
ಬೆಂಗಳೂರು (ಡಿ. 19): ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಬಂದಿದ್ದಾರೆ. ‘ರಾಜರಥ’ ಚಿತ್ರದ ನಂತರ ಈಗ ದೊಡ್ಡ ಪ್ರಾಜೆಕ್ಟ್ ಶುರು ಮಾಡಿದ್ದಾರೆ. ಅವರ ಈ ಹೊಸ ಚಿತ್ರದ ನಾಯಕ ಕಿಚ್ಚ ಸುದೀಪ್. ಈ ಚಿತ್ರ ನಿರ್ಮಿಸುತ್ತಿರುವುದು ಸುದೀಪ್ ಒಡೆತನದ ಸುಪ್ರಿಯಾನ್ವಿ ನಿರ್ಮಾಣ ಸಂಸ್ಥೆ. ಗುರುವಾರ ಈ ಚಿತ್ರದ ಟೈಟಲ್ ಬಿಡುಗಡೆ ಆಗಲಿದೆ.
ಸುಪ್ರಿಯಾನ್ವಿ ಎಂದರೆ ಸುದೀಪ್, ಅವರ ಪತ್ನಿ ಪ್ರಿಯಾ, ಮಗಳು ಸಾನ್ವಿ ಹೆಸರಿನ ಹೃಸ್ವರೂಪ. ಈ ಮೊದಲು ಬೇರೆ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿದ್ದ ಕಿಚ್ಚ ಸುದೀಪ್ ಮೊಟ್ಟಮೊದಲ ಬಾರಿಗೆ ಸುಪ್ರಿಯಾನ್ವಿ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ನಿರ್ದೇಶಕ ಅನೂಪ್ ಭಂಡಾರಿ ಅವರೇ ಕತೆ, ಚಿತ್ರಕತೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾವಿದು. ಸುದೀಪ್ ಕತೆಗೆ ಓಕೆ ಎನ್ನುವುದರ ಜತೆಗೆ ತಾವೇ ನಿರ್ಮಾಣ ಮಾಡುವುದಾಗಿ ಹೇಳಿದ್ದು ಅನೂಪ್ ಅವರಲ್ಲಿ ಸಂಭ್ರಮ ಉಂಟು ಮಾಡಿದೆ.
‘ನಾನು ‘ರಂಗಿತರಂಗ’ದ ನಿರ್ದೇಶಕನಾಗಿ ಗುರುತಿಸಿಕೊಂಡ ನಂತರದ ದಿನಗಳಲ್ಲಿ ಅವರ ಪರಿಚಯವಾಯಿತು. ಅದೇ ಪರಿಚಯದೊಂದಿಗೆ ನನ್ನ ನಿರ್ದೇಶನದ ಎರಡನೇ ಚಿತ್ರ ‘ರಾಜರಥ’ ಚಿತ್ರವನ್ನು ಅವರ ಮನೆಯಲ್ಲೇ ವೀಕ್ಷಿಸಿ ಸುಮ್ಮನೆ ಮಾತಿಗೆ ಕುಳಿತಾಗ, ನನಗೂ ಒಂದೊಳ್ಳೆ ಕತೆ ಬೇಕು ಅಂದಿದ್ದರು. ಅಲ್ಲಿಂದ ಮೊಳೆತ ಪ್ರಯತ್ನವೇ ಈ ಸಿನಿಮಾ. ಸದ್ಯಕ್ಕೆ ಕತೆ ಓಕೆ ಆಗಿದೆ. ತಾವೇ ನಿರ್ಮಾಣ ಮಾಡುವುದಾಗಿಯೂ ಹೇಳಿದ್ದಾರೆ. ಮುಂದೆ ಉಳಿದಿದ್ದೆಲ್ಲ ಫೈನಲ್ ಆಗಬೇಕಿದೆ’ ಎನ್ನುತ್ತಾರೆ ನಿರ್ದೇಶಕ ಅನೂಪ್ ಎಸ್. ಭಂಡಾರಿ. ವಿಭಿನ್ನವಾದ ಕತೆ
‘ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಕತೆ. ಅವತ್ತು ಸುದೀಪ್ ಸರ್ ಜತೆಗೆ ಮಾತನಾಡುವಾಗ ಅವರು ವಿಭಿನ್ನವಾದ ಕತೆ ಆಗಿರಬೇಕು ಅಂದಿದ್ದರು. ಅದನ್ನೇ ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಕತೆಯಿದು. ಆ ಪ್ರಕಾರ ಒನ್‌ಲೈನ್ ಕತೆ ಹೇಳೋದಾದರೆ, ಸಾಹಸದ ಹಲವು ಅಂಶಗಳು ಈ ಚಿತ್ರದಲ್ಲಿರುತ್ತವೆ. ಜತೆಗೆ ಆ್ಯಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳು ಕತೆಯ ಪ್ರಧಾನ ಅಂಶವಾಗಲಿದೆ’ ಎಂದಷ್ಟೇ ಹೇಳುವ ಅನೂಪ್, ಚಿತ್ರದಲ್ಲಿನ ಸುದೀಪ್ ಪಾತ್ರ, ಅವರಿಗೆ ಜೋಡಿಯಾಗುವ ನಾಯಕಿ, ಎಷ್ಟು ಭಾಷೆಗಳಲ್ಲಿ ಬರುತ್ತಿರುವ ಸಿನಿಮಾ ಇತ್ಯಾದಿಗಳೆಲ್ಲ ಮುಂದಿನ ದಿನದಲ್ಲೇ ಗೊತ್ತಾಗಲಿದೆ ಎಂದು ಮೌನಕ್ಕೆ ಜಾರುತ್ತಾರೆ.
ಸುದೀಪ್ ಅಭಿನಯದ ಪೈಲ್ವಾನ್, ಕೋಟಿಗೊಬ್ಬ 3, ತೆಲುಗಿನ ಸೈರಾ ಮತ್ತು ಹಾಲಿವುಡ್ ಸಿನಿಮಾ ರೈಸನ್ ಚಿತ್ರಗಳ ಚಿತ್ರೀಕರಣ ಬಾಕಿಯಿದೆ. ಅಷ್ಟು ಚಿತ್ರಗಳ ಚಿತ್ರೀಕರಣ ಮುಗಿದ ಮೇಲೆ ಸುದೀಪ್ ಪೂರ್ಣ ಪ್ರಮಾಣದಲ್ಲಿ ಅನೂಪ್ ನಿರ್ದೇಶನದ ಸಿನಿಮಾದತ್ತ ಗಮನಹರಿಸುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.