
‘ನನ್ನ ಅಮ್ಮ ಕನ್ನಡದವರು. ಅವರ ಹುಟ್ಟೂರು ಕುಂದಾಪುರ!' ಹೀಗೆ ಶುದ್ಧ ಕನ್ನಡದಲ್ಲಿಯೇ ನಟ ಜೂನಿಯರ್ ಎನ್'ಟಿಆರ್ ಕನ್ನಡದೊಂದಿಗೆ ಬೆಸೆದುಕೊಂಡ ತಮ್ಮ ಸಂಬಂಧದ ಕತೆ ಬಿಚ್ಚಿಟ್ಟಾಗ ಅಲ್ಲಿದ್ದ ಅಷ್ಟೂ ಕನ್ನಡಿಗರಲ್ಲಿ ಒಂದು ಕ್ಷಣ ರೋಮಾಂಚನ, ಸಂಭ್ರಮ. ಎಲ್ಲಿಯ ಎನ್‌ಟಿಆರ್, ಇನ್ನೆಲ್ಲಿಯ ಕನ್ನಡ ಎಂದುಕೊಳ್ಳುತ್ತಿರುವಾಗಲೇ, ಅವರ ತಾಯಿಯ ಊರಿನ ಪಯಣ ಕರಾವಳಿಯ ಕುಂದಾಪುರದ ತನಕ ಬಂದು ನಿಂತಿತ್ತು. ಅಲ್ಲಿದ್ದ ಅಷ್ಟೂ ಕನ್ನಡಿಗರಿಗೆ ಹತ್ತಿರವೇ ಆದ ಜೂನಿಯರ್‌ಎನ್'ಟಿಆರ್, ಒಂದು ಕ್ಷಣ ಸಂತಸದ ಕಡಲಲ್ಲಿ ತೇಲುವಂತೆ ಮಾಡಿದರು. ಇದು ಆಗಿದ್ದು ‘ಐಫಾ' ಚಿತ್ರೋತ್ಸವದ ವೇದಿಕೆಯಲ್ಲಿ.
ಟಾಲಿವುಡ್ ಸಿನಿಪ್ರಿಯರ ಪಾಲಿಗೆ ‘ಜೂನಿಯರ್ ಟೈಗರ್' ಎಂದೇ ಹೆಸರಾದವರು ನಟ ಜೂನಿಯರ್ ಎನ್‌ಟಿಆರ್. ಪ್ರತಿಷ್ಠಿತ ಎನ್‌ಟಿ ರಾಮರಾವ್ ಕುಟುಂಬದ ಕುಡಿ. ಯುವ ತಲೆಮಾರಿನ ಅಷ್ಟೂನಟರಲ್ಲಿ ಬಹುಬೇಡಿಕೆಯ ನಟ. ನಮ್ಮ ಪುನೀತ್ ರಾಜ್‌ಕುಮಾರ್ ಮತ್ತು ಜೂನಿಯರ್- ಇಬ್ಬರೂ ಹೆಚ್ಚು ಕಡಿಮೆ ಹೈಟು, ವೇಟು, ಲುಕ್ ಜತೆಗೆ ಮ್ಯಾನರಿಸಂನಲ್ಲಿ ಹೋಲುತ್ತಾರೆ ಅಂತಾರೆ ಅಭಿಮಾನಿಗಳು. ಆದರೆ ಜೂನಿಯರ್ ಎನ್‌ಟಿಆರ್ ನಿಜ ಜೀವನದ ಕನ್ನಡ ನಂಟಿನ ಬಗ್ಗೆ ಬೇರೆಯದೇ ಇಂಟರೆಸ್ಟಿಂಗ್ ಕತೆ ಇಲ್ಲಿದೆ.
ಕನ್ನಡದಲ್ಲಿ ಮಾತನಾಡಿದ ಜ್ಯೂ.ಎನ್‌ಟಿಆರ್
ಮುತ್ತಿನ ನಗರಿ ಹೈದ್ರಾಬಾದ್‌ನಲ್ಲಿ ಇತ್ತೀಚೆಗಷ್ಟೇ ‘ಐಫಾ' 2017ನೇ ಚಿತ್ರೋತ್ಸವ ವರ್ಣರಂಜಿತವಾಗಿ ನಡೆಯಿತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ತಾರೆಗಳೆಲ್ಲ ಅಲ್ಲಿ ಜಮಾಯಿಸಿದ್ದರು. ಚಿತ್ರೋತ್ಸವದ ಕೊನೆಯ ದಿನ ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳ ಪ್ರಶಸ್ತಿ ವಿತರಣೆಯ ಹಬ್ಬ. ಕಾಕತಾಳೀಯ ಎನ್ನುವ ಹಾಗೆ ನಟ ರಕ್ಷಿತ್ ಶೆಟ್ಟಿಅವರಿಗೆ ಪ್ರಶಸ್ತಿ ನೀಡಲು ವೇದಿಕೆಗೆ ಬಂದಿದ್ದು ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್. ಪ್ರಶಸ್ತಿ ನೀಡುವ ಮೊದಲು ನಿರೂಪಣೆ ಮಾಡುತ್ತಿದ್ದ ನಟ ಅಕುಲ್ ಬಾಲಾಜಿ, ನಟ ರಕ್ಷಿತ್ ಶೆಟ್ಟಿಸಿನಿಮಾ ಪಯಣದ ಜತೆಗೆ ಅವರ ಕರಾವಳಿ ನಂಟನ್ನು ಪ್ರಸ್ತಾಪಿಸಿದರು. ಹಾಗೆಯೇ ಜೂನಿಯರ್ ಎನ್‌ಟಿಆರ್ ಅವರಿಗಿದ್ದ ಕನ್ನಡದ ನಂಟನ್ನು ನೆನಪಿಸಿದರು.
