ಚಿತ್ರ ವಿಮರ್ಶೆ : ನಡುವೆ ಅಂತರವಿರಲಿ

By Web DeskFirst Published Oct 6, 2018, 10:48 AM IST
Highlights

ಈ ವಾರ ’ನಡುವೆ ಅಂತರವಿರಲಿ’ ಕನ್ನಡ ಸಿನಿಮಾ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 

ಬೆಂಗಳೂರು (ಅ. 06): ಈ ಚಿತ್ರ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವ ಹೊತ್ತಿಗೆ ಚಿತ್ರದ ಮುಂದೆ ಕೂತವನ ಕಣ್ಣು ತೇವಗೊಳ್ಳುತ್ತದೆ. - ನಡುವೆ ಅಂತರವಿರಲಿ ಚಿತ್ರದ ಕುರಿತು ಹೀಗೊಂದು ಸಾಲು ಬರೆದರೆ ತೀರಾ ಕಡಿಮೆ.

ಅದು ವಯಸ್ಸಲ್ಲದ ವಯಸ್ಸಿನಲ್ಲಿ ಹುಟ್ಟಿಕೊಳ್ಳುವ ಪ್ರೇಮ. ಆದರೂ ಇಂಥ ಪ್ರೇಮದ ಹಿಂದೆ ಎರಡು ಮನಸುಗಳಿವೆ, ಕನಸುಗಳಿವೆ, ಭವಿಷ್ಯವಿದೆ, ಎರಡು ಕುಟುಂಬಗಳ ಜಗಳ- ಮನಸ್ತಾಪ, ನಡುವೆ ಒಬ್ಬ ವಿಲನ್ ಇದ್ದಾನೆ, ಸಾಲದಕ್ಕೆ ಜಾತಿ, ಅಂತಸ್ತು ಎನ್ನುವ ಗೋಡೆಗಳಿವೆ. ಜತೆಗೆ ಪರ ವಿರೋಧಗಳ ಚರ್ಚೆಗಳು ತಾರಕಕ್ಕೇರುವುದನ್ನು ಎಷ್ಟು ಸಿನಿಮಾಗಳಲ್ಲಿ ನೋಡಿಲ್ಲ ಹೇಳಿ.

ಆದರೆ, ನಿಮ್ಮ ಹದಿಹರೆಯದ ಪ್ರೇಮ ಅಲ್ಲ ತೆವಲಿನ ಫಲಿತಾಂಶವೆಂಬಂತೆ ನಡು ಬೀದಿಯಲ್ಲೊಂದು ಮುಗ್ಧ ಜೀವ ಕಣ್ಣೀರಿಡುತ್ತಿದೆ ಎಂಬುದನ್ನು ನಿರ್ದೇಶಕ ರವೀನ್ ಎಷ್ಟು ಸರಳವಾಗಿ ಹೇಳಬೇಕೋ ಅಷ್ಟೇ ಭಾವುಕತೆಯ ನೆರಳಿನಲ್ಲಿ ಚಿತ್ರಕ್ಕೊಂದು ಮುಕ್ತಾಯ ಕಲ್ಪಿಸುತ್ತಾರೆ. ಈ ಮುಕ್ತಾಯವೇ ನೋಡುಗನ ಮನಸ್ಸಿನ ಕಣ್ಣು ತೆರೆಸುತ್ತದೆ.

ರೈಲ್ವೆ ಪ್ಲಾಟ್ ಫಾರಂನಲ್ಲೋ, ಬಸ್ ನಿಲ್ದಾಣದಲ್ಲೋ, ರಸ್ತೆ ಸಿಗ್ನಲ್‌ಗಳಲ್ಲೋ ಅಮಾಯಕವಾಗಿ ಭಿಕ್ಷೆಗಾಗಿ ಚಾಚುವ ಕೈಗಳು, ಅನಾಥ ಶಿಶು ಕೇಂದ್ರಗಳಲ್ಲಿ ಕಾಣುವ ದಿಕ್ಕಿಲ್ಲದ ಮಕ್ಕಳಿಗೂ ಈ ಚಿತ್ರಕ್ಕೂ ಎಂಥ ಸಂಬಂಧವಿದೆ ಎನ್ನುವ ಕುತೂಹಲದ ಮೇಲೆಯೇ ಇಡೀ ಸಿನಿಮಾ ನಿಂತಿದೆ.

ಹೀಗಾಗಿಯೇ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿರುವ ಬರುವ ಮೂರು ನಿಮಿಷದ ಹಾಡು, ಅದರ ಜತೆಗಿನ ದೃಶ್ಯಗಳನ್ನು ನೋಡಿದರೆ ಬದುಕು ಎಷ್ಟು ಕ್ರೂರ, ಹದಿಹರೆಯದಲ್ಲಿ ಪ್ರೀತಿ- ಪ್ರೇಮದ ಹೆಸರಿನಲ್ಲಿ ಹುಟ್ಟಿಕೊಳ್ಳುವ ಆಕರ್ಷಣೆ ಎಷ್ಟು ಚಿಕ್ಕದು ಎಂಬುದು ಅರ್ಥವಾಗುತ್ತದೆ. ಹಾಗೆ ನೋಡಿದರೆ ಇದು ಗೊತ್ತಿರುವ ಕತೆಯೇ. ಆದರೆ, ಗೊತ್ತಿರುವ ಟೀನೇಜ್ ಪ್ರೇಮ ಕತೆಯ ಮತ್ತೊಂದು ಮುಖವನ್ನು ತೆರೆದಿಡುವ ಮೂಲಕ ನಿರ್ದೇಶಕ ಜಾಣ್ಮೆ ಮಾತ್ರವಲ್ಲ, ಮನುಷ್ಯತ್ವದ ಅಡಿಪಾಯಕ್ಕೆ ಕಾಳಜಿಯ ಕಲ್ಲು ಜೋಡಿಸುತ್ತಾರೆ.

