ಚಿತ್ರ ವಿಮರ್ಶೆ: ಆದಿ ಪುರಾಣ

By Web Desk  |  First Published Oct 6, 2018, 1:57 PM IST

ಈ ವಾರ ’ಆದಿ ಪುರಾಣ’ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ. 


ಬೆಂಗಳೂರು (ಅ. 06): ನಿರ್ದೇಶಕ, ನಟ, ನಿರ್ಮಾಪಕ ಕಾಶಿನಾಥ್ ಅವರ ಚಿತ್ರಗಳ ಸಾಫ್ಟ್ ಪ್ರತಿಯಂತಿರುವ ‘ಆದಿ ಪುರಾಣ’ ಸಂಸಾರದ ಸರಸಗಳಿಂದ ಹೆಜ್ಜೆ ಹೆಜ್ಜೆಗೂ ವಂಚನೆಗೊಳ್ಳುವ ಹುಡುಗನ ಕತೆ.

ಮನಸ್ಸಿನಲ್ಲಿ ಅದುಮಿಟ್ಟುಕೊಂಡ ಹದಿಹರೆಯತನಗಳಲ್ಲಿ ಉಂಟಾಗುವ ಗೊಂದಲ, ಪೋಲಿತನಗಳ ಜಾಡಿನಲ್ಲಿ ಈ ಸಿನಿಮಾ ಸಾಗಿದರೂ ಕತೆ ಮತ್ತೇನನ್ನೋ ಧ್ವನಿಸುತ್ತದೆ ಎಂಬುದಕ್ಕೆ ಇಲ್ಲಿ ತನ್ನ ಮಗಳನ್ನು ಕಳೆಕೊಂಡು ದುಃಖಿಸುವ ಪಾತ್ರ ಮನಸು ಬಿಚ್ಚಿ ಮಾತನಾಡುವ ತನಕ ಗೊತ್ತಾಗಲ್ಲ. ನಿರ್ದೇಶಕ ಮೋಹನ್ ಕಾಮಾಕ್ಷಿ ಅವರು ತೀರಾ ಸೀಮಿತ ಹಿನ್ನೆಲೆ, ಕಡಿಮೆ ಪಾತ್ರಗಳ ಮೂಲಕ ಯುವನೊರ್ವನ ತವಕ, ತಲ್ಲಣಗಳನ್ನು ಹೇಳುತ್ತಾರೆ.

Tap to resize

Latest Videos

ಎಲ್ಲೂ ವ್ಯಾಪ್ತಿ ಮೀರಿದೆ ನೋಡುಗನನ್ನು ಆಗಾಗ ವ್ಯಾಪಿಸಿಕೊಳ್ಳುವ ಒಂದಿಷ್ಟು ಸಂಭಾಷಣೆಗಳು, ದೃಶ್ಯಗಳು, ಪಾತ್ರಗಳೇ ಚಿತ್ರದ ಜೀವಾಳ. ಮುದ್ದಾಗಿ ಕಾಣುವ ಇಬ್ಬರು ನಾಯಕಿಯರಿದ್ದಾರೆ. ಇವರ ನಡುವೆ ಒಬ್ಬ ಪೆದ್ದು ಹುಡುಗನಿದ್ದಾನೆ. ಹಾಗಂತ ಇದು ತ್ರಿಕೋನ ಪ್ರೇಮ ಕತೆಯಂತೂ ಅಲ್ಲ. ಯುವ ಮನಸ್ಸುಗಳು ತಿಳಿದುಕೊಳ್ಳುವಂತಹ ವಿಚಾರಗಳ ಕಟ್ಟೆ ಅಷ್ಟೆ. ರಾಮನಂತಹ ಒಳ್ಳೆಯವನಲ್ಲೂ ಕಾಮ ಕನವರಿಸುತ್ತಿರುತ್ತದೆ.

