
‘ಪಾರ್ಚ್ಡ್’ನಲ್ಲಿ ನಟಿಸಿರುವ ರಾಧಿಕಾ ಆಪ್ಟೆ, ಸುರ್ವೀನ್ ಚಾವ್ಲಾ ಅವರ ಗೋಳಿನ ಕತೆಯಿದು. ಈ ಇಬ್ಬರು ನಟಿಯರು ಕೇವಲ ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಪುರುಷನಿಂದ ದಬ್ಬಾಳಿಕೆ ಅನುಭವಿಸಿದವರೇ, ಲೈಂಗಿಕ ದೌರ್ಜನ್ಯದ ಕಹಿ ಉಂಡವರೇ!
ಲೈಂಗಿಕ ಹಸಿವನ್ನೇ ಆರ್ಟ್'ಫುಲ್ಲಾಗಿ ತೋರಿಸಿರುವ ‘ಪಾರ್ಚ್ಡ್’ ಚಿತ್ರ ಇದೀಗ ಜೋರು ಸುದ್ದಿಯಲ್ಲಿದೆ. ನೀವೀ ಚಿತ್ರವನ್ನು ನೋಡಿದ್ದರೆ ಅಲ್ಲೆರಡು ಪಾತ್ರಗಳು ನಿಮ್ಮ ಮನಸ್ಸನ್ನು ಖಂಡಿತಾ ಕಟ್ಟಿಹಾಕುತ್ತವೆ. ಮಕ್ಕಳಾಗದೆ ಇದ್ದಾಗ ನಿತ್ಯ ಗಂಡನಿಂದ ಏಟು ತಿನ್ನುವ ‘ಲಜ್ಜೋ’ ಪುರುಷನ ದಬ್ಬಾಳಿಕೆಗೆ ಅಡಿಯಾಳಾಗುತ್ತಾಳೆ. ದೇಹಸಿರಿಯನ್ನು ಪ್ರದರ್ಶಿಸಿ ವೃತ್ತಿ ಕಂಡುಕೊಳ್ಳುವ ‘ಬಿಜಲಿ’ ಪುನಃ ಪುನಃ ಕಾಡುತ್ತಾಳೆ. ‘ಲಜ್ಜೋ’ ಆಗಿ ನಾಚಿಕೆ ಬಿಡುವ ರಾಧಿಕಾ ಆಪ್ಟೆ, ‘ಬಿಜಲಿ’ಯಾಗಿ ಬೆಳಕು ಕಾಣದ ಸುರ್ವೀನ್ ಚಾವ್ಲಾ ಈ ಇಬ್ಬರನ್ನೂ ‘ಪಾರ್ಚ್ಡ್’ನಲ್ಲಿ ಕಂಡಾಗ ನಮಗೆ ಅಯ್ಯೋ ಅನ್ನಿಸಬಹುದು. ಇವರ ಮೇಲೆ ನಡೆಯುವ ಪುರುಷನ ದಬ್ಬಾಳಿಕೆ ಕಂಡು ಅಸಹ್ಯವೂ ಮೂಡಬಹುದು.
ಆದರೆ, ಈ ಇಬ್ಬರು ನಟಿಯರು ಕೇವಲ ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಪುರುಷನಿಂದ ದಬ್ಬಾಳಿಕೆ ಅನುಭವಿಸಿದವರೇ, ಲೈಂಗಿಕ ದೌರ್ಜನ್ಯದ ಕಹಿ ಉಂಡವರೇ! ರಾಧಿಕಾ ಆಪ್ಟೆಯೇ ಇದನ್ನು ಇತ್ತೀಚೆಗೆ ಹೇಳಿಕೊಂಡರು. ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟರೊಬ್ಬರ ಮೇಲೆ ಅವರ ಆರೋಪವಿತ್ತು. ‘ಸಿನಿಮಾದಲ್ಲಿ ಅವಕಾಶ ಬೇಕಾದರೆ, ಲೈಂಗಿಕ ಸುಖಕ್ಕೆ ಸಹಕರಿಸು’ ಎಂಬ ಧಾಟಿಯಲ್ಲಿ ಆ ಸ್ಟಾರ್ ಹೇಳಿದ್ದರಂತೆ. ರಾಧಿಕಾ ಆಪ್ಟೆಗೆ ಇಂಥದ್ದೇ ಕಹಿ ಅನುಭವ ಬಾಲಿವುಡ್'ಗೆ ಕಾಲಿಟ್ಟಾಗಲೂ ಆಗಿತ್ತಂತೆ. ‘ನಿರ್ದೇಶಕರಲ್ಲದೆ, ನಿರ್ಮಾಪಕರೂ ಇಂಥ ನೀಚ ವರ್ತನೆ ತೋರಿದ್ದರು’ ಎಂದು ಆಕ್ರೋಶ ತೆರೆದಿಡುತ್ತಾರೆ ರಾಧಿಕಾ. ಆದರೆ, ಅವರೆಲ್ಲರ ಹೆಸರನ್ನು ಬಯಲು ಮಾಡಲು ‘ಕಬಾಲಿ’ ನಟಿಗೆ ಇಷ್ಟವಿಲ್ಲ.
