ಕೊರೋನಾದಿಂದ ಮನೋರಂಜನಾ ಉದ್ಯಮಕ್ಕೆ ಲಾಭ: ಮನೋಜ್ ಭಾಜಪೈ

By Suvarna News  |  First Published Mar 11, 2022, 12:53 PM IST

ಜೈಪುರದಲ್ಲಿ 15ನೇ ಆವೃತ್ತಿಯ ಸಾಹಿತ್ಯೋತ್ಸವ ನಡೆಯುತ್ತಿದ್ದು, ಹಲವು ಗೋಷ್ಠಿಗಳು ನಡೆಯುತ್ತಿವೆ. ಸಾಹಿತಿ ಪ್ರಿಯರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು, ‘ಪ್ಯೂರ್ ಈವಿಲ್- ದಿ ಬ್ಯಾಡ್ ಮೆನ್ ಆಫ್ ಬಾಲಿವುಡ್ ‘ ಗೋಷ್ಠಿಯಲ್ಲಿ ನಟ ಮನೋಜ್ ಭಾಜಪೈ ಭಾಗವಹಿಸಿದ್ದರು. 


ಜೋಗಿ
ಕನ್ನಡಪ್ರಭ ವಾರ್ತೆ. ಜೈಪುರ (ಮಾ.11): ಕೊರೋನಾದಿಂದ ಹಲವರಿಗೆ ತೊಂದರೆ ಆಗಿದೆ ನಿಜ. ಆದರೆ ಮನaರಂಜನಾ ಉದ್ಯಮಕ್ಕೆ ಮಾತ್ರ ಒಳ್ಳೆಯದೇ ಆಗಿದೆ. ಅಲ್ಲಿನ ಮೇಲು-ಕೀಳುಗಳೆಲ್ಲ ಮಾಯವಾಗಿ ಸಮಾನತೆ ಬಂದಿದೆ. ಹೀರೋಗಳ ಆಚೆಯೂ ಅತ್ಯುತ್ತಮ ನಟರಿದ್ದಾರೆ, ಎಂಬುದನ್ನು ಜನ ಅರ್ಥಮಾಡಿಕೊಂಡಿದ್ದಾರೆ. ಹಲವು ಪ್ರತಿಭಾವಂತರು ಹೊರಬರಲು ಕೊರೋನಾ ಕಾರಣವಾಯಿತು.

ಜೈಪುರ ಸಾಹಿತ್ಯೋತ್ಸವದ ಎರಡನೇ ದಿನ ನಡೆದ ‘ಪ್ಯೂರ್ ಈವಿಲ್- ದಿ ಬ್ಯಾಡ್ ಮೆನ್ ಆಫ್ ಬಾಲಿವುಡ್ ‘ ಗೋಷ್ಠಿಯಲ್ಲಿ ನಟ ಮನೋಜ್ ಭಾಜಪೈ ಹೇಳಿದ ಮಾತಿದು. ಹೀರೋಗಳನ್ನು ಹೊತ್ತು ಮೆರೆಸುವ, ಅವರೇ ಸಿನಿಮಾದ ಕೇಂದ್ರ ಎಂದು ಭಾವಿಸುವ, ಅವರ ಹಿಂದೆಯೇ ಕುಣಿಯುವ ಚಿತ್ರರಂಗದಲ್ಲಿ ನನಗೆ ನಂಬಿಕೆ ಇರಲಿಲ್ಲ. ಹೀಗಾಗಿ ನಾನು ನನ್ನೂರನ್ನು ಬಿಟ್ಟು ಮುಂಬಯಿಗೆ ಬಂದು ನೆಲೆಸುವ ಆಲೋಚನೆ ಮಾಡಿರಲಿಲ್ಲ. ಆದರೆ ಈಗ ಕೆಲವು ವರುಷಗಳಿಂದ ಪರಿಸ್ಥಿತಿ ಬದಲಾಗಿದೆ. ಎಲ್ಲರನ್ನೂ ಗೌರವಿಸುವ ಪ್ರವೃತ್ತಿ ಇದೆ ಎಂದು ಮನೋಜ್ ಹೇಳಿದರು.

