'ದನ ಕಾಯೋನು' ಸಿನಿಮಾ ವಿಮರ್ಶೆ; ಹೋರಿ- ಹಸು ಕೂಡಿಕೆಯ ಕುಲಾಂತರಿ ಫಿಲಾಸಫಿ

Published : Oct 08, 2016, 10:55 AM ISTUpdated : Apr 11, 2018, 12:51 PM IST
'ದನ ಕಾಯೋನು' ಸಿನಿಮಾ ವಿಮರ್ಶೆ; ಹೋರಿ- ಹಸು ಕೂಡಿಕೆಯ ಕುಲಾಂತರಿ ಫಿಲಾಸಫಿ

ಸಾರಾಂಶ

ಯೋಗರಾಜ್‌ ಭಟ್ಟರ ಈವರೆಗಿನ ಅಷ್ಟುಚಿತ್ರಗಳನ್ನು ನೋಡಿದರೆ ಇದೊಂದು ಹೊಸ ರೀತಿಯ ಕತೆ. ಗ್ರಾಮೀಣ ಭಾಗದಲ್ಲಿ ಇವತ್ತು ವಿವಿಧ ಆಮಿಷಗಳ ಮೂಲಕ ವಿಶೇಷ ಗುಣವಿರುವ ತಳಿಗಳನ್ನು ಪೇಟೆಂಟ್‌ ಮಾಡಿಕೊಳ್ಳುವ ಹುನ್ನಾರ ಜೋರಾಗಿದೆ. ಅದು ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರ. ಬಿಡಿ ಬದನೆ, ಸಾಸಿವೆಯಂತಹ ಬೆಳೆಗಳದ್ದು ಇದೇ ಕತೆ.

ಚಿತ್ರ: ದನ ಕಾಯೋನು
ಭಾಷೆ: ಕನ್ನಡ
ತಾರಾಗಣ: ವಿಜಯ್‌, ಪ್ರಿಯಾಮಣಿ, ನತಾಷಾ ಸ್ಟಾನ್‌ಕೋವಿಕ್‌, ರಂಗಾಯಣ ರಘು, ವೈಜನಾಥ್‌ ಬಿರಾದಾರ, ಸುಚೇಂದ್ರ ಪ್ರಸಾದ್‌, ವೀಣಾ ಸುಂದರ್‌, ಜಹಾಂಗೀರ್‌
ನಿರ್ದೇಶನ: ಯೋಗರಾಜ್‌ ಭಟ್‌
ಛಾಯಾಗ್ರಹಣ: ಸುಜ್ಞಾನ್‌
ಸಂಗೀತ: ವಿ ಹರಿಕೃಷ್ಣ
ನಿರ್ಮಾಣ: ಆರ್‌ಎಸ್‌ ಪ್ರೊಡಕ್ಷನ್‌

