ಎಡಪಂಥೀಯ ಕೈಯ ಎಡವಟ್ಟು!

By Web Desk  |  First Published Jul 28, 2018, 4:22 PM IST

ಈ ವಾರ ಸಂಕಷ್ಟಕರ ಗಣಪತಿ ಚಿತ್ರ ಬಿಡುಗಡೆಯಾಗಿದೆ. ಇದೊಂದು ವಿಭಿನ್ನ ಕಥಾ ಹಂದರ ಹೊಂದಿರುವ ಚಿತ್ರವಾಗಿದ್ದು ಪ್ರೇಕ್ಷಕರನ್ನು ಸೆಳೆಯುತ್ತದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ ನೋಡಿ. 


ಬೆಂಗಳೂರು (ಜು. 28): ಆರತಕ್ಷತೆ ಕಾರ್ಯಕ್ರಮ. ಹಸೆಮಣೆ ಏರಲಿರುವ ನವಜೋಡಿ ವೇದಿಕೆ ಮೇಲಿದೆ. ಕುಟುಂಬದವರು, ಬಂಧುಗಳು, ಸ್ನೇಹಿತರು ಸೇರಿದಂತೆ ನೂರಾರು ಸಂಖ್ಯೆಯಷ್ಟು ಜನ ಅಲ್ಲಿದ್ದಾರೆ. ಅಲ್ಲಿಗೆ ಬಂದವರೆಲ್ಲ ಹುಡುಗ-ಹುಡುಗಿಗೆ ಶುಭಾಶಯ ಹೇಳಲು ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಅದೇ ಸಾಲಿನಲ್ಲಿ ಬಂದ ಕಥಾ ನಾಯಕ, ಹುಡುಗಿಯ ಕೈ ಹಿಡಿದು ಎಳೆಯುತ್ತಾನೆ. ಅಷ್ಟೇ ಬೇಕಿತ್ತು ಎನ್ನುವ ಹಾಗೆ, ಆಕೆಯೂ ಆತನ ಹತ್ತಿರ ಬಂದು ಬಿಗಿಯಾಗಿ ಅಪ್ಪಿಕೊಳ್ಳುತ್ತಾಳೆ. ನಿಶ್ಚಿತಾರ್ಥ  ಮಾಡಿಕೊಂಡ ಹುಡುಗಿಯನ್ನು ಯಾರೋ ಒಬ್ಬ ಅಪರಿಚಿತ ಹಾಗೆ ಅಲ್ಲಿಗೆ ಬಂದು ಅಪ್ಪಿಕೊಳ್ಳುವುದಂದ್ರೇನು? ಅಲ್ಲಿದ್ದವರ ಆಕ್ರೋಶಕ್ಕೆ  ಗುರಿಯಾಗುವ ಆತನಿಗೆ ಹಿಗ್ಗಾಮುಗ್ಗಾ ಒದೆ ಬೀಳುತ್ತವೆ. ಅಸಲಿಗೆ ಅಲ್ಲಿ ಆಗಿದ್ದೇನು ಅಂತ ಆತನಿಗೂ ಗೊತ್ತಿಲ್ಲ. ಆತನ ಎಡಗೈ ಮಾತ್ರ ಅದಕ್ಕೆ
ಸಾಕ್ಷಿ. ಅದಾಗಲೇ ಅಂಥದ್ದೇ ಹಲವು ಅವಾಂತರಕ್ಕೆ ಆ ಎಡಗೈ ಕಾರಣವಾಗುತ್ತೆ. ನಿಜಕ್ಕೂ ಏನಾಗುತ್ತಿದೆ ಅಂತ ತಿಳಿದುಕೊಳ್ಳುವ ಹೊತ್ತಿಗೆ ಗೊತ್ತಾಗಿದ್ದು  ಅದೊಂದು ಕಾಯಿಲೆ. ಅದರ ಹೆಸರು ಏಲಿಯನ್ ಹ್ಯಾಂಡ್ ಸಿಂಡ್ರೋಮ್.

