
ಗಾಂಧಿನಗರದಲ್ಲೀಗ ಪವರ್'ಫುಲ್ ರಾಜಕಾರಣಿಗಳ ಮಕ್ಕಳದ್ದೇ ಹವಾ. ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್, ಚೆಲುವರಾಯಸ್ವಾಮಿ ಪುತ್ರ ಸಚಿನ್, ಎಚ್.ಎಂ.ರೇವಣ್ಣ ಮಗ ಅನೂಪ್ ಈಗಾಗಲೇ ಹೀರೋ ಪಟ್ಟದಲ್ಲಿ ಕುಳಿತವರು. ಸದ್ಯದಲ್ಲೇ ಜಮೀರ್ ಖಾನ್ ಮಗ ಬಾಲಿವುಡ್'ನಿಂದ ಬಣ್ಣದ ಹೆಜ್ಜೆ ಇಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿಯ ಮದುವೆಯಲ್ಲಿ ಅಚ್ಚರಿ ಪ್ರತಿಭೆ ಬೆಳಕಿಗೆ ಬಂದಿದೆ. ರೆಡ್ಡಿಯವರ ಪುತ್ರ, 16 ವರ್ಷದ ಕಿರೀಟಿ ಕೂಡ ಸ್ಯಾಂಡಲ್ವುಡ್ ಸೇರುತ್ತಿದ್ದಾರೆ. 'ಕನ್ನಡಪ್ರಭ'ದ ಆರ್.ಕೇಶವಮೂರ್ತಿ ಅವರೊಂದಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕಿರೀಟಿಯ ಅಪಾರ ಪ್ರತಿಭೆಗಳು ಅನಾವರಣಗೊಂಡವು.
ಸೋದರಿ ಬ್ರಹ್ಮಣಿ ಮದುವೆ ಸಂಭ್ರಮದ ವೇದಿಕೆಯಲ್ಲಿ ಸಖತ್ತಾಗಿಯೇ ಡ್ಯಾನ್ಸ್ ಮಾಡಿದ್ದೀರಿ?
ಹೌದು, ನನಗೆ ಡ್ಯಾನ್ಸ್ ಅಂದ್ರೆ ಪ್ರಾಣ. ಯಾಕೆಂದರೆ ನನ್ನ ಆರಾಧ್ಯ ದೈವ ಮೈಕೆಲ್ ಜಾಕ್ಸನ್. ಮ್ಯೂಸಿಕ್ ಸ್ಟಾರ್ಟ್ ಆದ ತಕ್ಷಣ ಅವರ ಹಾಗೆ ಸ್ಟೆಫ್ಸ್ ಹಾಕಬೇಕೆಂಬುದು ನನ್ನ ಆಸೆ. ಹೀಗಾಗಿ ಅಕ್ಕನ ಮದುವೆಯಲ್ಲಿ ನನ್ನ ಡ್ಯಾನ್ಸ್ ಒಂಚೂರು ಜೋರಾಗಿಯೇ ಸದ್ದು ಮಾಡಿದೆ.
ನಟರಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದೀರಂತೆ?
ನಿಮ್ಮ ಊಹೆ ನಿಜ. ನಾನು ನಟನಾಗಿ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದೇನೆ. ನನಗೆ ಸಿನಿಮಾಗಳ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಅದಕ್ಕೆ ಕಾರಣ ನಮ್ಮ ತಂದೆ. ಅವರಿಗೂ ಸಿನಿಮಾ ಅಂದ್ರೆ ಪಂಚಪ್ರಾಣ. ಹೀಗಾಗಿ ನನಗೂ ಸಿನಿಮಾ ಹುಚ್ಚು ಬಂದಿದ್ದು ಅವರಿಂದಲೇ. ಚಿತ್ರರಂಗಕ್ಕೆ ಬರುವುದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇನೆ.
