'ರಾಮನ ಒಂದೊಂದು ಡೈಲಾಗ್‌ಗೂ 10 ಪ್ರಯೋಗ ಮಾಡಿದ್ದೇನೆ'; ಡಾ. ರಾಜ್‌ಕುಮಾರ್ ಸಿನಿಮಾಗಳೇ ಸ್ಫೂರ್ತಿ ಎಂದ ಕಾರ್ತಿಕ್

Published : Nov 19, 2026, 12:15 PM IST
kannada ramayana dubbing artist karthik ranbir kapoor

ಸಾರಾಂಶ

ರಾಮಾಯಣದ ಕಥೆ ಎಂದಾಕ್ಷಣ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಶ್ರೀರಾಮನ ಚಿತ್ರ ಮೂಡುತ್ತದೆ. ಅದರಲ್ಲೂ ರಣಬೀರ್ ಕಪೂರ್ ಅವರ ರಾಮನ ಪಾತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿರುವ ಡಬ್ಬಿಂಗ್ ಕಲಾವಿದ ಕಾರ್ತಿಕ್ ಗಮನ ಸೆಳೆಯುತ್ತಿದ್ದಾರೆ.

ರಾಮಾಯಣದ ಕಥೆ ಎಂದಾಕ್ಷಣ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಶ್ರೀರಾಮನ ಚಿತ್ರ ಮೂಡುತ್ತದೆ. ಇದೀಗ ರಾಮಾಯಣದ ಕುರಿತಾದ ಸಿನಿಮಾ ಮತ್ತೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ಚಿತ್ರದಲ್ಲಿನ ಪಾತ್ರಗಳು, ಕಲಾವಿದರ ಅಭಿನಯ ಹಾಗೂ ಸಂಭಾಷಣೆಗಳು ಚರ್ಚೆಯಾಗುತ್ತಿವೆ. ಅದರಲ್ಲೂ ರಣಬೀರ್ ಕಪೂರ್ ಅವರ ರಾಮನ ಪಾತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿರುವ ಡಬ್ಬಿಂಗ್ ಕಲಾವಿದ ಕಾರ್ತಿಕ್ ಗಮನ ಸೆಳೆಯುತ್ತಿದ್ದಾರೆ. ರಾಮನ ಪಾತ್ರಕ್ಕೆ ಧ್ವನಿ ನೀಡಿದ ಅನುಭವ, ಅದರ ಹಿಂದಿನ ತಯಾರಿ ಹಾಗೂ ಸವಾಲುಗಳ ಬಗ್ಗೆ ಅವರು ತಮ್ಮ ಮನದಾಳದ ಮಾತುಗಳನ್ನು ಖಾಸಗಿ ವಾಹಿನಿಯ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.

ರಣಬೀರ್ ಕಪೂರ್‌ಗೆ ಧ್ವನಿಯಾಗುವುದು ಸುಲಭವಾಗಿರಲಿಲ್ಲ

ನಿಯಮಿತವಾಗಿ ಡಬ್ಬಿಂಗ್ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕಾರ್ತಿಕ್ ಅವರಿಗೆ ರಾಮನ ಪಾತ್ರಕ್ಕೆ ಧ್ವನಿ ನೀಡುವ ಅವಕಾಶ ಬಂದಾಗ ವಿಶೇಷವಾಗಿ ಯೋಚಿಸಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಇರಲಿಲ್ಲವಂತೆ. ಸೌಂಡ್ ಎಂಜಿನಿಯರ್ ಆನಂದ್ ಹಾಗೂ ಜೆಡಿ ಅವರ ಮೂಲಕ ಈ ಅವಕಾಶದ ಬಗ್ಗೆ ಮಾತುಕತೆ ನಡೆದಿತ್ತು. ಆರಂಭದಲ್ಲಿ ಲಿಪ್‌ಸಿಂಕ್ ತಂತ್ರಜ್ಞಾನ ಬಳಸಿ ಕನ್ನಡದಲ್ಲೇ ಮಾತನಾಡುತ್ತಿರುವಂತೆ ದೃಶ್ಯಗಳನ್ನು ರೂಪಿಸುವ ಪ್ರಯತ್ನವೂ ನಡೆದಿತ್ತು.

