ಸ್ಯಾಂಡಲ್‌ವುಡ್ ಸೆಲಬ್ರಿಟಿಗಳ ಸ್ವತಂತ್ರ ದಿನಾಚರಣೆ

By Web DeskFirst Published Aug 15, 2018, 1:34 PM IST
Highlights

ನಾವು ನಿಜವಾಗಿಯೂ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ ಅಥವಾ ಸ್ವತಂತ್ರವಾಗಿ ಬದುಕುತ್ತಿದ್ದೇವೆ, ಎಂದರೆ ಚಳಿ-ಗಾಳಿ- ಬಿಸಿಲು- ಮಳೆ ಎನ್ನದೆ ಪ್ರಾಣದ ಹಂಗು ತೊರೆದು ದೇಶ ಕಾಯುತ್ತಿರುವ ಸೈನಿಕ ಕೊಟ್ಟ ಧೈರ್ಯದಿಂದಲೇ. ಗಡಿ
ಕಾಯುತ್ತ ದೇಶವನ್ನು ನೆಮ್ಮದಿಯಾಗಿರುವಂತೆ ನೋಡಿಕೊಂಡ ಆ ಯೋಧರನ್ನು ಗೌರವಿಸುವುದು ನಿಜವಾದ ಸ್ವಾತಂತ್ರ್ಯ- ಭಾರತೀ ವಿಷ್ಣುವರ್ಧನ್  

ಬೆಂಗಳೂರು (ಆ. 15): ಸ್ಯಾಂಡಲ್‌ವುಡ್ ನಟಿಯರ ಪ್ರಕಾರ ಸ್ವಾತಂತ್ರ ಎಂದರೇನು? ಹೇಗೆ ಆಚರಿಸುತ್ತಾರೆ ನೋಡೋಣ. 

ಯೋಧರನ್ನು ಗೌರವಿಸುವುದೇ ನಿಜವಾದ ಸ್ವಾತಂತ್ರ್ಯ

ನಾನು ಹುಟ್ಟಿದಾಗಿನಿಂದಲೂ ಸ್ವತಂತ್ರವಾಗಿಯೇ ಬೆಳೆದು ಬಂದವಳು. ನನ್ನ ಹೆತ್ತವರು ನನಗೆ ಕೊಟ್ಟ ಸ್ವಾತಂತ್ರ್ಯ ಎಲ್ಲರಿಗೂ ಸಿಗುವಂತಾಗಬೇಕು. ನಾವು ನಿಜವಾಗಿಯೂ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ ಅಥವಾ ಸ್ವತಂತ್ರವಾಗಿ ಬದುಕುತ್ತಿದ್ದೇವೆ, ಎಂದರೆ ಚಳಿ-ಗಾಳಿ- ಬಿಸಿಲು- ಮಳೆ ಎನ್ನದೆ ಪ್ರಾಣದ ಹಂಗು ತೊರೆದು ದೇಶ ಕಾಯುತ್ತಿರುವ ಸೈನಿಕ ಕೊಟ್ಟ ಧೈರ್ಯದಿಂದಲೇ.

ಗಡಿ ಕಾಯುತ್ತ ದೇಶವನ್ನು ನೆಮ್ಮದಿಯಾಗಿರುವಂತೆ ನೋಡಿಕೊಂಡ ಆ ಯೋಧರನ್ನು ಗೌರವಿಸುವುದು ನಿಜವಾದ ಸ್ವಾತಂತ್ರ್ಯ. ದೇಶ ಕಾಯುವ ವೀರನ ಮನೆಯಲ್ಲಿ ನಾವು ಸಂಭ್ರಮ ಕಾಣುವುದೇ ನನ್ನ ಕಲ್ಪನೆಯ ಸ್ವಾತಂತ್ರ್ಯ. ಅಂಥ ಸಂಭ್ರಮ ನಮಗಿಂತ ಹೆಚ್ಚಾಗಿ ಪ್ರತಿಯೊಬ್ಬ ಯೋಧನ ಮನೆಯಲ್ಲಿ ಕಾಣುವಂತಾಗಲಿ. ಆ ಮೂಲಕ ಸ್ವಾತಂತ್ರ್ಯ ಎನ್ನುವುದಕ್ಕೆ ನಿಜವಾದ ಅರ್ಥ ಸಿಗಲಿ. ಹಾಗೆ ಸ್ವಾತಂತ್ರ್ಯ ದಿನಾಚರಣೆ ಪ್ರತಿ ದಿನದ ಆಚರಣೆಯಾಗಲಿ. 

