
ಕೊಪ್ಪಳ(ನ.20): ಹಿಂದೂ-ಮುಸ್ಲಿಂ ಭಾವ್ಯೆಕ್ಯಕ್ಕೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಗ್ರಾಮದ ಶಂಶುದ್ದೀನ್ ಅವರು ಈಗ ಎರಡೂ ಧರ್ಮದ ನಡುವಿನ ಭಾವ್ಯೆಕ್ಯತೆಯನ್ನು ಬಿಂಬಿಸುವ ಸಿನಿಮಾ ನಿರ್ಮಾಣಕ್ಕಾಗಿ ತನ್ನ ಪಾಲಿನ ಹೊಲವನ್ನೇ ಮಾರಲು ಮುಂದಾಗಿದ್ದಾರೆ. ಅವರ ಈ ಕನಸಿಗೆ ಪೋಷಕರಿಂದಲೂ ಬೆಂಬಲ ವ್ಯಕ್ತವಾಗಿದ್ದು, ಆಸ್ತಿ ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.
ಪ್ರತಿಬಾರಿ ತಮ್ಮ ವಿಭಿನ್ನ ಆಲೋಚನೆಗಳಿಂದಲೇ ಗುರುತಿಸಿಕೊಂಡಿರುವ ಶಂಶುದ್ದೀನ್ ವರ್ಷದ ಹಿಂದಷ್ಟೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನನ್ನದೂ ಒಂದು ಕಾಣಿಕೆ ಇರಲಿ ಎಂದು ರೈಲಿನ ಮೂಲಕ ಅಲ್ಲಿಗೇ ತೆರಳಿ ಒಂದು ಚೀಲ ಸಿಮೆಂಟ್ ದಾನ ಮಾಡಿ ಬಂದು ಸುದ್ದಿಯಾಗಿದ್ದರು. ಈಗ ತಮ್ಮ ಪಾಲಿನ ಜಮೀನನ್ನೇ ಮಾರಿ ಹಿಂದೂ-ಮುಸ್ಲಿಂ ಧರ್ಮದ ನಡುವಿನ ಭಾವೈಕ್ಯತೆ ಬಿಂಬಿಸಲು ಹೊರಟಿದ್ದಾರೆ. ಪುತ್ರನ ಈ ಕನಸಿಗೆ ಅವರ ತಂದೆ ಯಮನೂರ್ ಸಾಬ್ ಹಾಗೂ ತಾಯಿ ಜನ್ನತ್ ಬಿ. ನದಾಫ್ ಅವರು ಅಸ್ತು ಎಂದಿದ್ದಾರೆ. ಈ ದಂಪತಿಗೆ ಇಬ್ಬರು ಪುತ್ರರಿದ್ದು, ಇಬ್ಬರ ಪಾಲಿಗೆ 3.5 ಎಕರೆ ಜಮೀನಿದೆ. ಇದರಲ್ಲಿ ಶಂಶುದ್ದೀನ್ ಪಾಲಿನ 3.5 ಎಕರೆ ಜಮೀನನ್ನು ಮಾರಾಟ ಮಾಡಿ 10 ಲಕ್ಷ ರೂ. ಬಂಡವಾಳ ಹೂಡಲು ಅಸ್ತು ಎನ್ನುವ ಮೂಲಕ ಅವರ ಪೋಷಕರು ಮಗನ ಆಸೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಸಿನಿಮಾ ನಂಟೂ ಉಂಟು
ಶಂಶುದ್ದೀನ್ ಅವರು ಈಗಾಗಲೇ ಧೂಳಿಪಟ, ಕೋಯಲ್, ಜೊಲ್ಲುಪಾರ್ಟಿ ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿ, ಸಹನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವವನ್ನೂ ಹೊಂದಿದ್ದಾರೆ. ಈ ಅನುಭವದ ಆಧಾರದ ಮೇಲೆಯೇ ತಾವೇ ಸಿನಿಮಾ ನಿರ್ಮಾಣ ಕಾರ್ಯಕ್ಕೆ ತಯಾರಿ ನಡೆಸಿದ್ದಾರೆ. ಈ ಸಿನಿಮಾ ಬರುವ ಜನವರಿಯಲ್ಲಿ ಸೆಟ್ಟೇರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.