
ಪಣಜಿ (ಗೋವಾ): ‘ಕೆಲವು ದನಿಗಳು ಕೇವಲ ಸಂಗೀತದಿಂದ ಕೋಣೆಯನ್ನು ತುಂಬುವುದಕ್ಕಿಂತ ಮಿಗಿಲಾದ ಕೆಲಸ ಮಾಡುತ್ತವೆ. ಅವು ನಮ್ಮ ಬಾಲ್ಯದ ಭಾಗವಾಗುತ್ತವೆ, ಬದುಕಿನ ಮೈಲಿಗಲ್ಲುಗಳಲ್ಲಿ ಜೊತೆಯಾಗುತ್ತವೆ ಮತ್ತು ಹಾಡು ಮುಗಿದ ಮೇಲೂ ನಮ್ಮೊಂದಿಗೆ ಉಳಿಯುತ್ತವೆ’ ಎಂದು ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಹೇಳಿದರು.
57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ನಡೆದ ‘ಲತಾ ಮಂಗೇಶ್ಕರ್ ಟಾಕ್: ಆಶಾ ಭೋಸ್ಲೆ ಮತ್ತು ಎಸ್. ಜಾನಕಿ ಅವರ ನೆನಪಿನಲ್ಲಿ ಸದಾ ಪ್ರತಿಧ್ವನಿಸುವ ದನಿ’ ಎಂಬ ವಿಶೇಷ ಮಾಸ್ಟರ್ಕ್ಲಾಸ್ನಲ್ಲಿ ನಟಿ ಹಾಗೂ ನಿರ್ದೇಶಕಿ ಸುಹಾಸಿನಿ ಮಣಿರತ್ನಂ ಅವರೊಂದಿಗೆ ಸಂವಾದ ನಡೆಸಿದ ಚಿತ್ರಾ, ದಿಗ್ಗಜ ಗಾಯಕಿಯರ ಒಡನಾಟ, ತಮ್ಮ ಸಂಗೀತ ಪಯಣ ಮತ್ತು ರೆಕಾರ್ಡಿಂಗ್ ಸ್ಟುಡಿಯೋಗಳ ಅಪರೂಪದ ನೆನಪುಗಳನ್ನು ಬಿಚ್ಚಿಟ್ಟರು.
‘ಭಾರತೀಯ ಚಿತ್ರಸಂಗೀತದಲ್ಲಿ ಲತಾ ಮಂಗೇಶ್ಕರ್, ಆಶಾ ಭೋಸ್ಲೆ ಮತ್ತು ಎಸ್. ಜಾನಕಿ ಅವರ ದನಿಗಳು ಕೇವಲ ಹಾಡುಗಳಾಗಿ ಉಳಿದಿಲ್ಲ; ಅವು ನಮ್ಮ ಬಾಲ್ಯ, ಬದುಕಿನ ಏಳುಬೀಳು, ಪ್ರೀತಿ, ವಿರಹ ಮತ್ತು ದುಃಖದ ಪ್ರತಿಯೊಂದು ಕ್ಷಣದಲ್ಲೂ ಜೊತೆಯಾಗಿ ಬೆರೆತುಹೋಗಿವೆ’ ಎಂದರು.
ಬದುಕಿನ ಮೊದಲ ತಿರುವಿದು!
ತಂದೆ ಆಕಾಶವಾಣಿ ಕಲಾವಿದರಾಗಿದ್ದ ಸಂಗೀತಮಯ ಕುಟುಂಬದಲ್ಲಿ ಬೆಳೆದ ಚಿತ್ರಾ, ಕಾಲೇಜಿನಲ್ಲಿ ಸಂಗೀತ ಶಿಕ್ಷಕಿಯಾಗುವ ಉದ್ದೇಶದಿಂದ ಸಂಗೀತವನ್ನು ಅಭ್ಯಸಿಸಿದ್ದರೇ ಹೊರತು ಹಿನ್ನೆಲೆ ಗಾಯಕಿಯಾಗುವ ಕನಸು ಕಂಡಿರಲಿಲ್ಲ. ಕನ್ಯಾಕುಮಾರಿಯ ಸಾಧ್ವಿ ಮಾಯಮ್ಮ ಅವರು ಬಾಲ್ಯದಲ್ಲೇ ಚಿತ್ರಾ ತಲೆಯ ಮೇಲೆ ಕೈಯಿಟ್ಟು ಗೀತವಾಣಿ ಎಂದು ಹರಸಿದ್ದನ್ನು ಹಾಗೂ ಗಾಯಕ ಕೆ.ಜೆ. ಯೇಸುದಾಸ್ ಅವರು ತಮ್ಮ ತರಂಗಿಣಿ ಸ್ಟುಡಿಯೋದಲ್ಲಿ ಹಾಡಿಸಿ ಪ್ರೋತ್ಸಾಹಿಸಿದ್ದೇ ತಮ್ಮ ಬದುಕಿನ ಮೊದಲ ತಿರುವಾಯಿತು ಎಂದು ಚಿತ್ರಾ ಸ್ಮರಿಸಿದರು.
