
ಬೆಂಗಳೂರು (ಜ.05): ಹೊಸ ವರ್ಷದ ಸಂಭ್ರಮಕ್ಕೆ ಕಾಲಿಡುವ ಮುನ್ನವೇ ಗಾಂಧಿನಗರದಲ್ಲಿ ಚಿತ್ರವೊಂದರ ಹಾಡಿನ ಕಿಕ್ಕು ಬಲು ಜೋರಾಗಿ ಶುರುವಾಯಿತು. ನೂತನ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ವರ್ಷದ ಕೊನೆಯ ನಡುರಾತ್ರಿಯಲ್ಲಿ ಕಿಕ್ಕು ಏರಿಸಿಕೊಳ್ಳುವಂತೆ ಈ ಹಾಡು ಸಿಕ್ಕಾಪಟ್ಟೆ ಮತ್ತೇರಿಸುತ್ತಿದೆ.
ಹೀಗೆ ಮತ್ತೇರಿಸುವ ಹಾಡಿನ ಗಮ್ಮತ್ತಾದರೂ ಏನು? ‘ಎಣ್ಣೆ ನಮ್ದು ಊಟ ನಿಮ್ದು...’ ಎಂದು ಸಾಗುವ ಹಾಡಿಗೆ ತಕ್ಕಂತೆ ತಾಳ, ತಾಳಕ್ಕೆ ತಕ್ಕಂತೆ ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರ ಸ್ಟೆಪ್ಸ್. ಅಂದಹಾಗೆ ಈ ಹಾಡು ಹೀಗೆ ಸದ್ದು
ಮಾಡಿರುವುದು ‘ಕನಕ’ ಚಿತ್ರದಲ್ಲಿ. ಸಿನಿಮಾ ಪ್ರಚಾರಕ್ಕಾಗಿಯೇ ವಿಶೇಷವಾಗಿ ನವೀನ್ ಸಜ್ಜು ಅವರೇ ಬರೆದು ಸಂಗೀತ ಸಂಯೋಜನೆ ಮಾಡುವ ಜತೆಗೆ ಹಾಡಿ ಕುಣಿದಿರುವುದು ಈ ಹಾಡಿನ ವಿಶೇಷ. ಈಗ ಹಾಡು ಹಿಟ್ ಆಗುತ್ತಿರುವಂತೆಯೇ ಈ ಪ್ರಮೋಷನ್ ಹಾಡನ್ನು ಚಿತ್ರದಲ್ಲೂ ಬಳಸಿಕೊಳ್ಳುವುದಕ್ಕೆ ನಿರ್ದೇಶಕ ಕಂ ನಿರ್ಮಾಪಕ ಆರ್ ಚಂದ್ರು ಮುಂದಾಗಿದ್ದಾರೆ.
ಇದಕ್ಕೂ ಮೊದಲು ಹಾಡಿನ ಪ್ರದರ್ಶನ ಹಾಗೂ ಚಿತ್ರದ ಹೊಸ ಟ್ರೇಲರ್ ಬಿಡುಗಡೆಗೆ ಸಂಭ್ರಮದಲ್ಲಿ ಸಿನಿಮಾ ತಂಡ ಮಾಧ್ಯಮಗಳ ಮುಂದೆ ಬಂತು. ದುನಿಯಾ ವಿಜಯ್ ನಾಯಕನಾಗಿರುವ ಈ ಚಿತ್ರಕ್ಕೆ ಮಾನ್ವಿತಾ ಹರೀಶ್ ಹಾಗೂ ಹರಿಪ್ರಿಯಾ ನಾಯಕಿಯರು. ರಂಗಾಯಣ ರಘು, ಕೆ ಪಿ ನಂಜುಂಡಿ ಸೇರಿದಂತೆ ಹಲವರು ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.