ಚಿತ್ರ ವಿಮರ್ಶೆ : ಇರುದೆಲ್ಲವ ಬಿಟ್ಟು

By Web Desk  |  First Published Sep 22, 2018, 11:23 AM IST

ಈ ವಾರ ’ಇರುದೆಲ್ಲವ ಬಿಟ್ಟು’  ಚಿತ್ರ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ ಓದಿ.  


ಬೆಂಗಳೂರು (ಸೆ. 22): ತಣ್ಣನೆಯ ರಾತ್ರಿ. ನಿಶ್ಯಬ್ದ ವಾತಾವರಣ. ಆಕೆ ತನ್ನ ಪುಟಾಣಿ ಮಗನೊಂದಿಗೆ ನಿದ್ರೆಗೆ ಜಾರುವ ಹೊತ್ತಲ್ಲಿ ಮೌನವಾಗಿ ಕುಳಿತಿದ್ದಾಳೆ. ಯಾಕಮ್ಮ ಯೋಚಿಸುತ್ತಿದ್ದೀಯಾ? ನೋಡುಗನ ಕರುಳು ಹಿಂಡುವಂತೆ ಕೇಳಿ ಬರುತ್ತದೆ ಮಗನ ಪ್ರಶ್ನೆ.

ಇದುವರೆಗಿನ ಜೀವನದಲ್ಲಿ ಎಷ್ಟು ತಪ್ಪು ಮಾಡಿದ್ದೇನೆಂದು ಯೋಚಿಸುತ್ತಿದ್ದೇನೆ ಅಂತ ಆಕೆ ಉತ್ತರಿಸುತ್ತಾಳೆ. ಆಕೆಯ ಬದುಕಲ್ಲಿ ಆಗಿದ್ದೇನು ? ಕೆಲಸವೇ ಶ್ರೇಷ್ಟ ಎನ್ನುವ ಹುಚ್ಚು, ಜತೆಗೆ ತನಗನಿಸಿದ ಹಾಗೆ ಇರಬಹುದೆಂದು ಆಯ್ಕೆ ಮಾಡಿಕೊಂಡ ಲಿವ್ ಇನ್ ರಿಲೇಷನ್‌ಶಿಪ್ ಸಹವಾಸ !!

Tap to resize

Latest Videos

ಅಡಿಗರ ಕಾವ್ಯ ಸಾಲು ನೆನಪಾಗುವ ಹಾಗೆ ‘ಇರುವುದೆಲ್ಲವ ಬಿಟ್ಟು’ ಎನ್ನುವ ಶೀರ್ಷಿಕೆಯಲ್ಲಿ ನಿರ್ದೇಶಕ ಕಾಂತ ಕನ್ನಲ್ಲಿ ಇಲ್ಲಿ ಹೇಳ ಹೊರಟಿದ್ದೇ ಅದು. ಇರುವುದೆಲ್ಲವನ್ನು ಬಿಟ್ಟು ಇವತ್ತಿನ ತಲೆಮಾರು ಹೇಗೆಲ್ಲ ಇರದಿದ್ದನ್ನು ಪಡೆಯುವುದಕ್ಕೆ ಇರುವೆ ಬಿಟ್ಟುಕೊಳ್ಳುತ್ತದೆ, ಬೇಕೆಂದಾಗ ಹಣ ಉದುರಿಸುವ, ಬೇಕಾದಷ್ಟು ಸಂತೋಷಕ್ಕೆ ಕಾರಣವಾಗುವ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳೇ ಮುಖ್ಯವೆಂದು ಭಾವಿಸುತ್ತದೆ.

ನಗರ ಜೀವನವೇ ಗೊತ್ತಿಲ್ಲದೆ ಹಳ್ಳಿಯೇ ನಿಜವಾದ ಬದುಕು ಎಂದು ಕೊಂಡ ಗಂಡ-ಹೆಂಡತಿ. ಆಗಾಧವಾಗಿ ಪ್ರೀತಿಸುವ ತಂದೆ-ತಾಯಿಯನ್ನು ಬಿಟ್ಟು ನಗರ ಸೇರಿ ದುಡಿಮೆಯೇ ಜೀವನ ಅಂತಾ ನಂಬಿದ ಮಗಳು. ನಗರಜೀವನದಲ್ಲೂ ಭಾವನಾತ್ಮಕವಾಗಿ ಬದುಕುವ ಬೆರಗು ಗಣ್ಣಿನ ಹುಡುಗ, ಮನಸೆಳೆದ ಯುವತಿಯನ್ನೇ ಪ್ರೀತಿಸಿ ತನ್ನವಳಾಗಿಸಿಕೊಳ್ಳಬೇಕೆಂದು ತಾನಿದ್ದ ಕಂಪನಿಯನ್ನೇ ಬಿಟ್ಟು ಬಂದ ಮತ್ತೊಬ್ಬ ವಿದ್ಯಾವಂತ, ಅವರ ನಡುವೆ ಸಂಬಂಧಗಳ ಬೆಸುಗೆಗೆ ದ್ರವ್ಯವಾಗುವ ಪುಟಾಣಿ ಹುಡುಗ...