ಅದನ್ನು ಅರಿತ ಹೆತ್ತವರು ಚಿಕ್ಕ ವಯಸ್ಸಾದರೂ ಪರ್ವಾಗಿಲ್ಲ ಅಂತ ಮದುವೆ ಮಾಡಿಸುತ್ತಾರೆ. ಇದ್ದಕ್ಕಿದ್ದಂತೆ ಮಂದವೆಯಾದವನು ಮಿನಲದ ಕನಸು ಕಾಣುತ್ತಿದ್ದರೆ ಅದಕ್ಕೆ ಶಾಸ್ತ್ರ ಅಡ್ಡ ಬರುತ್ತದೆ. ಶಾಸ್ತ್ರ ಮುಗಿದ ಕೂಡಲೇ ಅಷಾಡ ಎಡೆ ಎತ್ತುತ್ತದೆ. ಈ ಎಲ್ಲವುಗಳಿಂದ ಬೇಸರಗೊಂಡು ಕೈ ಹಿಡಿದವಳು ಮನೆಯಲ್ಲಿ ಇಲ್ಲದಿದ್ದಾಗ ಕೈಗೆಟುಕುವ ದೂರದಲ್ಲಿದ್ದವಳ ಜತೆ ಮೊದಲ ರಾತ್ರಿಯ ಕನಸು ಕಾಣುತ್ತಾನೆ. ಅಲ್ಲಿ ಮತ್ತೊಂದು ಅಡ್ಡ ಬರುತ್ತದೆ. ಈ ಬಾರಿ ಅವರಿಗೆ ಬರುವ ಅಡ್ಡದ ಕಲ್ಲು ಮೌಲ್ಯಯುತವಾಗಿರುತ್ತದೆ.

ಅದು ಹಿರಿಯ ಜೀವ ಹೇಳಿಕೊಳ್ಳುವ ಸಂಕಟದ ಕತೆ. ಇದು ಕೇಳಿದ ಮೇಲೂ ನಾಯಕ, ಅಕ್ರಮ ಸಂಬಂಧತ್ತ ಮುಖ ಮಾಡುತ್ತಾನೆಯೇ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ತಾನು ಮದುವೆ ಆಗುವ ಹುಡುಗಿ ತನಗೆ ಮಾತ್ರ ಸ್ವಂತ ಎನ್ನುವ ಹುಡುಗರಂತೆ ಹುಡುಗಿಯರು ಯೋಚಿಸುತ್ತಾರೆ. ಪರಸ್ಪರ ಈ ನಂಬಿಕೆ ಜೀವನಕ್ಕೆ ಬಹು ಮುಖ್ಯ ಎಂಬ ಸಂದೇಶವನ್ನು ಸುತ್ತಾಡಿಸಿಕೊಂಡು ಬಂದು ಹೇಳುತ್ತಾರೆ ನಿರ್ದೇಶಕರು.

ತಾಳಿದವನು ಬಾಳಿಯಾನು ಎನ್ನುವ ಚಿತ್ರದ ಡೈಲಾಗ್ ನಂತೆಯೇ ತಾಳ್ಮೆ ಇದ್ದವನಿಗೆ ಇಷ್ಟವಾಗುವ ಚಿತ್ರ. ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಂಡಿರುವ ಶಶಾಂಕ್, ತನಗಿದು ಮೊದಲ ಚಿತ್ರ ಎಂಬುದನ್ನು ತೋರಿಸಿದ್ದಾರೆ. ಇಬ್ಬರು ನಾಯಕಿಯರ ಪೈಕಿ ಅಹಲ್ಯ ಸುರೇಶ್ ಹೆಚ್ಚು ಗಮನ ಸೆಳೆಯುತ್ತಾರೆ. ಆದರೆ, ರಂಗಾಯ ರಘು ಪಾತ್ರ ನೋಡಗನಿಗೆ ತೀರಾ ಹತ್ತಿರವಾಗುತ್ತದೆ.

-ಚಿತ್ರ: ಆದಿ ಪುರಾಣ
ತಾರಾಗಣ: ಶಶಾಂಕ್, ಅಹಲ್ಯ ಸುರೇಶ್, ಮೋಕ್ಷಾ
ಕುಶಾಲ್, ರಂಗಾಯಣ ರಘು, ನಾಗೇಂದ್ರ ಶಾ,
ಕರಿ ಸುಬ್ಬು, ಡಾ ವತ್ಸಲಾ ಮೋಹನ್, ನವೀನ್
ಸಾಗರ್ ನಿರ್ದೇಶನ: ಮೋಹನ್ ಕಾಮಾಕ್ಷಿ
ನಿರ್ಮಾಣ: ಶಮಂತ್ ರೇಟಿಂಗ್: *** 

click me!