Tap to resize

Latest Videos

ಇಂಥದೊಂದು ವಿಶಿಷ್ಟ ವಾದ ಕಾಯಿಲೆಯ ಕತೆ ಹೇಳುವ ಚಿತ್ರವೇ ಸಂಕಷ್ಟ ಕರ ಗಣಪತಿ. ಶೀರ್ಷಿಕೆಗೆ ತಕ್ಕಂತೆ ಗಣಪತಿ ಎನ್ನುವ ಎಡಗೈ ಪುರಾಣವೇ ಈ ಚಿತ್ರ. ಹಾಗಂತ, ವಿಶಿಷ್ಟವಾದ ಕಾಯಿಲೆ ಕುರಿತು ಸಿನಿಮಾವೊಂದು ತೆರೆಗೆ ಬಂದಿದ್ದು ಇದೇ ಮೊದಲಲ್ಲ. ಇಂತಹ ಸಾಕಷ್ಟು ಸಿನಿಮಾಗಳು ಬೆಳ್ಳಿತೆರೆಗೆ ಬಂದು ಹೋಗಿದ್ದರೂ, ಇಲ್ಲಿ ಏಲಿಯನ್ ಹ್ಯಾಂಡ್ ಸಿಂಡ್ರೋಮ್‌ಗೆ ಸಿಕ್ಕ ಎಡಗೈ ಅವಾಂತರಗಳಿಗೆ ನಿರ್ದೇಶಕರು ಲಘು ಹಾಸ್ಯದ ಸ್ಪರ್ಶ ನೀಡಿದ್ದಾರೆ. ಆ ಮೂಲಕವೇ ಕಾಯಿಲೆಯ ಸ್ವರೂಪವನ್ನು ಪ್ರೇಕ್ಷಕರ ಮನ ಮುಟ್ಟುವ ಹಾಗೆ ತೆರೆದಿಡುವ ಪ್ರಯತ್ನ ನಡೆದಿದೆ.

ಅದೇ ಈ ಚಿತ್ರಕ್ಕೆ ವರ. ಹೆಚ್ಚು ಕಡಿಮೆ ಎರಡು ತಾಸುಗಳ ಜರ್ನಿ ಕೊಂಚವೂ ಬೇಸರವಾಗದಂತೆ, ಭಾವುಕತೆಗೆ ಸಿಲುಕದಂತೆ, ಉದ್ವೀಗಕ್ಕೂ ಒಳಗಾಗದಂತೆ ಸುಖಕರವಾಗಿ ಸಾಗುತ್ತದೆ. ಹಾಗಂತ ಇದು ಬರೀ ಏಲಿಯನ್ ಹ್ಯಾಂಡ್ ಸಿಂಡ್ರೋಮ್‌ಕ್ಕೆ ಸಿಮೀತವಾದ ಕತೆಯಲ್ಲ, ಅದೊಂದು ಎಳೆ ಮಾತ್ರ. ಇಲ್ಲಿ ಪ್ರೇಕ್ಷಕನನ್ನು ರಂಜಿಸಲು ಹಲವು ಸಂಗತಿಗಳಿವೆ. ಅಲ್ಲೊಂದು ವ್ಯಂಗ್ಯ ಚಿತ್ರಕಾರನ ಸವಾಲಿನ ಬದುಕಿದೆ. ಆತನ ಜತೆಗೆ ನಾಯಕಿಯ ಪ್ರೇಮ ಕತೆಯಿದೆ.ಅಪ್ಪ-ಮಗನ ಸೆಂಟಿಮೆಂಟ್ ಇದೆ. ಅವೆಲ್ಲವುದರ ನಡುವೆ ಲಘು ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ದೇಶಕರು ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ಕಾಯಿಲೆಯ ಕತೆ ಹೇಳಿದ್ದಾರೆ.