ಆದರೆ ಈ ಪಾತ್ರಕ್ಕೆ ಕೇವಲ ಡಬ್ಬಿಂಗ್ ಕಲಾವಿದರಾಗಿದ್ದರೆ ಸಾಲದು, ಕ್ಯಾಮೆರಾ ಮುಂದೆ ನಿಂತು ಅಭಿನಯಿಸುವ ಸಾಮರ್ಥ್ಯವೂ ಇರಬೇಕು ಎಂಬ ಅಗತ್ಯವಿತ್ತು. ಹೀಗಾಗಿ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಯಿತು. ಆರಂಭದಲ್ಲೇ ಅವರ ಧ್ವನಿ ರಾಮನ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ ಎಂಬ ವಿಶ್ವಾಸ ತಂಡಕ್ಕೆ ಮೂಡಿತ್ತು.

ರಣಬೀರ್ ಅಭಿನಯಕ್ಕೆ ತಕ್ಕಂತೆ ಧ್ವನಿ ಬದಲಿಸುವುದು ಸವಾಲು

ರಣಬೀರ್ ಕಪೂರ್ ಅವರ ಅಭಿನಯಕ್ಕೆ ಹೊಂದುವಂತೆ ಧ್ವನಿಯ ಏರಿಳಿತ, ಭಾವನೆ ಹಾಗೂ ಸಂಭಾಷಣೆಯ ಶೈಲಿಯನ್ನು ರೂಪಿಸುವುದು ದೊಡ್ಡ ಸವಾಲಾಗಿತ್ತು ಎಂದು ಕಾರ್ತಿಕ್ ಹೇಳಿದ್ದಾರೆ. ವಿಶೇಷವಾಗಿ ಹಿಂದಿ ಭಾಷೆಯಲ್ಲಿರುವ ಸಂಭಾಷಣೆಗಳು ಕನ್ನಡಕ್ಕೆ ಬಂದಾಗ ಅವುಗಳ ಪದಗಳ ಉದ್ದ ಬದಲಾಗುತ್ತದೆ. ಹಿಂದಿಯಲ್ಲಿ ಕಡಿಮೆ ಪದಗಳಲ್ಲಿ ಮುಗಿಯುವ ಸಂಭಾಷಣೆಯನ್ನು ಕನ್ನಡದಲ್ಲಿ ಹೇಳುವಾಗ ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಸಂಭಾಷಣೆಯ ಅರ್ಥಕ್ಕೆ ಧಕ್ಕೆಯಾಗದಂತೆ, ದೃಶ್ಯದ ಭಾವನೆ ಉಳಿಯುವಂತೆ ಹೊಂದಾಣಿಕೆ ಮಾಡಬೇಕಾಗಿತ್ತು.

ಇನ್ನು ರಣಬೀರ್ ಅವರ ಅಭಿನಯದ ಆಳಕ್ಕೆ ತಕ್ಕಂತೆ ಧ್ವನಿ ನೀಡಬೇಕಾಗಿತ್ತು. ಸೀತೆಯನ್ನು ಕಳೆದುಕೊಂಡ ನಂತರ ರಾಮ ಅನುಭವಿಸುವ ನೋವು, ಮನಸ್ಸಿನ ತಳಮಳ ಹಾಗೂ ಆ ಸಂದರ್ಭದಲ್ಲಿ ಹೊರಹೊಮ್ಮುವ ಭಾವನೆಗಳನ್ನು ಧ್ವನಿಯಲ್ಲೇ ವ್ಯಕ್ತಪಡಿಸಬೇಕಾಗಿತ್ತು. ಅದಕ್ಕಾಗಿ ಆ ದೃಶ್ಯದಲ್ಲಿ ರಾಮ ಹೇಗಿರಬಹುದು ಎಂಬುದನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಡಬ್ಬಿಂಗ್ ಮಾಡುತ್ತಿದ್ದೆ ಎಂದು ಅವರು ವಿವರಿಸಿದ್ದಾರೆ.

