ಚಿತ್ರ ವಿಮರ್ಶೆ: ಗೀತಾ

By Web DeskFirst Published Sep 28, 2019, 9:09 AM IST
Highlights

ಯಾಕೋ ಗೊತ್ತಿಲ್ಲ, ಈ ಗೀತಾ ಅಂತ ಹೆಸರಿಟ್ಟಿಕೊಂಡವರಿಗೆಲ್ಲ ಪ್ರೀತಿ ದಕ್ಕಲ್ಲ ಅನಿಸುತ್ತದೆ!

- ಹೀಗೆ ಹೇಳುವ ಹೊತ್ತಿಗೆ ತೆರೆ ಅಪ್ಪನ ಪ್ರೇಮ ಕತೆ ಮುಗಿದು, ಇವರ ಪುತ್ರನ ಪ್ರೇಮ ಕತೆಯಲ್ಲಿ ಇಬ್ಬರು ಹುಡುಗಿಯರ ಪ್ರವೇಶವಾಗಿರುತ್ತದೆ.

ಆರ್‌ ಕೇಶವಮೂರ್ತಿ

ನಿಶ್ಚಿತಾರ್ಥವನ್ನು ನಿಲ್ಲಿಸಿ ಬಂದ ಅಕಾಶ್‌ಗೆ ಗೀತಾ ಅಂದರೆ ಪ್ರಾಣ. ಪ್ರಿಯಾಗೆ ಅಕಾಶ್‌ ಅಂದರೆ ಇಷ್ಟ. ಗೀತಾಗೆ ಬೇರೊಬ್ಬರೊಂದಿಗೆ ನಿಶ್ಚಿತಾರ್ಥವಾಗಿ ಅದೂ ಕೂಡ ಬ್ರೇಕಪ್‌ ಆಗಿದೆ. ಈಕೆ ಪ್ರೀತಿಗಿಂತ ತನ್ನ ಕನಸು ಮುಖ್ಯ ಎಂದುಕೊಂಡವಳು. ಅಕಾಶ್‌ಗೆ ಗೀತಾ ಸಿಕ್ತಾಳ, ಪ್ರಿಯಾ ಕತೆ ಏನು.. ಇದಿಷ್ಟೆಆಗಿದ್ದರೆ ‘ಗೀತಾ’ ಚಿತ್ರದ ವಿಶೇಷತೆ ಏನು? ಎಂದು ಕೇಳಬಹುದು. ಆದರೆ, ಈ ಕುತೂಹಲ ಹುಟ್ಟುವ ಮುನ್ನವೇ ನಿರ್ದೇಶಕ ವಿಜಯ್‌ ನಾಗೇಂದ್ರ ಮತ್ತೊಂದು ಪ್ರೇಮ ಕತೆಯನ್ನು ಹೇಳಿರುತ್ತಾರೆ. ಅದು ಗೀತಾ ಮತ್ತು ಶಂಕರ್‌ ಅವರ ಆ ಕಪ್ಪು ಬಿಳುಪಿನ ದಿನಗಳ ಶುದ್ದ ಪ್ರೇಮ ಪಯಣ.

ಆ ದಿನಗಳ ಅಪ್ಪನ ಪ್ರೇಮ ಕಥೆಯಲ್ಲಿ ಪುತ್ರನ ಈ ದಿನಗಳ ಪ್ರೇಮ ಪಯಣ!

