’ಉದ್ದಿಶ್ಯ’ ಉದ್ದೇಶ ಚೆನ್ನಾಗಿದೆ!

By Web Desk  |  First Published Sep 1, 2018, 1:18 PM IST

ಈ ವಾರ ಉದ್ದಿಶ್ಯ ಸಿನಿಮಾ ಬಿಡುಗಡೆಯಾಗಿದೆ. ನಿರ್ದೇಶಕರು ಹಾಲಿವುಡ್ ಮಾದರಿಯ ಹಾರರ್ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದಾರೆ. ಅಂಥಾ ಧೈರ್ಯ ತೋರಿಸಿರುವುದೇ ಅವರ ಹೆಗ್ಗಳಿಕೆ. ಹೇಳಿಕೇಳಿ ಇದು
ಹಾಲಿವುಡ್ ಸ್ಕ್ರಿಪ್ಟ್.  ಹೇಗಿದೆ ಈ ಸಿನಿಮಾ? ಇಲ್ಲಿದೆ ಅದರ ರಿವ್ಯೂ. 


ಬೆಂಗಳೂರು (ಸೆ. 01): ನಿರ್ದೇಶಕರು ಹಾಲಿವುಡ್ ಮಾದರಿಯ ಹಾರರ್ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದಾರೆ. ಅಂಥಾ ಧೈರ್ಯ ತೋರಿಸಿರುವುದೇ ಅವರ ಹೆಗ್ಗಳಿಕೆ. ಹೇಳಿಕೇಳಿ ಇದು ಹಾಲಿವುಡ್ ಸ್ಕ್ರಿಪ್ಟ್.

ಹಾಲಿವುಡ್ ಸಿನಿಮಾಗಳಿಂದ ಪ್ರಭಾವಿತರಾದ, ಅಮೆರಿಕಾ ರಿಟರ್ನ್ಡ್ ಹೇಮಂತ್ ಕೃಷ್ಣಪ್ಪ ಆ ಸ್ಕ್ರಿಪ್ಟ್ ಅನ್ನು ಕನ್ನಡಕ್ಕೆ ಹೇಗೆ ಬೇಕೋ ಹಾಗೆ ಬದಲಿಸಿಕೊಂಡು ಸಿನಿಮಾ ಮಾಡಿದ್ದಾರೆ. ಹೀಗಾಗಿ ಅಲ್ಲಿನ
ಸಂಸ್ಕೃತಿಯಿಂದ ಚಿತ್ರ ಇಲ್ಲಿನ ಸಂಸ್ಕೃತಿಗೆ ಧುಮುಕಿದೆ. ಅಲ್ಲಿನ ಹಾರರ್ ಕತೆ ಇಲ್ಲಿನ ಕೊಳ್ಳೆಗಾಲಕ್ಕೆ ಸ್ಥಳಾಂತರಗೊಂಡಿದೆ. ಈ ಸ್ಥಳ ಪಲ್ಲಟ ಮತ್ತು ಸ್ಥಾನ ಪಲ್ಲಟದಿಂದ ಮೂಲ ಚಿತ್ರಕತೆಯ ಹಾದಿ ಬದಲಾಗಿದೆ.

Tap to resize

Latest Videos

ಮೈಸೂರು ಮೃಗಾಲಯದಲ್ಲಿ ನಡೆದ ಒಂದು ಅನಾಹುತಕಾರಿ ಘಟನೆಯ ತನಿಖೆ ಮಾಡಲು ಪೊಲೀಸ್ ಅಧಿಕಾರಿ ಹೇಮಂತ್ ಎಂಟ್ರಿ ಕೊಡುತ್ತಾರೆ. ಈ ತನಿಖೆಗೆ ತಿರುವು ನೀಡುವುದು ಪೊಲೀಸ್ ಇನ್‌ಸ್ಪೆಕ್ಟರ್ ಅನುರಾಧ. ಫೈನಲ್ ಡೆಸ್ಟಿನೇಷನ್ ಸಿನಿಮಾ ನೆನಪಿಸುವಂತೆ ಅನುರಾಧ ಅವರಿಗೆ ಹಿಂದಿನ ರಾತ್ರಿ ಬಿದ್ದ ಕನಸು ಮಾರನೇ ದಿನ ನಿಜವಾಗಿರುತ್ತದೆ. ಮೂರು ಸಾವುಗಳ ನಂತರ ಈ ಕತೆ ಮತ್ತೊಂದು ದಿಕ್ಕಿಗೆ ಹೊರಳುತ್ತದೆ.

