‘ಸೀನ್’ ಗೆಲುವಿನ ಬಳಿಕ ಇದ್ದಕ್ಕಿದ್ದಂತೆ ಭಾವುಕರಾದ ನಟ ಸೂರ್ಯ: ವಿಡಿಯೋದಲ್ಲೇನಿದೆ?

Published : Nov 22, 2026, 05:01 PM IST
Suriya

ಸಾರಾಂಶ

ನಟ ಸೂರ್ಯ ನಟನೆಯ ‘ಸೀನ್’ ಸಿನಿಮಾ ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲಿ ವಿಶ್ವಾದ್ಯಂತ 250 ಕೋಟಿ ರೂಪಾಯಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ 2026ರಲ್ಲಿ ಸೂರ್ಯ ಅಭಿನಯದ ಮೂರನೇ 200..

ಕಾಲಿವುಡ್ ಸ್ಟಾರ್ ನಟ ಸೂರ್ಯ ಅಭಿನಯದ ಇತ್ತೀಚಿನ ಸಿನಿಮಾ 'ಸೀನ್' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ವಿಶ್ವಾದ್ಯಂತ 250 ಕೋಟಿ ರೂಪಾಯಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಬ್ಲಾಕ್‌ಬಸ್ಟರ್ ಪಟ್ಟಿಗೆ ಸೇರಿದೆ. ವಿಶೇಷವೆಂದರೆ, 2026ರಲ್ಲಿ ಸೂರ್ಯ ಅಭಿನಯದ 'ಕರುಪ್ಪು', 'ವಿಶ್ವನಾಥ್ & ಸನ್ಸ್' ಬಳಿಕ 200 ಕೋಟಿ ರೂಪಾಯಿ ಗಡಿ ದಾಟಿದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೂ 'ಸೀನ್' ಪಾತ್ರವಾಗಿದೆ.

ಈ ಹ್ಯಾಟ್ರಿಕ್ ಗೆಲುವಿನಿಂದ ನಟ ಸೂರ್ಯ ಫುಲ್ ಖುಷಿಯಾಗಿದ್ದಾರೆ. ಈ ಸಂಭ್ರಮದ ನಡುವೆಯೇ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿ ಅವರು ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾತಂಡಕ್ಕಿಂತ ಪ್ರೇಕ್ಷಕರೇ ಈ ಗೆಲುವನ್ನು ಹೆಚ್ಚು ಸಂಭ್ರಮಿಸುತ್ತಿದ್ದಾರೆ ಎಂದು ಹೇಳಿರುವ ಸೂರ್ಯ ಭಾವುಕರಾಗಿದ್ದಾರೆ.

'ನಮಗಿಂತ ನೀವೇ ಹೆಚ್ಚು ಸಂಭ್ರಮಿಸಿದ್ದೀರಿ'

'ಸೀನ್' ಸಿನಿಮಾಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಕಂಡು ನಟ ಸೂರ್ಯ ಭಾವುಕರಾಗಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಅವರು, "ನನ್ನ ಪ್ರೀತಿಯ ಅಭಿಮಾನಿಗಳು, ಸಹೋದರ-ಸಹೋದರಿಯರು ಹಾಗೂ ಎಲ್ಲಾ ಸಿನಿಮಾ ಪ್ರೇಕ್ಷಕರಿಗೆ ಹೃದಯಪೂರ್ವಕ ನಮಸ್ಕಾರಗಳು. 'ಸೀನ್' ಸಿನಿಮಾವನ್ನು ಚಿತ್ರಮಂದಿರಗಳಿಗೆ ಬಂದು ವೀಕ್ಷಿಸಿದ್ದಷ್ಟೇ ಅಲ್ಲದೆ, ಅದನ್ನು ಹಬ್ಬದಂತೆ ಸಂಭ್ರಮಿಸಿದ್ದೀರಿ. ಸಿನಿಮಾದ ಪ್ರತಿಯೊಂದು ದೃಶ್ಯವನ್ನೂ ಸೂಕ್ಷ್ಮವಾಗಿ ಗಮನಿಸಿ, ವಿಶ್ಲೇಷಿಸಿದ್ದೀರಿ. ನಿಮ್ಮ ಸಕಾರಾತ್ಮಕ ವಿಮರ್ಶೆಗಳು ಹಾಗೂ ಪ್ರೀತಿಯಿಂದ ಈ ಚಿತ್ರವನ್ನು ಇಷ್ಟು ದೊಡ್ಡ ಯಶಸ್ಸಿನತ್ತ ಕೊಂಡೊಯ್ದಿದ್ದೀರಿ" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಸಾಮಾನ್ಯವಾಗಿ ಒಂದು ಸಿನಿಮಾ ಯಶಸ್ವಿಯಾದಾಗ ಅದರ ಕಲಾವಿದರು, ತಂತ್ರಜ್ಞರು ಹಾಗೂ ನಿರ್ಮಾಪಕರು ಹೆಚ್ಚು ಸಂಭ್ರಮಿಸುತ್ತಾರೆ. ಆದರೆ 'ಸೀನ್' ವಿಚಾರದಲ್ಲಿ ಚಿತ್ರತಂಡಕ್ಕಿಂತ ಪ್ರೇಕ್ಷಕರೇ ದುಪ್ಪಟ್ಟು ಖುಷಿಪಡುತ್ತಿದ್ದಾರೆ ಎಂದು ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ತೋರಿಸುತ್ತಿರುವ ಈ ಪ್ರೀತಿಗೆ ಹೇಗೆ ಧನ್ಯವಾದ ಹೇಳಬೇಕೆಂದೇ ತಿಳಿಯುತ್ತಿಲ್ಲ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಯಶಸ್ಸಿಗೆ ಕಾರಣರಾದ ಚಿತ್ರಮಂದಿರಗಳ ಮಾಲೀಕರು, ಮಾಧ್ಯಮ ಮಿತ್ರರು, ಸಿನಿಮಾ ವಿಮರ್ಶಕರು, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ವಿವಿಧ ಭಾಷೆಗಳ ಅಭಿಮಾನಿಗಳಿಗೂ ಸೂರ್ಯ ಧನ್ಯವಾದ ತಿಳಿಸಿದ್ದಾರೆ. ಅದರಲ್ಲೂ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣದೊಂದಿಗೆ ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿತರಕ ಶಕ್ತಿ (ಶಕ್ತಿ ಫಿಲ್ಮ್ ಫ್ಯಾಕ್ಟರಿ) ಅವರಿಗೂ ಚಿತ್ರತಂಡದ ಪರವಾಗಿ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ, ಮುಂದಿನ ದಿನಗಳಲ್ಲಿ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುವುದಾಗಿ ಭರವಸೆ ನೀಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ 'ಸೀನ್' ಸುನಾಮಿ; 250 ಕೋಟಿ ಕ್ಲಬ್‌ಗೆ ಎಂಟ್ರಿ!

