ಈ ವಾರ ’ ಖೊಟ್ಟಿ ಪೈಸೆ’ ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ.
ಬೆಂಗಳೂರು (ಅ. 06): ಅವನೊಬ್ಬ ಮುದುಕ. ಅವನಿಗೆ ಮೊಮ್ಮಗಳನ್ನು ಓದಿಸಬೇಕು, ಚೆಂದದ ಬಟ್ಟೆ ತೆಗೆದುಕೊಡಬೇಕು ಎನ್ನುವ ಆಸೆಯ ಜೊತೆಗೆ ಮನೆ ಬಿಟ್ಟು ಹೋದ ಮಗನ ಚಿಂತೆ. ಜೊತೆಗೆ ಮೂರು ಜನರಿರುವ ಮನೆ ನಡೆಸುವ ಜವಾಬ್ದಾರಿ.
ಇದಕ್ಕಾಗಿ ಅವನು ಮಾಡುವ ಕೆಲಸ ಜೋಳ ಮಾರುವ ಅಂಗಡಿಯಲ್ಲಿ ಜೋಳ ಅಳತೆ ಮಾಡಿಕೊಡುವುದು. ಪಡೆಯುತ್ತಿದ್ದ ಆದಾಯ ಕೆಳಗೆ ಚೆಲ್ಲಿದ ಜೋಳವನ್ನು ಆಯ್ದುಕೊಂಡು ಹೋಗುವುದು. ಇದಕ್ಕಿಂತ ಅವನಿಗೆ ಹೆಚ್ಚು ಆದಾಯ ತರುತ್ತಿದ್ದದ್ದು ಮಾಡುತ್ತಿದ್ದ ಸಣ್ಣ ಪುಟ್ಟ ಕಳ್ಳತನ.
ಇನ್ನೊಂದು ಕಡೆ ಊರಿನಲ್ಲಿ ಮಾಡಲು ಕೆಲಸವೇ ಇಲ್ಲದ ನಾಲ್ಕು ಜನ ಹುಡುಗರು. ಊರಿಗೆ ನಾಟಕ ಕಲಿಸಲು ಬರುವ ಡೈರೆಕ್ಟರ್. ಇದರ ಜೊತೆಗೊಂದಷ್ಟು ಮಾಗದ ಪ್ರೀತಿ. ಇದರ ಸುತ್ತಲೇ ಗಿರಕಿ ಹೊಡೆದು ನೋಡುಗನ್ನೂ ಗಿರಕಿ ಹೊಡೆಸುವ ಚಿತ್ರ ‘ಖೊಟ್ಟಿ ಪೈಸೆ’.
ಐದು ಪೈಸೆ, ಹತ್ತು ಪೈಸೆ, ಇಪ್ಪತ್ತು ಪೈಸೆ ನಾಣ್ಯಗಳು ಏಕಾಏಕಿ ರದ್ದಾದಾಗ ಏನು ಪರಿಣಾಮವಾಗುತ್ತದೆ. ಅವುಗಳನ್ನೇ ತಮ್ಮ ಕನಸುಗಳ ಸಾಕಾರಕ್ಕಾಗಿ ಒಂದೊಂದಾಗಿ ಕೂಡಿಟ್ಟುಕೊಂಡ ಬಡವನ ಬದುಕು ಏನಾಗುತ್ತದೆ ಎನ್ನುವುದನ್ನು ಹೇಳುವುದು ನಿರ್ದೇಶಕರ ಆಶಯ. ಇದಕ್ಕೆ ಬೇಕಾದ ಪರಿಸರವನ್ನೂ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೆ ಬೇಕಾದ ಶ್ರಮ ಹಾಕಿಲ್ಲ. ಇದು ಪ್ರತಿ ಹಂತದಲ್ಲೂ ಎದ್ದು ಕಾಣುತ್ತದೆ.
