ಡೈನಾಮಿಕ್ ಹೀರೋ ಮತ್ತೊಬ್ಬ ಮಗನೂ ಸ್ಯಾಂಡಲ್‌ವುಡ್‌ಗೆ

By Web DeskFirst Published Aug 3, 2018, 11:41 AM IST
Highlights

ಡೈನಾಮಿಕ್ ಹೀರೋ ದೇವರಾಜ್ ಎರಡನೇ ಪುತ್ರ ಪ್ರಣಾಮ್ ದೇವರಾಜ್ ಕೂಡಾ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ. ’ಕುಮಾರಿ 21 ಎಫ್’ ಚಿತ್ರದಲ್ಲಿ ಪ್ರಣಾಮ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಅನುಭವಗಳನ್ನು ಪ್ರಣಾಮ್ ’ಕನ್ನಡ ಪ್ರಭ’ ದೊಂದಿಗೆ ಹಂಚಿಕಂಡಿದ್ದಾರೆ. 

ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ’ಕುಮಾರಿ 21 ಎಫ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಣಾಮ್ ದೇವರಾಜ್ ಸ್ಯಾಂಡಲ್‌ವುಡ್‌ಗೆ ಬರಲು ಸ್ಪೂರ್ತಿ ಯಾರು? ಚಿತ್ರದ ಅನುಭವಗಳನ್ನು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.  

ನಿಮ್ಮ ನಟನೆಯ ಕನಸುಗಳಿಗೆ ಮೊದಲ ಸ್ಫೂರ್ತಿ ಯಾರು?
ನಮ್ಮ ತಂದೆ ದೇವರಾಜ್ ಹಾಗೂ ಅಣ್ಣ ಪ್ರಜ್ವಲ್ ದೇವರಾಜ್. ಅಪ್ಪನಿಂದ ಶಿಸ್ತು, ಬಣ್ಣದ ಬದುಕಿನ ಮಹತ್ವ ಕಂಡೆ. ಅಣ್ಣನ ಸಿನಿಮಾಗಳ ಮೂಲಕ ಒಬ್ಬ ನಟ ಹೇಗಿರಬೇಕೆಂದು ನೋಡಿ ತಿಳಿದುಕೊಂಡೆ. ‘ಸಿಕ್ಸರ್’ ಚಿತ್ರದಿಂದ ನಾನು ಅಣ್ಣನ ಸಿನಿಮಾ ಸೆಟ್‌ಗಳಿಗೆ ಹೋಗುತ್ತಿದ್ದೇನೆ. ನೋಡಿ ಕಲಿತಿದ್ದೇ ಹೆಚ್ಚು.

ಮೊದಲ ಚಿತ್ರ, ಮೊದಲ ದಿನದ ಚಿತ್ರೀಕರಣದ ಅನುಭವ ಹೇಗಿತ್ತು?

ನಿಜ ಹೇಳಬೇಕು ಅಂದ್ರೆ ಮೊದಲ ದಿನ ಕ್ಯಾಮೆರಾ ಮುಂದೆ ನಿಂತಾಗ ತುಂಬಾ ಹೆದರಿಕೊಂಡೆ. ನರ್ವಸ್ ಆಗಿಬಿಟ್ಟೆ. ಆದರೆ, ತಂಡದಲ್ಲಿ ವಿಶ್ವಾಸ ಇತ್ತು. ಅವರು ಕೊಟ್ಟ ಧೈರ್ಯದಿಂದಲೇ ಮೊದಲ ದೃಶ್ಯವನ್ನು ಮುಗಿಸಿ, ಆ ದಿನದ ಚಿತ್ರೀಕರಣ ಮುಗಿದ ಮೇಲೆಯೇ ನನಗೆ ಕೊಂಚ ಧೈರ್ಯ ಬಂದು ಮುಂದೆ ನಟಿಸಿದ್ದು.

ಚಿತ್ರವನ್ನು ತೆಲುಗಿನಿಂದ ಕನ್ನಡಕ್ಕೆ ತರಬೇಕನಿಸಿದ್ದು ಯಾಕೆ?