Tap to resize

Latest Videos

undefined

ತಾವು ನಟಿಸಿದ ಹಲವು ಪಾತ್ರಗಳನ್ನು ವಿಶ್ಲೇಷಿಸಿದ ಅವರು ಪ್ರತಿಯೊಂದು ಪಾತ್ರ ಮಾಡುವಾಗಲೂ ನಟನಿಗೆ ಯಾವುದೋ ಒಂದು ಸ್ಫೂರ್ತಿ (Inspiration) ಆಗಿರುತ್ತದೆ. ಸತ್ಯ ಚಿತ್ರದಲ್ಲಿ ಮಾಡಿದ ಭಿಕ್ಕೂ ಮ್ಹಾತ್ರೆಯ ಪಾತ್ರದಿಂದ, ಇತ್ತೀಚಿನ ಪಾತ್ರದ ತನಕ ಒಂದೊಂದು ಪಾತ್ರವನ್ನೂ ನಾನು ಜೀವನದಿಂದ ಪಡೆದುಕೊಂಡಿದ್ದೇನೆ. ಒಂದು ದಿನ ವೈಭವದ ಹೋಟೆಲಿಗೆ ಹೋಗಿದ್ದೆ. ಅಲ್ಲಿಗೆ ಮಂದಿ ಬಂದು ಲಕ್ಷಾಂತರ ರುಪಾಯಿ ಖರ್ಚು ಮಾಡಿ, ಮೈಮೇಲೆ ಪ್ರಜ್ಞೆ ಇಲ್ಲದವರಂತೆ ವಾಪಸ್ಸು ಹೋಗುವುದನ್ನು ನೋಡಿದಾಗ ಕೆಟ್ಟದ್ದು ಅಂದರೇನು ಅನ್ನುವುದು ಹೊಳೆಯಿತುಯ ಈ ಜಗತ್ತು ಒಳಿತು ಕೆಡುಕುಗಳ ಸಂಗಮ. ಒಳ್ಳೆಯದು ಬೇಗ ಬೇಸರ ತರುತ್ತದೆ. ಆಗ ನಾವು ಕೆಡುಕಿನತ್ತ ತಿರುಗುತ್ತೇವೆ ಎಂದು ಮನೋಜ್ ಪಾತ್ರಗಳ ಹಿಂದಿನ ಕತೆಯನ್ನು ಬಿಚ್ಚಿಟ್ಟರು.

ದಿ ಬ್ಯಾಡ್ ಮೆನ್ (The Bad Men) ಬಾಲಿವುಡ್ ಕೃತಿ ಬರೆದ ಬಾಲಾಜಿ ವಿಟ್ಟಲ್ ಚಿತ್ರರಂಗದಲ್ಲಿ ಖಳನಾಯಕರು ಹೇಗೆ ಬದಲಾಗುತ್ತಾ ಬಂದರು ಅನ್ನುವುದನ್ನು ತಮಾಷೆಯಾಗಿ ವಿವರಿಸಿದರು. ಎಪ್ಪತ್ತರ ದಶಕದ ಮೊದಲು ಭ್ರಷ್ಟ ಪೊಲೀಸ್ ಅಧಿಕಾರಿಗಳೇ ಇರಲಿಲ್ಲ. ಆನಂತರ ಪೊಲೀಸರನ್ನು ಭ್ರಷ್ಟರಾಗಿ, ಕೊಲೆಗಡುಕರಾಗಿ, ಜೋಕರುಗಳಾಗಿ ತೋರಿಸಲಾಯಿತು. ಹಿಂದೆ ಬ್ರಿಟಿಷರು ಖಳನಾಯಕರಾಗಿದ್ದರು, ನಂತರ ಜಮೀನ್ದಾರರು ಖಳನಾಯಕರಾದರು, ಆಮೇಲೆ ತಪ್ಪು ಮಾಡುವವರು, ಕಳ್ಳರು, ಕೊಳ್ಳೆ ಹೊಡೆಯುವವರು, ರಾಜಕಾರಣಿಗಳು- ಹೀಗೆ ಖಳನಾಯಕರು ಬದಲಾಗುತ್ತಾ ಹೋದರು. ಈಗ ಯಾರು ಒಳ್ಳೆಯವರು, ಯಾರು ಕೆಟ್ಟವರು ಅನ್ನುವುದೇ ಗೊತ್ತಾಗದ ಪರಿಸ್ಥಿತಿ ಇದೆ. ಸಜ್ಜನನ ಒಳಗೊಬ್ಬ ಖಳ, ಖಳನ ಒಳಗೊಬ್ಬ ಸಜ್ಜನ ಇರುವ ಕಾಲ ಇದು. ಅವರು ಯಾವಾಗ ಹೊರಗೆ ಬರುತ್ತಾರೆ ಅನ್ನುವುದು ಮಾತ್ರ ಯಾರಿಗೂ ಗೊತ್ತಿರುವುದಿಲ್ಲ ಎಂದು ಖಳನಾಯಕರ ಚರಿತ್ರೆಯನ್ನು ಬಿಚ್ಚಿಟ್ಟರು.

