
ದೇಶಾದ್ರಿ ಹೊಸ್ಮನೆ
ಆತ ನಾಯಕ ಸೈಕೋ ಅಂತ ನಾಯಕಿಗೆ ಗೊತ್ತಾಯಿತು. ಹೇಗಾದರೂ ಮಾಡಿ ಆಕೆ ಅಲ್ಲಿಂದ ಪಾರಾಗಲೇಬೇಕು. ಜೀವ ಉಳಿಯಬೇಕಾದರೆ, ಆಕೆಗದು ಅನಿವಾರ್ಯ. ಹಾಗಂತ ಆಕೆ ಪಾರಾಗಿ ಹೋಗಲು ಬಂದಿಲ್ಲ. ಆತನನ್ನೇ ಮುಗಿಸಲು ಬಂದವಳು. ಈಗ ಅವಳಿಗೆ ಉಳಿದಿದ್ದು ಮಾಡು- ಇಲ್ಲವೇ ಮಡಿ. ಆಗ ಆಕೆಯ ನಿಜಬಣ್ಣ ಪ್ರೇಕ್ಷಕರ ಮುಂದೆ ಬಯಲಾಗುತ್ತದೆ. ಬೆಂಗಳೂರಿನಿಂದ ಕುಂದಾಪುರಕ್ಕೆ ಹಾರಿ ಬಂದು ಅಲ್ಲಿಯೇ ಗಿರಕಿ ಹಾಕುತ್ತಿದ್ದ ಮರ್ಡರ್ ಮಿಸ್ಟರಿ, ಒಂದೇ ಏಟಿಗೆ ಹುಬ್ಬಳ್ಳಿಗೆ ಜಿಗಿಯುತ್ತದೆ. ಅಲ್ಲಿಗೂ ಈ ಕತೆಗೆ ಏನ್ ಸಂಬಂಧ? ಆ ಹುಡುಗಿ ಆತನನ್ನು ಮುಗಿಸಲು ಯಾಕೆ ಬಂದಿದ್ದು? ಅದು ಚಿತ್ರದೊಳಗಿನ ಸಸ್ಪೆನ್ಸ್.ಅತಿ ಆಸೆ ಗತಿಗೇಡಿಸಿತು ಎನ್ನುವ ಗಾದೆ ಮಾತು ನೆನಪಿಸುವ ಕತೆಯಿದು. ಹಾಗೆಯೇ ಹಣದಾಸೆಗೆ ಒರ್ವ ವ್ಯಕ್ತಿಯ ಅಪಾರ ಸಂಪತ್ತನ್ನೆಲ್ಲ ಮೋಸದಿಂದ ತನ್ನದಾಗಿಸಿಕೊಳ್ಳಬೇಕೆಂದ ಹೊರಟ ಓರ್ವ ಸಾಮಾನ್ಯ ಹುಡುಗಿಯ ದುರಂತ ಕತೆಯೂ ಹೌದು.
ಉಳಿದದ್ದು ಪ್ರೇಕ್ಷಕನ ಪಾಲಿಗೆ ತ್ರಾಸದಾಯಕ. ಪಾತ್ರಗಳು ಪ್ರತಿನಿಧಿಸುವ ವ್ಯಕ್ತಿತ್ವಗಳ ದೃಷ್ಟಿಯಲ್ಲಿ ಇಲ್ಲಿ ಒಂದಷ್ಟುಹೊಸತನವಿದೆ. ಉಳಿದಂತೆ ಸಂಪತ್ತಿಗಾಗಿ ನಡೆಸುವ ಸಂಚು, ಸೈಕೋ ಮನಸ್ಥಿತಿಯ ಹಿಂದಿನ ವಿಕೃತಿ, ತೆರೆ ಮರೆಯಲ್ಲಿ ಉಳಿದು ರಕ್ತಸಿಕ್ತ ಅಧ್ಯಾಯ ಬರೆಯುವ ಸೌಮ್ಯ ಮುಖವಾಡದ ವ್ಯಕ್ತಿತ್ವಗಳು.. ಇವ್ಯಾವುದು ಹೊಸದೇನಲ್ಲ. ಪ್ರತಿ ಸಿನಿಮಾಗಳಲ್ಲೂ ಈ ದ್ವೇಷ, ಆವೇಶ ಇದ್ದೇ ಇರುತ್ತೆ. ಆದರೆ, ‘ಅವ್ರು ಬಿಟ್, ಅವ್ರು ಬಿಟ್ ಅವರಾರಯರು’ ಎನ್ನುವ ಹಾಗೆ ಒಂದು ಮೈಂಡ್ ಗೇಮ್ ತರಹ ಕೊಲೆ ಸಂಚಿನ ರಹಸ್ಯಗಳನ್ನು ಕೊನೆ ತನಕ ಗೌಪ್ಯವಾಗಿಟ್ಟು ಕತೆ ಹೆಣೆದಿದ್ದು ಮಾತ್ರ ಇಲ್ಲಿ ವಿಶೇಷ ಮತ್ತು ಥ್ರಿಲ್ಲಿಂಗ್.
