ಇದನ್ನು ನೋಡಿದವರು ಹತ್ತನೆಯ ಅದ್ಭುತ!

By Web DeskFirst Published May 4, 2019, 9:50 AM IST
Highlights

ಇದೊಂದು ಸಿಂಪಲ್‌ ಕತೆ. ಈಗಿನ ಹೊಸ ತಲೆಮಾರಿನ ಜನರಲ್ಲಿ ಅಪ್ಪ-ಅಮ್ಮ ಎನ್ನುವ ಸಂಬಂಧಕ್ಕಿಂತ ಆಸ್ತಿ, ಅಂತಸ್ತುಗಳೇ ಹೇಗೆ ಮುಖ್ಯವಾಗುತ್ತವೆ, ಅದಕ್ಕಾಗಿ ಅವರು ಏನೆಲ್ಲ ಮಾಡುತ್ತಾರೆನ್ನುವುದನ್ನು ಹಲವು ಘಟನೆಗಳ ಮೂಲಕ ಪ್ರೇಕ್ಷಕರ ಮುಂದಿಡುತ್ತದೆ ಈ ಸಿನಿಮಾ. ಜತೆಗೆ ಪವಿತ್ರವಾದ ಗುರುವಿನ ಸ್ಥಾನದಲ್ಲಿ ನಿಂತು ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಕೆಲವು ಶಿಕ್ಷಕರು, ಹೇಗೆಲ್ಲ ಮುಗ್ಧ ಮಕ್ಕಳನ್ನು ತಮ್ಮ ವಿಕೃತ ಆಸೆಗಳಿಗೆ ಬಲಿ ತೆಗೆದುಕೊಳ್ಳುತ್ತಾರೆನ್ನುವುದನ್ನು ಓರ್ವ ಶಾಲಾ ಬಾಲಕಿಯ ರೇಪ್‌ ಆ್ಯಂಡ್‌ ಮರ್ಡರ್‌ ಪ್ರಕರಣದ ಮೂಲಕವೂ ತೋರಿಸಲು ಹೊರಟಿದೆ ಈ ಚಿತ್ರ. 

ದೇಶಾದ್ರಿ ಹೊಸ್ಮನೆ

ನಗುವಿನಹಳ್ಳಿ ಮೋಟೆಗೌಡ ಅಲಿಯಾಸ್‌ ನಮೋ ಸತ್ತು ಹೋದ. ಆತನ ಸಾವಿಗೆ ಪರೋಕ್ಷವಾಗಿ ಮಕ್ಕಳೇ ಕಾರಣರಾದರು. ಆಸ್ತಿ ಭಾಗ ಮಾಡುವಂತೆ ನಾಲ್ಕೂ ಮಕ್ಕಳು ನಿತ್ಯ ಆತನನ್ನು ಪೀಡಿಸುತ್ತಿದ್ದರು. ತಾನು ಜೀವಂತವಾಗಿರುವಾಗಲೇ ಮಕ್ಕಳು ಈ ರೀತಿ ಆಸ್ತಿಗಾಗಿ ಹಪಹಪಿಸುತ್ತಿದ್ದಾರೆಂದು ಬೇಸತ್ತು ನಮೋ ವಿಷ ಸೇವಿಸಿದ್ದ. ಮಕ್ಕಳು ಕೂಡ ಅದನ್ನೇ ಬಯಸಿದ್ದರು. ಆತ ಸತ್ತರೆ ಆಸ್ತಿ ಭಾಗ ಸುಲಭ ಎನ್ನುವುದು ಅವರ ಲೆಕ್ಕಾಚಾರ. ಅದರ ಪರಿಣಾಮದಿಂದಲೇ ನಮೋ ಮನೆಯೊಳಗಡೆ ಹೆಣವಾಗಿ ಬಿದ್ದಿದ್ದಾನೆ. ಆತನ ಪಾರ್ಥಿವ ಶರೀರದ ಸುತ್ತ ಮೊಮ್ಮಕ್ಕಳು, ಸೊಸೆಯಂದಿರು ನಾಟಕೀಯವಾಗಿ ಅಳುತ್ತಿದ್ದಾರೆ. ಹೊರಗಡೆ ಆತನ ಮಕ್ಕಳ ಆಸೆ -ಆಕಾಂಕ್ಷೆಗಳು ಗರೆಗೆದರಿ ನಿಲ್ಲುತ್ತವೆ. ಒಂದೆಡೆ ಆಸ್ತಿ ಭಾಗದ ಕೆಲಸ, ಮತ್ತೊಂದೆಡೆ ಮೊಮ್ಮಕ್ಕಳ ಸರಸ ಸಲ್ಲಾಪ. ಅಲ್ಲಿಂದ ಮುಂದೇನು ಅನ್ನೋದು ಒಂಭತ್ತನೇ ಅದ್ಭುತ.