ರಾಮನ ಪಾತ್ರದಿಂದ ಜೀವನದಲ್ಲೂ ಬದಲಾದ ಕಾರ್ತಿಕ್

ರಾಮನ ಪಾತ್ರಕ್ಕೆ ಧ್ವನಿ ನೀಡುವಾಗ ಕೇವಲ ಸಂಭಾಷಣೆಗಳನ್ನು ಹೇಳುವುದಷ್ಟೇ ತಮ್ಮ ಕೆಲಸವಾಗಿರಲಿಲ್ಲ. ರಾಮನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾಗಿ ಕಾರ್ತಿಕ್ ಹೇಳಿದ್ದಾರೆ. ರಾಮನ ಒಂದು ವಿಶೇಷ ಗುಣವನ್ನು ಅವರು ತಮ್ಮ ಜೀವನದಲ್ಲೂ ಅಳವಡಿಸಿಕೊಂಡಿದ್ದಾರಂತೆ. ಯಾರಾದರೂ ತಮ್ಮ ಜೀವನದಲ್ಲಿ ಒಂದು ಸಣ್ಣ ಸಹಾಯ ಮಾಡಿದ್ದರೂ ಅದನ್ನು ನೆನಪಿಟ್ಟುಕೊಳ್ಳುವುದು, ಅವರು ನಂತರ ಏನೇ ಮಾತನಾಡಿದರೂ ಹಿಂದಿನ ಒಳ್ಳೆಯತನವನ್ನು ಮರೆಯದಿರುವುದು ರಾಮನಿಂದ ಕಲಿತ ಗುಣ ಎಂದು ಹೇಳಿದ್ದಾರೆ.

ಈ ಒಂದು ಡೈಲಾಗ್ ಕಾರ್ತಿಕ್‌ಗೆ ತುಂಬಾ ಇಷ್ಟವಾಯಿತಂತೆ

ಡಬ್ಬಿಂಗ್ ವೇಳೆ ಹಲವು ಸಂಭಾಷಣೆಗಳಿಗೆ ಬೇರೆ ಬೇರೆ ರೀತಿಯ ಧ್ವನಿ ಪ್ರಯೋಗಗಳನ್ನು ಮಾಡಲಾಗುತ್ತಿತ್ತು. ನಿರ್ದೇಶಕ ಸೂರ್ಯ ಅವರ ಮಾರ್ಗದರ್ಶನದಲ್ಲಿ ಒಂದೊಂದು ಸಂಭಾಷಣೆಯನ್ನೂ ಹಲವು ಬಾರಿ ವಿಭಿನ್ನ ಶೈಲಿಯಲ್ಲಿ ಹೇಳಲಾಗುತ್ತಿತ್ತು. ಕೆಲವೊಮ್ಮೆ ಒಂದು ಡೈಲಾಗ್‌ಗೆ ಕನಿಷ್ಠ ಹತ್ತು ರೀತಿಯ ಆಯ್ಕೆಗಳನ್ನು ನೀಡುತ್ತಿದ್ದರಂತೆ. ಆದರೆ ಚಿತ್ರದಲ್ಲಿನ ಕೊನೆಯ ಭಾಗದ ಒಂದು ಭಾವನಾತ್ಮಕ ಸಂಭಾಷಣೆ ಕಾರ್ತಿಕ್ ಅವರಿಗೆ ವಿಶೇಷವಾಗಿ ಇಷ್ಟವಾಗಿದೆ.

