ನಾತಿ ಚರಾಮಿ ಚಿತ್ರ ಇಂದು ತೆರೆ ಕಂಡಿದೆ. ಚಿತ್ರದ ಟೈಟಲ್ಲೇ ಢಿಫರೆಂಟಾಗಿದೆ. ಏನಿದರ ಅರ್ಥ? ಚಿತ್ರದಲ್ಲಿ ಏನು ಹೇಳಿರಬಹುದು ಎಂಬ ಕುತೂಹಲ ಮೂಡಿಸಿದೆ. ಹೇಗಿದೆ ಈ ಚಿತ್ರ ಇಲ್ಲಿದೆ ವಿಮರ್ಶೆ.
ಬೆಂಗಳೂರು (ಡಿ. 28): ಇಂದು ನಾತಿಚರಾಮಿ ಚಿತ್ರ ಬಿಡುಗಡೆಯಾಗಿದೆ. ಚಿತ್ರದ ಹೆಸರೇ ಕುತೂಹಲ ಮೂಡಿಸಿದೆ. ವಿಧವೆ ಹೆಣ್ಣು ಮಗಳ ದೈಹಿಕ ಬಯಕೆಯ ತೊಳಲಾಟವನ್ನು ಬಿಚ್ಚಿಡುತ್ತದೆ ನಾತಿ ಚರಾಮಿ. ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ, ಬಯಕೆಗಳ ಬಗ್ಗೆ ನಾತಿಚರಾಮಿಯಲ್ಲಿ ತೋರಿಸಲಾಗಿದೆ.
ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತುಂಬಿಸಿಕೊಂಡು ಬೆಳೆದವಳು ಗೌರಿ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಾಳೆ. ದುರಾದೃಷ್ಟವಾತ್ ಬೇಗನೆ ವಿಧವೆಯಾಗುತ್ತಾಳೆ. ಮನಸ್ಸಿನ ತುಂಬಾ ಗಂಡನ ಪ್ರೀತಿ, ನೆನಪೇ ತುಂಬಿರುತ್ತದೆ. ಆದರೆ ವಯೋ ಸಹಜವಾಗಿ ಮೂಡುವ ಬಯಕೆಗಳು, ಆಸೆ- ಆಕಾಂಕ್ಷೆಗಳ ನಡುವಿನ ತಿಕ್ಕಾಟ, ತೊಳಲಾಟವೇ ಚಿತ್ರದ ಜೀವಾಳ. ಮನಸ್ಸಿನ ಆಸೆ ಪೂರೈಸಿಕೊಳ್ಳಲು ದಾರಿ ಕಂಡು ಹಿಡಿದುಕೊಳ್ಳುವುದು ಉಟ್ಟ ಸೀರೆಯನ್ನು ಬದಲಾಯಿಸಿ ಜೀನ್ಸ್ ಏರಿಸಿದಷ್ಟು ಸುಲಭವಲ್ಲ.
ಚಿತ್ರ ಇದನ್ನು ವಿಶ್ಲೇಷಿಸುತ್ತಲೇ ಗಂಡು ಹೆಣ್ಣು ಮತ್ತು ಗಂಡ ಹೆಂಡತಿಯ ನಡುವಿನ ಸಂಬಂಧಗಳಲ್ಲಿ ಪ್ರೇಮ ಮತ್ತು ಕಾಮದ ಪ್ರಾಮುಖ್ಯತೆಯನ್ನೂ ಪ್ರಶ್ನಿಸುತ್ತದೆ. ಹಾಗಾಗಿ ಇದೊಂದು ಮಹಿಳಾ ಪ್ರಧಾನ ಚಿತ್ರವೂ ಹೌದು. ನಿರ್ದೆಶಕರು ಇದನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ ಗೌರಿ ದೈಹಿಕ ಬಯಕೆಗಳನ್ನು ಪೂರೈಸಿಕೊಳ್ಳುತ್ತಾರಾ? ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾವನ್ನೇ ನೋಡಬೇಕು.
ಗೌರಿ ಪಾತ್ರಧಾರಿ ಶೃತಿ ಹರಿಹರನ್ ಅದ್ಭುತವಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್ ಕೂಡಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಬರಹಗಾರ್ತಿ ಸಂಧ್ಯಾರಾಣಿ ಚಿತ್ರಕ್ಕೆ ಕತೆಯನ್ನು ಬರೆದಿದ್ದಾರೆ. ಚಿತ್ರದ ಸಂಭಾಷಣೆ ಸಂಧ್ಯಾರಾಣಿ ಮತ್ತು ಅಭಯಸಿಂಹ ಅವರದ್ದು. ಖ್ಯಾತ ಸಂಗೀತಗಾರ್ತಿ ಬಿಂದುಮಾಲಿನಿಯವರು ಸಂಗೀತ ಸಂಯೋಜನೆ ಜೊತೆಗೆ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ಸಂಚಾರಿ ವಿಜಯ್ ರವರು ಕೂಡ ಒಂದು ಹಾಡನ್ನು ಹಾಡಿದ್ದಾರೆ.
ಚಿತ್ರದ ತಾರಾಗಣದಲ್ಲಿ ಶೃತಿ, ಸಂಚಾರಿ ವಿಜಯ್, ಶರಣ್ಯ, ಶ್ವೇತಾ, ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಪೂರ್ಣಚಂದ್ರ, ಗ್ರೀಷ್ಮಾ, ಹರ್ಷಿಲ್ ಕೌಶಿಕ್, ಸೀತಾ ಕೋಟೆ, ಕಲಾಗಂಗೋತ್ರಿ ಮಂಜು ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳನ್ನು ಕಿರಣ್ ಕಾವೇರಪ್ಪ, ನಂದಿನಿ ನಂಜಪ್ಪ, ಮದನ್ ಬೆಳ್ಳಿಸಾಲು ಬರೆದಿದ್ದಾರೆ.