ಹೀರೋ ಆಗಲು ಹೇಗೆ ರೆಡಿ ಆಗುತ್ತಿದ್ದೀರಿ?
ಚಿತ್ರರಂಗಕ್ಕೆ ಪ್ರವೇಶ ಮಾಡಬೇಕು ಅಂತಲೇ ಕಳೆದ ಏಳೆಂಟು ವರ್ಷಗಳಿಂದ ಸಿದ್ಧಗೊಳ್ಳುತ್ತಿದ್ದೇನೆ. ಮೊದಲಿಗೆ ಡ್ಯಾನ್ಸ್ ಸ್ಕೂಲ್‌ಗೆ ಸೇರಿ ನೃತ್ಯ ಕಲಿತೆ. ನೃತ್ಯದ ಮೇಲೆ ಒಂದು ಹಂತಕ್ಕೆ ಪಟ್ಟು ಸಾಧಿಸಿಕೊಂಡ ಮೇಲೆ ಸಾಹಸ ತರಬೇತಿಯತ್ತ ಮುಖಮಾಡಿದೆ. ಸಿನಿಮಾ ಎಂದಮೇಲೆ ಸಾಹಸ ಸನ್ನಿವೇಶಗಳಿಗೆ ಹೆಚ್ಚು ಒತ್ತು ಇರುತ್ತದೆಂದು ನಂಬಿ ಹೈದರಾಬಾದ್‌ನಲ್ಲಿ ಕುದುರೆ ಸವಾರಿ, ಕರಾಟೆ ಕಲಿತೆ. ಇದಾದ ಮೇಲೆ ಬೆಂಗಳೂರಿನಲ್ಲಿ ಬೈಕ್ ವೀಲಿಂಗ್ ಕಲಿತಿದ್ದೇನೆ. ಈಗಷ್ಟೆಕೇರಳದಲ್ಲಿ ಕಲಾರಿಪಯಟ್ಟು ಕಲಿತು ಬಂದಿದ್ದೇನೆ. ಏಳೆಂಟು ತಿಂಗಳಿಂದ ಈ ತಯಾರಿಯಲ್ಲಿ ತೊಡಗಿರುವೆ.
ಸರಿ, ಹೀರೋ ಆಗಲು ನಿಮಗೆ ಯಾರು ಸ್ಫೂರ್ತಿ?
ಸ್ಫೂರ್ತಿ ಎನ್ನುವುದಕ್ಕಿಂತ ನಮ್ಮ ತಂದೆಯ ಆಸೆ ಇದು. ಯಾಕೆಂದರೆ ನಮ್ಮ ತಂದೆ ಕೂಡ ಸಿನಿಮಾಗಳಲ್ಲಿ ನಟನಾಗಬೇಕು, ಸಿನಿಮಾ ನಿರ್ಮಾಣ ಮಾಡಬೇಕು ಅಂತ ಆಸೆ ಇಟ್ಟುಕೊಂಡಿದ್ದರು. ಅದಕ್ಕಾಗಿ ಚೆನ್ನೈನಲ್ಲಿ ತರಬೇತಿ ಪಡೆದು ಆಗ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರನ್ನು ಭೇಟಿ ಮಾಡಿದರಂತೆ. ಮುಂದೆ ಏನಾಯಿತೋ ಗೊತ್ತಿಲ್ಲ. ಪುಟ್ಟಣ್ಣ ಕಣಗಾಲ್‌ರೊಂದಿಗೆ ಸಿನಿಮಾ ಮಾಡುವ ಅವಕಾಶ ಸಿಗಲಿಲ್ಲ. ಹೀಗಾಗಿ ನಮ್ಮ ತಂದೆ ಬ್ಯುಸಿನೆಸ್ ಕಡೆ ಮುಖಮಾಡಿದರು. ಈಗ ಅವರ ಆಸೆಯನ್ನು ನಾನು ಈಡೇರಿಸುತ್ತಿದ್ದೇನೆ. ನಮ್ಮ ತಂದೆ ಕೂಡ ಇದನ್ನೇ ಹೇಳಿ, ‘ನಾನು ನಟ ಆಗಬೇಕೆಂದುಕೊಂಡಿದ್ದೆ. ಆಗಲಿಲ್ಲ. ನನ್ನ ಆಸೆ ನಿನ್ನಿಂದ ಈಡೇರಲಿ' ಎಂದು ನನ್ನನ್ನು ಚಿತ್ರರಂಗಕ್ಕೆ ಕಳುಹಿಸುತ್ತಿದ್ದಾರೆ.
