
ಬೆಂಗಳೂರು (ಡಿ.23): ಕನ್ನಡ ಚಿತ್ರರಂಗದ ಇಬ್ಬರು ನಟರಾದ ಕಿಚ್ಚ ಸುದೀಪ್ ಮತ್ತು ದರ್ಶನ್ ತೂಗುದೀಪ ಅವರ ಅಭಿಮಾನಿಗಳ ನಡುವಿನ 'ಸೋಷಿಯಲ್ ಮೀಡಿಯಾ ವಾರ್' ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ 'ಮಾರ್ಕ್' ಚಿತ್ರದ ಬಿಡುಗಡೆ ಹೊತ್ತಿನಲ್ಲಿ ದರ್ಶನ್ ಅಭಿಮಾನಿಗಳು ನಡೆಸುತ್ತಿರುವ ಅಭಿಯಾನದ ವಿರುದ್ಧ ಯಲಹಂಕದ ಯುವ ಜೆಡಿಎಸ್ ಮುಖಂಡ ಎ.ಎಂ. ಪ್ರವೀಣ್ ಕುಮಾರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಿಚ್ಚನ ಪರ ಧ್ವನಿ ಎತ್ತಿರುವ ಪ್ರವೀಣ್ ಕುಮಾರ್, ದರ್ಶನ್ ಅಭಿಮಾನಿಗಳ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. 'ಕೆಲ ಅನಕ್ಷರಸ್ಥ ಅಂದಾಭಿಮಾನಿಗಳಿಗೆ ಸಮಾಜದ ಸ್ವಾಸ್ಥ್ಯ ಹಾಳುಗೆಡವದಿದ್ದರೆ ತಿಂದ ಆಹಾರ ಜೀರ್ಣವಾಗುವುದಿಲ್ಲ ಅನಿಸುತ್ತದೆ. ತಮ್ಮ ಸ್ಟಾರ್ ನಟನ ಚಿತ್ರ ತೆರೆ ಕಾಣಲಿಲ್ಲ ಅಥವಾ ಯಶಸ್ಸು ಕಾಣಲಿಲ್ಲ ಎಂಬ ಹತಾಶೆಯೋ, ಅಥವಾ ತಮ್ಮ ನಟನನ್ನು ಹೊರತುಪಡಿಸಿ ಬೇರೆ ಯಾರೂ ಬೆಳೆಯಬಾರದು ಎಂಬ ಅಸೂಯೆಯೋ ಗೊತ್ತಿಲ್ಲ. ಒಂದಂತೂ ಸತ್ಯ, ಇಂತಹ ಅಂದಾಭಿಮಾನಿಗಳು ಸಮಾಜ ಹಾಗೂ ಚಿತ್ರರಂಗಕ್ಕೆ ಅಂಟಿದ ಶಾಪ' ಎಂದು ಅವರು ಗುಡುಗಿದ್ದಾರೆ.
ಮುಂದುವರಿದು, 'ಇಂತಹ ದ್ವೇಷ ಹಾಗೂ ಮಸಲತ್ತುಗಳನ್ನು ಮೆಟ್ಟಿ ನಿಂತು, ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರ ಯಶಸ್ವಿಯಾಗಿ ಮುನ್ನುಗ್ಗಲಿ. ಕನ್ನಡ ಚಿತ್ರರಂಗದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ' ಎಂದು ಶುಭ ಹಾರೈಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾರ್ಕ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು, 'ಎಲ್ಲರೂ ಹೇಗಿದ್ದೀರಿ?. 2003ರಲ್ಲಿ ಇಲ್ಲಿ ಒಂದು ಪ್ರೋಗ್ರಾಂ ಮಾಡಿದ ಬಳಿಕ ಮತ್ತೆ ಇಲ್ಲಿಗೆ ಬರಲು ಇವತ್ತೇ ಅವಕಾಶ ಸಿಕ್ಕಿದ್ದು. ಬಹಳ ಚೆನ್ನಾಗಿ, ಸುಂದರವಾಗಿ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ನನಗೆ ಮಾತಾಡೋದಕ್ಕೆ ತುಂಬಾನೇ ಆಸೆ ಇದೆ. ಕೆಲವನ್ನು ನಿಯಂತ್ರಣದಲ್ಲಿಟ್ಟುಕೊಂಡು ಹೇಳಿಕೆ ಕೊಡಲು ಇಚ್ಛಿಸುತ್ತೇನೆ. ಹುಬ್ಬಳ್ಳಿಗೆ ಬಂದು ಈ ಕಾರ್ಯಕ್ರಮ ಮಾಡೋದಕ್ಕೆ ಒಂದು ದೊಡ್ಡ ಕಾರಣವಿದೆ. ಕೆಲ ಮಾತುಗಳನ್ನು ಈ ಹುಬ್ಬಳ್ಳಿಗೆ ಬಂದು, ವೇದಿಕೆ ಮೇಲೆ ಹೇಳಿದರೆ ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತದೆ, ಹೇಗೆ ತಟ್ಟಬೇಕೋ ತಟ್ಟುತ್ತದೆ. ಯಾವ ಭರ್ಜರಿಯಲ್ಲಿ ತಟ್ಟಬೇಕೋ ತಟ್ಟುತ್ತದೆ. ಪ್ರತೀ ಬಾರಿ ಈ ಊರಲ್ಲಿ ನಮಗೆ ಸಿಕ್ಕ ಪ್ರೀತಿ, ವಿಶ್ವಾಸ, ಬೆಂಬಲವನ್ನು ನಾವು ಎಂದಿಗೂ ಮರೆಯೋದಿಲ್ಲ. ಈ ವೇದಿಕೆಗೆ ಬಂದ ಎಲ್ಲಾ ಸ್ನೇಹಿತರಿಗೆ, ಜನಸಾಗರಕ್ಕೆ, ನನ್ನ ಕುಟುಂಬಕ್ಕೆ ಧನ್ಯವಾದಗಳು. ಹಾಗೇ, ನಾನು ಜುಲೈ 5ರಂದು ಒಂದು ಪ್ರಾಮಿಸ್ ಮಾಡಿದ್ದೆ. ಡಿಸೆಂಬರ್ 25ರಂದು ಬಾಗಿಲು ತಟ್ಟುತ್ತೇನೆಂದು ತಿಳಿಸಿದ್ದೆ. ಈಗ ಜೋರಾಗಿ ತಟ್ಟುತ್ತಾ ಇದ್ದೇವೆ ನಾವು. ಈ ಜರ್ನಿಯಲ್ಲಿ 25ಕ್ಕೆ ಥಿಯೇಟರ್ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತದೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಿದೆ. ಈ ವೇದಿಕೆ ಮೇಲಿಂದ ಹೇಳುತ್ತಿದ್ದೇನೆ. ಯುದ್ಧಕ್ಕೆ ಸಿದ್ಧ. ಏಕಂದ್ರೆ ನಾವು ನಮ್ಮ ಮಾತಿಗೆ ಬದ್ಧ' ಎಂದು ಕಿಚ್ಚ ಸವಾಲು ಹಾಕಿದರು.
