
ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ನಂಬರ್ 1 ನಿರೂಪಕಿ, ಕನ್ನಡಿಗರ ಮನೆಮಾತಾಗಿರುವ ಆಂಕರ್ ಅನುಶ್ರೀ ಎಲ್ಲಿಗೇ ಹೋದರೂ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ, ಫೋಟೋಗಾಗಿ ಮುಗಿಬೀಳುತ್ತಾರೆ. ಆದರೆ, ಅಂತಹ ಖ್ಯಾತ ನಿರೂಪಕಿಯೇ ಕೈಮುಗಿದು, ವಿನಮ್ರತೆಯಿಂದ 'ಸರ್, ಪ್ಲೀಸ್ ಒಂದು ಫೋಟೋ..' ಎಂದು ಕೇಳಿದರೆ ಹೇಗಿರುತ್ತೆ? ಹೌದು, ಬೆಂಗಳೂರಿನಲ್ಲಿ ನಡೆದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಅದ್ಧೂರಿ ಕಾರ್ಯಕ್ರಮದಲ್ಲಿ ಇಂಥದ್ದೊಂದು ಅಪರೂಪದ ಘಟನೆ ನಡೆದಿದೆ!
ಇತ್ತೀಚೆಗಷ್ಟೇ 'ರಣಬಾಲಿ' ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್ಗೆ ಹಾರಿದ್ದ ಅನುಶ್ರೀ, ಅಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಕನ್ನಡಿಗರ ನೆಚ್ಚಿನ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನು ಅದ್ಭುತವಾಗಿ ಸಂದರ್ಶನ ಮಾಡಿ ಬಂದಿದ್ದರು. ಅಲ್ಲಿಂದ ನೇರವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪ್ಯಾನ್-ವರ್ಲ್ಡ್ ಸಿನಿಮಾ 'ರಾಮಾಯಣ'ದ 2ನೇ ಟ್ರೇಲರ್ ಬಿಡುಗಡೆ ಸಮಾರಂಭದ ನಿರೂಪಣೆಗೆ ಹಾಜರಾಗಿದ್ದರು. ಈ ಸಮಾರಂಭದಲ್ಲಿ ಸ್ಯಾಂಡಲ್ವುಡ್ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್, ನಟಿ ಸಾಯಿ ಪಲ್ಲವಿ, ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರೇ ನೆರೆದಿದ್ದರು.
ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸುತ್ತಾ ತಮ್ಮ ಎಂದಿನ ಚುರುಕಿನ ಮಾತುಗಳಿಂದ ವೇದಿಕೆಯನ್ನು ರಂಗಾಗಿಸಿದ ಅನುಶ್ರೀ, ಕಾರ್ಯಕ್ರಮ ಮುಗಿದ ಬಳಿಕ ಅಲ್ಲೇ ಇದ್ದ ಜಗತ್ಪ್ರಸಿದ್ಧ ಸಂಗೀತ ನಿರ್ದೇಶಕ, ಎರಡು ಬಾರಿಯ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಅವರ ಬಳಿ ತೆರಳಿದ್ದಾರೆ. ಅನುಶ್ರೀ ಅವರನ್ನು ನೋಡುತ್ತಿದ್ದಂತೆ ರೆಹಮಾನ್ ನಗುಮುಖದಿಂದಲೇ ಮಾತನಾಡಿಸಿದ್ದಾರೆ. ಈ ವೇಳೆ ಅನುಶ್ರೀ ಅವರು ಅತ್ಯಂತ ವಿನಮ್ರತೆಯಿಂದ, 'ಸರ್, ಪ್ಲೀಸ್ ನಿಮ್ಮ ಜೊತೆ ಒಂದು ಫೋಟೋ ತಗೋಬಹುದಾ?' ಎಂದು ಕೇಳಿದ್ದಾರೆ. ರೆಹಮಾನ್ ಕೂಡ ಅಷ್ಟೇ ಪ್ರೀತಿಯಿಂದ ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ವಿಡಿಯೋವನ್ನು @aathmeeyakannadiga ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಅನುಶ್ರೀ ಅವರ ಸರಳತೆಗೆ ಫಿದಾ ಆಗಿದ್ದಾರೆ.
ಕನ್ನಡ ನಾಡಿನಲ್ಲಿ ಅನುಶ್ರೀಗೆ ಇರುವ ಕ್ರೇಜ್ ಸಾಮಾನ್ಯವಾದದ್ದಲ್ಲ. ಅವರು ಹೋದಲ್ಲೆಲ್ಲಾ ಜನ ಅವರೊಂದಿಗೆ ಫೋಟೋಗಾಗಿ ಕಾಯುತ್ತಾರೆ. ಆದರೆ, ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರಂತಹ ಸಾಧಕರ ಮುಂದೆ ನಿಂತಾಗ ಅನುಶ್ರೀ ತೋರಿದ ಈ ನಮ್ರತೆ ಅಭಿಮಾನಿಗಳ ಮನಗೆದ್ದಿದೆ. 'ಕಲಾ ಪ್ರಪಂಚದಲ್ಲಿ ಅನುಶ್ರೀ ದೊಡ್ಡ ಮರವಾದರೆ, ರೆಹಮಾನ್ ಹೆಮ್ಮರ. ಆ ಹೆಮ್ಮರದ ಮುಂದೆ ಅನುಶ್ರೀ ತೋರಿದ ಗೌರವ ಅವರ ಸಂಸ್ಕಾರವನ್ನು ತೋರಿಸುತ್ತದೆ' ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಎ.ಆರ್. ರೆಹಮಾನ್ ಅವರಿಗೆ ಬೆಂಗಳೂರು ಹೊಸದೇನಲ್ಲ. ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದ ವೇಳೆ ಅವರು ಸಿಲಿಕಾನ್ ಸಿಟಿಯ ಭೀಕರ ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿಬಿದ್ದಿದ್ದರು. ಕಾರಿನಲ್ಲಿ ಕುಳಿತಿದ್ದ ರೆಹಮಾನ್ ಅವರನ್ನು ಪಕ್ಕದಲ್ಲೇ ಬೈಕ್ನಲ್ಲಿ ನಿಂತಿದ್ದ ಸವಾರನೊಬ್ಬ ವಿಡಿಯೋ ಮಾಡಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿತ್ತು. ಇದೀಗ ಅದೇ ಬೆಂಗಳೂರಿನ ನೆಲದಲ್ಲಿ ಅನುಶ್ರೀ ಹಾಗೂ ರೆಹಮಾನ್ ಅವರ ಈ ಮುದ್ದಾದ 'ಫ್ಯಾನ್ ಮೊಮೆಂಟ್' ಎಲ್ಲರ ಗಮನ ಸೆಳೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.