ಸಿಹಿ ಕಹಿಯ ರಾಮನವಮಿಯ ಪಾನಕ

Published : Oct 08, 2016, 11:26 AM ISTUpdated : Apr 11, 2018, 01:10 PM IST
ಸಿಹಿ ಕಹಿಯ ರಾಮನವಮಿಯ ಪಾನಕ

ಸಾರಾಂಶ

ಒಂದು ಊರು, ಆ ಊರಿನ ಯಜಮಾನ, ಮತ್ತವನ ಗ್ಯಾಂಗ್‌, ಆಟೋ ಡ್ರೈವರ್‌, ವೇಶ್ಯೆಯೊಬ್ಬಳು, ಸಿನಿಮಾ ನಿರ್ದೇಶಕ- ಇವಿಷ್ಟೇ ಪಾತ್ರಗಳು ರಾಮನವಮಿಯ ದಿನ ನಡೆಯುವ ಒಂದು ಅಪರೂಪದ ಕತೆಗೆ ಸಾಕ್ಷಿಯಾಗುತ್ತವೆ.

ಚಿತ್ರ: ಇದೊಳ್ಳೆ ರಾಮಾಯಣ 

-

ಭಾಷೆ: ಕನ್ನಡ

ತಾರಾಗಣ: ಪ್ರಕಾಶ್‌ ರೈ, ಪ್ರಿಯಾಮಣಿ, ಅರವಿಂದ್‌ ಕುಪ್ಲಿಕರ್‌, ಅಚ್ಯುತ್‌ ಕುಮಾರ್‌, ನಾಗೇಂದ್ರ ಷಾ, ಸುಧಾ ಬೆಳವಾಡಿ, ರಂಗಾಯಣ ರಘು, ರಮೇಶ್‌ ಪಂಡಿತ್‌

