
ಇಲ್ಲಿ ಲಂಬೋದರ ನೆಪ ಮಾತ್ರ. ಹರೆಯದ ಹೊತ್ತಿಗೆ ಎಲ್ಲರಲ್ಲೂ ಕಾಡುವ ಕಾಮದ ಬಯಕೆಯ ಕುತೂಹಲ, ಆಕರ್ಷಣೆಗೆ ಆತ ಮಾತ್ರ ಸಾಂಕೇತಿಕ. ಕೆಲವರು ಅದನ್ನೇ ಗೌಪ್ಯವಾಗಿಟ್ಟುಕೊಳ್ಳುತ್ತಾರೆ. ಲಂಬೋದರ ಹೇಳುತ್ತಾನೆ. ತುಂಟಾಟ ಮಾಡಲು ಹೋಗಿ ಸಿಕ್ಕಿಬಿದ್ದು ಏಟು ತಿನ್ನುತ್ತಾನೆ. ಅಷ್ಟೇ ವ್ಯತ್ಯಾಸ.
ಇಡೀ ಚಿತ್ರವೇ ಹಾಸ್ಯದ ಮೂಲಕ ಸಾಗುತ್ತದೆ. ಲಂಬೋದರ ಹುಟ್ಟಿ, ದೊಡ್ಡವನಾಗಿ,ಶಾಲೆಗೆ ಹೋಗಿ ಅಲೆಲ್ಲ ತನ್ನ ನಾಟಿ ಬುದ್ಧಿ ತೋರಿಸುತ್ತಾ, ಇಕ್ಕಟ್ಟಿಗೆ ಸಿಲುಕಿ, ಏಟು ತಿಂದು ಒದ್ದಾಡುವ ಸನ್ನಿವೇಶಗಳೆಲ್ಲ ಹಾಸ್ಯವೇ. ಅಲ್ಲಿಂದ ಆತ ಹುಡುಗಿಯರನ್ನು ಪಟಾಯಿಸಲು ಬೀದಿಗಿಳಿಯುವ ಹೊತ್ತಿಗೆ ಲಂಬೋದರ ಆ್ಯಕ್ಷನ್ ಸನ್ನಿವೇಶಗಳಲ್ಲಿ ವ್ಯಾಘ್ರನಾಗಿ ಕಂಡರೂ, ಅಲ್ಲೂ ಪ್ರೇಕ್ಷಕರನ್ನು ನಗಿಸುವ ಪ್ರಯತ್ನವೇ ಕಾಣುತ್ತದೆ. ನಿರ್ದೇಶಕರು ಹಾಸ್ಯ ಸನ್ನಿವೇಶಗಳಿಗೆ ಸಂದರ್ಭಗಳನ್ನು ಸೃಷ್ಟಿಕೊಂಡ ಹಾಗೆಯೇ ತುಸು ದ್ವಂದ್ವಾರ್ಥದ ಮಾತುಗಳಿಗೂ ಜೋತು ಬಿದ್ದಿರುವುದು ವಿಪರ್ಯಾಸ.
ಚಿತ್ರದ ರಿಲೀಸ್‌ಗೂ ಮುನ್ನ ನಾಯಕ ನಟ ಯೋಗೇಶ್ ಇದು ತಮಗೆ ಕಮ್ ಬ್ಯಾಕ್ ಸಿನಿಮಾ ಅಂದಿದ್ದರು. ಅವರ ಮಾತಿನ ಅರ್ಥ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದು ಖಚಿತ ಎನ್ನುವುದೇ ಆಗಿತ್ತು. ಅವರ ಮಾತಿನ ಮೇಲೆ ಹೆಚ್ಚು ನಿರೀಕ್ಷೆಯಿಟ್ಟು ಚಿತ್ರಮಂದಿರಕ್ಕೆ ಹೋಗಿ ಕುಳಿತರೆ ಕೊಂಚ ನಿರಾಸೆ ಕಟ್ಟಿಟ್ಟಬುತ್ತಿ. ಅವರು ಹೇಳಿಕೊಂಡಷ್ಟೇನು ಇಲ್ಲಿ ಮನರಂಜನೆ ಇಲ್ಲ. ಒಂದಷ್ಟುಹೊತ್ತು ನಗಬಹುದು, ಕೊನೆಗೆ ಒಂದಷ್ಟುಭಾವುಕರಾಗಬಹುದು ಎನ್ನುವುದನ್ನು ಬಿಟ್ಟರೆ ಪ್ರೇಕ್ಷಕರನ್ನು ಕೊನೆಗೆ ತನಕ ತನ್ನಯತೆಯಲ್ಲಿ ಹಿಡಿದಿಷ್ಟುಕೊಳ್ಳುವಂತಹ ಚಿತ್ರ ಇದಲ್ಲ. ಗಟ್ಟಿಕತೆಯೇ ಇಲಿಲ್ಲ. ಲಂಬೋದರ ತುಂಟಾಟಗಳೇ ಚಿತ್ರದ ಒಟ್ಟು ಕತೆ. ಅಷ್ಟನ್ನು ನಂಬಿಕೊಂಡೇ ಪ್ರೇಕ್ಷಕರಿಗೆ ಸಿನಿಮಾ ಮುಟ್ಟಿಸುಲು ನಿರ್ದೇಶಕರು ಪ್ರಯತ್ನಿಸಿದ್ದು ಚೋದ್ಯ.
