ಶೂಟಿಂಗ್ ವೇಳೆ ಭೀಕರ ದುರಂತ: ಎಸ್‌ಯುವಿ ಕಾರು ಹರಿದು ಸಾಹಸ ನಟ ಮೋಹನ್ ರಾಜ್ ಸಾವು!

Published : Jul 14, 2025, 06:36 PM IST
AICWA wants to charge case against pa ranjith in the death of sm raju

ಸಾರಾಂಶ

ಚಿತ್ರವೊಂದಕ್ಕಾಗಿ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಪೆರನಂಬಾಕ್ಕಂ ಸೇತುವೆಯ ಸಮೀಪದ ಖಾಸಗಿ ಕೃಷಿ ಜಮೀನಿನಲ್ಲಿ ಈ ಚಿತ್ರೀಕರಣ ನಡೆಯುತ್ತಿತ್ತು. ಯೋಜನೆಯ ಪ್ರಕಾರ, ಮೋಹನ್ ರಾಜ್ ಅವರು ನೆಲದ ಮೇಲೆ ಮಲಗಿದ್ದು, ಅವರ ಮೇಲಿಂದ ಎಸ್‌ಯುವಿ ಕಾರೊಂದು ರಾಂಪ್ ಬಳಸಿ ಹಾರಿ ಹೋಗಬೇಕಿತ್ತು.

ಚೆನ್ನೈ: ತಮಿಳು ಚಿತ್ರರಂಗದಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದ್ದು, ಅಪಾಯಕಾರಿ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಹಿರಿಯ ಸಾಹಸ ಕಲಾವಿದ ಮೋಹನ್ ರಾಜ್ (54) ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ವಂದವಾಸಿ ಬಳಿ ಶನಿವಾರ ನಡೆದ ಈ ಘಟನೆ, ಚಿತ್ರರಂಗದಲ್ಲಿ ಸಾಹಸ ಕಲಾವಿದರ ಸುರಕ್ಷತೆಯ ಕುರಿತ ಗಂಭೀರ ಪ್ರಶ್ನೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ನಡೆದಿದ್ದೇನು?

ವೆಟ್ರಿ ದುರೈಸಾಮಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದ್ದ ಚಿತ್ರವೊಂದಕ್ಕಾಗಿ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಪೆರನಂಬಾಕ್ಕಂ ಸೇತುವೆಯ ಸಮೀಪದ ಖಾಸಗಿ ಕೃಷಿ ಜಮೀನಿನಲ್ಲಿ ಈ ಚಿತ್ರೀಕರಣ ನಡೆಯುತ್ತಿತ್ತು. ಯೋಜನೆಯ ಪ್ರಕಾರ, ಮೋಹನ್ ರಾಜ್ (Mohan Raju) ಅವರು ನೆಲದ ಮೇಲೆ ಮಲಗಿದ್ದು, ಅವರ ಮೇಲಿಂದ ಎಸ್‌ಯುವಿ ಕಾರೊಂದು ರಾಂಪ್ ಬಳಸಿ ಹಾರಿ ಹೋಗಬೇಕಿತ್ತು. ಇದು ಅತ್ಯಂತ ಅಪಾಯಕಾರಿ ಸಾಹಸವಾಗಿದ್ದರೂ, ಮೋಹನ್ ರಾಜ್ ಅವರು ತಮ್ಮ ಅನುಭವದ ಮೇಲೆ ಭರವಸೆ ಇಟ್ಟಿದ್ದರು.

ಆದರೆ, ವಿಧಿಯಾಟವೇ ಬೇರೆಯಾಗಿತ್ತು. ರಾಂಪ್ ಬಳಿ ವೇಗವಾಗಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಾಂಪ್ ಮೇಲೆ ಹಾರುವ ಬದಲು ನೇರವಾಗಿ ಕೆಳಗೆ ಮಲಗಿದ್ದ ಮೋಹನ್ ರಾಜ್ ಅವರ ಮೇಲೆ ಹರಿದಿದೆ. ಕಾರಿನ ಚಕ್ರಗಳು ಅವರ ದೇಹದ ಮೇಲೆ ಹಾದುಹೋದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಮೋಹನ್ ರಾಜ್, ಸ್ಥಳದಲ್ಲೇ ಕೊನೆಯುಸಿರೆಳೆದರು.

ಭದ್ರತಾ ಲೋಪ ಮತ್ತು ನಿರ್ಲಕ್ಷ್ಯ

ಈ ದುರಂತದ ಹಿಂದಿನ ಪ್ರಮುಖ ಕಾರಣ ತೀವ್ರ ನಿರ್ಲಕ್ಷ್ಯ ಮತ್ತು ಭದ್ರತಾ ಕ್ರಮಗಳ ಕೊರತೆ ಎಂದು ವರದಿಯಾಗಿದೆ. ಇಂತಹ ಅಪಾಯಕಾರಿ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ, ಸ್ಥಳದಲ್ಲಿ ಯಾವುದೇ ತುರ್ತು ವೈದ್ಯಕೀಯ ಸೌಲಭ್ಯಗಳು ಇರಲಿಲ್ಲ. ಅತ್ಯಂತ ಆತಂಕಕಾರಿ ವಿಷಯವೆಂದರೆ, ಕನಿಷ್ಠ ಒಂದು ಆಂಬುಲೆನ್ಸ್ ಅನ್ನೂ ಸಹ ಸಿದ್ಧವಾಗಿ ಇರಿಸಿರಲಿಲ್ಲ. ಸೂಕ್ತ ಅನುಮತಿ ಪಡೆಯದೆಯೇ ಈ ಚಿತ್ರೀಕರಣ ನಡೆಸಲಾಗುತ್ತಿತ್ತು ಎಂಬ ಆರೋಪಗಳೂ ಕೇಳಿಬಂದಿವೆ.

ಸೇಲಂ ಜಿಲ್ಲೆಯ ಮೂಲದವರಾದ ಮೋಹನ್ ರಾಜ್ (SM Raju), ಎಸ್.ಎಂ. ರಾಜು ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದರು. ಕಳೆದ 30 ವರ್ಷಗಳಿಂದ ಸಾಹಸ ಕಲಾವಿದರಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಚೆನ್ನೈ ಮೂಲದ ಸಿನೆ ಮತ್ತು ಟಿವಿ ಕಲಾವಿದರು ಮತ್ತು ಕಾರ್ಮಿಕರ ಸಂಘದ ಸದಸ್ಯರಾಗಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಸಾಹಸ ನಿರ್ದೇಶಕ ಸುರೇಶ್ ಮತ್ತು ಎಸ್‌ಯುವಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅನುಭವಿ ಕಲಾವಿದರೊಬ್ಬರು ಚಿತ್ರೀಕರಣದ ವೇಳೆ ಈ ರೀತಿ ಪ್ರಾಣ ಕಳೆದುಕೊಂಡಿರುವುದು ತಮಿಳು ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಈ ದುರಂತವು ಚಿತ್ರೀಕರಣದ ಸ್ಥಳಗಳಲ್ಲಿ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳನ್ನು ಪಾಲಿಸುವ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?