ಚಿತ್ರ : ಒಂಬತ್ತನೇ ಅದ್ಭುತ

ತಾರಾಗಣ : ಸಂತೋಷ್‌, ನಯನಾ ಸಾಯಿ, ಸೆಂಚುರಿ ಗೌಡ, ರಘು ಪಾಂಡೇಶ್ವರ, ಮೈಕಲ್‌ ಮಧು

ನಿರ್ದೇಶನ : ಸಂತೋಷ್‌ ಕುಮಾರ್‌ ಬೆಟಗೇರಿ

ಸಂಗೀತ: ಸುಶೀಲ್‌ ಕೋಶಿ

ಇಷ್ಟನ್ನು ಹೇಳುವುದಕ್ಕೆ ನಿರ್ದೇಶಕರು ಬಹುತೇಕ ಹಾಸ್ಯ ಮತ್ತು ಮರ್ಡರ್‌ ಮಿಸ್ಟ್ರಿಯ ತಂತ್ರಗಾರಿಕೆಗೆ ಮಾರು ಹೋಗಿದ್ದಾರೆ. ದುರುಂತವೆಂದರೆ, ಅವರೆಡು ಧಾರೆಯಲ್ಲೂ ಹೊಸತನವಿಲ್ಲ, ನಿರೂಪಣೆಯ ಗಟ್ಟಿತನವೂ ಇಲ್ಲ. ನಗಿಸಲು ಆಗದ ಇಲ್ಲಿನ ಬಹುತೇಕ ಹಾಸ್ಯ ಪ್ರಸಂಗಗಳಿಗೆ ದ್ವಂದ್ವರ್ಥದ ಮಾತುಗಳೇ ಟಾನಿಕ್‌. ಮತ್ತೊಂದೆಡೆ ಕೊಲೆ ಪ್ರಕರಣ ಭೇದಿಸುವ ಕಳ್ಳ-ಪೊಲೀಸರ ಪ್ರಸಂಗವೂ ನೀರಸ.

ಚಿತ್ರಕ್ಕೆ ಸಂತೋಷ್‌ ಬೇಟಗೇರಿ ಆ್ಯಕ್ಷನ್‌ ಕಟ್‌ ಹೇಳುವುದರ ಜತೆಗೆ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಿರ್ದೇಶನ ಮತ್ತು ನಟನೆ ಎರಡರಲ್ಲೂ ಹಿಡಿತ ಇಲ್ಲ. ಅತ್ಯಂತ ಕಳಪೆ ನಿರ್ದೇಶನದಲ್ಲಿ ಬೇಸರ ಹುಟ್ಟಿಸುವ ಸಂತೋಷ್‌, ನಟನೆಯಲ್ಲೂ ಅದರಿಂದ ತಪ್ಪಿಸಿಕೊಳ್ಳಲು ಆಗಿಲ್ಲ. ಆಡಿದ್ದೇ ಆಟ, ಮಾಡಿದ್ದೇ ನಿರ್ದೇಶನ ಎನ್ನುವಂತಾಗಿ, ಸನ್ನಿವೇಶಗಳು ಸಂಬಂಧವೇ ಇಲ್ಲದ ಹಾಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತವೆ. ಹೊಸ ಪರಿಚಯ ನಯನಾ ಸಾಯಿ ಚಿತ್ರದ ನಾಯಕಿ. ಅವರಂತೂ ನಟನೆಯಲ್ಲಿ ಇನ್ನು ಎಳಸು. ಬೆದರು ಗೊಂಬೆಯನ್ನು ತಂದು ಕ್ಯಾಮರಾ ಮುಂದೆ ನಿಲ್ಲಿಸಿದಂತಾಗಿದೆ. ಉಳಿದಂತೆ ‘ತಿಥಿ’ ಚಿತ್ರದ ಖ್ಯಾತಿಯ ಸೆಂಚುರಿ ಗೌಡ ಇಲ್ಲಿನ ಪ್ರಮುಖ ಪಾತ್ರಧಾರಿ. ತಿಥಿ ಚಿತ್ರದ ನಂತರ ಸೆಂಚುರಿಗೌಡ ಸೇರಿ ಅಲ್ಲಿನ ಬಹುತೇಕ ಕಲಾವಿದರು ಡಬಲ್‌ ಮೀನಿಂಗ್‌ ಡೈಲಾಗ್‌ ಹಾಸ್ಯಕ್ಕೆ ಬಳಕೆ ಆದ ದುರಂತ ಇಲ್ಲೂ ಆಗಿದೆ. ನಮೋ ಪಾತ್ರಧಾರಿ ಸೆಂಚುರಿ ಗೌಡರನ್ನು ಕೀಳು ಮಟ್ಟದ ಹಾಸ್ಯದ ಸನ್ನಿವೇಶಗಳಲ್ಲಿ ತೋರಿಸಿ, ಅವರ ವಯಸ್ಸಿನ ಘನತೆಗೂ ಧಕ್ಕೆ ತಂದಿದ್ದಾರೆ ನಿರ್ದೇಶಕರು. ಉಳಿದಂತೆ ಇಲ್ಲಿನ ಸಂಗೀತ, ಛಾಯಾಗ್ರಹಣ ಇತ್ಯಾದಿ ಕೆಲಸಗಳ ಬಗ್ಗೆ ಹೇಳುವುದಕ್ಕೆ ಇಲ್ಲಿ ಹೆಚ್ಚೇನು ವಿಶೇಷತೆ ಇಲ್ಲ. ಇಂತಹದೊಂದು ಅದ್ಭುತದ ದರ್ಶನ ನಿಮಗೂ ಬೇಕಿದ್ದರೆ, ಧಾರಳವಾಗಿ ಹೋಗಿ ಬನ್ನಿ.

click me!