ಸುಮನ್ ರಂಗನಾಥ್ ಅಷ್ಟು ಚಂದವಾಗಿ ಕಾಣುವುದರ ಹಿಂದಿದೆ ಈ ಗುಟ್ಟು!

First Published Jul 13, 2018, 12:51 PM IST
Highlights

ಗ್ಲಾಮರ್ ಬೊಂಬೆ ಸುಮನ್ ರಂಗನಾಥ್ ಡಬಲ್ ಇಂಜೀನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ನಟನೆ, ಅದಕ್ಕೆ ನ್ಯಾಯ ಒದಗಿಸುವ ರೀತಿ ಅದರ ಬಗ್ಗೆ ಪ್ರತ್ಯೇಕವಾಗಿ ಹೇಳುವುದೇ ಬೇಡ. ಎಂದಿಗೂ ಮಾಸದ ಸೌಂದರ್ಯ, ಅದರ ಹಿಂದಿರುವ ಗುಟ್ಟೇನು? ಏನ್ಮಾಡ್ತಾರೆ ಸೌಂದರ್ಯ ನಿರ್ವಹಣೆಗಾಗಿ? ಇಲ್ಲಿದೆ ನೋಡಿ. 

ಕೇರಾಫ್ ಗ್ಲಾಮರ್ ಅನ್ನಬಹುದಾದ ಸುಮನ್ ರಂಗನಾಥ್ ‘ದಂಡುಪಾಳ್ಯ 4’ರ ಗ್ಯಾಂಗ್ ಲೀಡರ್ ಕೂಡ ಹೌದು. ಅಲ್ಲದೆ ಇದೇ ವಾರ ತೆರೆಗೆ ಬರುತ್ತಿರುವ ಚಂದ್ರಮೋಹನ್ ನಿರ್ದೇಶನದ ‘ಡಬಲ್ ಇಂಜನ್’ನ ಕಾಮಿಡಿ ಟಾನಿಕ್ ಕೂಡ. ಹೀಗೆ ಬಗೆ ಬಗೆಯ ಪಾತ್ರಗಳ ಮೂಲಕ ದರ್ಶನ ಕೊಡುತ್ತಿರುವ ಸುಮನ್ ಮಾತುಗಳು ಇಲ್ಲಿವೆ. 

1. ಮೊದಲ ಕಾಮಿಡಿ ಚಿತ್ರ
ನನ್ನ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಗ್ಲಾಮರ್ ಪಾತ್ರಗಳ ಜತೆಗೆ ನಟನೆಗೆ ಸ್ಕೋಪ್ ಇರುವಂತಹ ಕ್ಯಾರೆಕ್ಟರ್‌ಗಳಲ್ಲೂ ಕಾಣಿಸಿಕೊಂಡಿದ್ದೇನೆ. ಒಂದಿಷ್ಟು ವರ್ಷ ಕನ್ನಡದಿಂದ ದೂರವಾಗಿದ್ದ ನನ್ನ ಮತ್ತೆ ಕನ್ನಡಿಗರಿಗೆ ಪರಿಚಯಿಸಿದ್ದು ಉಪೇಂದ್ರ ಅವರ ‘ಬುದ್ಧಿವಂತ’ ಚಿತ್ರ. ಆದರೆ, ನಾನು ಕಾಮಿಡಿ ಪಾತ್ರ ಇಲ್ಲಿವರೆಗೂ ಮಾಡಿಲ್ಲ. ಆ ಕೊರತೆಯನ್ನು ‘ಡಬಲ್ ಇಂಜನ್’ ಈಡೇರಿಸಿದೆ.

.2 ನಾನು ಹಳ್ಳಿ ಹುಡುಗಿ
ಡಬಲ್ ಇಂಜನ್ ಚಿತ್ರದಲ್ಲಿ ನನ್ನದು ಹಳ್ಳಿಯ ಹೆಣ್ಣುಮಗಳ ಪಾತ್ರ. ಕೊಂಚ ಹಾಟ್ ಆಗಿಯೂ ಕಾಣಿಸಿಕೊಂಡಿದ್ದೇನೆ. ಆಸೆಯ ಬೆನ್ನು ಹತ್ತಿ ಹೋದವಳ ಕತೆಯನ್ನು ನನ್ನ ಪಾತ್ರದ ಮೂಲಕ ಹೇಳಲಾಗುತ್ತಿದೆ. ಅಂದರೆ ಕಾಸಿನ ಆಸೆಯ ಹಿಂದೆ ಹೋದರೆ ಏನಾಗುತ್ತದೆ ಎಂಬುದನ್ನು ನಿರ್ದೇಶಕ ಚಂದ್ರಮೋಹನ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

3. ದಂಡುಪಾಳ್ಯದ ಸವಾಲಿನ ಪಾತ್ರ
ಬಹುತೇಕ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದೇನೆ. ಜನ ಕೂಡ ನನ್ನ ಹಾಗೆ ನೋಡಿದ್ದಾರೆ. ಆದರೆ, ‘ದಂಡುಪಾಳ್ಯ ೪’ ಚಿತ್ರದಲ್ಲಿ ಗ್ಲಾಮರ್‌ಲೆಸ್ ರೋಲ್ ಮಾಡಿರುವೆ. ಮೊದಲ ಬಾರಿಗೆ ನನ್ನ ಇಮೇಜ್‌ನ ಹೊರತಾಗಿರುವ ಪಾತ್ರ ಇದು. ಕೆಟಿ ನಾಯಕ್ ನಿರ್ದೇಶನದ ಚಿತ್ರ. ಮಾಸಿದ ಸೀರೆ, ಕೆದರಿದ ತಲೆ ಕೂದಲು ಹೀಗೆ ನಾನಾ ವೇಷ ತೊಟ್ಟು ಗ್ಯಾಂಗ್ ಲೀಡರ್ ಆಗಿದ್ದೇನೆ.