-ಭಾರತೀ ವಿಷ್ಣುವರ್ಧನ್ , ನಟಿ

ಐಕ್ಯತೆ ಭಾವನೆ ಹುಟ್ಟಿಸುವ ಸಂಭ್ರಮ

ಮನಸ್ಸಿನಲ್ಲಿ ಯಾವುದೇ ಭಯ ಇಲ್ಲದೆ ಪ್ರತಿನಿತ್ಯ ನೆಮ್ಮದಿಯಾಗಿ ಜೀವನ ಮಾಡುವುದೇ ಸ್ವಾತಂತ್ರ್ಯ. ನಾನು, ನನ್ನ ದೇಶ ಎನ್ನುವ ಹೆಮ್ಮೆಯಿಂದ ಇಡೀ ದೇಶ ಬೀಗುತ್ತಿರುವ ದಿನವೇ ನಾನು ಹುಟ್ಟಿದೆ ಎಂಬುದು ಮತ್ತೊಂದು ಸಂಭ್ರಮ. ಆದರೆ, ಆ.15 ರಂದು ನನ್ನ ಹುಟ್ಟುಹಬ್ಬದ ಸಂಭ್ರಮಕ್ಕಿಂತ ದೇಶದ ಸ್ವಾತಂತ್ರ್ಯ ಸಂಭ್ರಮ ಮೊದಲಿಗೆ ಕಾಣುತ್ತದೆ. ಪ್ರತಿ ವರ್ಷ ಸ್ವಾತಂತ್ರ್ಯ ಬಂದಾಗ ನಮ್ಮ ಶಾಲಾ ದಿನಗಳು ನೆನಪಾಗುತ್ತವೆ. ಇಡೇ ದೇಶವೇ ಸೇರಿ ಒಂದು ಹಬ್ಬ ಆಚರಿಸುತ್ತಿದೆ ಎನ್ನುವ ಭಾವನೆ ಮೂಡುತ್ತದೆ.  ನಾವೆಲ್ಲ ಒಂದೇ ಎನ್ನುವ ಐಕ್ಯತೆಯ ಭಾವನೆ ನಮ್ಮಲ್ಲು ಹುಟ್ಟಿಸುವಂತಹ ಸಂಭ್ರಮವೇ ಆ.೧೫. ಅಂಥ ಹಬ್ಬದ ಸಂಭ್ರಮ ಮತ್ತೊಮ್ಮೆ ಬಂದಿದೆ. ಹೆಮ್ಮೆಯಿಂದ ಆಚರಿಸೋಣ. ಮಹಾನಿಯರ
ತ್ಯಾಗವನ್ನು ನೆನೆಯೋಣ.

-ರಾಘವೇಂದ್ರ ರಾಜ್ ಕುಮಾರ್ , ನಟ

ಎಲ್ಲರನ್ನೂ ಗೌರವಿಸಬೇಕು, ಸಮಾನವಾಗಿ ಕಾಣಬೇಕು

ಸ್ವಾತಂತ್ರ್ಯವನ್ನು ಸೆಲೆಬ್ರೇಟ್ ಮಾಡುವ ದಿನಕ್ಕಿಂತ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತಹ ದಿನವಾಗಬೇಕು. ದೇಶಕ್ಕಾಗಿ ಹೋರಾಡಿದ, ಆ ಮಹನೀಯರು ತಂದುಕೊಟ್ಟ ಸ್ವತಂತ್ರ ದೇಶವನ್ನು ಕಾಯುತ್ತಿರುವ ಸೈನಿಕರನ್ನು ನೆನಪಿಸಿಕೊಂಡು ಹೆಮ್ಮೆಯಿಂದ ‘ಇದು ನನ್ನ ದೇಶ’ ಎಂದು ಎದೆ ತಟ್ಟಿ ಹೇಳುವಂತಹ ದಿನವಾಗಬೇಕು. 

