
"ನನಗೆ ಅವರ ಆಸ್ತಿ ಬೇಡ, ಅಂತಸ್ತು ಬೇಡ, ಕೇವಲ ಪ್ರೀತಿ ಮಾತ್ರ ಸಾಕು": ಧರ್ಮೇಂದ್ರ ಜೊತೆಗಿನ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ 'ಡ್ರೀಮ್ ಗರ್ಲ್' ಹೇಮಾ ಮಾಲಿನಿ
ಬಾಲಿವುಡ್ ಚಿತ್ರರಂಗದಲ್ಲಿ ‘ಹೀ-ಮ್ಯಾನ್’ (He-Man) ಎಂದೇ ಖ್ಯಾತರಾಗಿರುವ ಪಂಜಾಬ್ ಮೂಲದ ಧರ್ಮೇಂದ್ರ ಮತ್ತು ತಮಿಳುನಾಡು ಮೂಲದ ಸೌಂದರ್ಯದ ರಾಣಿ ‘ಡ್ರೀಮ್ ಗರ್ಲ್’ ಹೇಮಾ ಮಾಲಿನಿ ಅವರ ಪ್ರೇಮಕಥೆ ದಶಕಗಳು ಕಳೆದರೂ ಇಂದಿಗೂ ಜನಮಾನಸದಲ್ಲಿ ಹಸಿರಾಗಿಯೇ ಉಳಿದಿದೆ. ತೆರೆಯ ಮೇಲೆ ಈ ಜೋಡಿ ಎಷ್ಟು ಮೋಡಿ ಮಾಡಿತ್ತೋ, ಅವರ ನಿಜಜೀವನದ ಪ್ರೇಮಕಥೆಯೂ ಅಷ್ಟೇ ಕುತೂಹಲಕಾರಿ ಮತ್ತು ಭಾವನಾತ್ಮಕವದ್ದು.
ಧರ್ಮೇಂದ್ರ ಅವರು ಈಗಾಗಲೇ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು ಮತ್ತು ಅವರಿಗೆ ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್ ಸೇರಿದಂತೆ ನಾಲ್ಕು ಮಕ್ಕಳಿದ್ದರು. ಆದರೂ 1980ರಲ್ಲಿ ಹೇಮಾ ಮಾಲಿನಿ ಅವರನ್ನು ಎರಡನೇ ವಿವಾಹವಾದರು. ಆಗಿನ ಕಾಲದಲ್ಲಿ ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು ಮತ್ತು ಇಂದಿಗೂ ಈ ವಿಷಯ ಆಗಾಗ್ಗೆ ಚರ್ಚೆಗೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಹಳೆಯ ಸಂದರ್ಶನವೊಂದರಲ್ಲಿ, ಈಗಾಗಲೇ ಮದುವೆಯಾಗಿ ಮಕ್ಕಳಿದ್ದ ಪುರುಷನನ್ನು ವರಿಸುವ ನಿರ್ಧಾರವನ್ನು ತೆಗೆದುಕೊಂಡ ಬಗ್ಗೆ ಹೇಮಾ ಮಾಲಿನಿ ಮುಕ್ತವಾಗಿ ಮಾತನಾಡಿದ್ದರು.
2022ರಲ್ಲಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರೊಂದಿಗೆ ಮಾತನಾಡುತ್ತಾ, ಹೇಮಾ ಮಾಲಿನಿ ತಮ್ಮ ಪ್ರೇಮದ ಆರಂಭದ ದಿನಗಳನ್ನು ಮೆಲುಕು ಹಾಕಿದ್ದರು. "ನಾನು ಅವರನ್ನು (ಧರ್ಮೇಂದ್ರ) ಮೊದಲ ಬಾರಿಗೆ ನೋಡಿದಾಗ, ಅಬ್ಬಾ! ಇಷ್ಟು ಸುಂದರವಾದ ಪುರುಷನನ್ನು ನಾನು ನನ್ನ ಜೀವನದಲ್ಲಿ ನೋಡಿಯೇ ಇರಲಿಲ್ಲ ಎನಿಸಿತ್ತು.
ಅವರು ನಿಜಕ್ಕೂ ಅಸಾಧಾರಣ ಸುಂದರಾಗಿದ್ದರು. ಅವರ ಆ ವ್ಯಕ್ತಿತ್ವ ನನ್ನನ್ನು ತಕ್ಷಣವೇ ಆಕರ್ಷಿಸಿತು. ಹಾಗಂತ ನಾನು ತಕ್ಷಣವೇ ಅವರನ್ನು ಮದುವೆಯಾಗಲು ಬಯಸಿರಲಿಲ್ಲ. ಆದರೆ ದಿನ ಕಳೆದಂತೆ ನಾನು ಅವರನ್ನು ಅಭಿಮಾನಿಸಲು ಮತ್ತು ಪ್ರೀತಿಸಲು ಶುರುಮಾಡಿದೆ. ಆದರೆ ನನ್ನನ್ನು ಓಲೈಸಿದ್ದು ಮತ್ತು ನನ್ನ ಹಿಂದಿದ್ದು ಪ್ರೀತಿ ಮಾಡಿದ್ದು ಮಾತ್ರ ಅವರೇ" ಎಂದು ಹೇಮಾ ನಾಚಿಕೆಯಿಂದ ಹೇಳಿಕೊಂಡಿದ್ದರು.
