ಆರೆಂಜ್ ರಿಲೀಸ್ ಟೈಮಲ್ಲಿ ಗೋಲ್ಡನ್ ಸ್ಟಾರ್ ಸಂದರ್ಶನ

By Kannadaprabha NewsFirst Published Dec 7, 2018, 8:54 AM IST
Highlights

ಎಂದಿನಂತೆ ವರ್ಷದ ಕೊನೆಯಲ್ಲಿ ಗಣೇಶ್ ನಟನೆಯ ‘ಆರೆಂಜ್’ ಸಿನಿಮಾ ತೆರೆಗೆ ಬರುತ್ತಿದೆ. ಕಳೆದ ಐದಾರು ವರ್ಷಗಳಿಂದ ಅವರು ಹೀಗೆ ವರ್ಷದ ಕೊನೆಯ ಆಟಗಾರನಾಗಿ ಬಂದು ಮೋಡಿ ಮಾಡುತ್ತಿದ್ದಾರೆ. ಇಂದು ‘ಆರೆಂಜ್’ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಗಣೇಶ್ ಸಂದರ್ಶನ

ನಿಮ್ಮನ್ನ ಚಿತ್ರರಂಗದ ಲಾಸ್ಟ್ ಬ್ಯಾಟ್ಸ್‌ಮ್ಯಾನ್ ಅನ್ನಬಹುದೇ?
ಅಯ್ಯೋ ಯಾಕೆ!?

ಪ್ರತಿ ಬಾರಿಯೂ ವರ್ಷದ ಕೊನೆಯಲ್ಲಿ ಬರುತ್ತೀರಲ್ಲ ಅದಕ್ಕೆ!
ನಾನು ಹೆಸರಿಗಷ್ಟೆ ಕೊನೆಯ ಆಟಗಾರ. ಯಾವಾಗ ಬಂದ್ವಿ ಅನ್ನೋದು ಮುಖ್ಯ ಅಲ್ಲ, ಬಂದ್ಮೇಲೆ ಏನ್ ಮಾಡಿದ್ವಿ ಅನ್ನೋದು ಅಸಲಿ ವಿಷಯ. ಆರಂಭವೋ, ಕೊನೆಯ ಸ್ಕೋರ್ ಅಂತೂ ಮಾಡುತ್ತಿದ್ದೇನೆ.

ಅಂದ್ರೆ ವರ್ಷದ ಕೊನೆಯಲ್ಲಿ ಬಂದರೆ ನಿಮ್ಮ ಚಿತ್ರಗಳು ಹಿಟ್ ಆಗುತ್ತಿವೆಯೇ?
ಖಂಡಿತವಾಗಿ. ಈ ವಿಚಾರದಲ್ಲಿ ಯಾಕೆ ಅನುಮಾನ!? ಪಟಾಕಿ, ಮುಗುಳುನಗೆ, ಚಮಕ್, ಜೂಮ್ ಯಾವ ಚಿತ್ರವೂ ನನಗೆ ಕೈ ಕೊಟ್ಟಿಲ್ಲ. ಹೀಗಾಗಿ ವರ್ಷದ ಆರಂಭದಲ್ಲಿ ಆಟದ ತಯಾರಿ ಮಾಡಿಕೊಂಡು, ವರ್ಷದ ಕೊನೆಯಲ್ಲಿ ಫೀಲ್ಡ್‌ಗಿಳಿಯುತ್ತೇನೆ. 

ಅದ್ಸರಿ, ಈ ಡಿಸೆಂಬರ್ ನಂಬಿಕೆ ಶುರುವಾಗಿದ್ದು ಯಾಕೆ?
ನನ್ನ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್‌ನ ‘ಮುಂಗಾರು ಮಳೆ’ ಸಿನಿಮಾದ ಹಿಟ್. ಅಲ್ಲದೆ ವರ್ಷದ ಅಂತ್ಯ, ಹೊಸ ವರ್ಷದ ಆಗಮನ ಬೇರೆ. ಇದರ ಮಧ್ಯೆ ವರ್ಷದ ಅಂತ್ಯದಲ್ಲಿ ಕ್ರಿಸ್‌ಮಸ್ ಹಬ್ಬ. ರಜಾ ದಿನಗಳು. ಸಿನಿಮಾ ನೋಡಕ್ಕೆ ಪುರುಸೊತ್ತು ಇರುತ್ತದೆ. ಈ ಚಿತ್ರ ತೆರೆಗೆ ಬಂದಿದ್ದು ಡಿಸೆಂಬರ್ 29ರಂದು. ಅಲ್ಲಿಂದ ನನ್ನ ಎಲ್ಲಾ ಚಿತ್ರಗಳನ್ನು ಡಿಸೆಂಬರ್‌ನಲ್ಲೇ ತೆರೆಗೆ ಬರುವಂತೆ ನೋಡಿಕೊಳ್ಳುತ್ತಿದ್ದೇನೆ. ಇದು ನಂಬಿಕೆ ಜತೆ ಅದೃಷ್ಟದ ಜತೆ ಗೆಳೆತನ ಬೆಳೆಸುತ್ತಿರುವ ಪರಿ. ಮೂಢನಂಬಿಕೆ ಅಂತ ಮಾತ್ರ ಹೇಳಬೇಡಿ. ಹ್ಹಹ್ಹಹ್ಹ.