ನಾನು ದೇವರಾಜ್ ಮಗ. ಅಪ್ಪನಂತೆಯೇ ಮಗ ಕೂಡ ಆ್ಯಕ್ಷನ್ ಸಿನಿಮಾ ಮೂಲಕ ಲಾಂಚ್ ಆಗುತ್ತಾರೆಂದೇ ಎಲ್ಲರು ಅಂದುಕೊಳ್ಳುತ್ತಾರೆ. ನನಗೆ ಆ ಪೂರ್ವ ನಿರ್ಧರಿತ ಇಮೇಜ್‌ಗಳಿಂದ ಆಚೆ ಬರಬೇಕು. ಅಣ್ಣ ಅಥವಾ ಅಪ್ಪನ ಹೆಸರು ಹೇಳಿಕೊಂಡು ಚಿತ್ರರಂಗಕ್ಕೆ ಬರುವುದು ಬೇಡ. ನನಗೇ ಸೂಕ್ತ ಎನಿಸುವ ಕತೆಗಾಗಿ ಕಾಯುತ್ತಿದ್ದೆ ಹೊರತು, ರೀಮೇಕ್- ಸ್ವಮೇಕ್ ಅಂಥ ಯೋಚಿಸಿಲ್ಲ. ನಾನು ಕಾಯುತ್ತಿದ್ದ ಕತೆ ‘ಕುಮಾರಿ 21 ಎಫ್’ನಲ್ಲಿ ಕಂಡಿತು. ತೆಲುಗಿನ ರೀಮೇಕ್ ಆದರೂ ಸಾಕಷ್ಟು ಬದಲಾವಣೆ ಮಾಡಿಕೊಂಡೇ ಈ ಚಿತ್ರ ಮಾಡಿದ್ದೇವೆ. ಸಂಪೂರ್ಣವಾಗಿ ನಕಲು ಮಾಡಿರುವ ಸಿನಿಮಾ ಅಲ್ಲ.

ಕನ್ನಡ ಪ್ರೇಕ್ಷಕರಿಗೆ ಈ ಸಿನಿಮಾ ಹೇಗೆ ಕನೆಕ್ಟ್ ಆಗುತ್ತೆ?

ಇದು ತುಂಬಾ ಫ್ರೆಶ್ ಚಿತ್ರಕಥೆ. ಒಂದು ಇನೋಸೆಂಟ್ ಲವ್ ಸ್ಟೋರಿ. ಕನ್ನಡದಲ್ಲಿ ಇಂಥ ಕತೆ ಬಂದಿಲ್ಲ. ತುಂಬಾ ಎಮೋಷನ್ ಇದೆ. ಕಾಮಿಡಿ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಹೆಣ್ಣನ್ನು ಗೌರವಿಸುವ ಬಗ್ಗೆ, ಅನುಮಾನಗಳು ಬಂದರೆ ನಮ್ಮ ಜೀವನಗಳು ಹೇಗೆ ಹಾಳಾಗುತ್ತವೆ ಎನ್ನುವುದನ್ನು ಹೆಣ್ಣಿನ ಮೂಲಕ ಹೇಳಲಾಗಿದೆ. ಇಂಥ ಕತೆ ಎಲ್ಲ ಭಾಷಿಕರು ಕೂಡ ನೋಡುವಂತಹುದು.

ನಿಮ್ಮ ಪಾತ್ರ ಹೇಗಿದೆ? ಮನೆಯವರು ಚಿತ್ರ ನೋಡಿ ಹೇಳಿದ್ದೇನು?

ವಿದೇಶಕ್ಕೆ ಹೋಗಿ ಅಲ್ಲಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಶೆಫ್ ಆಗುವುದಕ್ಕೆ ಒದ್ದಾಡುವ ಪಾತ್ರ ನನ್ನದು. ಹೌದು, ಕೊಂಚ ಹಾಟ್ ದೃಶ್ಯಗಳಿವೆ. ಆದರೆ, ಅದು ಮಿತಿ ಮೀರಿಲ್ಲ. ಕತೆಗೆ ತಕ್ಕಂತೆ ಇವೆ. ನಾಯಕಿ ಮಾಡೆಲ್ ಆಗಿರುತ್ತಾಳೆ. ಆಕೆಯನ್ನು ಪ್ರೀತಿಸುವ ಹುಡುಗ ಒಂದು ಕಡೆ, ಆ ಪ್ರೀತಿಯಲ್ಲಿ ಅನುಮಾನದ ಬೀಜ ಬಿತ್ತುವವರು ಒಂದು ಕಡೆ. ಇದರಿಂದ ಮುಗ್ಧ ಪ್ರೇಮ ಕತೆ ಏನೆಲ್ಲ ತಿರುವುಗಳು ತೆಗೆದುಕೊಳ್ಳುತ್ತದೆ ಎಂಬುದು ಚಿತ್ರದ ಕತೆ.  ಚಿತ್ರ ನೋಡಿ ಮೇಲೆ ಅಮ್ಮ ಹಣೆ ಮೇಲೆ ಮುತ್ತು ಕೊಟ್ಟರು, ಅಣ್ಣ ಗಟ್ಟಿಯಾಗಿ ತಬ್ಬಿಕೊಂಡು ಶುಭ ಕೋರಿದರು. ಅಪ್ಪ, ಬೆನ್ನು ತಟ್ಟಿದರು. ಆ ಕ್ಷಣದ ಫೀಲಿಂಗ್ ಹೇಳಕ್ಕಾಗಲ್ಲ.  

click me!