ತಂದೆಯ ಅಂತಿಮ ಸಮಯದಲ್ಲಿ ಜೊತೆಗಿರಲು ಸಾಧ್ಯವಾಗದ ನೋವು, ತಾಯಿಯಿಂದಲೇ ವನವಾಸದ ಶಿಕ್ಷೆ ಅನುಭವಿಸಿದ ಸಂಕಟ ಹಾಗೂ ಸೀತೆಯ ಅಪಹರಣವನ್ನು ತಡೆಯಲಾಗದ ವೇದನೆ ಈ ಸಂಭಾಷಣೆಯಲ್ಲಿದೆ. ಈ ದೃಶ್ಯಕ್ಕೆ ಧ್ವನಿ ನೀಡುವಾಗ ರಾಮನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅಭಿನಯಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

ರಾಮನಿಗೆ ಧ್ವನಿ ನೀಡಿದ ಅವಕಾಶವೇ ಜೀವನದ ದೊಡ್ಡ ಸಾಧನೆ

“ಈ ಪಾತ್ರ ಸಿಕ್ಕರೆ ನನ್ನ ಜೀವನದಲ್ಲಿ ನಾನು ಸಾಧಿಸಬೇಕಾದ ದೊಡ್ಡ ಗುರಿ ಸಾಧಿಸಿದಂತೆ” ಎಂಬ ಭಾವನೆ ಮೊದಲಿನಿಂದಲೂ ತಮ್ಮಲ್ಲಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ರಣಬೀರ್ ಕಪೂರ್ ಅವರಿಗೆ ಕನ್ನಡದಲ್ಲಿ ಧ್ವನಿಯಾಗುವ ಮೂಲಕ ಇಡೀ ಕರ್ನಾಟಕದ ಜನರಿಗೆ ರಾಮನ ಧ್ವನಿಯಾಗಿದ್ದೇನೆ ಎಂಬ ಹೆಮ್ಮೆ ಅವರಿಗಿದೆ.

ಕನ್ನಡದ ಪೌರಾಣಿಕ ಸಿನಿಮಾಗಳ ಪ್ರಭಾವ

ಕನ್ನಡದ ಪೌರಾಣಿಕ ಸಿನಿಮಾಗಳು ಹಾಗೂ ಡಾ. ರಾಜ್‌ಕುಮಾರ್ ಅವರ ಅಭಿನಯ, ಸಂಭಾಷಣೆಗಳು ತಮ್ಮ ಕೆಲಸದ ಮೇಲೆ ಪ್ರಭಾವ ಬೀರಿವೆ ಎಂದು ಕಾರ್ತಿಕ್ ನೆನಪಿಸಿಕೊಂಡಿದ್ದಾರೆ. ಕನ್ನಡಿಗರಿಗೆ ಪೌರಾಣಿಕ ಪಾತ್ರಗಳ ಸಂಭಾಷಣೆ ಹೇಗಿರಬೇಕು ಎಂಬುದರ ಬಗ್ಗೆ ಈಗಾಗಲೇ ಒಂದು ನಿರ್ದಿಷ್ಟ ಅಭಿರುಚಿ ಇದೆ. ಹೀಗಾಗಿ ಹಿಂದಿ ಸಿನಿಮಾದ ಧ್ವನಿ ಶೈಲಿಯನ್ನು ಹಾಗೆಯೇ ಕನ್ನಡಕ್ಕೆ ತರುವುದು ಸರಿಯಲ್ಲ. ಕನ್ನಡದ ಭಾಷಾ ಸೊಗಡಿಗೆ ಹೊಂದುವಂತೆ ಸಂಭಾಷಣೆಗಳನ್ನು ರೂಪಿಸುವುದು ಮುಖ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ಯಾನ್ ಇಂಡಿಯಾ ಕನಸಿಗೆ 1986ರಲ್ಲೇ ಮುನ್ನುಡಿ ಬರೆದ ಕನ್ನಡ ಸಿನಿಮಾ! ಹೈದರಾಬಾದ್‌ನಲ್ಲಿ ಕನ್ನಡದಲ್ಲೇ ಬಿಡುಗಡೆಯಾಗಿ ಬ್ಲಾಕ್ ಬ್ಲಸ್ಟರ್ ಹಿಟ್!
Indira Gandhi: ತೆರೆಯ ಮೇಲೆ ಇಂದಿರಾ ಪಾತ್ರಕ್ಕೆ ಜೀವ ತುಂಬಿದ್ದ ಬೆಂಗಳೂರಿನ ಬೆಡಗಿ; ಇದೇ ನೋಡಿ ಆ ಚಿತ್ರ!