ನಿಮ್ಮ ಮೊದಲ ಸಿನಿಮಾ ಪ್ರವೇಶ ಯಾವಾಗ ಮತ್ತು ಹೇಗಿರುತ್ತದೆ?
ಆ ಸಿನಿಮಾ ಹೇಗಿರುತ್ತದೆಂದು ಈಗಲೇ ಹೇಳಲಾರೆ. ಆದರೆ, ನಾನು ನಟನಾಗಿ ಲಾಂಚ್ ಆಗುವುದಕ್ಕೆ ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಅಂದರೆ 2017ರ ಜನವರಿಯ ಸಂಕ್ರಾಂತಿ ಹಬ್ಬಕ್ಕೆ ನನ್ನ ಮೊದಲ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಈಗಾಗಲೇ ರಾಜಮೌಳಿಯ ‘ಬಾಹುಬಲಿ' ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕತೆ ಅಂತಿಮವಾದ ಮೇಲೆ ಅವರ ಹೆಸರು ಹಾಗೂ ಸಿನಿಮಾ ಹೇಗಿರಬಹುದು ಅಂತ ಹೇಳುತ್ತೇನೆ. ಸದ್ಯಕ್ಕಂತೂ ಸಂಕ್ರಾಂತಿಯಂದು ಅದ್ಧೂರಿಯಾಗಿ ನನ್ನ ಮೊದಲ ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ವೈಯಕ್ತಿಕವಾಗಿ ನಿಮಗೆ ಯಾವ ರೀತಿಯ ಸಿನಿಮಾ ಇಷ್ಟ? ಕನ್ನಡದಲ್ಲಿ ಯಾರು ನಿಮ್ಮ ನೆಚ್ಚಿನ ನಟ?
ನನಗೆ ಎಲ್ಲ ರೀತಿಯ ಸಿನಿಮಾಗಳೂ ಇಷ್ಟ. ಆದರೆ, ಪ್ರೇಮಕತೆಗಳು ಹಾಗೂ ಆ್ಯಕ್ಷನ್ ಕತೆಗಳನ್ನು ಒಳಗೊಂಡ ಸಿನಿಮಾಗಳು ನನ್ನನ್ನು ತುಂಬಾ ಕಾಡಿವೆ. ಅಂಥ ಸಿನಿಮಾಗಳ ಮೂಲಕ ಲಾಂಚ್ ಆದರೆ ಲಾಂಗ್ ಲೈಫ್ ಇರುತ್ತದೆ. ಇದರ ಹೊರತಾಗಿಯೂ ನನ್ನಲ್ಲಿರುವ ಪ್ರತಿಭೆಗೆ ವೇದಿಕೆ ಕೊಡುವ ಯಾವುದೇ ಸಿನಿಮಾದಲ್ಲೂ ನಾನು ನಟಿಸುತ್ತೇನೆ. ಇನ್ನು ಕನ್ನಡದಲ್ಲಿ ನನ್ನ ನೆಚ್ಚಿನ ಹೀರೋ ಯಶ್. ಅವರಂತೆ ಡೈಲಾಗ್ ಹೇಳುವುದು, ಡ್ಯಾನ್ಸ್ ಹಾಗೂ ಫೈಟ್ ಮಾಡಬೇಕೆಂಬುದು ನನ್ನ ದೊಡ್ಡ ಆಸೆ.
