ಈ ವಾರ ಮೇಸ್ತ್ರಿ ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಪ್ರೇಕ್ಷಕನಿಗೆ ಏನೆನಿಸುತ್ತದೆ? ಇಲ್ಲಿದೆ ಈ ಚಿತ್ರದ ವಿಮರ್ಶೆ.
ಬೆಂಗಳೂರು (ಸೆ. 01): ಒಂದು ಕಡೆ ತಾಯಿ ಸೆಂಟಿಮೆಂಟ್, ಮತ್ತೊಂದು ಕಡೆ ಲವ್ ಟಚ್. ಇದನ್ನು ಬಿಟ್ಟರೆ ಒಂದಷ್ಟು ಹೊಡಿ- ಬಡಿ. ಇವಿಷ್ಟನ್ನೂ ಇಟ್ಟುಕೊಂಡು ಕಟ್ಟಿರುವ ಚಿತ್ರ ಮೇಸ್ತ್ರಿ.
ಚಿತ್ರದ ಒನ್ ಲೈನ್ ಏನಪ್ಪಾ ಅಂದ್ರೆ, ಕಸ ಗುಡಿಸುವ ಹುಡುಗ ದೊಡ್ಡ ಶ್ರೀಮಂತರ ಮನೆ ಹುಡುಗಿಯನ್ನು ಪ್ರೀತಿ ಮಾಡಿದರೆ ಏನೆಲ್ಲಾ ಸಮಸ್ಯೆಗಳು ಸುತ್ತಿಕೊಳ್ಳುತ್ತವೆ, ಆ ಪ್ರೀತಿ ಎಷ್ಟು ಗಟ್ಟಿ, ಅದು ಕೊನೆಗೆ ಒಂದಾಗುತ್ತಾ ಎಂಬುದು. ಚಿತ್ರದ ನಾಯಕ, ನಿರ್ಮಾಪಕ ಆಗಿರುವ ಬಾಲಕೃಷ್ಣ ತಾವೊಂದು ಚಿತ್ರ ಮಾಡಬೇಕು ಎನ್ನುವ ತುಡಿತಕ್ಕೆ ಬಿದ್ದಷ್ಟೇ ಮೇಸ್ತ್ರಿಯಾಗಿದ್ದಾರೆ ಎಂದು ಮೊದಲ ದೃಶ್ಯ ನೋಡಿದ ಕೂಡಲೇ ಯಾರಾದರೂ ಅಂದಾಜಿಸಿಬಿಡಬಹುದು.
ಅಷ್ಟರ ಮಟ್ಟಿಗೆ ಅವರ ಅಭಿನಯವಿದೆ. ಈ ಮೇಸ್ತ್ರಿ ಹಾಗೋ ಹೀಗೋ ಒಂದು ಮನೆಕಟ್ಟುವ ಪ್ರಯತ್ನ ಮಾಡಿದ್ದಾರೆ ಬಿಟ್ಟರೆ, ಅದಕ್ಕೆ ಸುಂದರವಾದ ಫಿನಿಶಿಂಗ್ ನೀಡುವ ಕೆಲಸ ತೃಣಮಾತ್ರವೂ ಆಗಿಲ್ಲ. ಎಲ್ಲೆಲ್ಲೋ ಸಾಗುವ ಚಿತ್ರಕತೆ, ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವಷ್ಟ ಮಟ್ಟಿಗೆ ಮೂಡಿ ಬಂದಿರುವ ದೀರ್ಘ ದೃಶ್ಯಗಳು ನೋಡುಗನನ್ನು ಸುಸ್ತು ಮಾಡುತ್ತವೆ.
ಒಂದು ಪಾಳು ಬಿದ್ದಂತೆ ಇರುವ ಮನೆ ನಾಯಕ ಶಿವು ಬಡತನವನ್ನು ತೋರಿಸಲು ಶಕ್ತವಾಗಿದ್ದರೂ ಚಿತ್ರದುದ್ದಕ್ಕೂ ಅಲ್ಲೇ ತಿರುಗುವ ಕ್ಯಾಮರಾದಿಂದ ಬೋರೋ ಬೋರು.
ಇದರ ಜೊತೆಗೆ ಸೂಕ್ಷ್ಮಗಳ ಕೊರತೆಯಿಂದ ಎಲ್ಲವೂ ಕಣ್ಣುಮುಚ್ಚಿ ಕಣ್ಣು ಬಿಡುವುದರೊಳಗೆ ಪ್ರೀತಿಯಾಗುತ್ತೆ. ಒಂದು ಚಿಕ್ಕ ಉದಾಹರಣೆ ನೋಡುವುದಾದರೆ, ನಡುರಾತ್ರಿಯಲ್ಲಿ ನಾಯಕ ಜೊತೆ ಖಾಲಿ ರಸ್ತೆಯಲ್ಲಿ ಸುತ್ತಾಡುವ ನಾಯಕಿ, ಅವಳ ಹೆಸರನ್ನು ನಾಯಕನ ಕೈಯಲ್ಲಿ ದಪ್ಪ ಅಕ್ಷರಗಳಲ್ಲಿ ಅಚ್ಚೆ ಹಾಕಿಸುತ್ತಾಳೆ. ಇಬ್ಬರೂ ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದಾರೆ ಎನ್ನುವಷ್ಟರಲ್ಲಿಯೇ ಅದರ ನಾಳೆಗೆ ನಾಯಕ ಪ್ರೀತಿ ಹೇಳಿಕೊಳ್ಳಲು ಒದ್ದಾಡುವ ಪರಿ ಇದೇನಪ್ಪಾ ಇದು ಎನ್ನುವಂತೆ ಮಾಡುತ್ತದೆ.
