಲದೆ ಬಿಡುಗಡೆಯಾಗುವ ಕೆಲವು ಸಿನಿಮಾಗಳು ಒಟಿಟಿಗೆ ಬಂದ ಬಳಿಕ ಅನಿರೀಕ್ಷಿತ ಜನಪ್ರಿಯತೆ ಗಳಿಸುತ್ತವೆ. ಉತ್ತಮ ಕಥೆ ಮತ್ತು ನಿರೂಪಣೆ ಇದ್ದರೆ ಪ್ರೇಕ್ಷಕರು ಖಂಡಿತಾ ಮೆಚ್ಚುತ್ತಾರೆ ಎಂಬುದಕ್ಕೆ ‘ಡಾರ್ಕ್ ನೈಟ್’ ಸಿನಿಮಾ ಉದಾಹರಣೆಯಾಗಿದೆ. ಇದು ಭಾವನಾತ್ಮಕ ಅಂಶಗಳನ್ನೊಳಗೊಂಡ ಡಾರ್ಕ್ ಕ್ರೈಂ ಥ್ರಿಲ್ಲರ್ ಸಿನಿಮಾ. ಮಾರ್ಚ್ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ದೊಡ್ಡ ತಾರಾಗಣದ ಕೊರತೆ ಮತ್ತು ಹೆಚ್ಚಿನ ಪ್ರಚಾರ ಇಲ್ಲದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿರಲಿಲ್ಲ.

ಆದರೆ ಬಿಡುಗಡೆಯಾದ ಸುಮಾರು ಒಂದು ತಿಂಗಳಲ್ಲೇ ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಇದೀಗ ವೀಕ್ಷಕರ ಗಮನ ಸೆಳೆಯುತ್ತಿದೆ. ಸದ್ಯ ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ‘ಡಾರ್ಕ್ ನೈಟ್’ IMDbಯಲ್ಲಿ 8.3 ರೇಟಿಂಗ್ ಪಡೆದುಕೊಂಡಿದೆ. ಕ್ರೈಂ, ಸಸ್ಪೆನ್ಸ್ ಮತ್ತು ಡಾರ್ಕ್ ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಲ್ಲಿ ಈ ಸಿನಿಮಾ ಕುತೂಹಲ ಮೂಡಿಸಿದೆ.

ಏನಿದು ‘ಡಾರ್ಕ್ ನೈಟ್’ ಕಥೆ?

ಅಲೆಕ್ಸ್ ಎಂಬ ವಕೀಲನಿಗೆ ಹಿರಿಯರು ನಿಶ್ಚಯಿಸಿದಂತೆ ಹೇಮಾ ಜೊತೆ ಮದುವೆಯಾಗುತ್ತದೆ. ಹೊಸ ಜೀವನದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಗಂಡನ ಮನೆಗೆ ಬಂದ ಹೇಮಾಗೆ ಅಲೆಕ್ಸ್‌ನ ವರ್ತನೆ ಆಘಾತ ನೀಡುತ್ತದೆ. ಏಕೆಂದರೆ ಅಲೆಕ್ಸ್ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಸೋಫಿಯಾ ಜೊತೆ ವಿವಾಹೇತರ ಸಂಬಂಧ ಹೊಂದಿರುತ್ತಾನೆ.

ಈ ವಿಷಯ ತಿಳಿದ ಹೇಮಾ ತೀವ್ರವಾಗಿ ನೊಂದಿರುತ್ತಾಳೆ. ಗಂಡನಿಂದ ದೂರವಾಗಿ ಪ್ರತ್ಯೇಕವಾಗಿ ಬದುಕಲು ನಿರ್ಧರಿಸುತ್ತಾಳೆ. ಆದರೆ, ಅತ್ತ ಸೋಫಿಯಾ ಮತ್ತೊಬ್ಬ ವ್ಯಕ್ತಿಯ ಜೊತೆ ಆತ್ಮೀಯವಾಗಿರುವುದನ್ನು ಕಂಡ ಅಲೆಕ್ಸ್‌ಗೆ ತಾನು ಮೋಸ ಹೋಗಿರುವುದು ಅರಿವಾಗುತ್ತದೆ. ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವ ಆತ, ಮತ್ತೆ ಪತ್ನಿ ಹೇಮಾ ಬಳಿಗೆ ಬಂದು ಕ್ಷಮೆ ಕೇಳಲು ಬಯಸುತ್ತಾನೆ.

ಹೇಮಾ ಜೀವನದಲ್ಲಿ ಮತ್ತೊಂದು ತಿರುವು!

