‘ಜೈ ಹನುಮಾನ್’ನಲ್ಲಿ ಶ್ರೀರಾಮ ಯಾರು? ರಿಷಬ್ ಶೆಟ್ಟಿ ಹನುಮಂತನಾದ ಬೆನ್ನಲ್ಲೇ ಹೆಚ್ಚಿದ ಕುತೂಹಲ!

Published : Aug 15, 2026, 05:41 PM IST
Rishab Shetty

ಸಾರಾಂಶ

Jai Hanuman Rishab Shetty: ‘ಹನು-ಮಾನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ ಬಳಿಕ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಸಿನಿಮಾಟಿಕ್ ಯೂನಿವರ್ಸ್‌ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ.

‘ಹನು-ಮಾನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ ಬಳಿಕ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಸಿನಿಮಾಟಿಕ್ ಯೂನಿವರ್ಸ್‌ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ. ಅದರ ಭಾಗವಾಗಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಜೈ ಹನುಮಾನ್’ ಚಿತ್ರದ ಮೇಲೆ ಈಗಾಗಲೇ ಭಾರೀ ನಿರೀಕ್ಷೆ ಇದೆ. ಅದರಲ್ಲೂ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಇದೀಗ ಅದಕ್ಕಿಂತಲೂ ದೊಡ್ಡ ಪ್ರಶ್ನೆಯೊಂದು ಸಿನಿಪ್ರಿಯರ ಮುಂದೆ ನಿಂತಿದೆ. ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ?

ಹನುಮಂತನಾಗಿ ರಿಷಬ್ ಶೆಟ್ಟಿ

‘ಹನು-ಮಾನ್’ನ ಮುಂದುವರಿದ ಭಾಗವಾಗಿರುವ ‘ಜೈ ಹನುಮಾನ್’ ಮೊದಲ ಚಿತ್ರಕ್ಕಿಂತ ಸಂಪೂರ್ಣ ವಿಭಿನ್ನ ವಲಯದಲ್ಲಿ ಸಾಗಲಿದೆ ಎನ್ನಲಾಗುತ್ತಿದೆ. ಸೂಪರ್‌ಹೀರೋ ಕಥಾಹಂದರದ ಬದಲು ಪೌರಾಣಿಕತೆ, ಭಕ್ತಿ, ದೈವಿಕ ಅಂಶಗಳು ಮತ್ತು ಆ್ಯಕ್ಷನ್‌ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದು, ಅವರ ಲುಕ್ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದೆ. ಪಾತ್ರಕ್ಕಾಗಿ ರಿಷಬ್ ಮಾಡಿಕೊಂಡಿರುವ ಮೇಕ್‌ಓವರ್ ಕೂಡ ಕುತೂಹಲ ಮೂಡಿಸಿದೆ. ವಾಮಿಕಾ ಗಬ್ಬಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ತೇಜ ಸಜ್ಜ ಹಾಗೂ ರಾಣಾ ದಗ್ಗುಬಾಟಿ ಸೇರಿದಂತೆ ಹಲವು ಪ್ರಮುಖ ನಟರ ಹೆಸರುಗಳೂ ಚಿತ್ರಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿವೆ.

ಶ್ರೀರಾಮನ ಪಾತ್ರವೇ ಈಗ ದೊಡ್ಡ ಚರ್ಚೆ

‘ಜೈ ಹನುಮಾನ್’ ಕಥೆಯಲ್ಲಿ ಹನುಮಂತನಷ್ಟೇ ಶ್ರೀರಾಮನ ಪಾತ್ರಕ್ಕೂ ಮಹತ್ವವಿದೆ ಎನ್ನಲಾಗುತ್ತಿದೆ. ಹೀಗಾಗಿ ಈ ಪಾತ್ರವನ್ನು ಯಾರು ನಿರ್ವಹಿಸಬೇಕು ಎಂಬ ವಿಚಾರದಲ್ಲಿ ನಿರ್ದೇಶಕ ಪ್ರಶಾಂತ್ ವರ್ಮಾ ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಶ್ರೀರಾಮನ ಪಾತ್ರಕ್ಕೆ ಸ್ಟಾರ್ ನಟನೊಬ್ಬರನ್ನು ಕರೆತಂದರೆ ಸಿನಿಮಾದ ಕ್ರೇಜ್ ಮತ್ತಷ್ಟು ಹೆಚ್ಚಲಿದೆ ಎಂಬ ಲೆಕ್ಕಾಚಾರ ಚಿತ್ರತಂಡದಲ್ಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟಾಲಿವುಡ್‌ನ ಪ್ರಮುಖ ನಟರೊಬ್ಬರನ್ನು ಪಾತ್ರಕ್ಕೆ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಟಾಲಿವುಡ್‌ಗೆ ಒಪ್ಪಿಗೆ ಇಲ್ಲದಿದ್ದರೆ ಸ್ಯಾಂಡಲ್‌ವುಡ್ ಆಯ್ಕೆ?