4.  ಕತೆ ಪೂರ್ತಿ ಕೇಳಿಯೇ ಒಪ್ಪುವುದು
ನಾನು ಯಾವುದೇ ಚಿತ್ರವನ್ನು ಒಪ್ಪುವ ಮೊದಲು ಕತೆ ಪೂರ್ತಿ ಕೇಳುತ್ತೇನೆ. ಆ ನಂತರವೇ ನಾನು ಒಪ್ಪುವುದು. ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ ಇದ್ದರೂ ಸರಿ, ಪೂರ್ತಿ ಕತೆ ಹೇಳಿ ಎನ್ನುತ್ತೇನೆ.

5. ನನಗೆ ಹೊಂದುವ ಪಾತ್ರಗಳು
ಪಾತ್ರಕ್ಕಿಂತ ನಾನು ಕತೆಗೆ ಮಹತ್ವ ಕೊಡುತ್ತೇನೆ. ಕತೆ ಚೆನ್ನಾಗಿದ್ದರೆ ಮಾತ್ರ ಅಂಥ ಚಿತ್ರಗಳಲ್ಲಿ ಯಾವುದೇ ರೀತಿಯ ಪಾತ್ರ ಮಾಡಿದರೂ ಯಶಸ್ಸು ಕಾಣುತ್ತೇವೆ. ಆದರೆ, ನನ್ನ ಅದೃಷ್ಟ ಎಂದರೆ ನನ್ನ ಬಳಿ ಬರುತ್ತಿರುವ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಪಾತ್ರ ಮತ್ತೆ ಮತ್ತೆ ರೀಪಿಟ್ ಆಗದಂತೆ ನೋಡಿಕೊಳ್ಳುತ್ತೇನೆ. ಟೀಚರ್, ಪೊಲೀಸ್, ಲೇಡಿ ಬಾಸ್, ಕಂಪನಿ ಮ್ಯಾನೇಜರ್ ಹೀಗೆ ಯಾವ ಪಾತ್ರ ಬೇಕಾದರೂ ನಾನು ಮಾಡಬಲ್ಲೆ. ಗ್ಲಾಮರಸ್ ನೆಗೆಟಿವ್ ಪಾತ್ರ ಮಾಡುವುದಕ್ಕೂ ನನಗೆ ಇಷ್ಟವಿದೆ.

6.  ಕವಲುದಾರಿ ನಿರೀಕ್ಷೆಯ ಚಿತ್ರ
ನನ್ನ ನಟನೆಯ ಮತ್ತೊಂದು ಬಹು ನಿರೀಕ್ಷೆಯ ಚಿತ್ರ ‘ಕವಲುದಾರಿ’. ಹೇಮಂತ್ ರಾವ್ ನಿರ್ದೇಶನದ, ಅನಂತ್‌ನಾಗ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನನ್ನದು ಸಣ್ಣ ಪಾತ್ರವಾದರೂ ತೂಕವಿದೆ. ಅತಿಥಿಯಾಗಿ ಕಾಣಿಸಿಕೊಂಡಿರುವ ನನ್ನ ಪಾತ್ರಕ್ಕೇ ತೂಕವಿದೆ ಎಂದಾಗ ಇಡೀ ಸಿನಿಮಾ ಹೇಗಿರುತ್ತದೆಂಬುದನ್ನು ನೀವೇ ಯೋಚಿಸಿ.

7. ಎಲ್ಲರಿಗೂ ನನ್ನ ಬ್ಯೂಟಿ ಮೇಲೆ ಕಣ್ಣು
ನಿಮ್ಮ ಸೌಂದರ್ಯದ ಗುಟ್ಟೇನು?... ಇದು ನಾನು ಅತಿ ಹೆಚ್ಚು ಬಾರಿ ಎದುರಿಸಿರುವ ಪ್ರಶ್ನೆ. ಕೇವಲ ಮಾಧ್ಯಮಗಳು ಮಾತ್ರವಲ್ಲ, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದರೂ ಇದೇ ಕೇಳುತ್ತಾರೆ. ಹೀಗೆ ಕೇಳಿದಾಗ ಸಹಜವಾಗಿ ಮನಸ್ಸಿನೊಳಗೆ ಖುಷಿಯಾಗುತ್ತದೆ. ನನ್ನ ಸೌಂದರ್ಯದ ಗುಟ್ಟಿಗೆ ಕಾರಣ ನಾನು ಬೆಳೆದು ಬಂದ ಪರಿಸರ. ಜತೆಗೆ ನನ್ನ ಜೀವನ ಶೈಲಿ. ನಾನು ಹೆಚ್ಚಾಗಿ ನೆಗೆಟಿವ್ ಆಗಿ ಯೋಚಿಸಲ್ಲ. ನಿತ್ಯ ಯೋಗ ಮಾಡುತ್ತೇನೆ. ಕೆಟ್ಟ ಅಭ್ಯಾಸಗಳಿಲ್ಲ. ಸಮಯಕ್ಕೆ ಸರಿಯಾಗಿ ಊಟ ಮತ್ತು ನಿದ್ದೆ ಮಾಡುವುದನ್ನು ತಪ್ಪಿಸಲ್ಲ. ಮಾಡುವ ಕೆಲಸದಲ್ಲಿ ಪ್ರೀತಿ ಮತ್ತು ಶ್ರದ್ಧೆ ತೋರುತ್ತೇನೆ. ಇವಿಷ್ಟನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿರುವುದೇ ನನ್ನ ಸೌಂದರ್ಯದ ಗುಟ್ಟು.

-ಆರ್ ಕೇಶವಮೂರ್ತಿ   

click me!