ಆಗ ಮೈಕ್ ಹಿಡಿದು ಮಾತಿಗೆ ನಿಂತ ಜೂನಿಯರ್ ಎನ್‌ಟಿಆರ್, ತಮ್ಮ ತಾಯಿಯ ಹುಟ್ಟೂರಿನ ಹಿನ್ನೆಲೆ ನೆನಪಿಸಿಕೊಂಡರು. ‘ನನ್ನ ಅಮ್ಮ ಕನ್ನಡದವರು. ಅವರ ಮೂಲ ಕುಂದಾಪುರ. ತಾತನ (ಎನ್‌ಟಿಆರ್) ಕುಟುಂಬದ ಹಾಗೆಯೇ ಅಮ್ಮನದ್ದು ದೊಡ್ಡ ಕುಟುಂಬ. ಆಗಾಗ ನಾನೂ ಅಲ್ಲಿಗೆ ಹೋಗಿ ಬರುತ್ತೇನೆ. ಕನ್ನಡ, ಕರ್ನಾಟಕ ನನ್ನ ಬದುಕಲ್ಲಿ ಗೊತ್ತಿಲ್ಲದಂತೆ ಬೆಸೆದುಕೊಂಡಿದೆ' ಅಂತ ಭಾವುಕರಾದವರು.
ಶುದ್ಧ ಕನ್ನಡದಲ್ಲಿಯೇ ಅವರ ಮಾತುಗಳು ಹೊರ ಬೀಳುತ್ತಿದ್ದಂತೆ ಅಲ್ಲಿದ್ದ ಅಷ್ಟುಕನ್ನಡಿಗರು ಚಪ್ಪಾಳೆ ತಟ್ಟಿಸಂಭ್ರಮಿಸಿದರು. ತಕ್ಷಣವೇ ‘ಚಕ್ರವ್ಯೂಹ' ಚಿತ್ರದ ‘ಗೆಳೆಯ ಗೆಳೆಯ' ಹಾಡು ಹೇಳಿ ರಂಜಿಸಿದರು. ನಟ ರಕ್ಷಿತ್ ಶೆಟ್ಟಿ, ತಾವು ಕೂಡ ಕುಂದಾಪುರದಿಂದ ಬಂದವರು ಎಂದು ಹೇಳಿಕೊಳ್ಳುವ ಮೂಲಕ ಎನ್‌ಟಿಆರ್ ಜತೆಗಿನ ಬಿಗಿ ಅಪ್ಪುಗೆಯಲ್ಲಿ ಆತ್ಮೀಯತೆ ಮೆರೆದಿದ್ದು ವಿಶೇಷವಾಗಿತ್ತು.
ಕನ್ನಡಕ್ಕೂ ಜ್ಯೂ.ಎನ್‌ಟಿಆರ್‌ಗೂ ಹತ್ತಿರದ ಸಂಬಂಧ
ಅಂದ ಹಾಗೆ ಜೂನಿಯರ್ ಎನ್‌ಟಿಆರ್ ಅವರು ಹರಿಕೃಷ್ಣ ಹಾಗೂ ಶಾಲಿನಿ ದಂಪತಿ ಪುತ್ರ. ಶಾಲಿನಿ ಅವರದ್ದು ಕುಂದಾಪುರ ಮೂಲ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಚಿಕ್ಕವರಿದ್ದಾಗಲೇ ಹೈದ್ರಾಬಾದ್‌ಗೆ ಹೋಗಿ ನೆಲೆಸಿದ್ದರಂತೆ. ಹರಿಕೃಷ್ಣ ಅವರಿಗೆ ಎರಡನೇ ಪತ್ನಿಯಾದ ನಂತರ ತೆರೆಮರೆಯಲ್ಲಿ ಇದ್ದ ಶಾಲಿನಿಯವರು, ಎನ್‌ಟಿಆರ್ ಕುಟುಂಬದಲ್ಲಿ ತಾವು ಒಬ್ಬರು ಅಂತ ಗುರುತಿಸಿಕೊಂಡಿದ್ದು ಜೂನಿಯರ್ ಎನ್‌ಟಿಆರ್ ಚಿತ್ರರಂಗ ಪ್ರವೇಶಿಸಿದ ನಂತರ. ಜೂನಿಯರ್ ಎನ್‌ಟಿಆರ್ ಅಭಿನಯದ ‘ಯಮದೊಂಗ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಪುತ್ರನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ಶಾಲಿನಿ, ಕರ್ನಾಟಕದ ಕುಂದಾಪುರದವರು ಎನ್ನುವ ಅವರ ಕನ್ನಡದ ನಂಟನ್ನು ಅವರ ಪುತ್ರ ಜೂನಿಯರ್ ಎನ್‌ಟಿಆರ್ ಮತ್ತಷ್ಟುಗಟ್ಟಿಗೊಳಿಸಿದ್ದಾರೆ. ಆ ಮೂಲಕ ಜೂನಿಯರ್ ಎನ್‌ಟಿಆರ್ ಕನ್ನಡದವರೇ ಎನ್ನುವ ಹೆಮ್ಮೆ ಕನ್ನಡಿಗರಿಗೂ ಹೌದು
ವರದಿ: ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.