ಅವೆಲ್ಲವೂ ಸೇರಿಕೊಂಡು ಆರಂಭದಿಂದ ಕೊನೆ ತನಕ ಪ್ರೇಕ್ಷಕರನ್ನು ರಂಜಿಸುತ್ತಲೇ ಸಾಗುತ್ತವೆ. ಉಳಿದಿದ್ದು, ಏಲಿಯನ್ ಹ್ಯಾಂಡ್ ಸಿಂಡ್ರೋಮ್‌ಗೆ ಸಿಕ್ಕ ಎಡಗೈ ಸರಿಹೋಗುತ್ತಾ ಇಲ್ಲವೇ ಎನ್ನುವುದನ್ನು ಕ್ಲೈಮ್ಯಾಕ್ಸ್‌ನಲ್ಲಿಟ್ಟಿದ್ದಾರೆ.
ಕತೆ ಬೇಕು, ಅಲ್ಲೊಂದು ನೀತಿ ಇರಬೇಕು, ಸಮಾಜಕ್ಕೊಂದು ಸಂದೇಶ ಬೇಕು ಎನ್ನುವ ಮನಸ್ಥಿತಿ ದೂರ ಇಟ್ಟು ಮನರಂಜನೆ ಸಾಕು ಎನ್ನುವವರಿಗೆ ಈ ಚಿತ್ರ ಹೇಳಿ ಮಾಡಿಸಿದಂತಿದೆ. ಅಬ್ಬರ ಇಲ್ಲ, ಆವೇಷ ಇಲ್ಲ. ನಿಧಾನಗತಿಯಲ್ಲಿ ರಂಜನೆಯ ಹಿತ ನೀಡುತ್ತಾ ಹೋಗುತ್ತದೆ. ಆ ಮಟ್ಟಿಗೆ ಹೊಸಬರ ಪ್ರಯತ್ನ ಸಕ್ಸಸ್ ಕಂಡಿದೆ.

ನಾಯಕ ಗಣಪತಿ ಪಾತ್ರದಲ್ಲಿ ಲಿಖಿತ್ ಅಭಿನಯ ಚೆನ್ನಾಗಿದೆ. ನಾಯಕಿ ಶ್ರುತಿ ಮುಖಭಾವದಲ್ಲಿ ಇನ್ನಷ್ಟು ಅಭಿನಯ ಬೇಕಿತ್ತು ಎನ್ನುವುದನ್ನು ಬಿಟ್ಟರೆ, ಮಾತು, ಸಿಟ್ಟು, ಸೆಡವು ಎಲ್ಲರದಲ್ಲೂ ಸಹಜತೆ ಇದೆ. ಪೋಷಕ ಪಾತ್ರಗಳಲ್ಲಿಅಚ್ಯುತ್ ಕುಮಾರ್, ಮಂಜು ನಾಥ್ ಹೆಗಡೆ ಅವರ ಅಭಿನಯ ಸೋಗಸಾಗಿದೆ. ಶ್ರೀನಿವಾಸ್ ಪ್ರಭು, ಚಂದು ಗೌಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನವಪ್ರತಿಭೆ ರಿತ್ವಿಕ್ ಮುರುಳಿಧರ್ ಸಂಗೀತದಲ್ಲಿ  ಮೊದಲೆರೆಡು ಹಾಡುಗಳು ಇಷ್ಟವಾಗುತ್ತವೆ.

ಉದಯ ಲೀಲ ಕ್ಯಾಮೆರಾದಲ್ಲಿ  ಗಂಧಿಕೋಟದಲ್ಲಿನ ಹಾಡಿನ ಚಿತ್ರೀಕರಣ ಗಮನ ಸೆಳೆಯುತ್ತದೆ. ಒಟ್ಟಾರೆ ಇಡೀ ಸಿನಿಮಾ ಮನರಂಜನೆ ದೃಷಿಯಲ್ಲಿ ನೋಡುತ್ತಾ ಹೋದರೆ ಫೈಸಾ ವಸೂಲ್ ಎನ್ನುವುದು ಖಚಿತ.

click me!