ಹಳೇ ಮಚ್ಚು, ಹೊಸ ರಚ್ಚು, ಅಡ್ಡ ಬಂದವರೆನ್ನೆಲ್ಲ ಕೊಚ್ಚು, ಕೊಚ್ಚು. ಇದು ‘ರಾಜಣ್ಣನ ಮಗ’ನ ಹುಚ್ಚು. ಮಚ್ಚು, ಕೊಚ್ಚು ಅಂದ್ಮೇಲೆ ಹೆಚ್ಚೇನು ಹೇಳಬೇಕಾಗಿಯೇ ಇಲ್ಲ, ಇದು ಮತ್ತೊಂದು ಅಂಡರ್ ವಲ್ಡ್‌ರ್ ಜಗತ್ತಿನ ಕತೆ. ಹೊಸ ಅಲೆಯ ಸಿನಿಮಾಗಳ ನಡುವೆ ರೌಡಿಸಂ ಕತೆಗಳು ಬೆಳ್ಳಿತೆರೆಯಲ್ಲಿ ಕಾಣೆಯಾದವು ಎನ್ನುವ ಹೊತ್ತಿಗೆ ನಿರ್ದೇಶಕ ಕೋಲಾರ ಸೀನು ಮತ್ತದೇ ರೌಡಿಸಂ ಕತೆಯನ್ನು ಅಪ್ಪ-ಮಗನ ಸೆಂಟಿಮೆಂಟ್ ಮೂಲಕ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.
ದೇಶಾದ್ರಿ ಹೊಸ್ಮನೆ
ತುಕ್ಕು ಹಿಡಿದ ಹಳೇ ಮಚ್ಚು ಝಳಪಿಸಿ, ಹೊಳೆಯುವ ಗನ್ ತೋರಿಸಿ, ಪ್ರೇಕ್ಷಕರ ಮನ ಗೆಲ್ಲುವ ಅವರ ಪ್ರಯತ್ನ ಇಲ್ಲಿ ವ್ಯರ್ಥ ಪ್ರಲಾಪವೇ ಆಗಿದೆ. ಚಿತ್ರ ಉದ್ದಕ್ಕೂ ರಾಚುವ ಹೊಡಿ-ಬಡಿ ಸನ್ನಿವೇಶಗಳ ಆಚೆ ಅಪ್ಪ-ಮಗನ ಸೆಂಟಿಮೆಂಟ್ ಮಾತ್ರ ಪ್ರೇಕ್ಷಕರನ್ನು ರಂಜಿಸಿ, ಮನ ಗೆಲ್ಲುತ್ತದೆ. ಚಿತ್ರ ಮಂದಿರದಿಂದ ಹೊರ ಬಂದಾಗಲೂ ಕಾಡಿಸುತ್ತದೆ ಎನ್ನುವುದಷ್ಟೇ ಸಮಾಧಾನ.
ಭೂಗತ ಜಗತ್ತಿನ ಯಾವುದೇ ಸಿನಿಮಾವೂ ರೌಡಿ ಆದವನಿಗೊಂದು ಕಾರಣ ನೀಡುತ್ತದೆ. ಇಲ್ಲೂ ಹಾಗೆಯೇ ತನ್ನ ತಂದೆಯ ಮೇಲೆ ಕೈ ಮಾಡಿದ ಪ್ರಭಾವಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪ ಹೊತ್ತು ಜೈಲಿಗೆ ಹೋದ ಕಥಾ ನಾಯಕ ಗೌರಿ ಅಲಿಯಾಸ್ ಗೌರಿಶಂಕರ್‌ನಿಗೆ ವ್ಯವಸ್ಥೆಯಿಂದ ಸಿಕ್ಕಿದ್ದು ರೌಡಿ ಪಟ್ಟ. ಒಮ್ಮೆ ಆತನಿಗೆ ರೌಡಿ ಎನ್ನುವ ಹಣೆಪಟ್ಟೆಬಿದ್ದರೆ ಮುಗಿದು ಹೋಯಿತು. ಕೊನೆಯ ತನಕ ಆತ ರೌಡಿಯೇ. ಇಲ್ಲೂ ಆಗಿದ್ದು ಅದೇ. ಆತ ಜೈಲಿನಿಂದ ಹೊರ ಬರುತ್ತಿದ್ದಂತೆ ಗೌರಿ ಹೆಸರು ಪಾತಕ ಲೋಕದಲ್ಲಿ ಬಿರುಗಾಳಿಯಂತೆ ಹರಿದಾಡುತ್ತೆ. ಗೌರಿ ಹೆಸರಲ್ಲಿ ಪುಡಿ ರೌಡಿಗಳದ್ದೇ ದರ್ಬಾರು. ಅವರ ಅಕ್ರಮಗಳಿಗೆಲ್ಲ ಆತನ ಹೆಸರೇ ಬಂಡವಾಳ. ಮುಂದೆ ಮಚ್ಚುಗಳದ್ದೇ ಸದ್ದು, ಬಂದೂಕಿನಿಂದ ಹಾರುವ ಬುಲೆಟ್‌ಗಳದ್ದೇ ದರ್ಬಾರು. ಗೌರಿ ಕಾಟಕ್ಕೆ ಹೆತ್ತ ತಂದೆ, ಪ್ರೀತಿಸಿದ ಹುಡುಗಿಯೇ ಪೊಲೀಸರಿಗೆ ದೂರು ನೀಡುತ್ತಾರೆ.
