ಚಿತ್ರ ವಿಮರ್ಶೆ: ಡಿಸ್ಕಿ ಡಿಸೈನ್‌

By Web Desk  |  First Published Jul 20, 2019, 10:37 AM IST

ಓದು ತಲೆಗೆ ಹತ್ತದ ಹಳ್ಳಿಯ ಹುಡುಗ ಮಾದೇವ. ಅಪ್ಪನ ಕಾಟ ತಡೆಯಲು ಆಗದೇ ಬೆಂಗಳೂರಿಗೆ ಓಡಿ ಬರುತ್ತಾನೆ. ಹಾಗೆ ಬಂದವನನ್ನು ಕೋಟಾ ನೋಡು ಜಾಲ ತನ್ನ ಬಲೆಗೆ ಹಾಕಿಕೊಳ್ಳುತ್ತದೆ. ಇದೇ ಬಲೆಯಲ್ಲಿ ತನಗೇ ಗೊತ್ತಿಲ್ಲದ ಹಾಗೆ ಅರ್ಧ ರಾತ್ರಿಯಲ್ಲಿ ಸಿಕ್ಕ ಐಶ್ವರ್ಯವನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗುವ ನಾಯಕ ಪ್ರೀತಿಯ ಬಲೆಯಲ್ಲಿಯೂ ಸಿಕ್ಕಿಕೊಳ್ಳುತ್ತಾನೆ. ಇಷ್ಟರಲ್ಲಿ ಮೊದಲಾರ್ಧ ಮುಕ್ತಾಯ.


ದ್ವಿತೀಯಾರ್ಧದ ಹೊತ್ತಿಗೆ ಸಿಕ್ಕಿದ್ದ ಪ್ರೀತಿ ಕೈ ತಪ್ಪಿರುತ್ತದೆ. ಕೈ ಸೇರಿದ್ದ ಸಂಪತ್ತು ವಾಮ ಮಾರ್ಗದ್ದು ಎನ್ನುವ ಸತ್ಯ ಗೊತ್ತಾಗುತ್ತದೆ. ಪೊಲೀಸರು ಪ್ರಕರಣದ ಬೆನ್ನತ್ತುತ್ತಾರೆ. ನಾಯಕ ಬಂಧಿಯಾಗುತ್ತಾನೆ. ಮುಂದೇನಾಗುತ್ತದೆ? ಪ್ರೀತಿ ದಕ್ಕಿತಾ? ನ್ಯಾಯ ಗೆದ್ದಿತಾ? ಎಂದೆಲ್ಲಾ ಪ್ರಶ್ನೆ ಕೇಳುವ ಮೊದಲಿಗೆ ಚಿತ್ರವೂ ನೋಡುಗನಲ್ಲಿ ಹತ್ತಾರು ಉತ್ತರ ಸಿಗದ ಪ್ರಶ್ನೆಗಳನ್ನು ಎಬ್ಬಿಸಿ ಸುಮ್ಮನಾಗಿಬಿಡುತ್ತದೆ.

ಚಿತ್ರ ವಿಮರ್ಶೆ: ಆದಿ ಲಕ್ಷ್ಮಿ ಪುರಾಣ

Tap to resize

Latest Videos

ಮಾದೇವನ ಪಾತ್ರದ ರಣ ಚಂದ್‌ ಇಲ್ಲಿ ನಾಯಕ, ನಿರ್ಮಾಪಕ, ನಿರ್ದೇಶಕ, ಕತೆಗಾರ, ಸಂಭಾಷಣೆಕಾರ ಎಲ್ಲವೂ ಹೌದು. ಇಡೀ ಚಿತ್ರ ನಿಂತಿರುವುದು ಅವರ ಮೇಲೆಯೇ. ಎಲ್ಲಾ ಭಾರವನ್ನೂ ತನ್ನ ಮೇಲೆಯೇ ಹಾಕಿಕೊಂಡ ರಣ ಚಂದ್‌ ಮುಗ್ಧ ಹಳ್ಳಿಯ ಹುಡುಗನಾಗಿ, ಸುಲಭಕ್ಕೆ ಕೈ ಸೇರಿದ ಹಣದಿಂದ ದಿಲ್‌ದಾರ್‌ ಹುಡುಗನಾಗಿ, ಲವ್ವರ್‌ ಬಾಯ್‌ ಆಗಿ, ಪೊಲೀಸರ ಗೆಸ್ಟ್‌ ಆಗಿ ಸಾಧಾರಣಕ್ಕೂ ಸ್ವಲ್ಪ ಮೇಲಿನ ಮಟ್ಟದ್ದಲ್ಲಿಯೇ ನಟಿಸಿದ್ದಾರೆ. ಇವರಿಗೆ ಬಹುತೇಕ ಎಲ್ಲಾ ನಟರೂ ಇದೇ ಲೆವಲ್ಲಿನಲ್ಲಿಯೇ ಸಾಥ್‌ ಕೊಟ್ಟಿರುವುದು. ಆದರೆ ಒಂದೊಂದು ಕಡೆಯಲ್ಲಿ ಚಿತ್ರ ಆಮೆಗತಿಯಲ್ಲಿ ಸಾಗುವುದು, ಒಮ್ಮೆಮ್ಮೆ ತೀರಾ ಹುಚ್ಚು ಕುದುರೆಯಂತೆ ಓಡಿಬಿಡುವುದು ಪ್ರೇಕ್ಷಕನನ್ನು ಗೊಂದಲಕ್ಕೆ ಗುರಿ ಮಾಡುತ್ತದೆ.