ಆಗಸ್ಟ್ 15 ರ ಒಂದು ದಿನಕ್ಕೆ ಮಾತ್ರ ಇದು ಸೀಮಿತವಲ್ಲ. ದೇಶದ ಬಗ್ಗೆ ಪ್ರತಿ ದಿನ, ಪ್ರತಿ ಕ್ಷಣವೂ ಒಲವು ತೋರಬೇಕು. ಅದೇ ನನ್ನ ಪ್ರಕಾರ ನಿಜವಾದ ಸ್ವಾತಂತ್ರ್ಯ ಸಂಭ್ರಮ. ನಾನು, ನನ್ನದು ಎನ್ನುವುದಕ್ಕಿಂತ, ನಾವು, ನಮ್ಮದು ಎನ್ನುತ್ತ ಪ್ರತಿಯೊಬ್ಬರನ್ನು ಗೌರವದಿಂದ, ಸಮಾನವಾಗಿ ಕಾಣುವುದು ನನ್ನ ಕಲ್ಪನೆಯ ಸ್ವಾತಂತ್ರ್ಯ.

ಎಲ್ಲರೂ ಈ ದೇಶ ನನ್ನದು, ಈ ನಾಡು ನನ್ನದು, ಈ ಭಾಷೆ ನನ್ನದು ಎಂದು ಒಂದೇ ತತ್ವದ ಅಡಿಯಲ್ಲಿ ಒಂದುಗೂಡಬೇಕು. ಎಲ್ಲರಲ್ಲೂ ನಾವೆಲ್ಲರೂ ಒಂದೇ ಎನ್ನುವ ಭಾವ ಮೂಡಬೇಕು. ಅದುವೇ ನನ್ನ ಕಲ್ಪನೆಯ ಸ್ವತಂತ್ರ ಭಾರತ.

-ಪುನೀತ್ ರಾಜ್‌ಕುಮಾರ್ , ನಟ

ನಿರ್ಬಂಧಗಳಿಲ್ಲದೆ ಬದುಕುವುದೇ ಸ್ವಾತಂತ್ರ್ಯ

ನಮಗೆ ಎಲ್ಲರಿಗೂ ಮುಕ್ತವಾಗಿ ಯೋಚಿಸುವಂತಹ ಸ್ವಾತಂತ್ರ್ಯ ಇರಬೇಕು. ಯಾವುದೇ ರೀತಿಯಲ್ಲಿ ಕಟ್ಟುಪಾಡುಗಳು ಇರಬಾರದು. ನಿರ್ಬಂಧ ಇರಬಾರದು. ನಾವು ಏನಾದರೂ ಸಾಧನೆ ಮಾಡಲು ಹೊರಡುವಾಗ ಬೆಂಬಲ ನೀಡುವ ಮನಸ್ಸು ಇರಬೇಕು. ನಾವು ಈಗ ಏನಾದರೂ ಮಾಡಲು ಹೊರಟರೆ ಹೀಗಿರಬಾರದು, ಹೀಗೇ ಇರಬೇಕು ಎಂಬೆಲ್ಲಾ ಮಾತುಗಳು ಕೇಳಿ ಬರುತ್ತವೆ.

