ತರುಣರ ಕತೆಯಲ್ಲಿ ತಾರುಣ್ಯಕ್ಕೆ ವಯಸ್ಸಾಗಿದೆ!

By Web Desk  |  First Published Apr 13, 2019, 9:20 AM IST

ಮಧ್ಯ ರಾತ್ರಿ ಮದ್ಯ ಪಾರ್ಟಿ, ಒಂದೇ ತಟ್ಟೆಯಲ್ಲಿ ಅನ್ನ ತಿನ್ನುವ ಸ್ನೇಹ, ಗ್ಯಾಪಲ್ಲೊಂದು ಪ್ರೇಮ, ಅಲ್ಲೊಂದು ಇಲ್ಲೊಂದು ವಂಚನೆ, ಹುಡುಗಿಗಾಗಿ ಹೋರಾಟ, ನಿಜವಾದ ತಾನು ಯಾರು ಎಂದು ಹುಡುಕುವ ಹಾರಾಟ ಇವೆಲ್ಲವನ್ನೂ ಒಂದು ರಾತ್ರಿಯ ಕತೆಗೆ ಸೇರಿಸಿ ಹೊಲಿದು ಸಿನಿಮಾ ಮಾಡಿದ್ದಾರೆ ನಿರ್ದೇಶಕ ರಾಕೇಶ್‌ ಅಡಿಗ. ಇಬ್ಬರು ಗೆಳೆಯರು ರಾತ್ರಿ ಹೊತ್ತು ಆಟೋ ಹತ್ತಿಕೊಂಡು ಹೊರಡುವಲ್ಲಿಗೆ ಕತೆ ಶುರುವಾಗುತ್ತದೆ. ಇಲ್ಲಿ ಆಟೋ ಓಡಿಸುವವನಿಗೆ ಎಲ್ಲಿಗೆ ಹೋಗಬೇಕು ಅನ್ನುವುದು ಗೊತ್ತಿರುವುದಿಲ್ಲ. ನೋಡುವವನಿಗೂ ತಿಳಿದಿರುವುದಿಲ್ಲ. ಗೊತ್ತಾಗುವ ಹೊತ್ತಿಗೆ ತಡವಾಗಿತ್ತು.


ರಾಜೇಶ್‌ ಶೆಟ್ಟಿ

ರಾಕೇಶ್‌ ಅಡಿಗ ನಿರ್ದೇಶನದ ಚಿತ್ರ ಎಂದೇ ಗುರುತಿಸಿಕೊಂಡ ಚಿತ್ರ ಇದು. ನೈಟ್‌ ಔಟ್‌ ಅಂತ ಹೆಸರಿರುವುದರಿಂದ ರಾತ್ರಿ ಹೊತ್ತಿನ ಆಟೋ ಪಯಣ ಚಿತ್ರದ ಆಧಾರ. ಈ ಸುದೀರ್ಘ ಪಯಣದಲ್ಲಿ ಒಂದರಹಿಂದೊಂದು ಫ್ಲಾಶ್‌ಬ್ಯಾಕು. ಮೊದಲ ಕತೆ ಮುಗಿದರೆ ಮತ್ತೊಂದು. ಆಮೇಲೆ ಮಗದೊಂದು. ಆಟೋದಲ್ಲಿ ಸಾಗುತ್ತಿರುವಾಗ ದೊಡ್ಡ ದೊಡ್ಡ ಹಂಪ್‌ಗಳನ್ನು ನೋಡದೆ ಹತ್ತಿಸಿ ಹಾರಿಸಿದರೆ ಬೆನ್ನು ನೋವು ಫ್ರೀ. ಅದನ್ನೂ ತಡೆದುಕೊಂಡು ನೋಡಿಸಿಕೊಂಡು ಹೋಗುವಂತೆ ಮಾಡುವುದು ದೊಡ್ಡ ಸವಾಲು. ರಾಕೇಶ್‌ ಅಡಿಗ ಅದನ್ನು ನಿಭಾಯಿಸಲು ಶಕ್ತಿ ಮೀರಿ ಯತ್ನಿಸಿದ್ದಾರೆ.

Tap to resize

Latest Videos

ಚಿತ್ರ: ನೈಟ್‌ ಔಟ್‌

ನಿರ್ದೇಶನ: ರಾಕೇಶ್‌ ಅಡಿಗ

ತಾರಾಗಣ: ಭರತ್‌, ಅಕ್ಷಯ್‌ ಪವಾರ್‌, ಶ್ರುತಿ ಗೊರಾಡಿಯಾ

ಇಲ್ಲಿ ಮೂವರು ಮುಖ್ಯ ಪಾತ್ರಧಾರಿಗಳು. ಭರತ್‌, ಶ್ರುತಿ ಗೊರಾಡಿಯಾ ಮತ್ತು ಅಕ್ಷಯ್‌ ಪವಾರ್‌. ಈ ಮೂವರ ಮಧ್ಯೆ ಕತೆ ಸಾಗುತ್ತದೆ. ಅದರಲ್ಲಿ ಸ್ವಲ್ಪ ಮಜಾ ಕೊಡುವುದು ಅಕ್ಷಯ್‌ ಪವಾರ್‌. ಏನೋ ಸಾಧಿಸಲು ಹೋಗಿ ಪೆಂಗನಾಗುವ ಗೆಳೆಯನ ಪಾತ್ರ. ಭರತ್‌ ಅವರದು ಇಲ್ಲಿ ದಾರಿ ತೋರಿಸುವ ಪಾತ್ರ. ಎಲ್ಲರ ಒಳಗೂ ಗುಟ್ಟುಗಳು ಇರುತ್ತವೆ, ಆ ಗುಟ್ಟುಗಳನ್ನು ಎಷ್ಟೇ ಸ್ನೇಹವಿದ್ದರೂ ಹೇಳಲು ಸಾಧ್ಯವಾಗುವುದಿಲ್ಲ ಅನ್ನುವ ಭರತ್‌ ಆ ಗುಟ್ಟುಗಳನ್ನು ಹೇಳುತ್ತಾ ಹೋಗುತ್ತಾನೆ. ಬೇರೆ ದಾರಿಯಿಲ್ಲ, ಕೇಳುತ್ತಾ ಕೂರಬೇಕು.

ಇಲ್ಲಿ ತಾರುಣ್ಯದ ಕತೆ ಇದೆ. ಆದರೆ ಆ ತಾರುಣ್ಯಕ್ಕೆ ವಯಸ್ಸಾಗಿದೆ. ರಾತ್ರಿಯ ಆಟೋ ಪಯಣವಿದೆ. ಆದರೆ ಅವಶ್ಯಕ್ಕಿಂತ ಉದ್ದವಾಗಿದೆ. ಬೇಜಾನ್‌ ಕತೆಗಳಿವೆ. ಆದರೆ ಕತೆಗಳು ಮನಸಿನ ಬಾಗಿಲಲ್ಲೇ ಟಾಟಾ ಹೇಳುತ್ತವೆ. ಕೊನೆಯಲ್ಲಿ ಒಂದು ದೊಡ್ಡ ಸಸ್ಪೆನ್ಸ್‌ ಕಾದಿರುತ್ತದೆ. ಆದರೆ ಅಲ್ಲಿಗೆ ಬರುವ ವೇಳೆಗೆ ಸುಸ್ತಾಗಿರುತ್ತದೆ. ಈ ಜರ್ನಿ ಆರಂಭಿಸುವುದು ನಿಮ್ಮಿಚ್ಛೆ. ಉಳಿದಿದ್ದು ದೈವೇಚ್ಛೆ.

click me!