
1) ನಟ ಬಾಲಕೃಷ್ಣ ಜತೆ ನಟಿಸುವ ಅವಕಾಶ ಬಂದಿದ್ದು ಹೇಗೆ?
ಹ: ನಿರ್ಮಾಪಕ ಸಿ ಕಲ್ಯಾಣ್ ಹಾಗೂ ಕೆಎಸ್ ರವಿಕುಮಾರ್ ಅವರಿಂದಲೇ ಬಂದಿದ್ದು. ಸಿ ಕಲ್ಯಾಣ್ ಅವರು ಕನ್ನಡ ಚಿತ್ರಗಳನ್ನು ನೋಡಿದ್ದಾರೆ. ಹಾಗೆ ಕೆ ಎಸ್ ರವಿಕುಮಾರ್ ಕೂಡ ಕನ್ನಡ ಸಿನಿಮಾ ನಿರ್ದೇಶಿಸಿದವರು. ಹೀಗಾಗಿ ಅವರೇ ನೇರವಾಗಿ ನನ್ನ ಸಂಪರ್ಕ ಮಾಡಿ ಪಾತ್ರದ ಬಗ್ಗೆ ಹೇಳಿದರು. ಮೊದಲು ಭೇಟಿಯಾಗಿದ್ದೇ ಸಿ ಕಲ್ಯಾಣ್ ಅವರು. ಬಾಲಕೃಷ್ಣ ಸಿನಿಮಾ, ಅದರಲ್ಲೂ ನಾನೂ ಕೂಡ ಒಬ್ಬ ನಾಯಕಿ ಅಂದಾಗ ಖುಷಿಯಿಂದ ಒಪ್ಪಿಕೊಂಡೆ.
2) ನಿಮ್ಮನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಚಿತ್ರತಂಡಕ್ಕಿದ್ದ ಕಾರಣಗಳೇನು?
ಹ: ಈ ಚಿತ್ರದಲ್ಲಿ ನಾನು ಹಳ್ಳಿ ಹುಡುಗಿ. ನಟನೆಗೆ ಸ್ಕೋಪ್ ಇರುವ ಪಾತ್ರವಾದರೂ ಬಾಲಕೃಷ್ಣ ಅವರ ಜತೆಗೆ ನಟಿಸಲು ಹೊಸ ನಟಿ ಬೇಕಿತ್ತು. ಇಲ್ಲಿ ನನ್ನ ಪಾತ್ರದ ಹೆಸರು ಮಂಗ ಅಂತ. ಆಗಲೇ ನನ್ನ ನಟನೆಯ ಸಿನಿಮಾ ನೋಡಿದ್ದ ಸಿ ಕಲ್ಯಾಣ್ ಹಾಗೂ ಕೆ ಎಸ್ ರವಿಕುಮಾರ್ ಅವರಿಗೆ ನಾನು ಸೂಕ್ತ ಅನಿಸಿರಬೇಕು. ಜತೆಗೆ ತೆಲುಗು ಪ್ರೇಕ್ಷಕರಿಗೂ ಗೊತ್ತಿರುವ ಮುಖ ನನ್ನದು.
3) ಬಾಲಕೃಷ್ಣ ಜತೆ ತೆರೆ ಹಂಚಿಕೊಂಡಿದ್ದನ್ನು ಈಗ ನೆನಪಿಸಿಕೊಂಡರೆ?
ಹ: ಇದು ಬಾಲಕೃಷ್ಣ ಅವರ 102ನೇ ಸಿನಿಮಾ. ಚಿತ್ರದ ಹೆಸರು ‘ಜೈಸಿಂಹ’. ಸಿಕ್ಕಾ ಪಟ್ಟೆ ಆ್ಯಕ್ಷನ್ ಕತೆಯನ್ನು ಒಳಗೊಂಡಿದೆ. 100 ಸಿನಿಮಾಗಳನ್ನು ದಾಟಿರುವ ಹೀರೋ ಜತೆ ನಟಿಸುವುದು ಅಂದರೆ ದೊಡ್ಡ ಸಂಭ್ರಮ. ಒಂದೇ ಮಾತಿನಲ್ಲಿ ಹೇಳುವುದಾದರೆ ಸೂಪರ್. ಬಾಲಕೃಷ್ಣ ಜತೆ ನಟಿಸಿದ್ದು ಮರೆಯಲಾಗದ ಕ್ಷಣಗಳು. ನಾನು ಚಿಕ್ಕಂದಿನಲ್ಲೇ ನಮ್ಮೂರಿನ ಹಿಂದೂಪುರದ ಥಿಯೇಟರ್‌ನಲ್ಲಿ ಬಾಲ ಕೃಷ್ಣ ನಟನೆಯ ಸಿನಿಮಾಗಳನ್ನು ನೋಡಿದವಳು.