ಆ ಥರ ಇರಬಾರದು. ಮುಕ್ತವಾಗಿ ಯೋಚಿಸುವ ಮತ್ತು ಯಾವುದೇ ನಿರ್ಬಂಧಗಳಿಲ್ಲದೆ ಬದುಕುವಂತೆ ಸಾಧ್ಯವಾಗುವುದೇ ನಿಜವಾದ ಸ್ವಾತಂತ್ರ್ಯ. ನಾನು ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲಾದರೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಕಾಲೇಜಿನಲ್ಲಿರುವಾಗ ಸ್ವಾತಂತ್ರ್ಯ ದಿನಾಚರಣೆಯಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿದ್ದೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವುದು ನನಗೆ ತುಂಬಾ ಖುಷಿ ಕೊಡುತ್ತದೆ.

-ಶಾನ್ವಿ ಶ್ರೀವಾಸ್ತವ್ , ನಟಿ

ಹೆಣ್ಣಿಗೆ ದುಡಿಮೆಯಲ್ಲಿ ಸ್ವಾತಂತ್ರ್ಯ

ನನ್ನ ಕಲ್ಪನೆಯ ಸ್ವಾತಂತ್ರ್ಯ ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ. ಒಬ್ಬ ಹೆಣ್ಣಾಗಿ ಯೋಚಿಸಿದಾಗ ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬಹಳ ಮಹತ್ವದ್ದು ಅಂತ ಅನಿಸುತ್ತೆ. ಏಕೆಂದರೆ ಹೆಣ್ಣಿನ ಮೇಲೆ ಜವಾಬ್ದಾರಿಗಳು ಹೆಚ್ಚಿರುತ್ತವೆ. ಆಕೆಯ ಯೋಚನೆ, ಕನಸು, ಕೆಲಸ ಪ್ರತಿಯೊಂದಕ್ಕೂ ಮಿತಿ ಹೇರುವ ಪ್ರಯತ್ನವಾಗುತ್ತಿದೆ.

ಇವೆಲ್ಲದರಿಂದ ಆಕೆ ಒತ್ತಡಕ್ಕೊಳಗಾಗೋದು ಸಾಮಾನ್ಯವಾಗಿದೆ. ನನ್ನ ಪ್ರಕಾರ ಹೆಣ್ಣಿಗೆ ದುಡಿಯುವ ಶಕ್ತಿ ಬಂದಾಗ ಆಕೆಗೆ ಸಿಗುವ ಸ್ವಾತಂತ್ರ್ಯವೇ ಬೇರೆ ಥರದ್ದು. ಆಕೆಯ ಕನಸು ಸಾಕಾರಗೊಳ್ಳುವ, ತನ್ನ ಚಿಂತನೆಯನ್ನು ಕಾರ್ಯರೂಪಕ್ಕಿಳಿಸುವ ಸ್ವಾತಂತ್ರ್ಯ. ಓದುವ ಹೊತ್ತಿಗೆ ನಮಗೆ ಸ್ವಾತಂತ್ರೋತ್ಸವ ಅಂದರೆ ಸಂಭ್ರಮ. ಕೇಕ್ ಕೊಡ್ತಿದ್ರು, ಧ್ವಜಾರೋಹಣ ಆದ ಮೇಲೆ ರಜೆ ಸಿಗ್ತಿತ್ತು. ಈ ಮೂಲಕ ಸ್ವಾತಂತ್ರ್ಯದ ಬಗ್ಗೆ ಮುಗ್ಧ ಪ್ರೀತಿ ಇತ್ತು.

ಈಗ ನಮ್ಮ ದೇಶ, ಸಂಸ್ಕೃತಿ, ವಿಶ್ವದಲ್ಲಿ ನಾವು ಮುಂಚೂಣಿಯಲ್ಲಿರುವ ಬಗೆಯನ್ನು ಗಮನಿಸಿದಾಗ ನಾನು ಭಾರತೀಯಳು ಎನ್ನಲು ಹೆಮ್ಮೆ ಅನಿಸುತ್ತದೆ. 

-ಮಯೂರಿ, ನಟಿ

 

click me!