ಇದೇ ಸಮಯದಲ್ಲಿ ಹೇಮಾಳ ಜೀವನಕ್ಕೆ ಆಕೆಯ ಹಳೆಯ ಸ್ನೇಹಿತ ರೋಷನ್ ಪ್ರವೇಶಿಸುತ್ತಾನೆ. ಹೇಮಾ ಆತನನ್ನು ಕೇವಲ ಒಳ್ಳೆಯ ಸ್ನೇಹಿತನಂತೆ ನೋಡಿದರೆ, ರೋಷನ್ ಮನಸ್ಸಿನಲ್ಲಿ ಮಾತ್ರ ಬೇರೆಯದೇ ಆಲೋಚನೆಗಳಿರುತ್ತವೆ. ಇತ್ತ ಗಂಡನನ್ನು ಅರ್ಥಮಾಡಿಕೊಂಡು ಮತ್ತೆ ಅಲೆಕ್ಸ್ ಜೊತೆ ಜೀವನ ಆರಂಭಿಸಬೇಕು ಎಂದು ಹೇಮಾ ಯೋಚಿಸುತ್ತಿರುವಾಗಲೇ ಆಕೆಯ ಬದುಕಿನಲ್ಲಿ ಅನಿರೀಕ್ಷಿತವಾದ ಗಂಭೀರ ಘಟನೆಯೊಂದು ನಡೆಯುತ್ತದೆ.

ಅಷ್ಟಕ್ಕೂ ಆ ಘಟನೆ ಏನು? ಅಲೆಕ್ಸ್, ಹೇಮಾ, ರೋಷನ್ ಮತ್ತು ಸೋಫಿಯಾ ಜೀವನದಲ್ಲಿ ಮುಂದೆ ಏನೆಲ್ಲಾ ಬದಲಾವಣೆಗಳಾಗುತ್ತವೆ? ಈ ಘಟನೆಗಳ ಹಿಂದೆ ಇರುವ ರಹಸ್ಯವೇನು? ಎಂಬುದೇ ಚಿತ್ರದ ಕುತೂಹಲಕಾರಿ ಅಂಶ. ಸಂಬಂಧಗಳ ನಡುವಿನ ಸಂಕೀರ್ಣತೆ, ನಂಬಿಕೆ, ದ್ರೋಹ ಮತ್ತು ಅನಿರೀಕ್ಷಿತ ತಿರುವುಗಳ ಮೂಲಕ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.

ಯಾರೆಲ್ಲ ನಟಿಸಿದ್ದಾರೆ? ಎಲ್ಲಿ ನೋಡಬಹುದು?

ಈ ಸಿನಿಮಾದಲ್ಲಿ ಹೇಮಾ ಪಾತ್ರದಲ್ಲಿ ಪೂರ್ಣಾ (ಶಮ್ನಾ ಕಾಸಿಮ್) ನಟಿಸಿದ್ದಾರೆ. ತಮ್ಮ ಅಭಿನಯದ ಮೂಲಕ ಅವರು ಗಮನ ಸೆಳೆದಿದ್ದಾರೆ. ತ್ರಿಗುಣ್, ವಿದಾರ್ಥ್ ಮತ್ತು ಶುಭಶ್ರೀ ರಾಯಗುರು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಡಾರ್ಕ್ ಥ್ರಿಲ್ಲರ್, ಕ್ರೈಂ ಮತ್ತು ಸಸ್ಪೆನ್ಸ್ ಕಥೆಗಳನ್ನು ಇಷ್ಟಪಡುವವರಿಗೆ ‘ಡಾರ್ಕ್ ನೈಟ್’ ಈ ವಾರಾಂತ್ಯದಲ್ಲಿ ನೋಡಬಹುದಾದ ಸಿನಿಮಾ. ಚಿತ್ರಮಂದಿರಗಳಲ್ಲಿ ಹೆಚ್ಚು ಸದ್ದು ಮಾಡದಿದ್ದರೂ, ಒಟಿಟಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಸಿನಿಮಾ ನಿಮ್ಮ ವೀಕ್ಷಣಾ ಪಟ್ಟಿಗೆ ಸೇರಿಸಿಕೊಳ್ಳಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಮನೆಯಲ್ಲಿ ಬಯಲಾಯ್ತು ಸ್ಪರ್ಧಿಯ ಕರಾಳ ರಹಸ್ಯ! 12 ಬಾರಿ ಪ್ರೇಯಸಿಗೆ ವಂಚನೆ
ಯಶ್ ಆರ್ಭಟಕ್ಕೆ ಸ್ಕ್ರೀನ್ ಶೇಕ್, ಲಂಕೆಯ 'ಕಿಂಗ್' ರಾಕಿಂಗ್‌ ಕಡೆ ಹರಿದ ಕೋಟಿ ಕೋಟಿ ಹಣ; ರಾವಣನ ಖಜಾನೆ ಭರ್ತಿ!