ಚಿತ್ರದ ಕಥೆ ಏನೂ ತುಂಬಾ ಹೊಸದಲ್ಲ. ಆದರೆ ಅದನ್ನು ನಿರ್ವಹಿಸಿರುವದ ರೀತಿ ಹೊಸದು. ಅಮರನಾಗಬೇಕು ಎನ್ನುವ ಒಬ್ಬ ಮಾಂತ್ರಿಕ ನಮ್ಮ ಚಂದಮಾಮ ಕತೆಗಳಲ್ಲಿ ಬರುತ್ತಿದ್ದ. ಅಂಥದ್ದೇ ಒಬ್ಬ ಆಧುನಿಕ ಕಾಲದಲ್ಲಿ ಬಂದರೆ ಏನಾಗಬಹುದು ಅನ್ನುವ ಯೋಚನೆ ಇಲ್ಲಿದೆ. ಅದಕ್ಕೆ ತಕ್ಕಂತೆ ಕತೆ ಹೆಣೆಯಲಾಗಿದೆ. ಇದು ಅಮೆರಿಕಾದ ರಾಬರ್ಟಾ ಗ್ರಿಫಿನ್ ರಚಿಸಿದ ಕಥೆಯಾದ್ದರಿಂದ ಅಲ್ಲಿನ ಹಿನ್ನೆಲೆ ಬೇರೆ. ಹಾಗಾಗಿ
ಚಿತ್ರಕತೆಯನ್ನು ಕನ್ನಡಕ್ಕೆ ತಂದ ರೀತಿ ಸ್ವಲ್ಪ ಕಿರಿಕಿರಿ ಮಾಡುತ್ತದೆ.

ಕೆಲವೊಂದು ಕಡೆ ಪಾತ್ರಗಳಿಗೆ ಸ್ವಲ್ಪ ಅನ್ಯಾಯ ಮಾಡಿದಂತೆ ಅನ್ನಿಸುತ್ತದೆ. ಆ ದೇಶದಲ್ಲಿ ಕುಟುಂಬ ವ್ಯವಸ್ಥೆ ಬೇರೆ. ಈ ದೇಶದ ಕುಟುಂಬಗಳ ಕಥೆಯೇ ಬೇರೆ. ಈ ಸೂಕ್ಷ್ಮ ವಿಷಯವನ್ನು ನಿರ್ವಹಿಸುವಾಗ ಏರುಪೇರಾಗಿರುವುದನ್ನು ಗಮನಿಸಬಹುದು. ಉಳಿದಂತೆ ಈ ಚಿತ್ರದ ತುಂಬಾ ನಿರ್ದೇಶಕರ ಹಾಲಿವುಡ್ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ಟೈಟಲ್ ಕಾರ್ಡಿನಲ್ಲಿ ಹಾಡು ಬಳಸಿದ್ದರಿಂದ ಹಿಡಿದು ಚಿತ್ರದ ಅಂತ್ಯದ ದೃಶ್ಯವನ್ನೂ ಅವರು ಹಾಲಿವುಡ್ ಹಾರರ್ ರೇಂಜಿಗೆ ಮಾಡಿದ್ದಾರೆ.

ಅನಗತ್ಯವಾಗಿ ಎಲ್ಲೂ ಹಾಡುಗಳಿಲ್ಲ. ಅನವಶ್ಯವಾಗಿ ಯಾರನ್ನೂ ಚಿತ್ರದಲ್ಲಿ ಕರೆತಂದಿಲ್ಲ. ಚಿತ್ರಕ್ಕೊಂದು ಉದ್ದೇಶ ಇದೆ. ಆ ಉದ್ದೇಶವನ್ನು ತಲುಪಲು ಬೇಕಾದ ಸಾಹಸವನ್ನೆಲ್ಲಾ ನಿರ್ದೇಶಕರು ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಎಲ್ಲಾ ಕಲಾವಿದರು ಸಹಕರಿಸಿದ್ದಾರೆ. ಅಶ್ವತ್ಥನಾರಾಯಣ್ ಪಾತ್ರದ ಘನತೆಗೆ ತಕ್ಕಂತೆ ಅಭಿನಯಿಸಿದ್ದಾರೆ. ಹಾರರ್ ಚಿತ್ರವಾದ್ದರಿಂದ ನೋಡುಗರಿಗೂ ದೆವ್ವ ನೋಡಿದ ಅನುಭವ ಆಗುವುದು
ಖಚಿತ. 

 

ಚಿತ್ರ : ಉದ್ದಿಶ್ಯ

ತಾರಾಗಣ: ಹೇಮಂತ್ ಕೃಷ್ಣಪ್ಪ, ವಿಜಯ್ ಕೌಂಡಿನ್ಯ, ಅರ್ಚನಾ ಗಾಯಕ್‌ವಾಡ್, ಅಕ್ಷತಾ ಶ್ರೀಧರ್ ಶಾಸ್ತ್ರಿ, ಅನಂತವೇಲು, ಅಶ್ವಥ್ ನಾರಾಯಣ್

ನಿರ್ದೇಶನ: ಹೇಮಂತ್  ಕೃಷ್ಣಪ್ಪ

ರೇಟಿಂಗ್: ***

 

- ವಿಮರ್ಶೆ: ರಾಜೇಶ್ ಶೆಟ್ಟಿ 

click me!