
ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಒಂದು ಹೇಳಿಕೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಯಾವುದೇ ಮುಜುಗರವಿಲ್ಲದೆ ತಮ್ಮ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಂಡಿರುವ ನಟಿ, ‘ನಾನು ಹೆಮ್ಮೆಯ ಅಂಧಭಕ್ತೆ’ ಎಂದು ಹೇಳಿಕೊಂಡಿದ್ದಾರೆ. ಇಶಾ ಕೊಪ್ಪಿಕರ್ ಹಂಚಿಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೂ ಕಾರಣವಾಗಿದೆ. ಕನ್ನಡದ ‘ಸೂರ್ಯವಂಶ’ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದ ಇಶಾ ಕೊಪ್ಪಿಕರ್, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಮ್ಮ ‘ಅಂಧಭಕ್ತೆ’ ಎಂಬ ಹೇಳಿಕೆಯ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
‘ನಾನು ಹೆಮ್ಮೆಯ ಅಂಧಭಕ್ತೆ’
ವಿಡಿಯೋದಲ್ಲಿ ಮಾತನಾಡಿರುವ ಇಶಾ ಕೊಪ್ಪಿಕರ್, ದೇಶವನ್ನು ಪ್ರೀತಿಸುವುದು, ಅದರ ಪ್ರಗತಿಯನ್ನು ಕಂಡು ಹೆಮ್ಮೆಪಡುವುದೇ ‘ಭಕ್ತಿ’ ಎಂದಾದರೆ, ತಮ್ಮನ್ನು ಭಕ್ತೆ ಅಥವಾ ಅಂಧಭಕ್ತೆ ಎಂದು ಕರೆಯುವುದರಲ್ಲಿ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ. ಆದರೆ ತಮ್ಮ ಈ ಭಕ್ತಿ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಭಾರತದ ಮೇಲಿನ ಪ್ರೀತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೇಶವೇ ತಮಗೆ ಮೊದಲ ಆದ್ಯತೆ ಎಂದು ಹೇಳಿರುವ ಇಶಾ, ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನಿಸುವ ಹಕ್ಕು ಹಾಗೂ ಭಿನ್ನಾಭಿಪ್ರಾಯ ಹೊಂದುವ ಸ್ವಾತಂತ್ರ್ಯವೂ ತನಗಿದೆ ಎಂದು ತಿಳಿಸಿದ್ದಾರೆ.
‘ದೇಶ ನನಗೆ ಏನು ಕೊಟ್ಟಿದೆ ಅನ್ನೋದಕ್ಕಿಂತ…’
ತಮ್ಮ ಮಾತಿನಲ್ಲಿ ದೇಶದ ಬಗ್ಗೆ ಜನರ ಚಿಂತನಾ ಕ್ರಮ ಬದಲಾಗಬೇಕು ಎಂಬ ಅಭಿಪ್ರಾಯವನ್ನೂ ಇಶಾ ವ್ಯಕ್ತಪಡಿಸಿದ್ದಾರೆ. ‘ದೇಶ ನಮಗೆ ಏನು ಮಾಡಿದೆ?’ ಎಂದು ಪ್ರಶ್ನಿಸುವುದಕ್ಕಿಂತ, ‘ನಾವು ದೇಶಕ್ಕೆ ಏನು ಕೊಡುಗೆ ನೀಡಬಹುದು?’ ಎಂದು ಯೋಚಿಸುವ ಸಮಯ ಬಂದಿದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಭಾರತ ವೇಗವಾಗಿ ಬದಲಾಗುತ್ತಿದ್ದು, ಹೊಸ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದೇ ವೇಳೆ, ತಮ್ಮನ್ನು ಭಕ್ತೆ, ಅಂಧಭಕ್ತೆ ಅಥವಾ ರಾಷ್ಟ್ರವಾದಿ ಎಂದು ಯಾವುದಾದರೂ ಹೆಸರಿನಿಂದ ಕರೆಯಬಹುದು. ಆದರೆ ತಾನು ಭಾರತೀಯಳು ಮತ್ತು ತನ್ನ ದೇಶವನ್ನು ಪ್ರೀತಿಸುತ್ತೇನೆ ಎಂಬುದು ಮಾತ್ರ ಮುಖ್ಯ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ.
‘ಅಂಧಭಕ್ತಿ’ ಎಂದರೆ ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ!
ವಿಡಿಯೋ ಮಾತ್ರವಲ್ಲದೆ, ಇಶಾ ಕೊಪ್ಪಿಕರ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿಯೂ ಇದೇ ವಿಚಾರವನ್ನು ಮತ್ತಷ್ಟು ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ. ಭಾರತವನ್ನು ಪ್ರೀತಿಸುವುದೇ ‘ಅಂಧಭಕ್ತಿ’ ಎಂದು ಕರೆಯುವುದಾದರೆ, ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ತಪ್ಪು ಎಂದು ಅನಿಸಿದ ವಿಚಾರಗಳನ್ನು ಪ್ರಶ್ನಿಸುವ ಮತ್ತು ಸರಿಯೆಂದು ಕಂಡದ್ದನ್ನು ಮೆಚ್ಚುವ ಹಕ್ಕು ತನಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ತನ್ನ ದೇಶವೇ ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ.
ಇಶಾ ಕೊಪ್ಪಿಕರ್ ಅವರ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಕೆಲವರು ನಟಿಯ ದೇಶಪ್ರೇಮದ ನಿಲುವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಹೀಗಾಗಿ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇಶಾ ಕೊಪ್ಪಿಕರ್ ಅವರ ಸಿನಿಮಾ ಹಿನ್ನೆಲೆಯನ್ನೂ ಗಮನಿಸಿದರೆ, ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ‘ಸೂರ್ಯವಂಶ’ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಇಂದಿಗೂ ಪರಿಚಿತ. ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿರುವ ಇಶಾ, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.