ಗಣೇಶ್ ಅಭಿನಯದ ‘ಗೀತಾ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನ ಹಾಗೂ ಭಾಷೆಯ ಕೆಚ್ಚು ಹೆಚ್ಚಿಸುವ ಪವರ್‌ಫುಲ್ ಟ್ರೇಲರ್ ಎಂಬುದು ನೋಡಿದಾಗ ಗೊತ್ತಾಗುತ್ತದೆ. ವಿಜಯ್ ನಾಗೇಂದ್ರ ನಿರ್ದೇಶನದ ಈ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಅದ್ಭುತವಾದ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.
ಬಹುತೇಕರು ಇದು ಕನ್ನಡಿಗರ ಕನಸಿನ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಟ್ರೇಲರ್‌ನಲ್ಲಿರುವ ಹೈಲೈಟ್‌ಗಳೇನು?
1. ಶಂಕರ್‌ನಾಗ್ ಅವರ ಗೀತಾ ಚಿತ್ರದ ಹಾಡಿನ ಜತೆಗೆ ಮುದ್ದಾದ ಪ್ರೇಮ ಕತೆ. ‘ಗೀತಾ ನನ್ನ ಗೀತಾ’ ಎನ್ನುವ ಹಾಡಿನ ಮರು ಚಿತ್ರೀಕರಣ. ಪ್ರೀತಿ ಎಂದರೇನು ಎನ್ನುವ ಭಾವುಕತೆಯ ಅರ್ಥ ವ್ಯಾಪ್ತಿ.
2. ಭಾಷೆನಾ ನಾವು ಬೆಳಸಕ್ಕೆ ಆಗಲ್ಲ, ಭಾಷೆ ನಮ್ಮನ್ನು ಬೆಳಸುತ್ತದೆ. ಅದನ್ನು ನಾವು ಕಾಪಾಡಬೇಕು, ಗಡಿಯಲ್ಲಿ ಬಂದೂಕ ಹಿಡಿದುಕೊಂಡಿರುವ ಪ್ರತಿಯೊಬ್ಬ ಸೈನಿಕನಾದರೆ, ಎದೆಯಲ್ಲಿ ಕನ್ನಡಾಭಿಮಾನ ಇಟ್ಟುಕೊಂಡಿರುವ ಪ್ರತಿಯೊಬ್ಬನು ಕನ್ನಡದ ಸೈನಿಕ... ಹೀಗೆ ಕನ್ನಡಿಗರಲ್ಲಿ ಸ್ವಾಭಿಮಾನ ಬಿತ್ತುವ ಸಂಭಾಷಣೆಗಳು.
ಗೀತಾ ಚಿತ್ರಕ್ಕೆ U/A ಸರ್ಟಿಫಿಕೆಟ್!
3. ಪುನೀತ್ ಹಾಡಿರುವ ಕನ್ನಡಿಗ... ಎನ್ನುವ ಹಾಡಿನ ಸಾಲುಗಳ ಜತೆಗೆ ಗೋಕಾಕ್ ಚಳವಳಿಯ ದೃಶ್ಯಗಳು.
4. ಅಣ್ಣಾವ್ರೇ ಅಖಾಡಕ್ಕಿಳಿದ ಮೇಲೆ ಅಖಾಡ ನಮ್ದೆ... ಎನ್ನುವ ಹೀರೋಯಿಸಂ ಮಾತುಗಳು. ಡಾ ರಾಜ್‌ಕುಮಾರ್, ಶಂಕರ್‌ನಾಗ್ ಅವರನ್ನು ನೆನಪಿಸುತ್ತದೆ.
5. ರೆಟ್ರೋ ಸ್ಟೈಲಿನ ಸಾಗುವ ಹಳೆಯ ಪ್ರೇಮ ಕತೆಯಲ್ಲಿ ಮಿಂಚಿರುವ ಗಣೇಶ್. ಶಂಕರ್ ಹಾಗೂ ಗೀತಾ ಪಾತ್ರಗಳ ಪ್ರೇಮ ಕತೆ. ಸುಧಾರಾಣಿ, ದೇವರಾಜ್ ಅವರ ಪಾತ್ರಗಳು ಟ್ರೇಲರ್‌ನಲ್ಲಿ ಬಂದು ಹೋಗುತ್ತವೆ.
- ಹೀಗೆ ಇಡೀ ಟ್ರೇಲರ್ ಕನ್ನಡ, ಗೋಕಾಕ್ ಚಳವಳಿ, ಪ್ರೀತಿ, ಎಮೋಷನ್, ಮಾಸ್ ಹಾಗೂ ಫ್ಯಾಮಿಲಿ ನೆರಳನ್ನು ಒಳಗೊಂಡಿದೆ. ಕನ್ನಡ ಪ್ರೇಕ್ಷಕರಿಗೆ ಬೇಕಾಗುವಂತಹ ಅಂಶಗಳನ್ನೇ ನಂಬಿಕೊಂಡು ಇಡೀ ಚಿತ್ರವನ್ನು ರೂಪಿಸಿದ್ದಾರೆ ನಿರ್ದೇಶಕ ವಿಜಯ್ ನಾಗೇಂದ್ರ ಅವರು. ಸಯ್ಯಾದ್ ಸಲಾಂ ಹಾಗೂ ಶಿಲ್ಪಾ ಗಣೇಶ್ ಅವರು ಈ ಚಿತ್ರದ ನಿರ್ಮಾಣದ ಸಾರಥಿಗಳು. ಸೆ.27ರಂದು ‘ಗೀತಾ’ ತೆರೆಗೆ ಬರುತ್ತಿದೆ.