ಜತೆಗೆ ‘ನೀ ಯಾರ ಮನೆಯಂಗಳದ ಕೂಸೋ’ ಎಂದು ಅನಾಥ ಮಕ್ಕನ್ನು ನೋಡಿ ಮರುಗುವ ಪ್ರತಿಯೊಬ್ಬ ಮನಸ್ಸಿನ ಬಾಗಿಲು ತೆರೆಯುತ್ತಾರೆ. ಮೊದಲ ಭಾಗದಲ್ಲಿ ಒಂದು ರೀತಿಯ ಕತೆಯನ್ನು ಹೇಳುತ್ತಲೇ ವಿರಾಮದ ನಂತರ ಕತೆಯ ಅಳಕ್ಕೆ ಇಳಿಯುತ್ತಾರೆ ನಿರ್ದೇಶಕರು. ಪ್ರೇಕ್ಷಕ ಕೂಡ ನಿರ್ದೇಶಕನ ಬೆನ್ನ ಹಿಂದೆ ಹೆಜ್ಜೆ ಹಾಕುತ್ತಾನೆ. ಇಲ್ಲಿ ಪ್ರೇಮಿಗಳು, ಅವರ ದಾರಿ, ಅವರ ಕನಸುಗಳು, ಪ್ರೇಮದ ಪರಿಯನ್ನು ಮಾತ್ರ ಹೇಳಿಲ್ಲ.

ಸರಿ ದಾರಿಯಲ್ಲಿ ಹೋಗಿ ಎನ್ನುವ ಪೋಷಕರ ಕಣ್ಣು ತಪ್ಪಿಸಿ ದಾರಿ ತಪ್ಪುವ ಮಕ್ಕಳಿಂದ ಹೆತ್ತವರ ಕರಳು ಕಣ್ಮೀರಿಡುವುದನ್ನು ಯಾವ ಭೋದನೆ, ಪ್ರವಚನೆಗಳಿಲ್ಲದೆ ತೋರಿಸಿರುವುದು ಚಿತ್ರದ ನಿಜವಾದ ಶಕ್ತಿ.
 ಪ್ರಬುದ್ಧ ನಟನೆ, ಅದ್ಭುತ ಸಂಭಾಷಣೆ ಇರಬೇಕಿತ್ತು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಚಿತ್ರದ ನಾಯಕ ಪ್ರಖ್ಯಾತ್ ಪರಮೇಶ್ ಹಾಗೂ ನಾಯಕಿ ಐಶಾನಿ ಶೆಟ್ಟಿ ಅವರ ನಟನೆ ವಿಚಾರಕ್ಕೆ ಬಂದರೆ ಕಾಲೇಜು ಕಾರಿಡಾರ್ ಪ್ರೇಮ ಕತೆಯ ಹಲವು ಜೋಡಿಗಳನ್ನು ನೆನಪಿಸುತ್ತಾರೆ.

ನಟನೆಗಿಂತ ಅವರ ಪಾತ್ರಗಳು ಕತೆಗೆ ಪೂರಕವಾಗಿವೆ. ಹೆಣ್ಣು ಹೆತ್ತ ತಂದೆಯ ಪಾತ್ರದಲ್ಲಿ ಅಚ್ಯುತ್ ಕುಮಾರ್‌ಗಿಂತ ಉತ್ತಮ ಆಯ್ಕೆ ಇಲ್ಲ. ತುಳಸಿ ಶಿವಮಣಿ ತಾಯಿ ಪಾತ್ರಕ್ಕೆ ಪರಮಾಪ್ತವಾಗುತ್ತಾರೆ. ಮರ್ಯಾದೆ, ಆಸ್ತಿ, ಜಾತಿ ಗೋಡೆಗಳಿಗೆ ಅಂಜುತ್ತಲೇ ಪ್ರೇಮಕ್ಕೆ ಖಳನಾಯಕನಾಗುವ ಶ್ರೀನಿವಾಸ ಪ್ರಭು, ಅರುಣಾ ಬಾಲರಾಜ್, ಉದಯ್ ಕೆ ಮೆಹ್ತ ಎಲ್ಲರು ನೆನಪಿನಲ್ಲಿ ಇಳಿಯುತ್ತಾರೆ. ಚಿಕ್ಕಣ್ಣ ಅವರದ್ದು ಎಂದಿನಂತೆ ನಗಿಸುವ ಕೆಲಸ. ಚಿತ್ರದ ಛಾಯಾಗ್ರಾಹಕ ಯೋಗಿ ಕ್ಲೈಮ್ಯಾಕ್ಸ್ ನಲ್ಲಿ ಹೀರೋ ಎನಿಸಿಕೊಳ್ಳುತ್ತಾರೆ. 

-ಆರ್. ಕೇಶವಮೂರ್ತಿ 

ಚಿತ್ರ: ನಡುವೆ ಅಂತರವಿರಲಿ
ತಾರಾಗಣ: ಪ್ರಖ್ಯಾತ್ ಪರಮೇಶ್, ಐಶಾನಿ ಶೆಟ್ಟಿ, ರಕ್ಷಿತ್
ಕುಮಾರ್, ಅಚ್ಯುತ್ ಕುಮಾರ್, ಶ್ರೀನಿವಾಸ ಪ್ರಭು, ಚಿಕ್ಕಣ್ಣ
ನಿರ್ದೇಶನ: ಜಿ ಕೆ ರವೀನ್
ನಿರ್ಮಾಣ: ನಾಗರಾಜು
ರೇಟಿಂಗ್: ****

click me!