ಲತಾ ಮಂಗೇಶ್ಕರ್ ಸ್ಟುಡಿಯೋಗೆ ಕಾಲಿಟ್ಟರೆ ಇಡೀ ವಾತಾವರಣವೇ ಗಾಂಭೀರ್ಯ ಮತ್ತು ಭಕ್ತಿಭಾವದಿಂದ ತುಂಬಿರುತ್ತಿತ್ತು; ಎಲ್ಲರೂ ಅವರನ್ನು ಅಷ್ಟೊಂದು ಗೌರವದಿಂದ ಕಾಣುತ್ತಿದ್ದರು. ಅವರ ಮೀರಾ ಭಜನ್ಗಳು ತಮಗೆ ಅತ್ಯಂತ ಪ್ರಿಯ ಎಂದ ಚಿತ್ರಾ, ತಮ್ಮ ಸಂಗೀತಕ್ಕಾಗಿ ಲತಾ ಅವರು ವೈಯಕ್ತಿಕ ಬದುಕಿನ ಸುಖ-ದುಃಖಗಳನ್ನು ತ್ಯಜಿಸಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಅಭಿಪ್ರಾಯಪಟ್ಟರು.
‘ನೀನ್ಯಾಕೆ ಇಷ್ಟು ತಾರಕ ಸ್ವರದಲ್ಲಿ ಹಾಡುತ್ತೀಯಾ?’
ಮತ್ತೊಂದೆಡೆ, ಸಹೋದರಿ ಲತಾ ಅವರ ನೆರಳಿನಿಂದ ಹೊರಬಂದು ತಮ್ಮದೇ ಆದ ವಿಶಿಷ್ಟ ಶೈಲಿ ರೂಪಿಸಿಕೊಂಡ ಆಶಾ ಭೋಸ್ಲೆ, ಕ್ಯಾಬರೆ, ಗಜಲ್ ಮತ್ತು ಪಾಶ್ಚಾತ್ಯ ಶೈಲಿಯ ಹಾಡುಗಳ ಮೂಲಕ ಹೊಸ ಹಾದಿ ತುಳಿದರು. ಆರ್.ಡಿ. ಬರ್ಮನ್ (ಪಂಚಮ್ದಾ) ಮತ್ತು ಓ.ಪಿ. ನಯ್ಯರ್ ಅವರ ಸಂಯೋಜನೆಯಲ್ಲಿ ಆಶಾ ದನಿ ಹೊಸ ಎತ್ತರಕ್ಕೆ ಏರಿತು ಎಂದ ಚಿತ್ರಾ, ಚೆನ್ನೈ ಸ್ಟುಡಿಯೋದಲ್ಲಿ ಆಶಾ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ‘ನೀನ್ಯಾಕೆ ಇಷ್ಟು ತಾರಕ ಸ್ವರದಲ್ಲಿ ಹಾಡುತ್ತೀಯಾ?’ ಎಂದು ಆಶಾ ನೇರವಾಗಿ ಕೇಳಿದ್ದ ಪ್ರಸಂಗವನ್ನು ನೆನೆದರು. ತಾವೂ ಸಹ ಆರ್.ಡಿ. ಬರ್ಮನ್ ಅವರೊಂದಿಗೆ ಕೆಲಸ ಮಾಡಿದ ನೆನಪನ್ನು ಹಂಚಿಕೊಂಡ ಚಿತ್ರಾ, ಪಂಚಮ್ದಾ ಅವರು ತಮಗಾಗಿ ದುರ್ಗಾ ಪೂಜೆ ವಿಶೇಷ ಗೀತೆಯೊಂದನ್ನು ಹಾಡಿಸಲು ಬಯಸಿದ್ದರು, ಆದರೆ ಅಷ್ಟರಲ್ಲೇ ಅವರು ನಿಧನರಾದರು ಎಂದು ವಿಷಾದಿಸಿದರು.
