
ನಿಮ್ಮ ಮೊದಲ ನಿರ್ದೇಶನದ ಚಿತ್ರದ ಟ್ರೇಲರ್ ನೋಡಿದಾಗ ನಿಮಗೆ ಅನಿಸಿದ್ದೇನು?
ಪ್ರೇಕ್ಷಕರಿಗೆ ಮೊದಲು ಇಷ್ಟವಾಗಬೇಕು. ನಿಜ ಹೇಳಬೇಕು ಅಂದರೆ ಮತ್ತಷ್ಟು ಚೆನ್ನಾಗಿ ಮಾಡಬೇಕು ಅನಿಸಿತು. ಯಾಕೆಂದರೆ ನಮ್ಮ ಚಿತ್ರದ ಟ್ರೇಲರ್ ನೋಡಿ ಯಾರೂ ಕೂಡ ಚೆನ್ನಾಗಿದೆ ಅನ್ನಬಾರದು. ಹಾಗೇನಾದರೂ ಹೇಳಿದರೆ ಆವರೇಜ್ ಅನಿಸಿಕೊಳ್ಳುತ್ತದೆ. ‘ಸಕ್ಕತ್ತಾಗಿದೆ’ ಎನ್ನಬೇಕು. ಅಂಥ ಮೆಚ್ಚುಗೆಗಾಗಿ ಟ್ರೇಲರ್ ಇನ್ನಷ್ಟು ಚೆನ್ನಾಗಿ ಮಾಡಬೇಕಿದೆ. ಈಗಾಗಲೇ 1.5 ನಿಮಿಷದ ಟ್ರೇಲರ್ ಮಾಡುತ್ತಿದ್ದೇವೆ.
ಹೀರೊ ಆಗಿ ಯಶಸ್ಸು ಕಾಣದಿದ್ದಾಗ ನಿರ್ದೇಶಕರಾಗಿದ್ದಾರೆ ಅನ್ನೋರಿಗೆ ನಿಮ್ಮ ಉತ್ತರವೇನು?
ನಾನು ಆರ್ಟಿಸ್ಟ್ ಆಗಿ ಸೋತು ನಿರ್ದೇಶಕನಕ್ಕೆ ಬಂದಿಲ್ಲ. ಯಾಕೆಂದರೆ ಒಬ್ಬ ಒಳ್ಳೆಯ ಕಲಾವಿದ ಮಾತ್ರ ನಿರ್ದೇಶಕನಾಗಬಲ್ಲ ಎನ್ನುವ ನಂಬಿಕೆ ಇಟ್ಟುಕೊಂಡವನು. ಹಾಗೆ ನೋಡಿದರೆ ನಟನಾಗಿಯೇ ಇದ್ದರೆ ನನಗೆ ಖಂಡಿತ ಸಿನಿಮಾಗಳು ಬರುತ್ತಿರುತ್ತವೆ. ಆದರೆ, ನನ್ನೊಳಗಿನ ಸಿನಿಮಾ ಕನಸುಗಳಿಗೆ ಮತ್ತಷ್ಟು ಜೀವ ತುಂಬಬೇಕು. ಆ ಕಾರಣಕ್ಕೆ ನಿರ್ದೇಶನಕ್ಕೆ ಬಂದಿದ್ದು.
ಹಾಗಾದರೆ ನಿಮ್ಮನ್ನು ನೀವು ನಿರ್ದೇಶಕರನ್ನಾಗಿಸಿಕೊಂಡ ಹಿನ್ನೆಲೆ ಏನು?
ನನ್ನ ಪ್ರತಿ ಚಿತ್ರದಲ್ಲೂ ನಿರ್ದೇಶಕರು ಹೇಳಿದ್ದಂತೆ ನಾನು ಮಾಡಿದ್ದೇನೆ. ಆದರೂ ಸಿನಿಮಾ ಸೋಲುತ್ತಿದ್ದವು. ಒಮ್ಮೆ ನಿರ್ದೇಶಕರು ಹೇಳಿದಂತೆ ತೆರೆ ಮೇಲೆ ಕತೆ ಬರುತ್ತಿರಲಿಲ್ಲ. ನಿರ್ದೇಶಕರು ಕಲ್ಪನೆ ಚೆನ್ನಾಗಿದ್ದರೆ ಇನ್ನೇನು ತಾಂತ್ರಿಕ ಸಮಸ್ಯೆ. ನನಗೂ ಯಾಕೆ ಹೀಗಾಗುತ್ತಿದೆ? ಎನ್ನುವ ಚಿಂತೆ ಕಾಡಿತು. ನಟನೆ ಚೆನ್ನಾಗಿದೆ ಅಂತಾರೆ. ಕತೆ ಚೆನ್ನಾಗಿದೆ ಅಂತಾರೆ. ಆದರೆ, ಸಿನಿಮಾ ಯಾಕೆ ಗೆಲ್ಲುತ್ತಿಲ್ಲ ಎಂದುಕೊಂಡಾಗ ನನ್ನೊಳಗಿನ ನನ್ನ ಗುರುತಿಸಿಕೊಳ್ಳುವುದಕ್ಕೆ ನಿರ್ದೇಶಕನಾಗಬೇಕಿತ್ತು. ಜತೆಗೆ ಇನ್ನೂ ಎಷ್ಟು ದಿನಾಅಂತ ಬೇರೆಯವರು ಹೇಳಿದ್ದನ್ನೇ ಮಾಡಿಕೊಂಡು ಇರಬೇಕು. ನಾನು ಯಾವಾಗ ಕಲಿಯೋದು ಎಂದುಕೊಂಡಾಗ ನಿರ್ದೇಶನಕ್ಕೆ ಮುಂದಾದೆ.