ಈ ಕತೆಯ ಸುತ್ತಣ ಪಾತ್ರಗಳು. ನಿರ್ದೇಶಕ ಕಾಂತ ಕನ್ನಲ್ಲಿ ನಿರ್ದೇಶಕ ಶಶಾಂಕ್ ಗರಡಿಯಲ್ಲಿ ಬೆಳೆದುಬಂದವರಾದ್ದರಿಂದಲೋ ಏನೋ ಮನುಷ್ಯ ಸಂಬಂಧಗಳು, ಅದರೊಂದಿಗೆ ಬೆಸೆದುಕೊಂಡ ಭಾವುಕತೆಯನ್ನು ತಣ್ಣಗೆ ತೆರೆದಿಡುವಲ್ಲಿ ಯಶಸ್ವಿ ಆಗಿದ್ದಾರೆ. ದೃಶ್ಯಕ್ಕೆ ಬೇಕಾದಷ್ಟೇ ಮಾತು, ನಿಶಬ್ಧದಲ್ಲೇ ಭಾವುಕತೆ ತುಂಬಿಸಿಬಿಡುವ ನಾಜೂಕುತನ, ಹಾಡಿನ ಸಾಲುಗಳಲ್ಲೇ ರಸಿಕತೆ ತೋರಿಸುವ ಜಾಣ್ಮೆ, ಅದಕ್ಕೆ ಬಳಸಿಕೊಂಡ ಜಾಗಗಳಲ್ಲೂ ಹೃದಯ ತಟ್ಟುವಂತೆ ಮಾಡುವ ಕಸುಬುದಾರಿಕೆ ಅವರಿಗೆ ಗೊತ್ತಾಗಿದೆ.

ಹಾಡುಗಳಲ್ಲಿ ಶ್ರೀಧರ್ ಸಂಭ್ರಮ್ ಆಪ್ತವಾಗುವ ಹಾಗೆಯೇ ಛಾಯಾಗ್ರಹಣದ ಮೂಲಕ ವಿಲಿಯಂ ಕೂಡ ಭೇಷ್ ಎನಿಸಿಕೊಳ್ಳುತ್ತಾರೆ. ಮಹೇಶ್ ಸಂಭಾಷಣೆ ಇಡೀ ಚಿತ್ರಕ್ಕೆ ದೃಷ್ಟಿ ಬೊಟ್ಟು. ಅಭಿನಯಕ್ಕೆ ಬಂದರೆ ಶ್ರೀ ಮಹದೇವ್ ಇದರ ಹೈಲೈಟ್. ಅಭಿನಯ, ಡಾನ್ಸ್, ಅಂಗಿಕ ನೋಟ ಯಾವುದರಲ್ಲೂ ಹೊಸಬ ಅಂತೆನಿಸುವುದಿಲ್ಲ.

ಅಂತ್ಯದವರೆಗೂ ನೋಡುಗರ ಮನಸ್ಸನ್ನು ತಣ್ಣನೆ ಆಗಿ ಆವರಿಸಿಕೊಳ್ಳುತ್ತಾರೆ. ಇನ್ನು ನಟಿ ಮೇಘನಾರಾಜ್ ವೃತ್ತಿ ಬದುಕಿನ ಬಹುಮುಖ್ಯ ಚಿತ್ರವಿದು ಅನ್ನೋದು ನೋ ಡೌಟು. ಇಷ್ಟು ಒಳ್ಳೆಯ ಪಾತ್ರ, ಇಷ್ಟು ಚೆಂದದ ನಟನೆಯನ್ನು ಅವರಿಂದ ಈ ತನಕ ಕಂಡಿರಲಿಲ್ಲ. ತಿಲಕ್ ಶೇಖರ್‌ಗೆ ಸೊಗಸಾದ ಪಾತ್ರವೊಂದು ಇಲ್ಲಿ ಸಿಕ್ಕಿದೆ. ತಂದೆ ಪಾತ್ರದಲ್ಲಿ ಅಚ್ಯುತ್ ಕುಮಾರ್ ಪಾತ್ರವನ್ನೇ ಜೀವಿಸಿದ್ದಾರೆ. ಅರುಣಾ ಬಾಲರಾಜ್ ಕೂಡ. ಪುಟಾಣಿ ಅಭಿಷೇಕ್ ಅಭಿನಯಕ್ಕೂ ಪ್ರೇಕ್ಷಕರಿಂದ ಶಿಳ್ಳೇ ಕೇಕೆಗಳು ಬರುತ್ತವೆ.

ಚಿತ್ರ: ಇರುವುದೆಲ್ಲವ ಬಿಟ್ಟು...
ತಾರಾಗಣ: ಮೇಘನಾ ರಾಜ್, ತಿಲಕ್, ಶ್ರೀ ಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ,
ನಿರ್ದೇಶನ: ಕಾಂತ ಕನ್ನಲ್ಲಿ
ನಿರ್ಮಾಣ: ದೇವರಾಜ್
ರೇಟಿಂಗ್: ***

- ದೇಶಾದ್ರಿ ಹೊಸ್ಮನೆ  

click me!