ಇನ್ನು, ಸುರ್ವೀನ್ ಚೋಪ್ರಾ ಕತೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಮೊದಲ ಸಿನಿಮಾವಾಗಿ ಕನ್ನಡದ ‘ಪರಮೇಶ ಪಾನ್‌ವಾಲಾ’ದಲ್ಲಿ ನಟಿಸಿ, ತಮಿಳು, ಪಂಜಾಬಿ, ಹಿಂದಿ ಚಿತ್ರದಲ್ಲಿ ನೆಲೆ ಕಾಣುತ್ತಿರುವ ಈ ನಟಿಗೂ ಇಂಥದ್ದೇ ಅನುಭವವಾಗಿದೆ. ತಮಿಳು ಚಿತ್ರದ ಜನಪ್ರಿಯ ನಿರ್ದೇಶಕರೊಬ್ಬರು ಈಕೆಯನ್ನು ಇನ್ನಿಲ್ಲದಂತೆ ಪೀಡಿಸಿದ್ದಾರೆ. ‘ನಾನು ಅವರ ಚಿತ್ರಕ್ಕಾಗಿ ಆಡಿಶನ್ ಕೊಟ್ಟೆ. ಆ ನಿರ್ದೇಶಕರಿಗೆ ಹಿಂದಿಯೇ ಬರುತ್ತಿರಲಿಲ್ಲ. ಸ್ನೇಹಿತರೊಬ್ಬರ ಮೂಲಕ ಸಿನಿಮಾಕ್ಕೆ ಆಫರ್ ಕೊಟ್ಟರು. ಒಂದು ಕಂಡೀಶನ್ನನ್ನೂ ಹಾಕಿದರು; ಈ ಚಿತ್ರದಲ್ಲಿ ನಟಿಸಬೇಕಾದರೆ, ನೀವು ನಿರ್ದೇಶಕರ ಜೊತೆ ಸ್ವಲ್ಪ ಹೊತ್ತು ಕಳೆಯಬೇಕು ಅಂತ’ ಎಂದು ದುಃಖ ತೋಡಿಕೊಳ್ಳುತ್ತಾರೆ ಸುರ್ವೀನ್. ಆ ಚಿತ್ರದ ಆಫರನ್ನೇ ಅವರು ತಿರಸ್ಕರಿಸಿದರು.
ಸುರ್ವೀನ್‌ಗೆ ಇನ್ನೊಂದು ಸಲವೂ ಹಾಗೆಯೇ ಆಯಿತಂತೆ. ‘ಅವತ್ತೊಂದು ದಿನ ಶೂಟಿಂಗ್ ಮುಗಿಸಿ ನನ್ನ ಫ್ಲ್ಯಾಟ್ ತಲುಪುವಾಗ ರಾತ್ರಿ 2 ಗಂಟೆಯಾಗಿತ್ತು. ಇದನ್ನೇ ಅಪಾರ್ಥವಾಗಿ ಕಲ್ಪಿಸಿಕೊಂಡ ಫ್ಲ್ಯಾಟ್ ಮಾಲೀಕ, ರಾತ್ರೋ ರಾತ್ರಿ ನನಗೆ ಮನೆ ಖಾಲಿ ಮಾಡುವಂತೆ ಹೇಳಿದ್ದರು’ ಎನ್ನುತ್ತಾರೆ ಸುರ್ವೀನ್.