ನಟ ಯೋಗೇಶ್‌ಗೆ ಇದೊಂದು ಹೊಸ ಬಗೆಯ ಪಾತ್ರ. ಉಂಡಾಡಿ ಗುಂಡ, ತುಂಟ, ಚಪಲ ಚೆನ್ನಿಗ, ಹುಟ್ಟು ತರ್ಲೆ ಇಷ್ಟೆಲ್ಲವನ್ನು ತನ್ನ ನಿತ್ಯದ ಕಾಯಕ ಎಂದು ಕೊಂಡ ಲಂಬೋದರನಾಗಿ ಯೋಗಿ, ನಟನೆ ಚೆನ್ನಾಗಿದೆ. ಪ್ರತಿ ಸನ್ನಿವೇಶದಲ್ಲೂ ಲವಲವಿಕೆಯಿಂದಲೇ ಅಭಿನಯಿಸಿದ್ದಾರೆ. ಆ್ಯಕ್ಷನ್ ಸನ್ನಿವೇಶಗಳಲ್ಲೂ ಮಿಂಚಿದ್ದಾರೆ. ಸೆಂಟಿಮೆಂಟ್ ದೃಶ್ಯದಲ್ಲೂ ಮನ ತಟ್ಟುತ್ತಾರೆ. ಯೋಗಿ ಭರ್ಜರಿಯಾಗಿಯೂ ನಗಿಸಬಲ್ಲರೂ ಎನ್ನುವುದನ್ನು ಇಲ್ಲಿಸಾಬೀತು ಮಾಡಿದ್ದಾರೆ. ಹಾಗೆಯೇ ನಿತ್ಯಾ ಪಾತ್ರಧಾರಿ ಆಕಾಂಕ್ಷ . ಅವರ ಸೊಗಸಾಗಿ ಅಭಿನಯಿಸಿದ್ದಾರೆ. ಯೋಗಿ ಸ್ನೇಹಿತರಾಗಿ ಬರುವ ಧರ್ಮಣ್ಣ, ಸಿದ್ದು ಮೂಲಿಮನಿ ಅಭಿನಯವೂ ಇಷ್ಟವಾಗುತ್ತದೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಮಂಜುನಾಥ್ ಹೆಗಡೆ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಕಾರ್ತಿಕ್ ಶರ್ಮ ಸಂಗೀತ ಎರಡು ಹಾಡುಗಳಲ್ಲಿ ಇಷ್ಟವಾಗುತ್ತದೆ.
ಚಿತ್ರ: ಲಂಬೋದರ
ತಾರಾಗಣ: ಯೋಗೇಶ್, ಆಕಾಂಕ್ಷ ಗಾಂಧಿ, ಅಚ್ಯುತ್ ಕುಮಾರ್,ಅರುಣ ಬಾಲರಾಜ್, ಧರ್ಮಣ್ಣ, ಸಿದ್ದು ಮೂಲಿಮನಿ
ನಿರ್ದೇಶನ: ಕೃಷ್ಣರಾಜ್
ಸಂಗೀತ: ಕಾರ್ತಿಕ್ ಶರ್ಮ
ಛಾಯಾಗ್ರಹಣ: ಆನಂದ್ ಎಸ್ ಕಶ್ಯಪ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.