ಚಿತ್ರ ವಿಮರ್ಶೆ: ಸಿಂಗ

ಓದುವುದೇ ಇಷ್ಟವಿಲ್ಲವೆಂದು ಹೇಳುವ ರಣ ಚಂದ್‌ ಬೆಂಗಳೂರಿಗೆ ಬಂದ ಉದ್ದೇಶವೂ ಸ್ಪಷ್ಟವಿಲ್ಲ. ಇಲ್ಲಿಗೆ ಬಂದವನೇ ಕಾಲೇಜಿಗೆ ಸೇರುತ್ತಾನೆ. ಕೈಗೆ ಸಿಕ್ಕ ಮೂವತ್ತು ಸಾವಿರ ದುಡ್ಡಿನಲ್ಲಿಯೇ ಮೈ ತುಂಬಾ ಒಡವೆಗಳು ಬಂದು ಬೀಳುತ್ತವೆ. ಅವನ ಇಡೀ ಜೀವನ ಶೈಲಿಯೇ ಮಲಗಿ ಮೇಲೇಳುವ ವೇಳೆಗೆ ಬದಲಾಗಿಬಿಡುತ್ತದೆ. ಪ್ರೀತಿಸಿದ ಹುಡುಗಿ ಇದ್ದಕ್ಕಿದ್ದಂತೆ ಸಕಾರಣವೂ ಇಲ್ಲದೇ ಬಿಟ್ಟು ಹೋಗುತ್ತಾಳೆ. ಕಡೆಗೆ ಸಂಕಷ್ಟದಲ್ಲಿ ಸಿಲುಕಿನ ನಾಯಕನನ್ನು ಪಾರು ಮಾಡಲು ಅದೇ ಹುಡುಗಿ ಪೊಲೀಸ್‌ ಅಧಿಕಾರಿಯಾಗಿ ಬರುತ್ತಾಳೆ. ಇಲ್ಲಿ ಒಂದಕ್ಕೊಂದು ಕಾರ್ಯ ಕಾರಣ ಸಂಬಂಧವನ್ನು ಚೆನ್ನಾಗಿ ಎಣೆಯಬೇಕಿದ್ದ ಹೊಣೆಗಾರಿಕೆ ನಿರ್ದೇಶಕರ ಮೇಲಿತ್ತು. ಅದರಲ್ಲಿ ಅವರು ಪೂರ್ಣ ಪಾಸ್‌ ಆಗಿಲ್ಲ. ಇವರಂತೆಯೇ ಕ್ಯಾಮರಾ, ಸಂಗೀತ.

ತಾರಾಗಣ: ರಣ ಚಂದ್‌, ನಿಮಿಕಾ ರತ್ನಾಕರ್‌, ರವಿ, ಸುಕೇಶ್‌, ಪ್ರಶಾಂತ್‌, ಮನೋಹರ್‌ ಗೌಡ

ನಿರ್ದೇಶನ, ನಿರ್ಮಾಣ: ರಣ ಚಂದ್‌

ಸಂಗೀತ: ಕಾರ್ತಿಕ್‌ ಚಿನ್ನೋಜಿ ರಾವ್‌ ಮತ್ತು ಬಕ್ಕೇಶ್‌

ಛಾಯಾಗ್ರಹಣ: ಎಸ್‌. ಸಾಮ್ರಾಟ್‌

click me!