ನಿರ್ದೇಶನ: ಪ್ರಕಾಶ್‌ ರೈ

ನಿರ್ಮಾಣ: ಪ್ರಕಾಶ್‌ ರೈ, ರಾಮ್‌ಜಿ

ಸಂಗೀತ: ಇಳಯರಾಜ

 ಛಾಯಾಗ್ರಹಣ: ಮುಖೇಶ್‌

-ಆರ್‌ ಕೇಶವಮೂರ್ತಿ, ಕನ್ನಡ ಪ್ರಭ


ಮನುಷ್ಯನೊಳಗೆ ರಾಮ, ರಾವಣ ಇಬ್ಬರೂ ಇದ್ದಾರೆ. ಆದರೆ, ಯಾರು ಯಾವಾಗ ಹೊರಗೆ ಬರುತ್ತಾರೆ? ಮೇಲ್ನೋಟಕ್ಕೆ ಸುಲಭ ಎನಿಸುವ, ಒಳನೋಟಕ್ಕೆ ಗಂಭೀರ ಎನಿಸುವ ಇಂಥ ವಿಷಯಗಳನ್ನು ಎಷ್ಟುಸರಳವಾಗಿ ಹಾಗೂ ಮನರಂಜನಾತ್ಮಕವಾಗಿ ಹೇಳುವುದಕ್ಕೆ ಸಾಧ್ಯ ಎನ್ನುವುದಕ್ಕೆ ‘ಇದೊಳ್ಳೆ ರಾಮಾಯಣ' ಚಿತ್ರ ಸಾಕ್ಷಿ. ಮಲಯಾಳಂನಿಂದ ತೆಗೆದುಕೊಂಡು ಬಂದು ತೆಲುಗು ಮತ್ತು ಕನ್ನಡಕ್ಕೆ ಮಾಡಿರುವ ಚಿತ್ರವಿದು. ಆದರೂ ರೈ ಚಿತ್ರಗಳನ್ನು ರಿಮೇಕ್‌ ಎನ್ನಲಾಗದು. ಯಾಕೆಂದರೆ ಅವರೊಳಗೊಬ್ಬ ‘ಸ್ಮಾರ್ಟ್‌ ಕಾಪಿಮ್ಯಾನ್‌' ಇದ್ದಾನೆ. ಆತನಲ್ಲಿ ಯಾವುದೇ ದೇಶದ, ಯಾವುದೇ ಭಾಷೆಯ ಕತೆಯನ್ನು ‘ತಮ್ಮದೇ' ಕತೆ ಎನ್ನುವಂತೆ ಕಟ್ಟಿಕೊಡುವ ತಾಕತ್ತು ಮತ್ತು ಜಾಣ್ಮೆ ಇದೆ. ಅಂಥ ಪ್ರತಿಭೆಯ ನೆರಳಿನಲ್ಲಿ ಮೂಡಿಬಂದಿರುವ ಮತ್ತೊಂದು ಚಿತ್ರವಿದು. ಅಪ್ಪಟ ದೇಸಿ ಹೆಸರು, ನೆಲದ ಸೊಗಡಿನ ಸಡಗರವನ್ನು ಮೈ ತುಂಬಿಕೊಂಡಿರುವ ಈ ಚಿತ್ರಕ್ಕೆ ಕತೆಯೇ ಜೀವಾಳ. 
ಒಂದು ಊರು, ಆ ಊರಿನ ಯಜಮಾನ, ಮತ್ತವನ ಗ್ಯಾಂಗ್‌, ಆಟೋ ಡ್ರೈವರ್‌, ವೇಶ್ಯೆಯೊಬ್ಬಳು, ಸಿನಿಮಾ ನಿರ್ದೇಶಕ- ಇವಿಷ್ಟೇ ಪಾತ್ರಗಳು ರಾಮನವಮಿಯ ದಿನ ನಡೆಯುವ ಒಂದು ಅಪರೂಪದ ಕತೆಗೆ ಸಾಕ್ಷಿಯಾಗುತ್ತವೆ. ಮರ್ಯಾದೆ, ಗೌರವಕ್ಕಾಗಿ ಹಂಬಲಿಸುವ ವ್ಯಕ್ತಿಯೊಬ್ಬ, ಸಣ್ಣ ಪುಟ್ಟದಕ್ಕೆಲ್ಲ ಮನೆಯ ಹೆಂಗಸರ ಮೇಲೆ ರೇಗಾಡುತ್ತಿರುತ್ತಾನೆ. ಮಗಳ ಭವಿಷ್ಯದ ಕನಸುಗಳಿಗೆ ಬೆಲೆ ಕೊಡದ ಈತ ತಾತ್ಕಾಲಿಕ ಸುಖಕ್ಕಾಗಿ ಬೇರೊಬ್ಬಳನ್ನು ಗುಟ್ಟಾಗಿ ತನ್ನ ಅಂಗಡಿಗೆ ಕರೆದುಕೊಂಡು ಬರುತ್ತಾನೆ. ಆದರೆ, ತಾನು ಮಾಡುತ್ತಿರುವುದು ತಪ್ಪೆಂದು ತಿಳಿದು ಅಲ್ಲಿಂದ ಹೇಗೆ ಪಾರಾಗಬೇಕು ಎಂದುಕೊಳ್ಳುವಾಗ ಕತೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಎರಡು ಮುಖ್ಯ ಪಾತ್ರಗಳನ್ನು ಒಂದೇ ಮನೆಯಲ್ಲಿಟ್ಟು ಚಿತ್ರ ಮಾಡುವುದು ಅಷ್ಟುಸುಲಭವಲ್ಲ. ಹೀಗಾಗಿ ಸಿನಿಮಾ ನೋಡುವ ಆ ಕಷ್ಟಪ್ರೇಕ್ಷಕನಿಗೂ ತಟ್ಟುತ್ತದೆ. ಹೀಗಾಗಿ ಎಲ್ಲವೂ ಇದ್ದು ಮತ್ತೇನೋ ಬೇಕು