ಚಿತ್ರ ವಿಮರ್ಶೆ: ಅಂಬಿ ನಿಂಗೆ ವಯಸ್ಸಾಯ್ತೋ

By Web Desk  |  First Published Sep 28, 2018, 10:54 AM IST

ಬಹುನಿರೀಕ್ಷಿತ ಚಿತ್ರ ’ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ಬಿಡುಗಡೆಯಾಗಿದೆ. ಅಂಬರೀಶ್, ಕಿಚ್ಚ ಸುದೀಪ್ ಕಾಂಬಿನೇಶನ್‌ನ ವಿಭಿನ್ನ ಚಿತ್ರವಿದು. ಹೇಗಿದೆ ಈ ಚಿತ್ರ? ಇಲ್ಲಿದೆ ಚಿತ್ರ ವಿಮರ್ಶೆ. 


ಮಾತಿನ ಗಮ್ಮತ್ತು ಹಾಗೆಯೇ ಇದೆ, ವಯಸ್ಸು ಮಾತ್ರ ಸ್ವಲ್ಪ ಜಾಸ್ತಿಯೇ ಆಗಿದೆ...! ಅಂಬಿ ರೂಪದಲ್ಲಿ ಅಂಬರೀಶ್ ಅವರನ್ನು ತೆರೆ ಮೇಲೆ ನೋಡಿದ ಪ್ರೇಕ್ಷಕರಿಗೆ ಹೀಗೊಂದು ಪ್ರಶ್ನೆ ಕಾಡುವ ಮುನ್ನವೇ ಚಿತ್ರದ ನಾಯಕಿ ನಂದಿನಿಯೇ ಅದಕ್ಕೊಂದು ಮಾತಿನ ರೂಪ ನೀಡುತ್ತಾಳೆ.

ಇಬ್ಬರು ದೂರವಾಗಿ ಬಹುವರ್ಷಗಳ ನಂತರ ಭೇಟಿ ಆದಾಗ ನಂದಿನಿಗೂ ಅಂಬಿ ರೂಪ ಹೊಸದಾಗಿ ಕಾಣುತ್ತದೆ. ‘ನಿನ್ನ ಡೈಲಾಗ್ ವಾಯ್ಸ್ ಹಾಗೇ ಇದೆ, ಆದ್ರೆ ವಯಸ್ಸು ಮಾತ್ರ ಜಾಸ್ತಿ ಎನಿಸುತ್ತಿದೆ’ ಎಂದು ಒಂದು ಕಾಲದ ತನ್ನ ಪ್ರಿಯಕರನನ್ನು ವರ್ಣಿಸಿ, ಮೆಚ್ಚಿಕೊಳ್ಳುತ್ತಾಳೆ.

Tap to resize

Latest Videos

ಈ ಮಾತು ಚಿತ್ರದಲ್ಲಿನ ಅಂಬಿ ಅಭಿನಯಕ್ಕೂ ಅನ್ವಯ ಆಗುತ್ತೆ. ಆ ಮೂಲಕವೇ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತೆ, ತುಸು ಕಷ್ಟವೂ ಆಗುತ್ತದೆ. ಆ ಇಷ್ಟ -ಕಷ್ಟಗಳ ನಡುವೆ ಸಿನಿಮಾ ಪಕ್ಕಾ ಕೌಟುಂಬಿಕ ಚಿತ್ರವಾಗಿ ನೋಡುಗರಿಗೆ ಆಪ್ತವಾಗುತ್ತದೆ. ಅಪ್ಪ-ಮಗನ ಸಂಬಂಧಗಳ ತಾಕಲಾಟದಲ್ಲಿ ಪ್ರತಿಯೊಬ್ಬರ ಮನ ಕಲುಕುವಂತೆ ಮಾಡುತ್ತದೆ.