ರೇಟಿಂಗ್ ***

ಕೆಟ್ಟು ಪಟ್ಣ ಸೇರು ಎನ್ನುವುದೊಂದು ಗಾದೆ ಮಾತು. ಇದಕ್ಕೆ ಅಪವಾದ ಎನ್ನುವ ಹಾಗಿದೆ ಯೋಗರಾಜ್‌ ಭಟ್ಟರ ಸಿನಿಮಾ ಸೂತ್ರ. ‘ವಾಸ್ತು ಪ್ರಕಾರ'ದಿಂದ ‘ಪರಪಂಚ' ತಿರುಗಿದ್ದ ಭಟ್ಟರಿಗೆ ಅಲ್ಲಿ ಆಗಿದ್ದು ಕಹಿ ಅನುಭವ. ಅದರಿಂದ ಹೊರ ಬರುವುದಕ್ಕಾಗಿಯೇ ಈಗವರು ದನ ಕಾಯೋದಕ್ಕಾಗಿ ಹಳ್ಳಿ ಕಡೆ ಮುಖ ಮಾಡಿದ್ದು ಕೊಂಚ ರಿಲ್ಯಾಕ್ಸ್‌ ನೀಡಿದೆ. ಆ ಮಟ್ಟಿಗೆ ‘ದನ ಕಾಯೋನು' ಚಿತ್ರ ಹೊಸ ರೀತಿಯ ಕತೆ ಮತ್ತು ಹಾಸ್ಯ ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿದೆ. ಹಾಗಂತ ಇದೊಂದು ಪಕ್ಕಾ ಮನರಂಜನೆ ಚಿತ್ರ ಎನ್ನುವುದರ ಬಗ್ಗೆ ಸಾಕಷ್ಟುಆಕ್ಷೇಪಣೆಗಳೂ ಇವೆ.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಕುಲಾಂತರಿ ಫಿಲಾಸಫಿ ಮೂಲಕ ಕರಿ ಹೋರಿ, ಬಿಳಿ ಹಸುಗಳನ್ನೇ ಸಾಂಕೇತಿಕವಾಗಿಟ್ಟುಕೊಂಡು ನಾಯಕ, ನಾಯಕಿ ಪ್ರೀತಿಯ ‘ಕೂಡಿಕೆ' ಕತೆ ಹೇಳಿದ್ದಾರೆ ಯೋಗರಾಜ್‌ ಭಟ್ಟರು. ಉತ್ತರ ಕರ್ನಾಟಕದ ಯಾವುದೇ ಮೂಲೆಯ ಹಳ್ಳಿಯನ್ನು ನೆನಪಿಸುವ ಗ್ರಾಮವೊಂದರಲ್ಲಿ ದನ ಕಾಯುವುದನ್ನೇ ಕಾಯಕವಾಗಿಸಿಕೊಂಡ ಕೃಷ್ಣಪ್ಪ ಅಲಿಯಾಸ್‌ ಡೊಕೊಮೋ ಕುಟುಂಬದ ಕತೆಯಿದು. ನೂರಾರು ದನಗಳ ಒಡೆಯ ಕೃಷ್ಣಪ್ಪ. ಆತನ ಮಗನೇ ಕೆಂಪ. ಆತನು ನೆಚ್ಚಿನ ಸಾಕಿದ ಹೋರಿ ಶಂಕ್ರ. ಮತ್ತೊಂದೆಡೆ ಅದೇ ಗ್ರಾಮದ ದನ ಕಾಯುವ ಕುಟುಂಬದ ಹುಡುಗಿ ಜಗದಾಂಬ ಅಲಿಯಾಸ್‌ ಜುಮ್ಮಿ. ಈಕೆಯ ಪ್ರೀತಿಯ ಹಸು ಗೌರಿ. ಇವರಿಬ್ಬರ ಪ್ರೀತಿಯ ಕತೆಯೊಂದಿಗೆ ಅವರ ಹೋರಿ ಮತ್ತು ಹಸು ನಡುವಿನ ಕೂಡಿಕೆಯೂ ಕತೆಯ ಮನರಂಜನೆಯ ಸರಕು. 

ಹಾಗೆ ನೋಡಿದರೆ ಕೆಂಪನ ಕರಿ ಹೋರಿ ಶಂಕ್ರ ಈ ಕತೆಯ ಕೇಂದ್ರಬಿಂದು. ಯಾಕೆಂದ್ರೆ ಇದೊಂದು ವಿಶೇಷ ಗುಣವಿರುವ ಹೋರಿ. ವಿದೇಶದಿಂದ ಬಂದ ಹುಡುಗಿ ಅಶೋಕ್‌ ಲೈಲ್ಯಾಂಡ್‌ (ಉದ್ದನೆಯ ಹೆಸರಿರುವ ಕಾರಣಕ್ಕೆ ಚಿತ್ರದ ನಾಯಕ ಕೆಂಪ ಮತ್ತಿತರರು ಕರೆಯುವುದೇ ಹಾಗೆ) ಆ ಗ್ರಾಮದ ಅಷ್ಟುಜಾನುವಾರುಗಳ ರಕ್ತ ಪರೀಕ್ಷೆ ನಡೆಸಿದ ಗೊತ್ತಾಗುವ ಸತ್ಯವದು. ಅದನ್ನು ತಮ್ಮ ದೇಶಕ್ಕೆ ತೆಗೆದುಕೊಳ್ಳುವುದಕ್ಕಾಗಿ .9 ಕೋಟಿ ಬೆಲೆ ಫಿಕ್ಸ್‌ ಆಗುತ್ತದೆ. ಆ ವೇಳೆಗಾಗಲೇ ಗ್ರಾಮದ ಚೇರ್‌ಮನ್‌ ಮನೆಯ ಗೃಹ ಪ್ರವೇಶಕ್ಕೆ ಎಂಟ್ರಿಯಾಗಿದ್ದ ಶಂಕ್ರ, ಚೇರ್ಮನ್‌ ಪತ್ನಿಯ ಕೊರಳಲ್ಲಿದ್ದ ಮಾಂಗಲ್ಯ ಸರ ತಿಂದು, ಚೇರ್ಮನ್‌ ಕೆಂಗಣ್ಣಿಗೆ ಗುರಿಯಾಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಕರಿ ಹೋರಿ ಶಂಕ್ರನ ಹುಡುಕಾಟ. ಅಲ್ಲಿಂದ ಮುಂದೇನು ಎನ್ನುವುದು ಈ ಚಿತ್ರದ ಒನ್‌ಲೈನ್‌ ಸ್ಟೋರಿ.

