
ಮಧ್ಯಮ ವರ್ಗದ ಒರಟು ಹುಡುಗ. ಹೀಗಾಗಿಯೇ ಅವನು ಒಂಟಿ. ರಾಮಾಚಾರಿ ಥರದ ವ್ಯಕ್ತಿತ್ವ. ಮನೆಗೆ ಮಾರಿ, ಹುಡುಗಿಗೆ ಪ್ರೇಮಾಚಾರಿ. ತನ್ನ ತಂಟೆಗೆ ಬಂದವರ ಮೇಲೆ ಮುಗಿಬಿದ್ದು, ತಲೆಯ ಮೇಲೆ ತಲೆ ಉರುಳಿಸಿ ಜೈಲು ಸೇರುವ ಹುಚ್ಚಾಟದ ಒಟ್ಟು ಕಥೆಯೇ ಒಂಟಿ.
ಈ ಕತೆಯನ್ನು ಕೂಡ ಹುಚ್ಚುಹುಚ್ಚಾಗಿಯೇ ಹೇಳಲು ನಿರ್ದೇಶಕರು ನಿರ್ಧರಿಸಿದಂತಿದೆ. ಗೊತ್ತು-ಗುರಿ, ದಿಕ್ಕು-ದೆಸೆ ಎರಡು ಇಲ್ಲದ ನಿರುದ್ಯೋಗಿ ಯುವಕನೊಬ್ಬ ಅಂದವಾದ ಕಾಲೇಜು ಹುಡುಗಿಗೆ ಮನಸೋಲುವುದು, ನಿತ್ಯ ಆಕೆಯ ಹಿಂದೆ ಸುತ್ತುವುದನ್ನೇ ಕಾಯಕವಾಗಿಸಿಕೊಂಡು ಆಕೆಗೂ ಕಿರಿ ಕಿರಿ ಆಗುವಂತೆ ಮಾಡುವುದು, ಆಕೆ ಅಪತ್ತಿಗೆ ಸಿಲುಕಿದಾಗ ರಕ್ಷಣೆ ನೆಪದಲ್ಲಿ ಸಾಹಸ ಮೆರೆಯುವುದು, ಆ ಮೂಲಕ ಆಕೆಯ ಪ್ರೀತಿಯನ್ನು ಗಿಟ್ಟಿಸಿಕೊಂಡು ಹೀರೋ ಆಗುವಂತಹ ಮರ ಸುತ್ತವ ಕತೆಗಳಲ್ಲಿ ಇದು ಕೂಡ ಒಂದು.
ಪೈಲ್ವಾನ್ V/S ಕುರುಕ್ಷೇತ್ರ: ಸ್ಟಾರ್ ವಾರ್ ಬಗ್ಗೆ ಸುದೀಪ್ ಕೂಲ್ ಉತ್ತರವಿದು!
ಒಂದು ಚಿಟಿಕೆ ಹೆಚ್ಚು ಮಸಾಲೆ ಹಾಕಿದ್ದು ಬಿಟ್ಟರೆ, ತಾಜಾತನ ಯಾವುದು ಇಲ್ಲ. ಒಂದು ದೊಡ್ಡ ಗ್ಯಾಪ್‌ನ ನಂತರ ನಿರ್ದೇಶನಕ್ಕೆ ಮರಳಿದ ಶ್ರೀ, ಈ ಕತೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದೇ ಇಲ್ಲಿನ ಅಚ್ಚರಿ. ‘ಮೈ ಆಟೋಗ್ರಾಫ್’, ‘ಈ ಸಂಜೆ’ ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದ ಆರ್ಯ ಈ ಚಿತ್ರದ ನಾಯಕ ನಟನೆಯೊಂದನ್ನು ಕಲಿಯುದಷ್ಟೇ ಬಾಕಿ.
ನಾಯಕಿ ಮೇಘನಾ ರಾಜ್ ನಟನೆಯಲ್ಲಿ ಲವಲವಿಕೆಯಿದೆ. ಆದರೆ ಅವರನ್ನು ಕಾಲೇಜು ಹುಡುಗಿಯನ್ನಾಗಿ ಊಹಿಸಿಕೊಳ್ಳುವುದು ಕಷ್ಟ. ಮಜಾ ಟಾಕೀಸ್ ಪವನ್ ಹಾಸ್ಯ, ನೀನಾಸಂ ಅಶ್ವತ್ಥ್ ಅವರ ಪಾತ್ರ ಪೋಷಣೆ ಚೆನ್ನಾಗಿದೆ. ಲೋಹಿತಾಶ್ವ, ದೇವರಾಜ್ ಖಡಕ್ ಪಾತ್ರಗಳ ಮೂಲಕ ನೆನಪಲ್ಲಿ ಉಳಿಯುತ್ತಾರೆ.
ಮನೋಜ್ ಸಂಗೀತ, ಶಶಿಧರ್ ಛಾಯಾಗ್ರಹಣ ಸೇರಿ ಸಿನಿಮಾದ ಅಚ್ಚುಕಟ್ಟು ತಾಂತ್ರಿಕ ಕೆಲಸಗಳು ಗುಂಪಿನಲ್ಲಿ ಗೋವಿಂದ ಎಂಬಂತಾಗಿವೆ. ಅವನ ಮನಸ್ಸು ಸಮುದ್ರದಂತೆ, ಅರ್ಥ ಮಾಡಿಕೊಳ್ಳುವುದು ತುಸು ಕಷ್ಟ ಎಂಬೊಂದು ಸಂಭಾಷಣೆ ಚಿತ್ರದಲ್ಲಿದೆ. ಅದು ಕತೆಯ ಕುರಿತ ಟಿಪ್ಪಣಿಯೂ ಹೌದು.
ಚಿತ್ರ: ಒಂಟಿ
ತಾರಾಗಣ: ಆರ್ಯ, ಮೇಘನಾ ರಾಜ್,
ದೇವರಾಜ್, ಲೋಹಿತಾಶ್ವ,
ನೀನಾಸಂ ಅಶ್ವತ್ಥ್, ಮಜಾ ಟಾಕೀಸ್ ಪವನ್
ನಿರ್ದೇಶನ: ಶ್ರೀ
ಸಂಗೀತ: ಮನೋಜ್
ಛಾಯಾಗ್ರಹಣ: ಶಶಿಧರ್
ರೇಟಿಂಗ್: **
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.