ವೈಜನಾಥ್ ಬಿರಾದಾರ್, ಬೇಬಿ ಸ್ವಪ್ನ ಬಿಟ್ಟರೆ ಬೇರೆ ಯಾರೂ ಕೂಡ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿರುವುದು ನೋಡುಗನ ಸಹನೆ ಕೆರಳಿಸುತ್ತದೆ. ಸಹಜನ ಕಡಿಮೆಯಾಗಿ ಕೃತಕತೆ ಹೆಚ್ಚು ಮೆರೆದರೆ ಚಿತ್ರದ ಪಾಡೇನಾಗುತ್ತದೆ ಎಂದು ತಿಳಿಯುವುದಕ್ಕೆ ಇದು ಉತ್ತಮ ಉದಾಹರಣೆ.
ನಾಯಕ ರಾಮ್ ಚೇತನ್ ಮತ್ತು ಸಂಗಡಿಗರು ಊರಿನಲ್ಲೇ ಇದ್ದುಕೊಂಡು ನಾಟಕ ಕಲಿಯಲು ಮಾಡುವ ಸರ್ಕಸ್ ಚಿತ್ರದ ಬಹುಭಾಗವನ್ನು ನುಂಗಿದೆ. ಪಾಸಿಟಿವ್ ಎಂದರೆ ಇಲ್ಲಿ ಉತ್ತರ ಕರ್ನಾಟಕ ಶೈಲಿಯ ಒಂದಷ್ಟು ಕಾಮಿಡಿ ಬಂದು ನೋಡುಗ ಮುಖವನ್ನು ಸ್ವಲ್ಪ ಅರಳಿಸುವುದು. ಇದರ ನಡುವಲ್ಲೇ ಅರಳುವ ಪ್ರೀತಿಗೆ ಪಕ್ವತೆ ಇಲ್ಲ. ಅದರ ಸುತ್ತಲೂ ನಡೆಯುವ ಘಟನೆಗಳಿಗೂ ಪಕ್ವತೆ ಬಂದಿಲ್ಲ. ಹೀಗಾಗಿ ಚಿತ್ರ ಸಮಾಧಾನಕರ ಸ್ಥಿತಿಯಲ್ಲೇ ನಿಂತುಬಿಡುತ್ತದೆ.
ಕಡೆಗೆ ಪೈಸೆಗಳು ರದ್ದಾದ್ದರಿಂದ ಆದ ಅನಾಹುತಗಳೇನು, ಆ ಮುದುಕನ ಆಸೆಗಳು ಏನಾದವು ಎಂಬಿತ್ಯಾದಿ ಪ್ರಶ್ನೆಗಳಿಗೆ ಚಿತ್ರ ನೋಡಿಯೇ ಉತ್ತರ ತಿಳಿಯಬೇಕು. ಪ್ರಯತ್ನ ಒಳ್ಳೆಯದ್ದೇ ಆದರೂ ಅದಕ್ಕೆ ಬೇಕಾದಷ್ಟು ಶ್ರಮ ಹಾಕುವಲ್ಲಿ ನಿರ್ದೇಶಕರು ಹಿಂದೇಟು ಹಾಕಿರುವುದು ಚಿತ್ರದ ಮೈನಸ್. ಒಳ್ಳೆಯ ಕತೆ, ಒಂದಷ್ಟು ಎಮೋಷನ್, ಕಾಮಿಡಿ ಇರುವುದು ಚಿತ್ರದ ಪ್ಲಸ್.
-ಕೆಂಡಪ್ರದಿ
ಚಿತ್ರ: ಖೊಟ್ಟಿ ಪೈಸೆ
ತಾರಾಗಣ: ಬಿರಾದಾರ್, ರಾಮಚೇತನ್, ಸಹನ,
ರಂಜಿತ್, ಕಿರಣ್, ಮೋಹನ್ ಕುಮಾರ್, ಗೋಪಿ
ನಿರ್ದೇಶನ: ಕಿರಣ್ ಆರ್.ಕೆ. ರವಿ ತೇಜ
ನಿರ್ಮಾಣ: ವೀರಪ್ಪ ವಿ, ಶಿರಗಣ್ಣನವರ್, ಗಿರಿಜಾ
ಕುಮಾರ್ ರೇಟಿಂಗ್: **