ನಿರ್ದೇಶನ ಮಾಡಲು ಫೀಲ್ಡ್ ಅನುಭವ ಏನಿದೆ?
ನನ್ನೂ ಒಳಗೊಂಡಂತೆ ನನ್ನ ಇಡೀ ತಂಡ ಹೊಸದು. ಆದರೆ, 10ನೇ ತರಗತಿಯಲ್ಲಿದ್ದಾಗಲೇ ಸಾಕ್ಷ್ಯ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಜತೆಗೆ ನಿರ್ದೇಶಕರ ನರೇಷನ್ ಕೇಳಿ ನನ್ನೊಳಗೊಬ್ಬ ನಿರ್ದೇಶಕ ಬೆಳೆದಿದ್ದ. ಹಾಗೆ ಬೆಳದ ನಿರ್ದೇಶಕನೇ ಈಗ ‘ನೈಟ್ ಔಟ್’ ಚಿತ್ರ ಮಾಡಿದ್ದಾನೆ.
ನಿರ್ದೇಶಕರಾಗಿ ನಿಮ್ಮ ಶಕ್ತಿ ಏನು?
ಮೊದಲನೇಯದಾಗಿ ಹೇಳುವುದಾದರೆ ‘ನೈಟ್ ಔಟ್’ ನನ್ನೊಬ್ಬನ ಚಿತ್ರವಲ್ಲ. ನನ್ನ ತಂಡದ ಸಿನಿಮಾ. ಹೀಗಾಗಿ ನಟ ರಾಕೇಶ್ ಅಡಿಗ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ ಎಂದುಕೊಳ್ಳುವುದಕ್ಕಿಂತ ಹೊಸಬರ ತಂಡವೊಂದು ಹೊಸದಾಗಿ ಸಿನಿಮಾ ಮಾಡಿದೆ ಎನ್ನುವುದೇ ಸೂಕ್ತ. ಬೇರೆಯವರ ಕೈಯಲ್ಲಿ ಯಾಕೆ ಇರಬೇಕು ಎಂದುಕೊಂಡು ಮೂರು ವರ್ಷದ ಹಿಂದೆ ನಾನೇ ಟೀಮ್ ಒಂದನ್ನು ಕಟ್ಟಿದೆ. ನಮಗೆ ತಿಳುವಳಿಕೆ ಇಲ್ಲ ನಿಜ. ಆದರೆ, ಬೇರೆ ಎಲ್ಲೋ ಹೋಗಿ ನಿರ್ದೇಶನದ ತರಬೇತಿ, ನಟನೆಯ ತರಬೇತಿ, ತಾಂತ್ರಿಕ ಟ್ರೈನಿಂಗ್ ಮಾಡಿಕೊಳ್ಳುವುದಕ್ಕಿಂತ ಈ ಚಿತ್ರವೇ ನಮಗೊಂದು ಪಾಠ ಶಾಲೆ ಎಂದುಕೊಂಡು ‘ನೈಟ್ ಔಟ್’ ಆರಂಭಿಸಿದ್ವಿ. ತಂಡ ನನ್ನ ಬೆನ್ನಿಗೆ ನಿಂತಿದ್ದರಿಂದಲೇ ಈ ಸಿನಿಮಾ ಆಯಿತು.
ಈ ನೈಟ್ ಔಟ್ ಚಿತ್ರದ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?
ಭರತ್, ಶ್ರುತಿ ಗೊರಾಡಿಯಾ, ಅಕ್ಷಯ್ ಪವಾರ್ ಈ ಚಿತ್ರದ ಮುಖ್ಯ ಪಾತ್ರಧಾರಿಗಳು. ಲಕ್ಷ್ಮೀ ನವೀನ್ ಹಾಗೂ ನವೀನ್ ಕೃಷ್ಣ ಚಿತ್ರದ ನಿರ್ಮಾಪಕರು. ಮೀರ್ ಕುಲಕರ್ಣಿ ಸಂಗೀತ, ಅರುಣ್ ಕೆ ಅಲೆಕ್ಸಾಂಡರ್ ಕ್ಯಾಮೆರಾ, ರಿತ್ವಿಕ್ ಸಂಕಲನ ಇರುವ ಸಿನಿಮಾ. ರಾತ್ರಿ ಹೊತ್ತು ನಡೆಯುವ ಸಿನಿಮಾ. ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕತೆ. ಗಂಭೀರವಾಗಿ ಓಪನ್ ಆದರೂ ಮನರಂಜನೆಯಾಗಿ ನಿರೂಪಣೆಗೊಳ್ಳುತ್ತಾ ಹೋಗುತ್ತದೆ. ಯಾಕೆಂದರೆ ಇಲ್ಲಿ ನಮ್ಮ ಬುದ್ಧಿವಂತಿಕೆ ತೋರಿಸುವ ಸಂದೇಶಗಳನ್ನು ಹೇಳೋದಕ್ಕೆ ಹೊರಟಿಲ್ಲ. ಆದರೆ, ಚಿತ್ರದಲ್ಲಿ ಬರುವ ಎಲ್ಲ ದೃಶ್ಯಗಳಿಗೂ ನೈಜ ಕತೆಗಳೇ ಆಧಾರ. ಹೀಗಾಗಿ ರಿಯಾಲಿಟಿ ಮತ್ತು ಫಿಕ್ಷನ್ ಈ ಎರಡೂ ನೆರಳಿನಲ್ಲಿ ಈ ಸಿನಿಮಾ ಮೂಡಿದೆ. ಇಲ್ಲಿ ಪಾತ್ರಧಾರಿಗಳ ಜರ್ನಿ ಎನ್ನುವುದಕ್ಕಿಂತ ಈ ಸಿನಿಮಾ ನೋಡುವ ಪ್ರೇಕ್ಷಕರ ರೈಡಿಂಗ್ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.