ಇನ್ನೂ ಮುಂದೆ ಕೂಡ ಇದೇ ರೀತಿ ವರ್ಷದ ಕೊನೆಯ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೀರಾ?
ಮುಂದಿನ ವರ್ಷದಿಂದ ವರ್ಷಕ್ಕೆ ಕನಿಷ್ಠ ಸಿನಿಮಾ ಬರುತ್ತವೆ. ಹೀಗೊಂದು ಗುರಿ ಇಟ್ಟುಕೊಂಡು ನಟಿಸುತ್ತಿದ್ದೇನೆ. ಹೀಗಾಗಿ ನನ್ನ ನಟನೆಯಲ್ಲಿ ವರ್ಷಕ್ಕೆ ಮೂರು ಸಿನಿಮಾಗಳು ಬರುತ್ತವೆ.

ಜೂಮ್ ಬಳಿಕ ಸೇಮ್ ಕಾಂಬಿನೇಷನ್‌ನಲ್ಲಿ ಬಂದಿರೋ ಆರೆಂಜ್ ಕತೆ ಏನು?
ಆರೆಂಜ್ ಹಣ್ಣಿನಷ್ಟೇ ಸೊಗಸಾದ, ರುಚಿಯಾದ ಕತೆ ಇಲ್ಲಿದೆ. ನಿರ್ದೇಶಕ ಪ್ರಶಾಂತ್ ಅದರ ರುಚಿಯನ್ನು ಎಲ್ಲರಿಗೂ ಹಿಡಿಸುವಂತೆ ಮಾಡಿದ್ದಾರೆ. ಅಂದರೆ ಇದು ಪಕ್ಕಾ ಮನರಂಜನೆಯ ಚಿತ್ರ. ಮನರಂಜನೆ ಜತೆಗೆ ಫ್ಯಾಮಿಲಿ ಎಮೋಷನ್ ಇದೆ. ಮನಸ್ಸಿಗೆ ಮುದ ನೀಡುವಂತಹ ದೃಶ್ಯಗಳೊಂದಿಗೆ ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. 

ಫ್ಯಾಮಿಲಿ, ಎಮೋಷನ್ ಎಲ್ಲ ಸಿನಿಮಾಗಳಲ್ಲಿ ಇರುತ್ತವೆ. ಅದರಲ್ಲೇನು ವಿಶೇಷತೆ?
ನಮಗೆ ಇರೋದು ಎರಡು ಮಹಾ ಕತೆಗಳು. ರಾಮಾಯಣ ಮತ್ತು ಮಹಭಾರತ. ನಾವು ಏನೇ ಮಾಡಿದರೂ ಈ ಎರಡನ್ನು ಅವಲಂಬಿಸಿರುತ್ತದೆ. ಹೀಗಾಗಿ ಪ್ರೇಮ ಕತೆ ಸಿನಿಮಾ ಅಂದ ಮೇಲೆ ಅಲ್ಲೊಂದು ಫ್ಯಾಮಿಲಿ ಇರುತ್ತದೆ. ಅದರ ಸುತ್ತ ಒಂದಿಷ್ಟು ಸಂಬಂಧಗಳು, ಆ ಮನೆಯಲ್ಲಿ ಬರುವ ಕಷ್ಟ, ಸುಖ, ದುಃಖ, ನಗು ಎಲ್ಲವೂ ಸೇರಿಕೊಳ್ಳುತ್ತದೆ. ಇದು ಎಲ್ಲ ಸಿನಿಮಾಗಳಲ್ಲೂ ಇರುತ್ತವೆ. ಆದರೆ, ಪ್ರತಿ ಚಿತ್ರವೂ ಇದೇ ಅಂಶಗಳನ್ನು ಯಾವ ಉದ್ದೇಶದಿಂದ ಹೇಗೆ ತೆರೆ ಮೇಲೆ ತೋರಿಸುತ್ತದೆ ಎಂಬುದರಲ್ಲಿ ಹೊಸತನ ಇರುತ್ತದೆ. ಆ ಹೊಸತನವೇ ವಿಶೇಷ.

