
ನಟಿ ಮಾಳವಿಕಾ ಮೋಹನನ್ ಈಗ ಸೌತ್ ಇಂಡಿಯಾದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ದುಲ್ಕರ್ ಸಲ್ಮಾನ್ ಜೊತೆ 'ಪಟ್ಟಂ ಪೋಲೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮಾಳವಿಕಾ, ತಮಿಳಿನಲ್ಲಿ ವಿಜಯ್ ಜೊತೆ 'ಮಾಸ್ಟರ್' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಇದೀಗ ಮಾಳವಿಕಾ, ತಮಿಳು ಪತ್ರಕರ್ತರೊಬ್ಬರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪತ್ರಕರ್ತ ಕೇಳಿದ ಅಸಹ್ಯಕರ ಪ್ರಶ್ನೆಯೇ ಅವರ ಕೋಪಕ್ಕೆ ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ತಮಿಳು ಪತ್ರಕರ್ತರೊಬ್ಬರು ಮಾಳವಿಕಾಗೆ, "ವಿಜಯ್ ಸರ್ ಹೋಗೋ ಕಡೆಯೆಲ್ಲಾ ತ್ರಿಷಾ ಕೂಡ ಹೋಗ್ತಿದ್ದಾರೆ. ಅದೇ ರೀತಿ ಅವರ ಜೊತೆ ಹೋಗೋಕೆ ನಿಮಗೂ ಏನಾದ್ರೂ ಐಡಿಯಾ ಇದ್ಯಾ?" ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕೇಳಿ ಮಾಳವಿಕಾಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ವಿಡಿಯೋದಲ್ಲಿ ಅವರ ಮುಖಭಾವ ಬದಲಾಗಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ. "ಇದೇನಿದು ಪ್ರಶ್ನೆ?" ಎಂದು ಅವರು ವ್ಯಂಗ್ಯವಾಗಿ ತಿರುಗಿ ಕೇಳಿದ್ದಾರೆ. ತಕ್ಷಣ ಅಲ್ಲಿದ್ದ ಇತರರು ಕೂಡ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಈ ಕಾರ್ಯಕ್ರಮಕ್ಕೂ ಈ ಪ್ರಶ್ನೆಗೂ ಏನಾದ್ರೂ ಸಂಬಂಧ ಇದ್ಯಾ?" ಎಂದು ಕೇಳಿದ್ದಾರೆ. ಆದರೂ ಆ ಪತ್ರಕರ್ತ, "ವಿಜಯ್ ಸರ್ ಜೊತೆ ಟ್ರಾವೆಲ್ ಮಾಡೋಕೆ ಐಡಿಯಾ ಇದ್ಯಾ?" ಎಂದು ಮತ್ತೆ ಕೇಳಿದ್ದಾನೆ. ಆದರೆ ಮಾಳವಿಕಾ ಆ ಪ್ರಶ್ನೆಗೆ ಉತ್ತರಿಸದೆ ಜಾರಿಕೊಂಡಿದ್ದಾರೆ.
ನಂತರ ಈ ಘಟನೆ ಬಗ್ಗೆ ಮಾಳವಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. "ನಾನು ನಿನ್ನೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ತಮಿಳುನಾಡಿನ ಎಲ್ಲಾ ಪತ್ರಕರ್ತರ ಮೇಲೆ ನನಗೆ ಅಪಾರ ಗೌರವವಿದೆ. ಆದರೆ, ಅವರಲ್ಲಿ ಕೆಲವರು ಅನಗತ್ಯ, ಸೆನ್ಸೇಷನಲ್ ಮತ್ತು ತುಂಬಾನೇ ಅಸಹ್ಯಕರ ಪ್ರಶ್ನೆಗಳನ್ನು ಪದೇ ಪದೇ ಕೇಳ್ತಾನೇ ಇದ್ರು. ದಳಪತಿ ವಿಜಯ್ ಅವರು ನನಗೆ ಕಳೆದ ಏಳು ವರ್ಷಗಳಿಂದ ಗೊತ್ತು. ಅವರ ಮೇಲೆ ನನಗೆ ತುಂಬಾನೇ ಗೌರವ ಇದೆ. ಅವರ ಈ ಯಶಸ್ಸಿನ ಪಯಣವನ್ನು ನೋಡಿ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮದವರು ಸ್ವಲ್ಪ ಘನತೆ ಮತ್ತು ಪರಿಗಣನೆಯನ್ನು ಇಟ್ಟುಕೊಳ್ಳಬೇಕು. ಅದನ್ನ ನಾನು ಪ್ರಶಂಸಿಸುತ್ತೇನೆ" ಎಂದು ಮಾಳವಿಕಾ ಬರೆದುಕೊಂಡಿದ್ದಾರೆ.
ಇದೇ ವಿಚಾರವಾಗಿ ಆರ್‌ಜೆ ಬಾಲಾಜಿ ಕೂಡ ಪತ್ರಕರ್ತರ ನಡೆಯನ್ನು ಖಂಡಿಸಿದ್ದಾರೆ. "ಮಾಧ್ಯಮದವರು ಯಾವಾಗಲೂ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ಅದರಲ್ಲೂ ವೈಯಕ್ತಿಕ ಸಂಬಂಧಗಳು ಮತ್ತು ಅದರ ಮಿತಿಗಳ ವಿಷಯದಲ್ಲಿ ಇದು ಬಹಳ ಮುಖ್ಯ" ಎಂದು ಅವರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ಪತ್ರಕರ್ತನಿಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.