ಮಲಯಾಳಂ ನಿರ್ದೇಶಕ ಜೀತು ಮಾಧವನ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಸೀನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್ ಮಾಡುತ್ತಿದೆ. ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲೇ ವಿಶ್ವಾದ್ಯಂತ 250 ಕೋಟಿ ರೂಪಾಯಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಟ್ರೇಡ್ ವಲಯದ ಗಮನ ಸೆಳೆದಿದೆ.

ಈ ಹಿಂದೆ ಸೂರ್ಯ ಅಭಿನಯದ 'ವಿಶ್ವನಾಥ್ & ಸನ್ಸ್' ಸಿನಿಮಾ ಗಳಿಸಿದ್ದ 209.46 ಕೋಟಿ ರೂಪಾಯಿ ಲೈಫ್‌ಟೈಮ್ ಕಲೆಕ್ಷನ್ ಅನ್ನೂ 'ಸೀನ್' ಹಿಂದಿಕ್ಕಿದೆ. 'ಕರುಪ್ಪು' ಬಳಿಕ ಸೂರ್ಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ ಎಂಬ ದಾಖಲೆಗೂ ಪಾತ್ರವಾಗಿದೆ. ವಿಶೇಷವಾಗಿ ವಿದೇಶಿ ಮಾರುಕಟ್ಟೆಯಲ್ಲಿ ಸೂರ್ಯ ಅವರ ವೃತ್ತಿಜೀವನದ ಅತ್ಯುತ್ತಮ ಕಲೆಕ್ಷನ್ ದಾಖಲಿಸಿರುವುದು ಮತ್ತೊಂದು ವಿಶೇಷ.

ತಮಿಳಿನ ಜೊತೆಗೆ ತೆಲುಗು ರಾಜ್ಯಗಳಲ್ಲೂ 'ಸೀನ್' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ತೆಲುಗು ವರ್ಷನ್ ಸುಮಾರು 29.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಆ ಮೂಲಕ ತೆಲುಗು ಪ್ರೇಕ್ಷಕರಲ್ಲೂ ಸೂರ್ಯ ಅವರಿಗಿರುವ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ.

ಇನ್ನು 'ಕರುಪ್ಪು', 'ವಿಶ್ವನಾಥ್ & ಸನ್ಸ್' ಹಾಗೂ ಇದೀಗ 'ಸೀನ್' ಸಿನಿಮಾಗಳ ಮೂಲಕ 2026ರಲ್ಲಿ ಸತತ ಮೂರು 200 ಕೋಟಿ ಕ್ಲಬ್ ಸಿನಿಮಾಗಳನ್ನು ನೀಡಿದ ಅಪರೂಪದ ಸಾಧನೆಯನ್ನು ಸೂರ್ಯ ಮಾಡಿದ್ದಾರೆ. ಈ ಯಶಸ್ಸಿನ ಸಂಭ್ರಮದಲ್ಲಿರುವ ನಟ, ಅಭಿಮಾನಿಗಳ ಪ್ರೀತಿಗೆ ಭಾವುಕ ವಿಡಿಯೋ ಮೂಲಕ ಧನ್ಯವಾದ ಅರ್ಪಿಸಿರುವುದು ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನಿರುದ್ಧ್-ಕಾವ್ಯಾ ರಿಸೆಪ್ಷನ್‌ಗೆ ಪ್ರತ್ಯೇಕವಾಗಿ ಬಂದ ಸಿಎಂ ವಿಜಯ್, ಪತ್ನಿ ಸಂಗೀತಾ: ಫೋಟೋಸ್ ವೈರಲ್!
ಅಣ್ಣಾವ್ರ ಸದಾಶಿವನಗರದ 'ದೊಡ್ಮನೆ' ಹಿಂದಿದೆ ಇಂಟ್ರೆಸ್ಟಿಂಗ್ ಕಥೆ; ಆದ್ರೆ ರಾಜ್‌ಕುಮಾರ್ ನೆಲೆಸಿದ್ದ ಮನೆ ಕೆಡವಿ 2 ಹೊಸ ಮನೆ ಕಟ್ಟಿದ್ದೇಕೆ?