’ಗಂಡುಗಲಿ ಮದಕರಿ ನಾಯಕ’ ನಿಗಾಗಿ ಸುದೀಪ್, ದರ್ಶನ್ ನಡುವೆ ಶುರುವಾಗಿದೆ ವಾರ್

By Web DeskFirst Published Sep 22, 2018, 12:25 PM IST
Highlights

ಗಂಡುಗಲಿ ಮದಕರಿನಾಯಕ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ.  ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಅಭಿನಯದ ‘ಗಂಡುಗಲಿ ಮದಕರಿ ನಾಯಕ’ ಚಿತ್ರವನ್ನು ರಾಜೇಂದ್ರಸಿಂಗ್ ಬಾಬು ನಿರ್ದೇಶಿಸುತ್ತಾರೆಂಬ ವರ್ತಮಾನ ಬಂದಿದ್ದೇ ತಡ ಸುದೀಪ್ ಅಭಿಮಾನಿಗಳು ಮದಕರಿ ನಾಯಕನ ಪಾತ್ರ ತಮ್ಮ ಸುದೀಪಣ್ಣನಿಗೆ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬೇಡಿಕೆ ಶುರು ಮಾಡಿದ್ದರು. 

ಬೆಂಗಳೂರು (ಸೆ. 22): ಮತ್ತೊಮ್ಮೆ ಇಬ್ಬರು ಘಟಾನುಘಟಿ ಸ್ಟಾರ್‌ಗಳ ಅಭಿಮಾನಿಗಳು ಮುಸುಕಿನ ಯುದ್ಧಕ್ಕೆ ನಿಂತಂತೆ ಕಾಣುತ್ತಿದೆ. ಈ ಕಲಹ ಆರಂಭಗೊಂಡಿರುವುದು ‘ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕಾಗಿ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಅಭಿನಯದ ‘ಗಂಡುಗಲಿ ಮದಕರಿ ನಾಯಕ’ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಾರೆಂಬ ವರ್ತಮಾನ ಬಂದಿದ್ದೇ ತಡ ಸುದೀಪ್ ಅಭಿಮಾನಿಗಳು ಮದಕರಿ ನಾಯಕನ ಪಾತ್ರ ತಮ್ಮ ಸುದೀಪಣ್ಣನಿಗೆ ಕೊಡಿ ಎಂದು ಸೋಷಿಯಲ್  ಮೀಡಿಯಾದಲ್ಲಿ ಬೇಡಿಕೆ ಶುರು ಮಾಡಿದ್ದರು. ಆದರೆ ಈ ಬೇಡಿಕೆಯನ್ನು ದರ್ಶನ್ ಅಭಿಮಾನಿಗಳು ವಿರೋಧಿಸಿದ್ದಾರೆ.

‘ಗಂಡುಗಲಿ ಮದಕರಿ ನಾಯಕ’ ಬಿಎಲ್ ವೇಣು ಅವರೇ ಬರೆದಿರುವ ಕಾದಂಬರಿಯಾಗಿದ್ದು, ಇದಕ್ಕೆ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಮದಕರಿ ನಾಯಕನಿಗೆ ಮಾತುಗಳನ್ನು ಜೋಡಿಸುತ್ತಿದ್ದಾರೆ ಬಿ ಎಲ್ ವೇಣು.

ಈಗ ಮದಕರಿ ನಾಯಕನ ಪಾತ್ರವನ್ನು ತಾವೇ ಮಾಡುವಂತೆ ಸುದೀಪ್ ಅವರ ಮೇಲೂ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಈ ಅಭಿಯಾನ ಶುರುವಾಗುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಮದಕರಿ ನಾಯಕ ಪಾತ್ರ ಬಾಸ್ ಮಾಡಿದರೇನೇ ಸರಿ ಎನ್ನುತ್ತಿದ್ದಾರೆ. ಚರ್ಚೆಗಳು ಜೋರಾಗಿ ಸಾಗುತ್ತಿವೆ.

ವೀರ ಮದಕರಿ ಹೆಸರಿಗೂ ಸುದೀಪ್‌ಗೂ ನಂಟು ಇದೆ. ಈ ಹಿಂದೆ ಅವರೇ ಮದಕರಿ ನಾಯಕನ ಜೀವನಕ್ಕೆ ಸಂಬಂಧವಿಲ್ಲದ್ದಿದ್ದರೂ ತಾನು ಮಾಡಿದ ಚಿತ್ರವೊಂದಕ್ಕೆ ‘ವೀರ ಮದಕರಿ’ ಎನ್ನುವ ಹೆಸರಿಟ್ಟಿದ್ದರು. ಅದಕ್ಕೂ ಮುನ್ನ ಸುದೀಪ್ ರಾಜಕಾರಣಕ್ಕೆ ಬಂದರೆ ಚಿತ್ರದುರ್ಗದಲ್ಲಿ ಚುನಾವಣೆಗೆ ನಿಲ್ಲುತ್ತಾರೆಂಬ ಸುದ್ದಿಯೂ ಆಗ ಜೋರಾಗಿತ್ತು.

ಅತ್ತ ಮದಕರಿ ನಾಯಕ ಸಮುದಾಯ ಕೂಡ ‘ಸುದೀಪ್ ನಮ್ಮವ’ ಎನ್ನುವ ಭಾವನೆಯನ್ನು ಗಟ್ಟಿಯಾಗಿಯೇ ನಂಬಿಕೊಂಡಿದ್ದರು. ಹಾಗಾಗಿ ಮದಕರಿ ನಾಯಕನಾಗುವುದಕ್ಕೆ ಸೂಕ್ತ ವ್ಯಕ್ತಿ ಸುದೀಪ್ ಎನ್ನುವ ಮಾತುಗಳು ಅವರ ಅಭಿಮಾನಿಗಳದ್ದು. ಈ ಹಿಂದೆ ಕ್ರಾಂತಿಕಾರಿ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಜೀವನ ಚರಿತ್ರೆಯನ್ನು ಸುದೀಪ್ ಅವರಿಗೆ ಮಾಡುವುದಕ್ಕೆ ನಿರ್ದೇಶಕರೊಬ್ಬರು ಓಡಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  

click me!
Last Updated Sep 22, 2018, 12:26 PM IST
click me!