4) ಚಿತ್ರೀಕರಣ ಸೆಟ್‌ನಲ್ಲಿ ನೀವು ಕಂಡಂತೆ ಬಾಲಕೃಷ್ಣ ಹೇಗೆ?
ಹ: ತುಂಬಾ ಯಶಸ್ವೀ ಚಿತ್ರಗಳನ್ನು ಕೊಟ್ಟ ಹೀರೋ ಬಾಲಕೃಷ್ಣ. ರಾಜಕೀಯವಾಗಿಯೂ ಪ್ರಭಾವ ಇರುವ ನಟ. ಜತೆಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ. ಆದರೂ ತುಂಬಾ ಸಿಂಪಲ್ಲಾಗಿರುತ್ತಾರೆ. ಬೇರೆಯವರು ಅವರ ಜತೆ ನಟಿಸುವಾಗ ದೃಶ್ಯಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದರೆ ಅವರು ರೆಡಿಯಾಗುವ ತನಕ ಬಾಲಕೃಷ್ಣ ಅವರು ಕಾಯುವುದನ್ನು ನಾನು ನೋಡಿದ್ದೇನೆ. ನನಗೆ ತುಂಬಾ ದೊಡ್ಡ ಸ್ಟಾರ್ ನಟನೆ ಜತೆ ನಟಿಸುತ್ತಿದ್ದೇನೆಂಬ ಒತ್ತಡ, ಭಯ ಅಂತೂ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಸಿನಿಮಾ ಸೆಟ್‌ನಲ್ಲಿ ರುವಾಗ ರಾಜಕೀಯ ಮಾತನಾಡುತ್ತಿರಲಿಲ್ಲ. ಸೆಟ್‌ಗೆ ಯಾರಾದರೂ ಬಂದರು ಅವರನ್ನು ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ. ಜತೆಗೆ ನನ್ನ ಪರಿಚಯಿಸುವಾಗ ತುಂಬಾ ಗೌರವ ಕೊಟ್ಟು, ‘ಇವರು ಕನ್ನಡದ ಸ್ಟಾರ್ ನಟಿ. ತುಂಬಾ ಒಳ್ಳೆಯ ಕಲಾವಿದೆ’ ಅಂತ ಹೇಳಿ ಪರಿಚಯಿಸುತ್ತಿದ್ದರು. ಸ್ಟಾರ್ ನಟನಾದರೂ ಸಹ ತೆಲುಗು ಸಾಹಿತ್ಯವನ್ನು ತುಂಬಾ ಓದಿಕೊಂಡಿದ್ದಾರೆ. ಸೆಟ್‌ನಲ್ಲಿ ತೆಲುಗು ಕವಿತೆಗಳನ್ನು ಹಾಡುತ್ತಿದ್ದರು.
5) ‘ಜೈಸಿಂಹ’ ಚಿತ್ರದಲ್ಲಿ ನಿಮ್ಮ ಪಾತ್ರದ ಮಹತ್ವ ಎಷ್ಟಿದೆ?
ಹ: ಮೊದಲೇ ಹೇಳಿದಂತೆ ನನ್ನದು ಹಳ್ಳಿ ಹುಡುಗಿ ಪಾತ್ರ. ಪಾತ್ರದ ಹೆಸರು ಕೂಡ ಅದಕ್ಕೆ ತಕ್ಕಂತಿದೆ. ತಿಳಿ ಹಾಸ್ಯ ವನ್ನು ಒಳಗೊಂಡಿರುವ ನನ್ನ ಪಾತ್ರದಿಂದಲೇ ಕತೆ ಶುರುವಾಗುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಹೊಸ ತಿರುವು ಕೊಡುವುದು ನನ್ನ ಪಾತ್ರ.
6) ಈಗ ಕನ್ನಡದಲ್ಲಿ ಯಾವ ಸಿನಿಮಾಗಳು ಇವೆ?
ಹ: ‘ಕನಕ’, ‘ಸಂಹಾರ’, ‘ಕಥಾಸಂಗಮ’ ಹಾಗೂ ‘ಸೂಜಿದಾರ’ ಚಿತ್ರೀಕರಣ ಮುಗಿದಿದೆ. ‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿರುವೆ. ಈಗ ‘ಲೈಫ್ ಜತೆ ಒಂದ್ ಸೆಲ್ಫಿ’ ಚಿತ್ರೀಕರಣದಲ್ಲಿರುವೆ.
- ಆರ್ ಕೇಶವಮೂರ್ತಿ, ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.