ಪ್ರೀತಿಸಿದ ಹುಡುಗಿಯೇ ಕೊಲ್ಲುವುದಕ್ಕೆ ನಿಲ್ಲುವುದು, ಕೊಲೆಯಾಗುವ ತಾಯಿ ಚಿತ್ರದ ಎರಡು ಟ್ವಿಸ್ಟ್‌ಗಳು. ಇವೂ ಕೂಡ ಗಟ್ಟಿಯಲ್ಲ. ಲೋಕಲ್ ರೌಡಿಸಂ ತೋರಿಸುವ ಭರದಲ್ಲಿ, ಕತೆಯಲ್ಲಿ ಮತ್ತಷ್ಟು ವಿಸ್ತರಿಸಬೇಕು ಎನ್ನುವ ನಿಟ್ಟಿನಲ್ಲಿ ಬೇಡವಾದ ಕಸವನ್ನೆಲ್ಲಾ ತುಂಬಿದ್ದಾರೆ ನಿರ್ದೇಶಕ ರಾಜ ಕಿರಣ್.
ಚಿತ್ರದಲ್ಲಿ ನಾಯಕ ಮಾಡುವುದು ಕಸ ಗುಡಿಸುವ ಕೆಲಸ. ಅದರಂತೆಯೇ ಚಿತ್ರದಲ್ಲಿ ಬೇಡವಾದ ದೃಶ್ಯಗಳು, ಪಾತ್ರಗಳನ್ನು ಗುಡಿಸುವ ಕೆಲಸವನ್ನೂ ಮಾಡಬಹುದಾಗಿತ್ತು. ಆದರೆ ಅದು ಸಾಧ್ಯವಾಗದೇ ಇಡೀ ಚಿತ್ರ ಒಂದೇ ನೆಗೆತಕ್ಕೆ ಎಲ್ಲಿಂದ ಎಲ್ಲಿಗೋ ಸಾಗಿಬಿಡುತ್ತೆ.
ಇಲ್ಲಿ ಗಮನಿಸಲೇಬೇಕಾದ ಅಂಶಗಳು ಇಲ್ಲವೇ ಇಲ್ಲವಾ ಎಂದು ಕೇಳಿಕೊಂಡರೆ ಕೆಲವು ಇವೆ ಎಂದು ಹೇಳಬಹುದು. ನಾಯಕನ ತಾಯಿಯ ನಟನೆ, ಪ್ರೀತಿಗೆ ಬಡತನ, ಸಿರಿತನದ ಬೇಧವಿಲ್ಲ ಎನ್ನುವ ಸಾರಾಂಶ, ಲೋಕಲ್ ರೌಡಿಸಂನ ಅನಾವರಣಗಳೆಲ್ಲವೂ ಇವೆ. ಆದರೆ ಚಿತ್ರ ಕೆಲವು ವರ್ಷಗಳ ಹಿಂದೆಯೇ ಸೆಟ್ಟೇರಿದ್ದು, ಸಾಕಷ್ಟು ಏರುಪೇರುಗಳನ್ನು ದಾಟಿ, ಇದೀಗ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು ತೆರೆಗೆ ಬಂದಿರುವುದರಿಂದ ಮೊದಲೇ ಚಿತ್ರೀಕರಿಸಿಕೊಂಡಿದ್ದ ಹಾಡುಗಳು ಯಾವುದೋ ಹಳೆ ಫಿಲ್ಮ್ ಸಾಂಗ್ ನೋಡಿದಂತೆ ಫೀಲ್ ನೀಡುತ್ತವೆ.
ಸಂಗೀತ, ಛಾಯಾಗ್ರಹಣ, ಸಂಭಾಷಣೆ ಎಲ್ಲವೂ ಸಾಧಾರಣ ಮಟ್ಟದಲ್ಲೇ ಅಡಗಿ ಮನಸಲ್ಲಿ ಉಳಿಯದೇ ಸ್ಪರ್ಧೆಗೆ ಬಿದ್ದವರ ಹಾಗೆ ಬೇಗ ಮಾಸಿಹೋಗುತ್ತದೆ.
ಚಿತ್ರ: ಮೇಸ್ತ್ರಿ
ತಾರಾಗಣ: ಬಾಲಕೃಷ್ಣ, ರಾಣಿ, ಸಂಗೀತ ಶೆಟ್ಟಿ, ಚಂಬನ್
ನಿರ್ದೇಶನ: ರಾಜ ಕಿರಣ್
ನಿರ್ಮಾಪಕ: ಬಾಲಕೃಷ್ಣ
ಸಂಗೀತ: ಜಿ.ಆರ್. ಶಂಕರ್
ಛಾಯಾಗ್ರಹಣ: ನಿರಂಜನ ಬಾಬು,
ರೇಟಿಂಗ್: **
-ವಿಮರ್ಶೆ : ಕೆಂಡಪ್ರದಿ