ಚಿತ್ರದ ಕತೆ ಏನು?
ಸ್ಕ್ರೀನ್ ಪ್ಲೇ ಸಿನಿಮಾ. ಒಂದು ಸಾಲಿನಲ್ಲಿ ಕತೆ ಹೇಳಕ್ಕೆ ಆಗಲ್ಲ. ಸಿನಿಮಾ ನೋಡಬೇಕು. ಗೊತ್ತಿರುವ ಮನೆಗೆ ಒಬ್ಬ ಗೊತ್ತಿಲ್ಲದವನು ಹೋದರೆ ಏನಾಗುತ್ತದೆ. ಹಾಗೆ ಹೋದವನು ಏನೆಲ್ಲ ಎಡವಟ್ಟುಗಳನ್ನು ಮಾಡುತ್ತಾನೆ ಎಂಬುದು ಚಿತ್ರದ ಕತೆ. ಸಿನಿಮಾಪಟ್ಟೆ ಜಾಲಿಯಾಗಿ ಸಾಗುವ ಸಿನಿಮಾ. ತೆರೆ ಮೇಲೆ ಪಾತ್ರಗಳಿಗೆ ಗೊಂದಲ ಇದ್ದರೆ, ಅದನ್ನು ನೋಡುವ ಪ್ರೇಕ್ಷಕನಿಗೆ ಎಂಟರ್‌ಟೈನ್‌ಮೆಂಟ್.

ನಿಮ್ಮ ಚಿತ್ರಕ್ಕೆ ರೀಮೇಕ್ ಆರೋಪ ಸುತ್ತಿಕೊಂಡಿರುವುದು ಯಾಕೆ?
ಚಿತ್ರದ ಹೆಸರು ಮುಖ್ಯ ಕಾರಣ. ಈಗಾಗಲೇ ತೆಲುಗಿನಲ್ಲಿ ರಾಮ್‌ಚರಣ್ ತೇಜ ನಟನೆಯಲ್ಲಿ ‘ಆರೆಂಜ್’ ಅನ್ನೋ ಹೆಸರಿನ ಸಿನಿಮಾ ಬಂದಿತು. ಈಗ ಅದೇ ಹೆಸರಿನಲ್ಲಿ ನಾವು ಸಿನಿಮಾ ಮಾಡುತ್ತಿರುವುದರಿಂದ ಅದರ ರೀಮೇಕಾ ಎಂದು
ಕೇಳುತ್ತಿದ್ದಾರೆ. ಇದು ಪಕ್ಕಾ ಸ್ವಮೇಕ್ ಸಿನಿಮಾ.

ಚಿತ್ರದಲ್ಲಿ ಖೈದಿ ರೋಲ್ ಮಾಡಿದ್ದೀರಿ. ಇದು ಮಾಸ್ ಇಮೇಜ್‌ಗಾಗಿ ಮಾಡಿಕೊಂಡಿದ್ದಾ?
ಖಂಡಿತ ಇಲ್ಲ. ಕತೆಗೆ ಪೂರಕವಾಗಿದೆ. ಯಾರದೋ ಮನೆಯಲ್ಲಿ ಹೋಗಿ ಕಿಲಾಡಿತನದಿಂದ ವರ್ತಿಸುವ ನಾಯಕ ಎಲ್ಲಿಂದ ಬಂದವನು, ಅವನ ಹಿನ್ನೆಲೆ ಏನು ಎಂಬುದನ್ನು ಹೇಳುವಂತಹ ಪಾರ್ಟ್ ಆ ಜೈಲು ಎಪಿಸೋಡ್. ಈ ಕಾರಣಕ್ಕೆ ಕತೆ ಪೂರಕವಾಗಿದೆ. ಬಲವಂತವಾಗಿ ಇಟ್ಟಿಲ್ಲ.

