ಚಿತ್ರ ವಿಮರ್ಶೆ: ಕವಿ

By Kannadaprabha NewsFirst Published Aug 25, 2018, 9:42 AM IST
Highlights

ಕವಿ ಮನಸ್ಸು ಎಲ್ಲರಲ್ಲೂ ಇರುತ್ತದಂತೆ. ಆದರೆ ಅದು ಯಾವಾಗ ಎಚ್ಚರವಾಗುತ್ತೆ. ಯಾವಾಗ ಕವಿತೆಗಳನ್ನು ಹೊಮ್ಮಿಸುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಹಾಗೆ ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಕವಿಯಾಗಿದ್ದಾರೆ.

ನಿರರ್ಗಳವಾಗಿ ಕವಿತೆಗಳನ್ನು ಹೊರ ಹಾಕಿದ್ದಾರೆ. ಕತೆ, ಚಿತ್ರಕತೆ ಹಾಗೂ ನಿರ್ದೇಶನದ ಜೊತೆಗೆ ಸಂಗೀತವನ್ನೂ ತ್ಯಾಗರಾಜ್‌ ನಿರ್ವಹಿಸಿದ್ದಾರೆ. ಇವರ ಸಾಹಸಕ್ಕೆ ನಿರ್ಮಾಪಕ ಪುನೀತ್‌ಗೌಡ ನಾಯಕನಟನಾಗಿ ಅಭಿನಯಿಸಿದ್ದಾರೆ.

ಪ್ರತಿ ಪ್ರೇಮಕತೆಯ ಚಿತ್ರಗಳಲ್ಲಿ ನಾಯಕ ನಟನು ನಾಯಕಿಯ ಅಂದ-ಅಲಂಕಾರ, ಮಾತುಕತೆ, ಬಿಂಕ ವೈಯಾರಕ್ಕೆ ಮಾರುಹೋಗುತ್ತಾನೆ. ಆಕೆಯನ್ನು ತನ್ನ ಪ್ರೇಯಿಸಿಯನ್ನಾಗಿಸಿಕೊಳ್ಳಲು, ಮದುವೆಯಾಗಲು ಹಪಹಪಿಸುತ್ತಾ ಆಕೆಯ ಸುತ್ತ ಗಿರಕಿ ಹೊಡೆಯುವುದು ಮಾಮೂಲು. ಆದರೆ ಇಲ್ಲಿ ತ್ಯಾಗರಾಜ್‌ ವಿರುದ್ಧ ದಿಕ್ಕಿನಲ್ಲಿ ಆಲೋಚನೆ ಮಾಡಿ ನಾಯಕಿಯೇ ನಾಯಕನ ಕವಿತೆಗೆ ಮಾರುಹೋಗಿ ಅವನ ಹಿಂದಿಂದೆ ಸುತ್ತುವುದೇ ಈ ಚಿತ್ರದ ಕತೆ.

ಆ್ಯಂಗಿ ಮ್ಯಾನ್‌ ಆಗಿ ಫೈಟ್‌ ಮಾಡುತ್ತಾ, ಕಾಲೇಜಿನ ಯುವಕನಾಗಿ ಹಾಡು-ಕುಣಿತಗಳಲ್ಲೂ, ಅಮ್ಮನ ಮುದ್ದಿನ ಮಗನಾಗಿ ಹೀಗೆ ನಾಯಕನಾಗಲು ಏನೇನು ಬೇಕೋ ಅದೆಲ್ಲಾ ಸೂತ್ರವನ್ನೂ ನಿರ್ದೇಶಕರು ಪೋಣಿಸಿದ್ದಾರೆ. ವಿಲನ್‌ಗಳ ಎರಡು ಗುಂಪು ಇದೆ. ಅವರೂ ಆಗಾಗ ಅಬ್ಬರಿಸಿ ಹೋಗುತ್ತಾರೆ. ಚೆಂದದ ಎರಡು ಹಾಡು ಮಾತ್ರ ಗುನುಗಬಹುದು. ಹಿನ್ನೆಲೆ ಸಂಗೀತ, ಆಲಾಪನೆಗಳು ಮಾತು, ಮೌನಕ್ಕೆ ಅಡ್ಡಗೋಡೆಯಂತಾಗಿದೆ. ಆದರೆ ನಿರ್ದೇಶಕರೇ ಸಂಗೀತ ನೀಡಿದ್ದರಿಂದ ಅದರ ಇಂಪ್ಯಾಕ್ಟ್ ಏನು ಹೇಳುತ್ತೋ ಗೊತ್ತಿಲ್ಲ.

ಆದರೆ ಬೇಜವಾಬ್ದಾರಿಯನ್ನು ರೂಢಿಸಿಕೊಂಡರೆ ಅಪ್ಪ-ಅಮ್ಮ, ಗೆಳೆಯರು, ಕೊನೆಗೆ ಪ್ರೇಯಸಿಯೂ ದೂರ ಮಾಡುತ್ತಾರೆ. ಅನಾಥರಾಗಬೇಕಾಗುತ್ತದೆ ಎಂಬ ಸಂದೇಶಕ್ಕಾಗಿ ಚಿತ್ರ ಮಾಡಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ. ಚಿತ್ರದಲ್ಲೇ ಹೇಳುವಂತೆ ಕಟ್ಟುಕತೆ ಹೇಳಲು ಹೋಗಿ ಅದೇ ಸತ್ಯಕತೆಯಾಯ್ತಲ್ಲ ಎನ್ನುವ ಡೈಲಾಗ್‌ ಚಿತ್ರಕ್ಕೆ ಸಣ್ಣ ಉಸಿರು. ಅದನ್ನು ಕ್ಲೈಮ್ಯಾಕ್ಸ್‌ನಲ್ಲಿ ನಾಯಕಿಗೆ ಆ್ಯಕ್ಸಿಡೆಂಟ್‌ ಮಾಡಿಸಿ ದೃಶ್ಶೀಕರಿಸಿದ್ದು ವಿಶೇಷ. ಕಟ್ಟುಕತೆಯ ದೃಶ್ಶೀಕರಣದ ಕಲರ್‌ಸ್ಕೀಮ್‌ ವಿಭಿನ್ನ ಪ್ರಯೋಗ. ತಾಳಿದವನು ಬಾಳಿಯಾನು ಎಂಬುದಷ್ಟೆಸತ್ಯ.

ಚಿತ್ರ : ಕವಿ

ತಾರಾಗಣ: ಪುನೀತ್ ಗೌಡ, ಶೋಭಿತಾ ರಾಜಣ್ಣ, ಎಂ ಎಸ್ ಉಮೇಶ್, ನಟರಾಜ್ ಅರಳಸುರಳಿ ಹಾಗು ಇನ್ನಿತರರು

ನಿರ್ದೇಶನ ಹಾಗು ಸಂಗೀತ: ಎಂ ಎಸ್ ತ್ಯಾಗರಾಜ್

ಛಾಯಾಗ್ರಹಣ: ಶರತ್ ಕುಮಾರ್ ಹಾಗು ಕಾರ್ತೀಕ್ ಶರ್ಮಾ

ನಿರ್ಮಾಪಕ: ಪುನೀತ್ ಗೌಡ 

ರೇಟಿಂಗ್: **

 

click me!