ಈ ವಾರ ಆರೋಹಣ ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ಈ ಚಿತ್ರದ ವಿಮರ್ಶೆ.
ಬೆಂಗಳೂರು (ಸೆ. 01): ಅಪ್ರಬುದ್ಧವಾಗಿ ಕಾಟಾಚಾರಕ್ಕೆ ಒಂದು ಸಿನಿಮಾ ಮಾಡಿದರೆ ಹೇಗಿರುತ್ತದೆ ಎನ್ನುವ ಅತ್ಯುತ್ತಮ ಪಾಠದಂತೆ ಬಳಸಿಕೊಳ್ಳಬಹುದಾದ ಸಿನಿಮಾ ‘ಅರೋಹಣ’.
ಮೇಕಪ್ ಹಾಕಿಕೊಂಡಿರುವ ಒಂದಿಷ್ಟು ಜನ, ಅವರೊಂದಿಗೆ ತಂತ್ರಜ್ಞರು, ಕೈಯಲ್ಲೊಂದಿಷ್ಟು ಹಣ ಇದ್ದರೆ ಸಿನಿಮಾ ಮಾಡಬಹುದೆಂಬ ಆಲೋಚನೆಯಲ್ಲಿ ಹುಟ್ಟಿಕೊಂಡಂತಿರುವ ಈ ಚಿತ್ರದ ಕತೆ ಒಂದೇ ಮನೆಯಲ್ಲಿ ಸಾಗುತ್ತದೆ. ಅತ್ತ ಹಾರರ್ ಅಲ್ಲ, ಇತ್ತ ರೆಗ್ಯೂಲರ್ ಚಿತ್ರವೂ ಅಲ್ಲ ಎನ್ನುವಂತೆ ನಡು ದಾರಿಯಲ್ಲಿ ಸಾಗುವ ಈ ಚಿತ್ರದ ಕತೆಗೆ ಮೈಂಡ್ ಅಪ್‌ಸೆಟ್ ಆಗುವ ನಾಯಕನ ವರ್ತನೆಯೇ ಮುಖ್ಯ ಬಂಡವಾಳ.
ಸಾಲದ್ದಕ್ಕೆ ನಾಯಕನ ತಂದೆಗೆ ರಾತ್ರಿಯಾದರೆ ಕಣ್ಣು ಕಾಣಲ್ಲ. ಪ್ರೇಕ್ಷಕನಿಗೆ ಆ ಭಾಗ್ಯವಿಲ್ಲ! ತನ್ನ ಸ್ನೇಹಿತರ ಮೂಲಕ ಹಳ್ಳಿಗೆ ಬರುವ ನಾಯಕಿ, ಅವರ ಪೈಕಿ ಒಬ್ಬನ ಸಾವು ಸಂಭವಿಸುತ್ತದೆ. ಆತ, ನಾಯಕಿಯನ್ನು ಪ್ರೀತಿಸುತ್ತಿರುತ್ತಾನೆ. ಈ ಕೊಲೆ ಮಾಡಿದ್ದು ಯಾರು? ನಾಯಕಿ ಮೇಲಿನ ಆಸೆಗಾಗಿ ನಾಯಕನೇ ಕೊಂದನೇ? ಎನ್ನುವ ಕುತೂಹಲ ಉಳಿಸುವ ನಿರ್ದೇಶಕರು, ಚಿತ್ರದ ಆರಂಭದಲ್ಲಿ ಒಂದು ಕೊಲೆ ಮಾಡಿಸಿರುತ್ತಾರೆ.
ಈ ಕೊಲೆಗಳ ಸುತ್ತ ದೆವ್ವದ ಕತೆ ಕಟ್ಟುತ್ತಾರೆ. ಕತೆ ರೂಪಿಸುವಲ್ಲಿ, ಚಿತ್ರಕತೆ ಕಟ್ಟುವಲ್ಲಿ, ಅದಕ್ಕೆ ಪಾತ್ರದಾರಿಗಳ ಆಯ್ಕೆ ಹೀಗೆ ಯಾವುದೂ ಒಂದು ಸಿನಿಮಾ ಆಗಿ ಕಣ್ಣ ಮುಂದೆ ಬರಲ್ಲ. ತೀರಾ ಸಪ್ಪೆಯಾಗಿ ಸಿನಿಮಾ ಸಾಗುತ್ತದೆ. ಇನ್ನೂ ನಿರ್ದೇಶಕರೇ ತೆರೆ ಮೇಲೆ ಮಾಡಿರುವ ಕಾಮಿಡಿ ಪಾತ್ರವನ್ನು ಸಹಿಸಿಕೊಂಡರೇ ಅದೇ ದೊಡ್ಡ ಸಾಹಸ. ಅಂಥ ಕಾಮಿಡಿಯ ಕಮಾಲ್ ಅವರದ್ದು. ಇಷ್ಟರ ನಡುವೆ ಬರುವ ಹಾಡುಗಳು, ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗುವ ದೃಶ್ಯಗಳಲ್ಲಿ ಹೇಳಿಕೊಳ್ಳುವಂತಹ ಗುಣಮಟ್ಟದಲ್ಲ.
ಒಂದು ಸಿನಿಮಾ ಮಾಡಬೇಕೆಂಬ ಆಸಕ್ತಿ ಜತೆಗೆ ಅದಕ್ಕೆ ಬೇಕಾದ ತಯಾರಿ, ಪ್ರಮಾಣಿಕತೆ, ತಿಳವಳಿಕೆಯೂ ಬೇಕು ಎನ್ನುವಲ್ಲಿಗೆ ‘ಆರೋಹಣ’ ಯಶಸ್ವಿಯಾಗುತ್ತದೆ. ಸುಶೀಲ್ ಕುಮಾರ್, ರೋಹಿತ್
ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ ಹೀಗೆ ಯಾರ ಪಾತ್ರವೂ ನೋಡುಗನ ಮನಸ್ಸಿನಲ್ಲಿ ಉಳಿದುಕೊಳ್ಳುವುದಿಲ್ಲ.
ಚಿತ್ರ : ಅರೋಹಣ
ತಾರಾಗಣ: ಸುಶೀಲ್ ಕುಮಾರ್, ರೋಹಿತ್
ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ,
ಉಮೇಶ್ ಪುಂಗ
ನಿರ್ದೇಶನ: ಶ್ರೀಧರ್ ಶೆಟ್ಟಿ
-ವಿಮರ್ಶೆ : ಆರ್. ಕೇಶವಮೂರ್ತಿ