ಇದು ಕೇವಲ ‘ಪಾರ್ಚ್ಡ್’ ನಟಿಯರ ಅನುಭವ ಅಷ್ಟೇ ಅಲ್ಲ. ಈ ಹಿಂದೆಯೂ ಅನೇಕರಿಗೆ ಹೀಗಾಗಿದೆ. ಬಾಲಿವುಡ್ ನಿರ್ದೇಶಕರೊಬ್ಬರು ಹೀಗೆ ಆಹ್ವಾನ ಕೊಟ್ಟಾಗ, ನಟಿ ಕಲ್ಕಿ ಕೋಚ್ಲಿನ್ ಪ್ರತಿಭಟಿಸಿ ಆ ಚಿತ್ರವನೇ ತಿರಸ್ಕರಿಸಿದ್ದರು. ‘ಮಧುರ್ ಭಂಡಾರ್ಕರ್ ನನ್ನನ್ನು ಅನೇಕ ಸಲ ಅತ್ಯಾಚಾರ ಮಾಡಿದ್ದರು’ ಎಂದು ಪ್ರೀತಿ ಜೈನ್ ಬಹಿರಂಗವಾಗಿಯೇ ಆಕ್ರೋಶ ಚೆಲ್ಲಿದ್ದೂ ಗೊತ್ತೇ ಇದೆ. ‘ತನು ವೆಡ್ಸ್ ಮನು’ ಚಿತ್ರದಲ್ಲಿ ನಟಿಸುವಾಗ ಕಂಗನಾ ರಣಾವತ್, ನಿರ್ದೇಶಕ ಆನಂದ್ ಎಲ್ ರೈ ಅವರ ಅನುಚಿತ ವರ್ತನೆಯನ್ನು ಖಂಡಿಸಿ ಸೈ ಎನ್ನಿಸಿಕೊಂಡಿದ್ದರು. ನಟಿ ಮಮತಾ ಕುಲಕರ್ಣಿಗೆ ಆಫರ್ ನೀಡುವ ಮುನ್ನ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಲೈಂಗಿಕ ಸುಖದ ಬೇಡಿಕೆ ಮುಂದಿಟ್ಟಿದ್ದರು ಎಂಬುದೂ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ‘ಸುಭಾಷ್ ಘಾಯ್ ನನ್ನ ಅಂಗಾಂಗವನ್ನು ಸ್ಪರ್ಶಿಸಿ, ವಿಚಿತ್ರವಾಗಿ ವರ್ತಿಸಿದ್ದರು’ ಎಂದು ನಟಿ ರಿನಾ ಗೋಲನ್ ಹೇಳಿಕೊಂಡಿದ್ದೂ ವಿವಾದಕ್ಕೆ ನಾಂದಿ ಹಾಡಿತ್ತು.
ಬೇರೆಲ್ಲ ನಟಿಯರು ಇದನ್ನು ಖಂಡಿಸಲಾಗದೆ, ನಟನೆಯಿಂದಲೇ ದೂರ ಉಳಿದಿರಬಹುದು. ಆದರೆ, ಪುರುಷನ ಈ ದೌರ್ಜನ್ಯವನ್ನು ಬಯಲು ಮಾಡುವ, ಸ್ತ್ರೀವಾದವನ್ನು ಎತ್ತಿಹಿಡಿಯುವ ಕತೆಗಳನ್ನು ಕಂಗನಾ, ರಾಧಿಕಾ ಆಪ್ಟೆ, ಸುರ್ವೀನ್ ಚಾವ್ಲಾ ಮತ್ತೆ ಮತ್ತೆ ಒಪ್ಪಿಕೊಳ್ಳುತ್ತಾ, ಪ್ರತಿಭಟಿಸುತ್ತಲೇ ಇದ್ದಾರೆ. ಇದಕ್ಕೆ ‘ಪಾರ್ಚ್ಡ್’ ಒಂದು ತಾಜಾ ನಿದರ್ಶನವಷ್ಟೇ.
(ಕೃಪೆ: ಕನ್ನಡಪ್ರಭ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.