ಜೈಪುರ ಸಾಹಿತ್ಯ ಉತ್ಸವದ ಆನ್‌ಗ್ರೌಂಡ್ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಉದ್ಘಾಟನೆ: 
ಶಂಖನಾದ, ನಗಾರಿ, ಕೊಂಬು-ಕಹಳೆ, ಮಂಗಳವಾದ್ಯ ಮತ್ತು ದೀಪ ಬೆಳಗುವುದರೊಂದಿಗೆ, ಜೈಪುರ ಸಾಹಿತ್ಯ ಜಾತ್ರೆಯ 15ನೇ ಆವೃತ್ತಿ ಸಡಗರದಿಂದ ಮಾ.10ರಂದು ಆರಂಭಗೊಂಡಿತು. ಜೈಪುರದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್‌, ಟೀಮ್‌ ವರ್ಕ್ ಸಂಸ್ಥೆಯ ಆಡಳಿತ ನಿರ್ದೇಶಕ ಸಂಜಯ್‌ ಕೆ ರಾಯ್‌, ಸಹ ನಿರ್ದೇಶಕಿ ನಮಿತಾ ಗೋಖಲೆ ಮತ್ತು ವಿಲಿಯಂ ಡಾರ್ಲಿಂಪಲ್‌ ದೀಪಗಳನ್ನು ಬೆಳಗುವ ಮೂಲಕ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿದರು.

‘ಈ ಸಾಹಿತ್ಯ ಜಾತ್ರೆ ಅತ್ಯಂತ ವಿಶಿಷ್ಟವಾಗಿದೆ. ಜೈಪುರ ಪ್ರವಾಸೋದ್ಯಮಕ್ಕೆ (Jaipur Tourism) ಇದರ ಕೊಡುಗೆಯಿದೆ. ಕಳೆದ ಎರಡು ವರುಷಗಳಿಂದ ಪ್ರವಾಸೋದ್ಯಮ ಸೊರಗಿತ್ತು. ಈ ವರುಷದ ಬಜೆಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾನ್ಯ ಮುಖ್ಯಮಂತ್ರಿಗಳು 1000 ಕೋಟಿ ರುಪಾಯಿ ಮೀಸಲಿಟ್ಟಿದ್ದಾರೆ. ಪ್ರವಾಸೋದ್ಯಮವನ್ನು ನಾವು ಒಂದು ಉದ್ಯಮ ಎಂದು ಘೋಷಿಸಿದ್ದೇವೆ. ಈ ಸಮಾರಂಭಕ್ಕೆ ಬಂದಿರುವ ಪ್ರತಿಯೊಂದು ದೇಶದ, ರಾಜ್ಯದ, ಜೈಪುರದ ಪ್ರಜೆಗಳಾದ ನೀವೆಲ್ಲರೂ ಜೈಪುರ ಪ್ರವಾಸೋದ್ಯಮದ ರಾಯಭಾರಿಗಳು’ ಎಂದು ವಿಶ್ವೇಂದ್ರ ಸಿಂಗ್‌ ಸಮ್ಮೇಳನದ ಉದ್ಘಾಟನೆ ವೇಳೆ ಘೋಷಿಸಿದ್ದರು.

click me!