ಇದೊಂದು ರಿಮೇಕ್ ಸಿನಿಮಾ. ತಮಿಳಿನ ‘ಪವರ್ ಪಾಂಡಿ’ ಯ ಮೂಲ ಕತೆಯಿದು. ಮೂಲ ಸಿನಿಮಾ ನೋಡಿದವರಿಗೆ ಎರಡನ್ನೂ ತಾಳೆ ಹಾಕುವ ಅಭ್ಯಾಸ ಮಾಮೂಲು. ಹಾಗೆ ನೋಡಿದವರಿಗೆ, ಅಂಬಿ ಆಪ್ತವಾಗುವುದು ಸ್ವಲ್ಪ ಕಷ್ಟವೇ. ಹಾಗಂತ, ಭಟ್ಟಿ ಇಳಿಸಿದ ಕತೆ ಇದಲ್ಲ. ನೆಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆಯ ದೃಶ್ಯರೂಪವೂ ಇಲ್ಲಿವೆ.

ಅವೆಲ್ಲವೂ ಅಂಬಿ ಪಾತ್ರದ ಮೂಲಕ, ಅಜಯ್ ಪಾತ್ರದ ಮೂಲಕ, ಜತೆಗೆ ನಂದಿನಿ ರೂಪದಲ್ಲೂ ಹೊಸತಾಗಿ ಕಾಣಿಸುತ್ತವೆ. ಆ ಹೊಸತನವು ಮೂಲ ಸಿನಿಮಾ ನೋಡದವರಿಗೆ ರಂಜನೀಯ ಸರಕು. ಆ ಮಟ್ಟಿಗೆ ನಿರ್ದೇಶಕರ ಶ್ರಮ ಇಲ್ಲಿ ಸಾರ್ಥಕ.  ಶೀರ್ಷಿಕೆಗೆ ತಕ್ಕಂತೆ ಇಡೀ ಸಿನಿಮಾ ಅಂಬಿಗೆ ಸಂಬಂಧಿಸಿದ್ದು.

ಬಹುದಿನಗಳ ನಂತರ ನಟ ಅಂಬರೀಶ್ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ ಚಿತ್ರ ಅನ್ನೋದು ಅದರಲ್ಲಿ ಮೊದಲು. ಆನಂತರ ಸುದೀಪ್, ಹಿರಿಯ ನಟಿ ಸುಹಾಸಿನಿ, ಶ್ರುತಿ ಹರಿಹರನ್ ಮುಂತಾದವರು ಉಳಿದ ಆಕರ್ಷಣೆಗೆ ಕಾರಣ. ಪ್ರತಿಯೊಬ್ಬರ ಪಾತ್ರಗಳು ಇಲ್ಲಿ ಅಚ್ಚುಕಟ್ಟಾಗಿಯೇ ಮೂಡಿಬಂದಿವೆ. ಚಿತ್ರದ ಬಹುಭಾಗದಲ್ಲಿ ಅಂಬರೀಶ್ ಇದ್ದಾರೆ. ದ್ವಿತೀಯಾರ್ಧಲ್ಲಿನ ಒಂದು ಫ್ಲ್ಯಾಷ್ ಬ್ಯಾಕ್‌ನಲ್ಲಿ ಸುದೀಪ್ ಬಂದು ಹೋಗುತ್ತಾರೆ.

ಅವರಿಗೆ ಇಲ್ಲಿ ಶ್ರುತಿ ಹರಿಹರನ್ ಜೋಡಿ. ಹೆಚ್ಚೆಂದರೆ ೧೫ ನಿಮಿಷಗಳು ಅವರಿಬ್ಬರಿಗೂ ಸಿಕ್ಕ ಜಾಗ. ಅಷ್ಟರಲ್ಲೇ ಪ್ರೇಕ್ಷಕರನ್ನು ಭರಪೂರ ರಂಜಿಸುತ್ತಾರೆ. ಅಂಬಿ ಪುತ್ರನಾಗಿ ಚಿತ್ರದ ಬಹುಭಾಗ ಕಾಣಿಸಿಕೊಂಡಿದ್ದು ದಿಲೀಪ್ ರಾಜ್. ಅವರಿಬ್ಬರ ನಡುವಿನ ಬಾಂಧವ್ಯದ ತಾಕಲಾಟವೇ ಈ ಚಿತ್ರದ ಒಟ್ಟು ತಿರುಳು. ಅಜಯ್ ಪಾತ್ರದಲ್ಲಿ ದಿಲೀಪ್ ಅಭಿನಯವೂ ಪಕ್ವವಾಗಿದೆ.