ಎನಿಸುತ್ತದೆ. ಅಲ್ಲದೆ ತುಂಬಾ ಆರ್ಟಿಸ್ಟಿಕ್‌ ಆಗಿ ಮಾಡಲು ಹೋಗಿ ಚಿತ್ರವನ್ನು ಸಾಧ್ಯವಾದಷ್ಟುಹಿಗ್ಗಿಸಿರುವುದು ಚಿತ್ರದ ಮೈನಸ್‌ ಪಾಯಿಂಟ್‌. ಆದರೆ, ಶಶಿಧರ ಅಡಪ ಕಲಾ ನಿರ್ದೇಶನ, ಇಳಯರಾಜ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಮುಖ್ಯ ಪಿಲ್ಲರ್‌. 
ಚಿತ್ರದಲ್ಲಿ ಯಾವ ಪಾತ್ರಗಳೂ ಸುಮ್ಮನೆ ಬಂದು ಹೋಗುವುದಿಲ್ಲ. ಆಟೋ ಚಾಲಕ ಶಿವು ಪಾತ್ರ ಇಡೀ ಚಿತ್ರದ ತಿರುವು. ಆ ಪಾತ್ರವನ್ನೇ ಅನಗತ್ಯವಾಗಿ ಎಳೆದಿದ್ದಾರೆ. ಇನ್ನು ಪ್ರಿಯಾಮಣಿ ಮತ್ತು ಪ್ರಕಾಶ್‌ ರೈ ಕಾಂಬಿನೇಷನ್‌ ಚೆನ್ನಾಗಿದೆ. ಮರ್ಯಾದೆಗೆ ಅಂಜುತ್ತಲೇ ಒಂದು ರಾತ್ರಿಯ ಸುಖಕ್ಕಾಗಿ ಹೆಣ್ಣಿನ ಸಹವಾಸಕ್ಕೆ ಹೋಗಿ ಸಂಕಟಪಡುವ ಪಾತ್ರದಲ್ಲಿ ಪ್ರಕಾಶ್‌ ರೈ ತಮಗೆ ತಾವೇ ಸಾಟಿ ಎನ್ನುವಂತೆ ನಟಿಸಿದ್ದಾರೆ. ಈ ಎಲ್ಲದರ ನಡುವೆ ಗಮನ ಸೆಳೆಯುವುದು ಅಚ್ಯುತ್‌ ಕುಮಾರ್‌. ಹಿರಿಯ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಅಚ್ಯುತ್‌ ನೆನಪಿನಲ್ಲಿ ಉಳಿಯುತ್ತಾರೆ. ಚುರುಕಾದ ಸಂಕಲನದ ಜತೆಗೆ ಪ್ರಿಯಾಮಣಿ ಹಾಗೂ ರೈ ಪಾತ್ರಗಳ ನಡುವೆ ಮತ್ತಷ್ಟುಭಾವುಕ ಸನ್ನಿವೇಶಗಳ ಸಂಯೋಜನೆ ಮಾಡಿದ್ದರೆ ‘ಇದೊಳ್ಳೆ ರಾಮಾಯಣ' ಚಿತ್ರ, ‘ಮತ್ತಷ್ಟುಒಳ್ಳೆಯ ರಾಮಾಯಣ' ಅನಿಸಿಕೊಳ್ಳುತಿತ್ತು. ಒಂದೂರಿನ ಅರಳೀಕಟ್ಟೆಯ ಮೇಲೆ ಕೇಳುವ ಕತೆಯಂತೆ ಇಡೀ ಸಿನಿಮಾ ಸಾಗುವುದಕ್ಕೆ ಜೋಗಿ ಮತ್ತು ಪ್ರಕಾಶ್‌ ರೈ ಬರೆದಿರುವ ಸಂಭಾಷಣೆಗಳು ಸಾಥ್‌ ನೀಡುತ್ತವೆ. ಆದರೆ, ಮೂಲ ಚಿತ್ರ ನೋಡಿದವರಿಗೆ ರೈ ರಾಮಾಯಣ ಅಷ್ಟಾಗಿ ಆಪ್ತವಾಗುವುದಿಲ್ಲ. ಆದರೂ ಕತೆಗಳೇ ಇಲ್ಲದೆ ಅದ್ಧೂರಿ ಮೇಕಿಂಗ್‌ ಹೆಸರಿನಲ್ಲಿ ಬರುವ ಚಿತ್ರಗಳ ಸಾಲಿನಲ್ಲಿ ‘ಇದೊಳ್ಳೆ ರಾಮಾಯಣ' ಬೇರೆಯದ್ದೇ ಆಗಿ ನಿಲ್ಲುತ್ತದೆ. ಒಂದು ಹಬ್ಬದ ಸಂಭ್ರಮದಲ್ಲಿ ಮೂಡುವ ‘ಇದೊಳ್ಳೆ ರಾಮಾಯಣ' ಹಬ್ಬದಷ್ಟೇ ಖುಷಿ ಕೊಡುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮೀರ್ ಖಾನ್ '3 ಈಡಿಯಟ್ಸ್' ಸೀಕ್ವೆಲ್ ಹೆಸರು ಏನು? ಒಂದು ದೊಡ್ಡ ಟ್ವಿಸ್ಟ್ ಕೂಡ ರಿವೀಲ್? ಏನದು!
ಪವನ್ ಕಲ್ಯಾಣ್‌ಗಾಗಿ ರಾಮ್ ಚರಣ್ ಆ ತ್ಯಾಗ ಮಾಡ್ತಾರಾ? ಪೆದ್ದಿ ರಿಲೀಸ್ ಬಗ್ಗೆ ಮೆಗಾ ಫ್ಯಾನ್ಸ್‌ನಲ್ಲಿ ಆತಂಕ!