ಒಂದು ವೇಳೆ ತೆಲುಗು ಚಿತ್ರರಂಗದ ಸ್ಟಾರ್ ನಟರು ಈ ಪಾತ್ರಕ್ಕೆ ಒಪ್ಪದಿದ್ದರೆ ಮತ್ತೊಂದು ಆಯ್ಕೆಯೂ ಪ್ರಶಾಂತ್ ವರ್ಮಾ ಅವರ ಮುಂದಿದೆ ಎನ್ನಲಾಗುತ್ತಿದೆ. ರಿಷಬ್ ಶೆಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಇರುವ ಉತ್ತಮ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು, ಸ್ಯಾಂಡಲ್‌ವುಡ್‌ನ ಜನಪ್ರಿಯ ನಟರೊಬ್ಬರನ್ನು ಶ್ರೀರಾಮನ ಪಾತ್ರಕ್ಕೆ ಕರೆತರುವ ಯೋಚನೆಯೂ ಇದೆ ಎನ್ನಲಾಗಿದೆ. ಆದರೆ ಈ ಎರಡೂ ಆಯ್ಕೆಗಳು ಅಂತಿಮವಾಗದಿದ್ದರೆ ಮತ್ತೊಂದು ಕುತೂಹಲಕಾರಿ ಪ್ರಯೋಗಕ್ಕೂ ನಿರ್ದೇಶಕರು ಮುಂದಾಗಬಹುದು ಎಂಬ ಚರ್ಚೆ ಶುರುವಾಗಿದೆ.

AI ಮೂಲಕ ಶ್ರೀರಾಮನನ್ನು ಸೃಷ್ಟಿಸಲಿದ್ದಾರಾ?

ನಟರ ಆಯ್ಕೆ ಸಾಧ್ಯವಾಗದ ಪರಿಸ್ಥಿತಿಯಲ್ಲಿ AI ಮತ್ತು ಅತ್ಯಾಧುನಿಕ VFX ತಂತ್ರಜ್ಞಾನ ಬಳಸಿ ಶ್ರೀರಾಮನ ಪಾತ್ರವನ್ನು ಡಿಜಿಟಲ್ ರೂಪದಲ್ಲಿ ಕಟ್ಟಿಕೊಡುವ ಆಯ್ಕೆಯೂ ಪರಿಗಣನೆಯಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ‘ಜೈ ಹನುಮಾನ್’ನಲ್ಲಿ ರಿಷಬ್ ಶೆಟ್ಟಿ ಹನುಮಂತನಾಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದರೂ, ಅವರ ಎದುರು ಶ್ರೀರಾಮನಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯಕ್ಕೆ ಶ್ರೀರಾಮನ ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಸ್ಟಾರ್ ನಟನಾ? ಕನ್ನಡದ ಖ್ಯಾತ ನಟನಾ? ಅಥವಾ ತಂತ್ರಜ್ಞಾನದ ಮೂಲಕ ಡಿಜಿಟಲ್ ರಾಮನಾ? ಎಂಬ ಕುತೂಹಲ ಮಾತ್ರ ‘ಜೈ ಹನುಮಾನ್’ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 13 ಅಗ್ನಿ ಪರೀಕ್ಷೆ: ಕರ್ನಾಟಕದ ರ್ಯಾಪರ್ ಕಿಂಗ್ ಚಂದನ್ ಶೆಟ್ಟಿಗೆ ಸೈಕ್ ಮಾಡಿದ ಮಾಡ್ರನ್ ಮಹಾಕವಿ ಮಂಜ!
‘ಕಿಯಾರಾಗೆ ಕಿಸ್ ಕೂಡ ಮಾಡಿಲ್ಲ’: ‘ತಬಾಹಿ’ ವಿವಾದದ ಬಗ್ಗೆ ಯಶ್ ಖಡಕ್ ಮಾತು