ಆತ ಕನ್ನಡ ಪ್ರೇಮಿ. ಅಗತ್ಯಬಿದ್ದರೆ ಕನ್ನಡಕ್ಕಾಗಿ ಕೈ ಎತ್ತುವ ಮತ್ತು ಎತ್ತಿದ ಕೈಯಿಂದಲೇ ಎದುರಾಳಿಗಳನ್ನು ತಟ್ಟುವ ಅಸಾಮಿ. ಇಂಥ ರೆಬೆಲ್‌ ಹೋರಾಟಗಾರನ ಬದುಕಿನಲ್ಲಿ ಆಕೆಯ ಪ್ರವೇಶವಾಗುತ್ತದೆ. ಈಕೆ ಹಿಂದಿ ಹುಡುಗಿ. ಕನ್ನಡದ ಹೋರಾಟಗಳಲ್ಲಿ ಮುಂದೆ ನಿಂತವನು ಬಯಸಿದ್ದು ಮಾತ್ರ ಪರಭಾಷೆಯ ಹುಡುಗಿಯನ್ನು! ಇವರಿಬ್ಬರ ಪ್ರೇಮ ಕತೆಗೆ ಎಂಭತ್ತರ ದಶಕದ ಮೈಸೂರು ನಗರಿ ಸಾಕ್ಷಿಯಾಗುತ್ತದೆ.

ನಿರ್ದೇಶನ: ವಿಜಯ್‌ ನಾಗೇಂದ್ರ

ನಿರ್ಮಾಣ: ಸೈಯದ್‌ ಸಲಾಂ- ಶಿಲ್ಪ ಗಣೇಶ್‌

ಸಂಗೀತ: ಅನೂಪ್‌ ರುಬೆನ್ಸ್‌

ಛಾಯಾಗ್ರಾಹಣ: ಶ್ರೀಶ ಕೂದವಳ್ಳಿ

ಆಗಲೇ ಹುಟ್ಟಿಕೊಂಡ ಗೋಕಾಕ್‌ ಚಳವಳಿ ವೇದಿಕೆಯಾಗುತ್ತದೆ. ಹೀಗೆ ಭಾಷೆ, ಸ್ವಾಭಿಮಾನದ ಜತೆ ಜತೆಯಲ್ಲೇ ಪ್ರೀತಿಯನ್ನು ಬೆರಸಿ ಎಲ್ಲೂ ಬೋರಾಗದಂತೆ ಎಚ್ಚರ ವಹಿಸುತ್ತಲೇ ‘ಗೀತಾ’ ಚಿತ್ರವನ್ನು ರೂಪಿಸಲಾಗಿದೆ. ಒಂಚೂರು ಎಡವಿದರೂ ಇದೊಂದು ರೆಗ್ಯೂಲರ್‌ ಪ್ರೇಮ ಕತೆಯಾಗಿಬಿಟ್ಟಿರೋದು. ಅದಕ್ಕೊಂದು ಹೋರಾಟದ ಹಿನ್ನೆಲೆ ಕೊಟ್ಟು, ಆ ದಿನಗಳನ್ನು ತೆರೆ ಮೇಲೆ ದರ್ಶನ ಮಾಡಿಸುತ್ತಾರೆ ನಿರ್ದೇಶಕರು. ಗೀತಾ ಮತ್ತು ಶಂಕರ್‌ ಪ್ರೇಮ ಕತೆಗೆ ಗೋಕಾಕ್‌ ಚಳವಳಿ ದೊಡ್ಡ ನೆರಳಾಗಿ ನಿಲ್ಲುತ್ತದೆ. ಕಟ್ಟದ ಕಟ್ಟಾಳು ಅದ್ಭುತ ಪ್ರೇಮಿಯಾದರೆ ಹೇಗಿರುತ್ತದೆ ಎನ್ನುವ ಕುತೂಹಲ ಇದ್ದವರು ‘ಗೀತಾ’ ಚಿತ್ರ ನೋಡಬಹುದು.

ಪರಭಾಷೆ ಚಿತ್ರಗಳಿಗೆ ಗಣೇಶ್‌ ಖಡಕ್‌ ವಾರ್ನಿಂಗ್‌!