ಈ ಹೇಳಿಕೆಯನ್ನು ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಹೇಳಲಾಗಿದೆ ಎಂದು ಅರ್ಥೈಸಿಕೊಳ್ಳಲಾಗಿದೆ. ಇದರಿಂದಾಗಿ ಸುದೀಪ್ ಅವರ ಮಾತನ್ನು ದರ್ಶನ್ ಅಭಿಮಾನಿಗಳು ತಮಗಿಷ್ಟ ಬಂದಂತೆ ವಿಶ್ಲೇಷಣೆ ಮಾಡುತ್ತಾ ಫ್ಯಾನ್ಸ್ ವಾರ್ ಆರಂಭಿಸಿದರು. ನಂತರ ಸ್ವತಃ ಕಿಚ್ಚ ಸುದೀಪ್ ಅವರು 'ನಾವು ಪೈರಸಿ ಮಾಡುವವರ ವಿರುದ್ಧ ಯುದ್ಧ ಎಂದು ಹೇಳಿಕೆ ನೀಡಿದ್ದಾಗಿ' ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಕೂಡ ಪೈರಸಿ ಮಾಡುವವರ ವಿರುದ್ಧ ಮಾತನಾಡಿದ್ದಾಗಿ ಸ್ಪಷ್ಟನೆ ನೀಡಿದ್ದರು.
ನಟ ದರ್ಶನ್ ಅಭಿನಯದ 'ದಿ ಡೆವಿಲ್' ಸಿನಿಮಾ ಬಿಡುಗಡೆ ನಂತರ ಅವರ ಅಭಿಮಾನಿಗಳನ್ನು ಭೇಟಿಯಾಗಲೆಂದು ಇಂದು ದಾವಣಗೆರೆಗೆ ಭೇಟಿ ಕೊಟ್ಟಿದ್ದ ವೇಳೆ ಮಾತನಾಡಿದ ವಿಜಯಲಕ್ಷ್ಮಿ,ದರ್ಶನ್ ಅವ್ರು ಇಲ್ದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ. ವೇದಿಕೆ ಮೇಲೆ, ಚಾನೆಲ್‌ಗಳಲ್ಲಿ ಕುತ್ಕೊಂಡು ಮಾತಾಡ್ತಾರೆ. ದರ್ಶನ್ ಬಗ್ಗೆ, ಅವರ ಫ್ಯಾನ್ಸ್ ಬಗ್ಗೆ ಏನೇನೋ ಮಾತಾಡ್ತಾ ಇರ್ತಾರೆ. ದರ್ಶನ್ ಅವ್ರು ಬಂದಾಗ ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಅನ್ನೋದೆ ಗೊತ್ತಾಗೋದಿಲ್ಲ. ದರ್ಶನ್ ಹೇಳಿದಂತೆ ಯಾರು ಕೂಡ ಕೋಪ ಮಾಡ್ಕೋಬೇಡಿ, ಬೇಜಾರ್ ಮಾಡ್ಕೋಬೇಡಿ ಎಂದು ವಿಜಯಲಕ್ಷ್ಮಿ ಹೇಳಿದರು. ವಿಜಯಲಕ್ಷ್ಮಿ ಹಾಗೂ ಡೆವಿಲ್ ಚಿತ್ರ ನಟಿ ರಚನಾ ರೈ ದಾವಣಗೆರೆ ಗೀತಾಂಜಲಿ ಚಿತ್ರ ಮಂದಿರಕ್ಕೆ ಭೇಟಿ ನೀಡಿ, ಕನ್ನಡ ಚಿತ್ರರಂಗದ ಎಲ್ಲಾ ಚಿತ್ರಗಳಿಗೂ ಸಪೋರ್ಟ್ ಮಾಡಿ, ಹೆಚ್ಚಿನದಾಗಿ ನಮ್ಮ ಚಿತ್ರ ಸಪೋರ್ಟ್ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.