
ಬೆಂಗಳೂರು(ಏ. 03): ‘ಜಾಗ್ವಾರ್' ಚಿತ್ರದ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಭಾನುವಾರ ನಗರದ ಪಂಚತಾರಾ ಹೋಟೆಲ್'ನಲ್ಲಿ ಹೊಸ ಚಿತ್ರದ ಕತೆಗೆ ಅದ್ಧೂರಿಯಾಗಿ ಪೂಜೆ ನೆರವೇರಿದೆ. ಇನ್ನೂ ಹೆಸರು ಅಂತಿಮವಾಗದ ಈ ಚಿತ್ರಕ್ಕೆ ಯುವ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಚೆನ್ನಾಂಬಿಕಾ ಸಂಸ್ಥೆಯ 7ನೇ ಚಿತ್ರವಾಗಿ ಇದು ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ.
ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಸೇರಿದಂತೆ ಚಿತ್ರದ ನಿರ್ಮಾಣಕ್ಕೆ ಪೂರಕವಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡ ನಂತರ ಜೂನ್ ಮೊದಲ ವಾರ ಈ ಚಿತ್ರಕ್ಕೆ ಮುಹೂರ್ತ ನಡೆಯಲಿದೆಯಂತೆ. ಅಂದಿನಿಂದಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ರಾಜಸ್ಥಾನದಲ್ಲಿ ಒಂದು ವಾರ ನಡೆಯುವ ಚಿತ್ರೀಕರಣ ಹೊರತುಪಡಿಸಿದರೆ, ಬಹುತೇಕ ಚಿತ್ರೀಕರಣ ರಾಜ್ಯದ ವಿವಿಧೆಡೆಗಳಲ್ಲಿನ ಸುಂದರ ತಾಣಗಳಿಗೆ ಫಿಕ್ಸ್ ಆಗಿದೆ. ಆರು ತಿಂಗಳಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಚಿಂತನೆ ಚಿತ್ರತಂಡಕ್ಕಿದೆ.
ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ‘ನಿಖಿಲ್ ಅಭಿನಯದ ಮೊದಲ ಚಿತ್ರ ಕನ್ನಡದ ನೇಟಿವಿಟಿಗೆ ಹತ್ತಿರವಾಗಿರಲಿಲ್ಲ. ತಾಂತ್ರಿಕವಾಗಿ ಚೆನ್ನಾಗಿತ್ತಾದರೂ, ಕತೆಯಲ್ಲಿ ಇಲ್ಲಿನ ಸೊಗಡು ಕಾಣಲಿಲ್ಲ ಎನ್ನುವ ಸಾಕಷ್ಟು ಮಾತುಗಳು ಪ್ರೇಕ್ಷಕರ ಕಡೆಯಿಂದ ಕೇಳಿಬಂದಿದ್ದವು. ಆ ಕಾರಣಕ್ಕಾಗಿಯೇ ಈಗ ಶುದ್ಧ ಕನ್ನಡದ ಚಿತ್ರ ಮಾಡುತ್ತಿದ್ದೇವೆ. ‘ಜಾಗ್ವಾರ್' ನಂತರ ತೆಲುಗಿನ ಸುಧೀರ್ ರೆಡ್ಡಿ, ಪೂರಿ ಜಗನ್ನಾಥ್ ಹಾಗೂ ಕೊರಟಾಲ ಶಿವ ಅವರ ಜತೆಗೆ ಸಿನಿಮಾ ಮಾಡಬೇಕೆನ್ನುವ ಚಿಂತನೆಗಳು ನಡೆದಿದ್ದವು. ಪುರಿ ಜಗನ್ನಾಥ್ ಬಳಿ ನಿಖಿಲ್ ಮೂರು ಕತೆ ಕೇಳಿದ್ದರು. ಆದರೆ ಶುದ್ಧ ಕನ್ನಡದ ಚಿತ್ರ ಮಾಡಬೇಕೆನ್ನುವ ಕಾರಣಕ್ಕೆ ಆ ಎಲ್ಲ ಪ್ರಯತ್ನಗಳನ್ನು ಅರ್ಧದಲ್ಲಿಯೇ ನಿಲ್ಲಿಸಿ, ನಿಖಿಲ್ ಕನ್ನಡದ ನಿರ್ದೇಶಕರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಆಯ್ಕೆ ನನಗೆ ತುಂಬಾ ಖುಷಿ ತಂದಿದೆ. ಚಿತ್ರದಲ್ಲಿ ಶೇ.95ರಷ್ಟುಭಾಗ ಕಲಾವಿದರು ಕನ್ನಡದವರೇ ಇರುತ್ತಾರೆ. ತಂತ್ರಜ್ಞರಂತೂ ಪೂರ್ಣ ಪ್ರಮಾಣದಲ್ಲಿ ಕನ್ನಡದವರೇ ಆಗಿರುತ್ತಾರೆ. ಕತೆ ಇಲ್ಲಿನ ನೇಟಿವಿಟಿಗೆ ಹತ್ತಿರವಾಗಿಯೇ ಇರುತ್ತದೆ. ಚೆನ್ನಾಂಬಿಕಾ ಬ್ಯಾನರ್‌ನ ಹಿಂದಿನ ಚಿತ್ರಗಳ ಸೊಗಡು ಈ ಚಿತ್ರದಲ್ಲಿ ಕಾಣಲಿದೆ. ಪಕ್ಕಾ ಕೌಟುಂಬಿಕ ಚಿತ್ರವಾಗಿ ಇದು ಹೊಸ ಮೈಲುಗಲ್ಲು ಸೃಷ್ಟಿಸಲಿದೆ' ಎಂದರು.
ಚಿತ್ರಕ್ಕೆ ಇನ್ನೂ ಹೆಸರು ಫೈನಲ್ ಆಗಬೇಕಿದೆ. ಎರಡೂ ಭಾಷೆಗಳಲ್ಲೂ ಪ್ರತ್ಯೇಕವಾಗಿ ಟೈಟಲ್ ನೀಡುವ ಚಿಂತನೆ ಚಿತ್ರ ತಂಡಕ್ಕಿದೆ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಆಗಬೇಕಿದೆ. ನಾಯಕಿ ಪಾತ್ರಕ್ಕೆ ಕನ್ನಡದ ಹೊಸ ಪ್ರತಿಭೆಯೇ ಬಹುತೇಕ ಆಯ್ಕೆಯಾಗಲಿದ್ದಾರೆ. ಉಳಿದಂತೆ ಪೋಷಕ ಪಾತ್ರಗಳಿಗೂ ಕನ್ನಡದ ಕಲಾವಿದರೇ ಆಯ್ಕೆ ಆಗಲಿದ್ದಾರೆ. ಹರಿಕೃಷ್ಣ ಸಂಗೀತ, ಶ್ರೀಶೈಲ ಕೂದುವಳ್ಳಿ ಛಾಯಾಗ್ರಹಣ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಸಮಾರಂಭದಲ್ಲಿ ಸಿ.ಆರ್. ಮನೋಹರ್, ಕೆ. ಮಂಜು, ಸುರೇಶ್, ಲಹರಿ ವೇಲು, ಎ.ಪಿ. ಅರ್ಜುನ್, ಪವನ್ ಒಡೆಯರ್, ಭಾಷಾ ಹಾಜರಿದ್ದರು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.