ಎರಡು ತಲೆಮಾರಿನ ಪ್ರೇಮ ಕತೆಯನ್ನು ಹೇಳುವಾಗ ಫ್ಲ್ಯಾಷ್‌ ಬ್ಯಾಕ್‌ ಕತೆಯಲ್ಲೂ ಅಪ್ಪನ ಜಾಗದಲ್ಲಿ ಮಗನನ್ನು, ಅಪ್ಪನ ಪ್ರೇಯಸಿ ಜಾಗದಲ್ಲಿ ಮಗನನ್ನು ಪ್ರೀತಿಸುವ ಹುಡುಗಿಯ ಪಾತ್ರಗಳನ್ನೇ ಸೃಷ್ಟಿಸುವ ಮೂಲಕ ನಿರ್ದೇಶಕ ವಿಜಯ್‌ ನಾಗೇಂದ್ರ, ಜಾಣ್ಮೆ ತೋರಿದ್ದಾರೆ. ಯಾಕೆಂದರೆ ಫ್ಲ್ಯಾಷ್‌ ಬ್ಯಾಕ್‌ ಕತೆಯೇ ಚಿತ್ರದ ಜೀವಾಳ. ನಟ ಗಣೇಶ್‌ ಎರಡು ರೀತಿಯ ಪಾತ್ರಗಳಲ್ಲೂ ಮಿಂಚಿದ್ದಾರೆ. ಅದರಲ್ಲೂ ಕನ್ನಡದ ಹೋರಾಟಗಾರನ ಪಾತ್ರಕ್ಕಂತೂ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ಎರಡು ವರ್ಷದ ಬಳಿಕ ಎರಡು ಶೇಡ್‌ನಲ್ಲಿ ಶಾನ್ವಿ!

ಶಾನ್ವಿ ಗಣೇಶ್‌ ಅವರಿಗೆ ಸೂಕ್ತ ಜೋಡಿ. ಪ್ರಯಾಗ್‌, ಪಾರ್ವತಿ ಅರುಣ್‌ ನೋಡಲು ಚೆಂದ. ಅಚ್ಯುತ್‌ ಕುಮಾರ್‌, ದೇವರಾಜ್‌ ಹಾಗೂ ಸುಧಾರಾಣಿ ಪಾತ್ರಗಳು ನೋಡುಗರಲ್ಲಿ ಉಳಿಯುತ್ತವೆ. ಕನ್ನಡಕ್ಕಾಗಿ ವಿಚಿತ್ರವಾಗಿ ಪ್ರತಿಭಟನೆಗಳನ್ನು ಮಾಡುವ ರವಿಶಂಕರ್‌ ಗೌಡ ಅವರ ಪಾತ್ರ, ವಾಟಾಳ್‌ ನಾಗರಾಜ್‌ ಅವರನ್ನು ನೆನಪಿಸುತ್ತದೆ. ಬೆಂಗಳೂರು, ಮೈಸೂರು, ಕಲ್ಕತ್ತ, ಕಾಶ್ಮೀರ... ಹೀಗೆ ಸುತ್ತಾಡುವ ಚಿತ್ರದ ಅಂದಿನ ಮತ್ತು ಇಂದಿನ ಹಿನ್ನೆಲೆಯನ್ನು ಅಚ್ಚುಕಟ್ಟಾಗಿ ಸೆರೆ ಹಿಡಿದು ಎಲ್ಲೂ ಗೊಂದಲ ಮೂಡಿಸದಂತೆ ಶ್ರಮ ಹಾಕಿರುವುದು ಶ್ರೀಶ ಕೂದವಳ್ಳಿ ಛಾಯಾಗ್ರಾಹಣ. ಸೂಕ್ತ ಅಧ್ಯಯನ ಇದ್ದರೆ ಮಾತ್ರ ಇಂಥ ಸಿನಿಮಾ ಮಾಡಲು ಸಾಧ್ಯ ಎಂಬುದನ್ನು ಮೊದಲ ಪ್ರಯತ್ನದಲ್ಲೇ ತೋರಿಸಿದ್ದಾರೆ ವಿಜಯ್‌ ನಾಗೇಂದ್ರ.

click me!