‘ಜಾನಕಿ ಅವರು ತಮ್ಮ ವೃತ್ತಿಬದುಕಿನಂತೆಯೇ ವೈಯಕ್ತಿಕವಾಗಿಯೂ ದಿಟ್ಟ ನಿರ್ಧಾರಗಳ ವ್ಯಕ್ತಿ. ಆದರೆ ನನಗೆ ಅವರು ತಾಯಿಯಂತಿದ್ದರು. ಅವರ ಮನೆಗೆ ಹೋದಾಗಲೆಲ್ಲಾ ತುಪ್ಪ, ಗೊಂಗುರ ಚಟ್ನಿ ಕಲಸಿದ ಅನ್ನವನ್ನು ಪ್ರೀತಿಯಿಂದ ಕೈಯಾರೆ ತುತ್ತು ಮಾಡಿ ತಿನ್ನಿಸುತ್ತಿದ್ದರು; ಅವರು ತಿನ್ನಿಸಿದರೆ ಖಾರದ ಅಡುಗೆಯೂ ಸಿಹಿಯಾಗಿರುತ್ತಿತ್ತು’ ಎಂದು ಚಿತ್ರಾ ಭಾವುಕರಾದರು.
ಚಿತ್ರಾ ಕನ್ನಡದಲ್ಲಿ ಸುಮಾರು 1,500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. 90ರ ದಶಕದ ರಾಗ ಆಧಾರಿತ ಮೆಲೋಡಿ ಹಾಡುಗಳಿಗೂ, ಇಂದಿನ ಪಾಶ್ಚಾತ್ಯ ಶೈಲಿಯ ಹಾಡುಗಳಿಗೂ ಇರುವ ವ್ಯತ್ಯಾಸವನ್ನು ವಿಶ್ಲೇಷಿಸಿದ ಅವರು, ದಿವಂಗತ ಸಂಗೀತ ನಿರ್ದೇಶಕ ದೇವ ಅವರ ‘ಅಮೃತವರ್ಷಿಣಿ’ ಚಿತ್ರದ ಗೀತೆಗಳನ್ನು ನೆನೆದರು. ಇದೇ ವೇಳೆ ‘ಅಮೃತವರ್ಷಿಣಿ ಭಾಗ-2’ ಚಿತ್ರದ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದ್ದು, ಮತ್ತೆ ಚಿತ್ರಾ ಹಾಡಲಿದ್ದಾರೆ ಎಂದು ಸುಹಾಸಿನಿ ಪ್ರಕಟಿಸಿದರು.
ರೋಜಾ ಚಿತ್ರದ ಹಾಡೊಂದಕ್ಕೆ ಚಿತ್ರಾ ಅವರ ದನಿಯೇ ಬೇಕೆಂದು ಎ.ಆರ್. ರೆಹಮಾನ್ ಬರೋಬ್ಬರಿ ಮೂರು ತಿಂಗಳು ಕಾದಿದ್ದರು ಎಂಬ ಸಂಗತಿಯನ್ನು ಚಿತ್ರಾ ಹಂಚಿಕೊಂಡರು. ರೆಹಮಾನ್ ಹೆಚ್ಚಾಗಿ ಮಧ್ಯರಾತ್ರಿ ಅಥವಾ ಕೊನೆಯ ಕ್ಷಣದಲ್ಲಿ ರೆಕಾರ್ಡಿಂಗ್ಗೆ ಕರೆಯುತ್ತಿದ್ದರು; ‘ಶೀತವಾಗಿದ್ದರೆ ಬನ್ನಿ, ದನಿ ಇನ್ನೂ ವಿಭಿನ್ನವಾಗಿ ಕೇಳಿಸುತ್ತದೆ’ ಎಂದು ಹೇಳುತ್ತಿದ್ದರು ಎಂದು ನಗುತ್ತಾ ನೆನೆದರು. ತಾವು ಈಗಲೂ ಹಳೆಯ ಸಂಪ್ರದಾಯದಂತೆ ಕಿವಿಗೆ ಹತ್ತಿ ಇಟ್ಟುಕೊಳ್ಳುವುದು, ತಣ್ಣನೆಯ ಪದಾರ್ಥಗಳಿಂದ ದೂರವಿರುವುದು ಮುಂತಾದ ಶಿಸ್ತು ಪಾಲಿಸುತ್ತಿದ್ದರೆ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ‘ಮಳೆಯಲ್ಲಿ ನೆನೆ, ಐಸ್ಕ್ರೀಮ್ ತಿನ್ನು’ ಎಂದು ತಮಾಷೆ ಮಾಡುತ್ತಿದ್ದುದನ್ನು ಚಿತ್ರಾ ಸ್ಮರಿಸಿದರು. ಅಲ್ಲದೆ, ವಯಸ್ಸಾದಂತೆ ಗಾಯಕರು ತಮ್ಮ ದನಿಯ ಮಿತಿಗಳನ್ನು ಅರಿತು ಹಾಡುಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.