"ನೀವು ನನ್ನನ್ನು ಮದುವೆಯಾಗಲೇಬೇಕು"
ಹೇಮಾ ಮಾಲಿನಿ ಅವರು ಸಂಪ್ರದಾಯಸ್ಥ ಐಯ್ಯಂಗಾರ್ ತಮಿಳು ಕುಟುಂಬದವರು. ಇತ್ತ ಧರ್ಮೇಂದ್ರ ಮದುವೆಯಾಗಿ ಮಕ್ಕಳಿರುವ ಪಂಜಾಬಿ ಪುರುಷ. ಈ ಸಂಬಂಧಕ್ಕೆ ಒಪ್ಪಿಗೆ ಸಿಗುವುದು ಕಷ್ಟವಿತ್ತು. ಈ ಬಗ್ಗೆ ಮಾತನಾಡಿದ ಹೇಮಾ, "ಒಂದು ಹಂತದಲ್ಲಿ ನಮ್ಮ ಸಂಬಂಧ ಎಲ್ಲಿಗೆ ಹೋಗುತ್ತಿದೆ ಎಂದು ತಿಳಿಯದಾದಾಗ, ನಾನೇ ಅವರಿಗೆ ಅಲ್ಟಿಮೇಟಮ್ ನೀಡಿದ್ದೆ. 'ನೀವು ಈಗಲೇ ನನ್ನನ್ನು ಮದುವೆಯಾಗಬೇಕು. ನಾವು ಹೀಗೆ ಮುಂದುವರಿಯಲು ಸಾಧ್ಯವಿಲ್ಲ' ಎಂದು ಹೇಳಿದ್ದೆ.
ನನಗೆ ಗೊತ್ತು, ಈಗಾಗಲೇ ಮದುವೆಯಾದವರನ್ನು ವರಿಸುವುದರಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದು. ಆದರೆ ನಾನು ಅವರಿಂದ ಏನನ್ನೂ ನಿರೀಕ್ಷಿಸಿರಲಿಲ್ಲ. ನನಗೆ ಅವರ ಆಸ್ತಿಯಾಗಲಿ, ಹಣವಾಗಲಿ ಅಥವಾ ಇನ್ನಾವುದೇ ಐಷಾರಾಮಿ ವಸ್ತುಗಳಾಗಲಿ ಬೇಕಿರಲಿಲ್ಲ. ನನಗೆ ಬೇಕಿದ್ದು ಅವರ ಅಪ್ಪಟ ಪ್ರೀತಿ ಮಾತ್ರ. ಅವರು ಸದಾ ನನ್ನ ಬೆಂಬಲಕ್ಕೆ ನಿಂತರು, ಅಷ್ಟೇ ನನಗೆ ಬೇಕಿದ್ದು" ಎಂದು ಭಾವುಕರಾಗಿ ಹೇಳಿದ್ದಾರೆ.
ವಿವಾಹದ ನಂತರವೂ ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರ ಮೊದಲ ಕುಟುಂಬಕ್ಕೆ (ಪ್ರಕಾಶ್ ಕೌರ್ ಮತ್ತು ಮಕ್ಕಳು) ಯಾವುದೇ ತೊಂದರೆ ಕೊಡಬಾರದು ಎಂಬ ನಿರ್ಧಾರ ಮಾಡಿದ್ದರು. ಈ ಬಗ್ಗೆ 'ಲೆಹ್ರೆನ್ ರೆಟ್ರೋ' ಜೊತೆಗಿನ ಸಂಭಾಷಣೆಯಲ್ಲಿ ಮಾತನಾಡಿದ್ದ ಹೇಮಾ, "ಯಾವುದೇ ಹೆಣ್ಣು ತಾನು ಪ್ರೀತಿಸಿದ ಗಂಡನಿಂದ ದೂರವಿರಲು ಅಥವಾ ಇಂತಹ ವಿಚಿತ್ರ ವ್ಯವಸ್ಥೆಯಲ್ಲಿ ಬದುಕಲು ಇಷ್ಟಪಡುವುದಿಲ್ಲ.
ನನಗೂ ಅವರ ಜೊತೆ ಹೆಚ್ಚು ಸಮಯ ಕಳೆಯುವ ಆಸೆ ಇತ್ತು. ಆದರೆ ಪರಿಸ್ಥಿತಿ ಹೀಗಿದ್ದಾಗ ನಾನು ಹೊಂದಿಕೊಳ್ಳಲೇಬೇಕಾಯಿತು. ಹಾಗಂತ ನನಗೆ ಯಾವುದೇ ದೂರುಗಳಿಲ್ಲ. ಏಕೆಂದರೆ ಧರ್ಮೇಂದ್ರ ಅವರು ನನಗಾಗಿ ಮತ್ತು ನಮ್ಮ ಮಕ್ಕಳಾದ ಇಶಾ ಮತ್ತು ಅಹಾನಾ ಡಿಯೋಲ್ ಸಲುವಾಗಿ ಯಾವಾಗಲೂ ಲಭ್ಯವಿರುತ್ತಿದ್ದರು. ನಾನು ಅವರ ಮೊದಲ ಕುಟುಂಬದ ನೆಮ್ಮದಿಯನ್ನು ಕದಡಲು ಇಷ್ಟಪಡಲಿಲ್ಲ, ಅದಕ್ಕಾಗಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ" ಎಂದು ತಮ್ಮ ತ್ಯಾಗ ಮತ್ತು ಪ್ರಬುದ್ಧತೆಯನ್ನು ತೋರಿದ್ದಾರೆ.
ಒಟ್ಟಿನಲ್ಲಿ, ಎಷ್ಟೇ ಅಡೆತಡೆಗಳು ಬಂದರೂ, ಹಣ-ಆಸ್ತಿಗಿಂತ ಪ್ರೀತಿಯೇ ಶ್ರೇಷ್ಠ ಎಂದು ನಂಬಿ ಬದುಕಿದ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ದಾಂಪತ್ಯ ಬಾಲಿವುಡ್‌ನಲ್ಲಿ ಇಂದಿಗೂ ಒಂದು ವಿಶೇಷ ಸ್ಥಾನ ಪಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.