ನೋಡುಗರು ಯಾವ ಕಾರಣಕ್ಕೆ ಆರೆಂಜ್ ಚಿತ್ರಕ್ಕೆ ಬರಬೇಕು?
ಇದೊಂದು ಫ್ಯಾಮಿಲಿ ಎಂಟರ್‌ಟೈನರ್. ಎಲ್ಲರೂ ನೋಡಬಹುದಾದ ಚಿತ್ರ. ಫ್ಯಾಮಿಲಿ ಜತೆಗೆ ಯೂತ್ಸ್ ಟಾರ್ಗೆಟ್ ಮಾಡಿ ಮಾಡಿರುವ ಚಿತ್ರ. ಈಗಾಗಲೇ ಟ್ರೇಲರ್, ಹಾಡುಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಗೋಲ್ಡ್ ಗೋಲ್ಡ್ ಟೈಟಲ್ ಟ್ರಾಕ್ ಸಾಂಗ್ ಹಿಟ್ ಆಗಿದೆ. ಸಿನಿಮಾಗೆ ಸಾಂಗ್ಸ್, ಟ್ರೇಲರ್ ಆಹ್ವಾನ ಪತ್ರಿಕೆ. ಇದನ್ನೆಲ್ಲ ನೋಡಿದವರಿಗೆ ‘ಆರೆಂಜ್’ ಖುಷಿ ಕೊಟ್ಟು ನೋಡಬೇಕೆಂಬ ನಿರೀಕ್ಷೆ ಹುಟ್ಟಿಸುತ್ತದೆ. ಜತೆಗೆ ನಾವು ಈಗಾಗಲೇ ಇದೇ ಕಾಂಬಿನೇಷನ್‌ನಲ್ಲಿ ಒಂದು ಹಿಟ್ ಸಿನಿಮಾ ಕೊಟ್ಟಿದ್ದೇವೆ. ಇನ್ನೂ ನನ್ನ ಅಭಿಮಾನಿಗಳು ಬಯಸುವ ಹಾಸ್ಯದ ಜತೆಗೆ ಆ್ಯಕ್ಷನ್ ಕೂಡ ಇದೆ.

ಆರೆಂಜ್ ಚಿತ್ರದ ನಂತರ ಬೇರೆ ಯಾವ ಚಿತ್ರಗಳಿವೆ?
ಸದ್ಯಕ್ಕೆ ನಾಗಣ್ಣ ನಿರ್ದೇಶನದಲ್ಲಿ ಗಿಮಿಕ್ ಚಿತ್ರೀಕರಣ ನಡೆಯುತ್ತಿದೆ. ಇದು ಮುಗಿದ ಮೇಲೆ ಇದೇ ತಿಂಗಳು `12 ರಿಂದ ‘ಗೀತಾ’ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾ ಮುಗಿಸಿಕೊಂಡು ಜನವರಿ ಹೊತ್ತಿಗೆ ತಮಿಳಿನ ‘96’ ಚಿತ್ರದ ರೀಮೇಕ್ ‘99’ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಪ್ರೀತಮ್ ಗುಬ್ಬಿ ಇದರ ನಿರ್ದೇಶಕರು.

ಸ್ವಮೇಕ್ ಸಿನಿಮಾ ಮಾಡಿದವರಿಗೆ ರೀಮೇಕ್ ಯಾಕೆ ಬೇಕಿತ್ತು?
ನಾನು ನನಗೇ ಬೇಕು ಅಂತ ರೀಮೇಕ್ ಚಿತ್ರ ಒಪ್ಪಿಕೊಂಡಿಲ್ಲ. ಚೆಲುವಿನ ಚಿತ್ತಾರ, ಶೈಲೂ, ಖುಷಿ ಖುಷಿಯಾಗಿ ಚಿತ್ರಗಳು ಕತೆಗಾಗಿ ನನಗೆ ಆಕರ್ಷಣೆಯಾಗಿದ್ದವು. ಈಗಲೂ ನಾನು ವಿಜಯ್ ಸೇತುಪತಿ ಹಾಗೂ ತ್ರಿಶಾ ನಟನೆಯ ‘96’ ಸಿನಿಮಾ ಕತೆ ಚೆನ್ನಾಗಿದೆ. ಕನ್ನಡ ಪ್ರೇಕ್ಷಕರು ಈ ಚಿತ್ರ ನೋಡಲಿ ಎಂಬುದು ನನ್ನ ಆಸೆ. 

 

 

 

click me!