ಈ ವಾರ ’ಎ ಪ್ಲಸ್’ ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ.
ಬೆಂಗಳೂರು (ಅ. 06): ಅರ್ಧ ಸಿನಿಮಾ ಮುಗಿಯಿತು. ಪರದೆ ಮೇಲೆ ಇಂಟೆರ್‌ವೆಲ್ ಅಂತ ಇಂಗ್ಲಿಷ್ ಅಕ್ಷರಗಳು ಮೂಡಿದವು. ಉಸ್ಸಾಪ್ಪಾ...ಅಂತ ಪ್ರೇಕ್ಷಕರೆಲ್ಲರು ಎದ್ದರು. ಇನ್ನೇನು ಅತ್ತ ಹೆಜ್ಜೆ ಹಾಕುವ ಹೊತ್ತಿಗೆ ಮತ್ತೆ ಸಿನಿಮಾ ಸ್ಟಾರ್ಟ್.
ಟಾಕೀಸ್ ಒಳಗಡೆ ಕತ್ತಲು ಆವರಿಸಿತು ಅಂತ ಪ್ರೇಕ್ಷಕರು ಅನಿವಾರ್ಯವಾಗಿ ಕುಳಿತರು. ಐದ್ಹತ್ತು ನಿಮಿಷ ಕಳೆಯಿತು. ಆಗ ಮತ್ತೆ ಪರದೆ ಮೇಲೆ ವಿರಾಮ ಅಂತ ಕನ್ನಡ ಅಕ್ಷರಗಳು ಮೂಡಿದವು. ಅಂದ್ರೆ, ನಿಜವಾದ ವಿರಾಮ ಸಿಕ್ಕಿದ್ದು ಆಗಲೇ. ಜನ ಜೋರಾಗಿ ಕೂಗಿದರು. ಹೊರ ಹೋಗಿ, ಬಂದು ಮತ್ತೆ ಕುಳಿತರು. ಮಜಾ ಅಂದ್ರೆ, ಕ್ಲೈಮ್ಯಾಕ್ಸ್ ನಲ್ಲೂ ಅದೇ ಪುನರಾವರ್ತನೆ.
ಕಥಾ ನಾಯಕ ತಾನಂದುಕೊಂಡಂತೆ ಗುರಿ ಸಾಧಿಸಿದ. ಆತನಿಗೆ ಪ್ರೀತಿಯು ಸಿಕ್ಕಿತು. ಪರದೆ ಮೇಲೆ ‘ದಿ ಎಂಡ್’ ಎನ್ನುವ ಇಂಗ್ಲಿಷ್ ಅಕ್ಷರಗಳು ದೊಡ್ಡದಾಗಿ ಕಂಡವು. ಪ್ರೇಕ್ಷಕರೆಲ್ಲ ಎದ್ದು ಹೊರಟರು. ಸಿನಿಮಾ ಮುಗಿಯಿತು ಎನ್ನುವ ಲೆಕ್ಕಾಚಾರ ಅವರದ್ದು. ಆದ್ರೆ, ಅದು ನಿಜವಾದ ಕ್ಲೈಮ್ಯಾಕ್ಸ್ ಅಲ್ಲ. ಅದು ಕೂಡ ಮತ್ತೊಂದು ಗಿಮಿಕ್.
ಇಂಟೆರ್‌ವಲ್ ಹಾಗೂ ಕ್ಲೈಮ್ಯಾಕ್ಸ್‌ನಲ್ಲೇ ನಿರ್ದೇಶಕರು, ಪ್ರೇಕ್ಷಕರೊಂದಿಗೆ ಇಷ್ಟೆಲ್ಲ ಆಟವಾಡಿದ್ದಾರೆಂದರೆ, ಇನ್ನು ಸಿನಿಮಾದಲ್ಲಿ ಹೇಗೆ ಕನ್‌ಫ್ಯೂಸ್ ಮಾಡಿರಬಹುದು ಅಂತ ನೀವೇ ಉಹಿಸಿಕೊಳ್ಳಿ. ಇದೊಂದು ಗಾಂಧಿನಗರದ ಕತೆ. ಸಿನಿಮಾ ನಿರ್ದೇಶಕನಾಗಲು ಬಂದ ಒಬ್ಬ ಯುವಕ ಹೇಗೆಲ್ಲ ಕಷ್ಟಪಟ್ಟು, ಕೊನೆಗೂ ತಾನಂದುಕೊಂಡಿದ್ದನ್ನ ಸಾಧಿಸಿ ತೋರಿಸುತ್ತಾನೆ ಅನ್ನೋದು ಈ ಚಿತ್ರದ ಒಂದು ಎಳೆ. ಹಾಗಂತ ಇದೇನು ಹೊಸ ಕತೆ ಅಂತ ಭಾವಿಸುವಂತಿಲ್ಲ.