ವಯಸ್ಸಿಗೆ ತಕ್ಕಂತೆ ಅಂಬರೀಷ್ ಅವರದ್ದು ಮಾಗಿದ ನಟನೆ. ಹಾಡುಗಳಲ್ಲಿ ಕುಣಿಯುವುದಕ್ಕೆ, ಆ್ಯಕ್ಷನ್ ಸನ್ನಿವೇಶಗಳಲ್ಲಿ ಘರ್ಜಿಸುವುದಕ್ಕೆ ಅವರ ವಯಸ್ಸಿನ ಸುಸ್ತು ಅಡ್ಡ ಬಂದಿದೆ. ಆದರೂ, ಅಭಿನಯದಲ್ಲಿ ಹಳೇ ಖದರ್, ಗತ್ತು, ಗಮ್ಮತ್ತು ಎಲ್ಲವೂ ಇವೆ. ಹಾಗಾಗಿಯೇ ಅಂಬರೀಶ್ ತೆರೆ ಮೇಲೆ ಬಂದಾಗೆಲ್ಲ ಪ್ರೇಕ್ಷಕರಿಂದ ಶಿಳ್ಳೇ, ಕೇಕೆಗಳು ಕೇಳುತ್ತವೆ. ಇದೊಂದು ಕೌಟುಂಬಿಕ ಚಿತ್ರ.

ಕಾಲ ಬದಲಾದಂತೆ ಮನುಷ್ಯ ಸಂಬಂಧಗಳು ಬದಲಾಗಿವೆ. ಅಪ್ಪ-ಮಕ್ಕಳ ನಡುವಿನ ಬಾಂಧವ್ಯವೇ ಸಡಿಲಗೊಂಡಿವೆ. ಅದೇ ಕಾರಣಕ್ಕೆ ದೂರವಾದ ಅಪ್ಪ-ಮಗ ಮತ್ತೆ ಒಂದಾಗುವ ಸಂದರ್ಭದಲ್ಲಿ ನೋಡುಗನ ಕರುಳು ಹಿಂಡುತ್ತದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಹಾಡುಗಳಿಗಿಂತ ಇಲ್ಲಿ ಕತೆಯೇ ಹೆಚ್ಚು ಪ್ರಭಾವಿಸುತ್ತದೆ.

ಹಾಡುಗಳು ಹೇಗೆ ಬಂದವು, ಹೇಗೆ ಹೋದವು ಅನ್ನುವುದೇ ಗೊತ್ತಾಗುವುದಿಲ್ಲ. ಸಂಗೀತದಲ್ಲಿ ಅಬ್ಬರವಿದೆ. ಜೇಕಬ್ ಛಾಯಾಗ್ರಹಣ ಮುದ್ದಾಗಿದೆ. ಒಟ್ಟಿನಲ್ಲಿ ರಿಮೇಕ್ ದಾಟಿ, ಈ ಸಿನಿಮಾ ಪ್ರಮುಖವಾಗಿ ಅಂಬರೀಶ್ ಕಾರಣಕ್ಕೆ, ಸುದೀಪ್ ಎಂಟ್ರಿಯೊಂದಿಗೆ ಭರಪೂರ ರಂಜಿಸುತ್ತದೆ. 

-ದೇಶಾದ್ರಿ ಹೊಸ್ಮನೆ 

ಚಿತ್ರ: ಅಂಬಿ ನಿಂಗ್ ವಯಸ್ಸಾಯ್ತೋ
ತಾರಾಗಣ : ಅಂಬರೀಶ್, ಸುಹಾಸಿನಿ,
ಸುದೀಪ್, ಶ್ರುತಿ ಹರಿಹರನ್, ದಿಲೀಪ್
ರಾಜ್, ಜೈ ಜಗದೀಶ್
ನಿರ್ದೇಶನ: ಗುರುದತ್ತ್ ಗಾಣಿಗ
ನಿರ್ಮಾಪಕ: ಜಾಕ್ ಮಂಜು

click me!