ಅನಗತ್ಯ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡುವ ಅವಕಾಶವಿದ್ದರೂ ಅಲಕ್ಷ್ಯ ಮಾಡಲಾಗಿದೆ. ಹಾಡುಗಳು ಸಂದರ್ಭೋಚಿತವಾಗಿಯೇ ಬಂದರೂ ಸಂಗೀತ ನಿರ್ದೇಶಕ ಎ.ಟಿ. ರವೀಶ್ ಗಮನ ಸೆಳೆಯುವುದು ಒಂದು ಹಾಡಿನಲ್ಲಿ ಮಾತ್ರ. ಹಾಗೆ ನೋಡಿದರೆ ಉಮಾಕಾಂತ್ ನಿರ್ದೇಶನದ ಕುಶಲತೆಯನ್ನು ಸೊಗಸಾಗಿ ಕಾಣುವಂತೆ ಮಾಡಿದ್ದು ಛಾಯಾಗ್ರಾಹಕ ಎಂ.ಆರ್. ಸೀನು. ಅರಬೀ ಕಡಲ ತೀರ, ಕಾಡಿನ ಹಾದಿ, ಅಲೆಗಳ ನಡುವಿನ ಪಯಣ, ಎಸ್ಟೇಟ್‌ನಲ್ಲಿನ ಚೇಸಿಂಗ್ ಸನ್ನಿವೇಶಗಳು ರೋಚಕವಾಗಿ ಕಾಣುವಂತೆ ಮಾಡಿದ್ದಾರೆ ಸೀನು. ಆದರೆ ಚೇಸಿಂಗ್ ಸನ್ನಿವೇಶದಲ್ಲಿ ನಾಯಕಿ ವೈಷ್ಣವಿ ಅವರ ಆತಂಕದ ಛಾಯೆಯನ್ನು ಸೆರೆಹಿಡಿಯುವ ಬದಲಿಗೆ ಸೀನು ಕ್ಯಾಮರಾ ಕಣ್ಣು ಅವರ ದೇಹ ಸಿರಿಯ ಮೇಲೆ ಹೆಚ್ಚು ಫೋಕಸ್ ಮಾಡಿದ್ದರ ಮರ್ಮ ನಿಗೂಢ.
ಮಾಡೆಲ್ ಛಾಯಾಗ್ರಾಹಕ ವಂಶಿಕೃಷ್ಣ ಮನೋಹರ್ ಪಾತ್ರಧಾರಿ ಕೃಷ್ಟೇಗೌಡರ ಅಭಿನಯದಲ್ಲಿ ಸಹಜತೆ ಇದೆ. ನಟಿ ವೈಷ್ಟವಿ ನಟನೆಯಲ್ಲಿ ಗಮನ ಸೆಳೆದರೂ, ರೋಷ, ಆವೇಶದಲ್ಲಿ ಇನ್ನಷ್ಟುನಟನೆ ಬೇಕಿತ್ತು. ಎಸ್ಟೇಟ್ ಕೆಲಸಗಾರ ಕೊಂಬ್ರ ಪಾತ್ರದಲ್ಲಿ ಸುಂದರ್ ಈ ಚಿತ್ರದ ಹೈಲೈಟ್. ಅವರ ಸಿನಿ ಜರ್ನಿಯಲ್ಲಿ ಇದೇ ಮೊದಲು ರೇಪಿಸ್ಟ್ ಆಗಿಯೂ ಅಭಿನಯಿಸುವ ಅವಕಾಶ್ ಸಿಕ್ಕಿದ್ದು ವಿಶೇಷ. ಉಳಿದವರ ಪಾತ್ರಗಳಲ್ಲೂ ಅಚ್ಚುಕಟ್ಟು ಇದೆ.
ಚಿತ್ರ: ಅರಬ್ಬೀ ಕಡಲ ತೀರದಲ್ಲಿ
ನಿರ್ದೇಶನ: ಉಮಾಕಾಂತ್
ತಾರಾಗಣ: ಕೃಷ್ಣೇ ಗೌಡ, ವೈಷ್ಣವಿ ಚಂದ್ರನ್, ರಂಜಿತಾ ರಾವ್, ರಮೇಶ್ ಭಟ್, ಸುಂದರ್, ಸಂದೀಪ್
ರೇಟಿಂಗ್ 3
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.