ಕರ್ನಾಟಕದ ಗಡಿ ಬಳ್ಳಾರಿಯಲ್ಲಿ ಹುಟ್ಟಿಬೆಳೆದ ನಿಮ್ಮ ಮೇಲೆ ಕನ್ನಡ ಸಿನಿಮಾಗಳ ಪ್ರಭಾವ ಎಷ್ಟಿದೆ?
ಆರಂಭದಲ್ಲಿ ನಾನು ಹೆಚ್ಚಾಗಿ ತೆಲುಗು ಹಾಗೂ ಹಿಂದಿ ಸಿನಿಮಾಗಳನ್ನೇ ನೋಡುತ್ತಿದ್ದೆ. ಆದರೆ, ರಜಾ ದಿನಗಳನ್ನು ಕಳೆದಿದ್ದು ಮಾತ್ರ ಬೆಂಗಳೂರಿನಲ್ಲಿ. ಹೀಗಾಗಿ ಇಲ್ಲಿಗೆ ಬಂದಾಗಲೆಲ್ಲ ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದೆ. ಅದರಲ್ಲೂ ಯಶ್, ಸುದೀಪ್, ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ನಟನೆಯ ಸಿನಿಮಾಗಳನ್ನು ಪ್ರೀತಿಯಿಂದ ನೋಡಿದ್ದೇನೆ. ಟಾಕೀಸಿಗೆ ಹೋಗಿ ಇವರ ನಟನೆಯನ್ನು ಆಸ್ವಾದಿಸಿದ್ದೇನೆ.
ಈಗ ಕಿರೀಟಿ ಏನು ಮಾಡ್ತಿದ್ದಾರೆ?
ಬಳ್ಳಾರಿಯ ನಂದಿ ಇಂಟರ್‌ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.95ರಷ್ಟುಅಂಕ ತೆಗೆದುಕೊಂಡಿದ್ದೆ. ಪಿಯುಸಿಯಲ್ಲಿ ಮತ್ತಷ್ಟುಹೆಚ್ಚಿನ ಅಂಕಗಳನ್ನು ಗಳಿಸಬೇಕಿದೆ. ನಟನೆ ಜತೆಗೆ ಶಿಕ್ಷಣ ಕೂಡ ಬೇಕು ಎಂಬುದು ನನ್ನ ಆಸೆ. ಸಿನಿಮಾ ಮತ್ತು ಕಾಲೇಜು ಎರಡೂ ನನ್ನ ಬದುಕಿನ ಭಾಗಗಳು ಆಗಲಿವೆ.
ಸಿನಿಮಾದ ಹೊರತಾಗಿಯೂ ನಿಮ್ಮ ಆಸಕ್ತಿ ಕ್ಷೇತ್ರ?
ನನಗೆ ಡ್ಯಾನ್ಸ್ ಇಷ್ಟ. ಇದರ ಜತೆಗೆ ಕ್ರಿಕೆಟ್ ಅಂದ್ರೂ ಪ್ರಾಣ. ರಾಜ್ಯ ತಂಡದಿಂದ ತರಬೇತಿಯನ್ನೂ ತೆಗೆದುಕೊಂಡಿದ್ದೇನೆ. ಚಿತ್ರರಂಗದ ಕಡೆ ಮುಖಮಾಡದೆ ಹೋಗಿದ್ದರೆ ಬಹುಶಃ ಕ್ರಿಕೆಟರ್ ಆಗಿ ಗುರುತಿಸಿಕೊಳ್ಳುತ್ತಿದ್ದೆ. ಆದರೆ, ನನಗೆ ಈಗ ನನ್ನ ತಂದೆಯ ಕನಸು ಮತ್ತು ಆಸೆಯನ್ನು ಈಡೇರಿಸುವುದು ಮುಖ್ಯ. ಹೀಗಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.