ಯೋಗರಾಜ್‌ ಭಟ್ಟರ ಈವರೆಗಿನ ಅಷ್ಟುಚಿತ್ರಗಳನ್ನು ನೋಡಿದರೆ ಇದೊಂದು ಹೊಸ ರೀತಿಯ ಕತೆ. ಗ್ರಾಮೀಣ ಭಾಗದಲ್ಲಿ ಇವತ್ತು ವಿವಿಧ ಆಮಿಷಗಳ ಮೂಲಕ ವಿಶೇಷ ಗುಣವಿರುವ ತಳಿಗಳನ್ನು ಪೇಟೆಂಟ್‌ ಮಾಡಿಕೊಳ್ಳುವ ಹುನ್ನಾರ ಜೋರಾಗಿದೆ. ಅದು ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರ. ಬಿಡಿ ಬದನೆ, ಸಾಸಿವೆಯಂತಹ ಬೆಳೆಗಳದ್ದು ಇದೇ ಕತೆ. ಅದೇ ಹುನ್ನಾರ ಹಸು ಹಾಲಿನ ಮೇಲೆಯೂ ನಡೆಯುತ್ತಿರುವ ಸೂಕ್ಷ್ಮ ಕತೆಯನ್ನು ತೆರೆಯಲ್ಲಿ ತೋರಿಸಿದ್ದು ಈ ಚಿತ್ರದ ಮೊದಲ ಗೆಲುವು. ಇನ್ನು ಹಣಕ್ಕಾಗಿ ಏನನ್ನಾದರೂ ಮಾಡಲು ಬಯಸುವ ಮನಸ್ಸು, ಕೊನೆಗೆ ಮನುಷ್ಯತ್ವಕ್ಕೂ ಮಂಡಿಯೂರುತ್ತದೆ ಎನ್ನುವ ಸಂದೇಶವೂ ಈ ಚಿತ್ರದಲ್ಲಿದೆ.

ಕೆಂಪನಾಗಿ ವಿಜಯ್‌, ಜಗದಾಂಬೆ ಅಲಿಯಾಸ್‌ ಜುಮ್ಮಿ ಆಗಿ ಪ್ರಿಯಾಮಣಿ ಅವರ ನಟನೆ ಒಮ್ಮೊಮ್ಮೆ ತಮಾಷೆ ಎನಿಸಿದರೂ ಕೊನೆಯಲ್ಲಿ ಕಾಡಿಸುತ್ತವೆ. ರಂಗಾಯಣ ರಘು ಅಭಿನಯ ಅದ್ಭುತ. ಹಾಗೆಯೇ, ದೊಡ್ಡಯ್ಯಅಲಿಯಾಸ್‌ ಕೃಷ್ಣಪ್ಪನಾಗಿ ಬಿರಾದರ್‌ ಅಭಿನಯ ಮನೋಜ್ಞವಾಗಿದೆ. ಜಾನುವಾರು ರಕ್ತ ಪರೀಕ್ಷೆಗಾಗಿ ಬಂದ ವಿದೇಶಿ ಹುಡುಗಿ ಆಗಿ ನತಾಷಾ ಸ್ಟಾನ್‌ಕೋವಿಕ್‌ ಹಾಡಿನಲ್ಲೂ ಗಮನ ಸೆಳೆಯುತ್ತಾರೆ. ರಂಗಾಯಣ ರಘು, ವೈಜನಾಥ್‌ ಬಿರಾದಾರ, ಸುಚೇಂದ್ರ ಪ್ರಸಾದ್‌, ವೀಣಾ ಸುಂದರ್‌, ಜಹಾಂಗೀರ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹರಿಕೃಷ್ಣ ಸಂಗೀತಕ್ಕೆ ಆಕರ್ಷಣೆ ಹುಟ್ಟು ಹಾಕುತ್ತದೆ. ಸುಜ್ಞಾನ್‌ ಕ್ಯಾಮೆರಾ ಸೊಗಸಾಗಿದೆ. ಸಂಭಾಷಣೆಯಲ್ಲಿ ಭಟ್ಟರು ಸುಧಾರಣೆ ಕಂಡಿದ್ದಾರೆ. ಒಟ್ಟಿನಲ್ಲಿ ಒಮ್ಮೆ ದನ ಕಾದರೂ ತಪ್ಪಿಲ್ಲ. ಅದು ಕೂಡ ಒಂದು ಅದ್ಭುತ ಅನುಭವವೇ!

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಾಸ್ 12 ಗೆಲ್ತಾನೆ ಗಿಲ್ಲಿ ನಟ, ಮಾತು ಸುಳ್ಳಾದರೆ 1 ಏಕರೆ ಕೊಡ್ತೀನಿ ಓಪನ್ ಚಾಲೆಂಜ್ ಎಂದ ರೈತ
BBK 12: ಭೇಷ್... ಆರಂಭದಿಂದ ಕೊನೇವರೆಗೂ... Gilli Nata ಈ ಗುಣವನ್ನು ಬದಲಾಯಿಸಿಕೊಳ್ಳಲೇ ಇಲ್ಲ!