ಕಲಾವಿದರ ಅಭಿನಯದಲ್ಲಿ ನಾಯಕ ನಟ ಹರೀಶ್ ಜತೆಗೆ ಚರಣ್ ರಾಜ್ ನಟನೆ ಈ ಚಿತ್ರದ ಹೈಲೈಟ್. ಅಪ್ಪ-ಮಗನ ಸೆಂಟಿಮೆಂಟ್‌ನಲ್ಲಿ ಚರಣ್ ರಾಜ್ ಹೆಚ್ಚು ಆಪ್ತವಾಗುತ್ತಾರೆ. ಹೊಸ ಪ್ರತಿಭೆ ಹರೀಶ್ ಜಲಗೆರೆ ಮತ್ತೆ ಪಕ್ಕಾ ಆ್ಯಕ್ಷನ್ ಸಿನಿಮಾದಲ್ಲಿ ಹೀರೋ ಆಗಿ ಅಬ್ಬರಿಸಿದ್ದಾರೆ. ಅವರ ಬಾಡಿ ಲುಕ್‌ಗೆ ಹೆಚ್ಚು ಆದ್ಯತೆ ನೀಡಿರುವ ನಿರ್ದೇಶಕರು, ಬರೋಬ್ಬರಿ ಆರು ಆ್ಯಕ್ಷನ್ ಸನ್ನಿವೇಶಗಳನ್ನು ತಂದು ಸಿನಿಮಾವನ್ನು ಅಬ್ಬರದಲ್ಲೇ ಮುಳುಗಿಸಿಬಿಟ್ಟಿದ್ದಾರೆ. ಹರೀಶ್ ಅಭಿನಯಕ್ಕಿಂತ ಸಾಹಸ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ನಾಯಕಿ ಅಕ್ಷತಾ, ರಾಜೇಶ್ ನಟರಂಗ, ಕರಿಸುಬ್ಬು, ಮೈಕೋ ನಾಗರಾಜ್, ಅರುಣಾ ಬಾಲರಾಜ್, ರಾಜೀೕವ್ ರೆಡ್ಡಿ ನಟನೆ ಪಾತ್ರಕ್ಕೆ ತಕ್ಕಂತಿದೆ. ಸಂಭಾಷಣೆ ಬರೆದ ಸಿದ್ದಪ್ಪಾಜಿ, ಛಾಯಾಗ್ರಾಹಕ ಪ್ರಮೋದ್ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಕೊಡುಗೆ ಇಲ್ಲಿ ದೊಡ್ಡದಿದೆ.
ಚಿತ್ರ: ರಾಜಣ್ಣನ ಮಗ
ನಿರ್ದೇಶನ: ಕೋಲಾರ ಸೀನು
ತಾರಾಗಣ: ಹರೀಶ್ ಜಲಗೆರೆ, ಅಕ್ಷತಾ, ಚರಣ್ ರಾಜ್, ರಾಜೇಶ್ ನಟರಂಗ, ಕರಿಸುಬ್ಬು, ಶರತ್ ಲೋಹಿತಾಶ್ವ, ಮೈಕೋ ನಾಗರಾಜ್, ರಾಜೀವ್ ರೆಡ್ಡಿ
ಛಾಯಾಗ್ರಹಣ: ಪ್ರಮೋದ್
ಸಂಗೀತ: ರವಿ ಬಸ್ರೂರು
ರೇಟಿಂಗ್ 3