ಗಾಂಧಿನಗರವೆಂಬ ಕನಸು ಬಿತ್ತುವ ಗಲ್ಲಿಯಲ್ಲಿ ಇಂತಹ ಲೆಕ್ಕವಿಲ್ಲದಷ್ಟು ಕತೆಗಳಿವೆ. ನಿರ್ದೇಶಕರಾಗಬೇಕು ಅಂತ ಎಲ್ಲಿಂದಲೋ ಬಂದು ನಿರ್ಮಾಪಕರ ಮನೆ ಬಾಗಿಲಿಗೆ ಸುತ್ತಾಡಿ, ಅವಮಾನ, ಅಪಮಾನ ಅನುಭವಿಸಿ, ಕೊನೆಗೂ ನಿರ್ದೇಶಕರಾಗಿ ಸಕ್ಸಸ್ ಕಂಡ ನಿರ್ದೇಶಕರು ಸಾಕಷ್ಚು ಜನರಿದ್ದಾರೆ. ಅವರ ಕತೆಗಳನೆಲ್ಲ ಸಿನಿಮಾ ಮಾಡ ಹೊರಟರೆ ‘ಎ ಪ್ಲಸ್’ಅಲ್ಲ, ‘ಝಡ್’ ಪ್ಲಸ್ ಅಂತಲೂ ಸಿನಿಮಾ ಮಾಡ್ಬಹುದು.
ಕತೆ ಆಚೆ ಕನ್‌ಪ್ಯೂಸ್ ಚಿತ್ರಕತೆ. ಹಾಗೆಯೇ ಮೂಗಿಗಿಂತ ಮೂಗುತಿ ಭಾರ ಎನ್ನುವ ಹಾಗೆ ಈ ಸಿನಿಮಾಕ್ಕೆ ಡೈಲಾಗೇ ಭಾರ. ‘ಎ’ ಸಿನಿಮಾದ ಪ್ರಭಾವದೊಳಗೆ ನಿರ್ದೇಶಕರು ಹೀರೋ ಪಾತ್ರಕ್ಕೆ ಬೇಜಾನ್ ಡೈಲಾಗ್ ತುಂಬಿದ್ದಾರೆ. ಆದರೆ, ನಟ ಸಿದ್ದು ಕಿರುಲು ಕಂಠಕ್ಕೆ ಬಿಲ್ಡಪ್ ಡೈಲಾಗ್‌ಗಳು ಭಾರವಾಗಿವೆ.
ಪ್ರೀತಿ ಮುಂದೆ ಸೋತು, ಗೆಲ್ಲುವುದು, ಪ್ರೀತಿಗಾಗಿ ಗೆದ್ದು ಸೋಲುವುದರ ನಡುವೆ ನಿರ್ದೇಶಕನಾಗುವ ಕಥಾ ನಾಯಕ ಹಂಬಲ ಛಲದಲ್ಲೇ ಸಕ್ಸಸ್ ಆಗುತ್ತದೆ ಎನ್ನುವ ಸಂದೇಶ ಚಿತ್ರದಲ್ಲಿದೆ. ಕ್ಲೈಮ್ಯಾಕ್ಸ್’ನಲ್ಲಿ ಅಷ್ಟನ್ನು ನೋಡುವುದಕ್ಕೆ ಪ್ರೇಕ್ಷಕರಿಗೆ ಸಾಕಷ್ಟು ತಾಳ್ಮೆ ಬೇಕಾಗುತ್ತದೆ.
- ದೇಶಾದ್ರಿ ಹೊಸ್ಮನೆ
ಚಿತ್ರ: ಎ ಪ್ಲಸ್ ತಾರಾಗಣ: ಸಿದ್ದು,
ಸಂಗೀತಾ, ಮಧುಸೂಧನ್, ಲಕ್ಷ್ಮೀ
ಹೆಗಡೆ, ಕೃಷ್ಣಮೂರ್ತಿ ನಾಡಿಗ್,
ಪ್ರಶಾಂತ್ ಸಿದ್ದಿ
ನಿರ್ದೇಶನ: ವಿಜಯ್ ಸೂರ್ಯ
ನಿರ್ಮಾಣ: ಪ್ರಭುಕುಮಾರ್
ರೇಟಿಂಗ್: **